ಸಂಗ್ರಹ ಮತ್ತು ಅನುವಾದ ಚಿದಂಬರ ನರೇಂದ್ರ
ಮುಖ್ಯವಾಗಿ Dead Internet Theory ಗೆ ಎರಡು ವಿಭಿನ್ನ ರೂಪಗಳಿವೆ.
ಮೊದಲನೆಯದು, ಸಾಂಪ್ರದಾಯಿಕ ರೂಪ. ಅದರ ಪ್ರಕಾರ, ಇಂದಿನ ಇಂಟರ್‌ನೆಟ್‌ನಲ್ಲಿ ಬಹುಪಾಲು ವಿಷಯಗಳು ಬಾಟ್‌ಗಳು (bot ಎಂದರೆ ಮನುಷ್ಯರನ್ನು ಇಮಿಟೇಟ್ ಮಾಡುವ, ಮತ್ತು ಅವರ ರೂಟಿನ್ ಕೆಲಸಗಳನ್ನ ಅವರಿಗಿಂತಲೂ ವೇಗವಾಗಿ ಮಾಡಿ ಮುಗಿಸುವ ಅಟೋಮ್ಯಾಟಿಕ್ ಸಾಫ್ಟವೇರ್ ಪ್ರೊಗ್ರಾಮ್) ಮತ್ತು ನಕಲಿ ಖಾತೆಗಳದ್ದೇ ಆಗಿವೆ. ಆದ್ದರಿಂದ ನೀವು, ಒಬ್ಬ ನಿಜವಾದ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೀರಿ ಎಂದು ಭಾವಿಸಿದಾಗಲೂ, ವಾಸ್ತವದಲ್ಲಿ ನೀವು ಒಂದು ಬಾಟ್‌ನೊಂದಿಗೇ ಸಂಭಾಷಿಸುತ್ತಿರುವ ಸಾಧ್ಯತೆಯೇ ಹೆಚ್ಚು.
ಆದರೆ ಎರಡನೆಯ ರೂಪ ಹೆಚ್ಚು ಸೂಕ್ಷ್ಮವಾದದ್ದು; ಬಹುಶಃ ಹೆಚ್ಚು ಆಸಕ್ತಿದಾಯಕವೂ ಹೌದು.
ಈ ರೂಪವು ಒಂದು ಪ್ರಶ್ನೆಯನ್ನು ಕೇಳುತ್ತದೆ: ಆನ್‌ಲೈನ್‌ನಲ್ಲಿ ಯಾರೂ ಏಕೆ ನಿಜ ಜೀವನದ ಮನುಷ್ಯರಂತೆ ಮಾತನಾಡುವುದಿಲ್ಲ?
ಇದು ಕೇವಲ ಫೇಸ್ ಬುಕ್, Instagram ಮತ್ತು ಲಿಂಕ್ಡ್‌ಇನ್‌ಗೆ ಮಾತ್ರ ಸೀಮಿತವಲ್ಲ. ಬಹುತೇಕ ಎಲ್ಲ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿಯೂ ಜನರು ಪ್ರತಿಕ್ರಿಯಿಸುವ ರೀತಿ, ಪೋಸ್ಟ್‌ಗಳನ್ನು ಬರೆಯುವ ವಿಧಾನ, ಸಂದೇಶ ಕಳುಹಿಸುವ ಶೈಲಿ, ಇವೆಲ್ಲವೂ ವಿಚಿತ್ರವಾಗಿದ್ದು, ಸಹಜ ಮಾನವೀಯ ಸಂಭಾಷಣೆಯಂತಿಲ್ಲ.
ನಾವು “ನಾನು ಅತ್ಯಂತ ವಿನಮ್ರನಾಗಿದ್ದೇನೆ ಮತ್ತು ಗೌರವಿಸಲ್ಪಟ್ಟಿದ್ದೇನೆ” (I’m humbled and honoured), “ಈ ವಿಷಯವನ್ನು ಘೋಷಿಸಲು ನಾನು ಅಪಾರ ಉತ್ಸುಕನಾಗಿದ್ದೇನೆ!” (I’m thrilled to announce!), “ಇನ್ನೂ ಚೆನ್ನಾಗಿ ವರ್ತಿಸಬೇಕು” (Do better), ಅಥವಾ “ಇದನ್ನು ಅರ್ಥವಾಗುವಂತೆ ಹೇಳಿ” (Make it make sense) ಎಂಬಂತಹ ಪದಗುಚ್ಛಗಳನ್ನು ಬಳಸುತ್ತೇವೆ.
ಆದರೆ ಊಟದ ಮೇಜಿನ ಸುತ್ತ ಕುಟುಂಬದವರ ಅಥವಾ ಸ್ನೇಹಿತರ ಜೊತೆ ಕುಳಿತಾಗ, ಯಾರೂ ಈ ರೀತಿಯಾಗಿ ಮಾತನಾಡುವುದಿಲ್ಲ. ಆನ್‌ಲೈನ್‌ನಲ್ಲಿ ನಮ್ಮ ಭಾಷೆ ಏನೋ ಕೃತಕವಾದ, ಸಿದ್ಧಪಡಿಸಿದ, ನೈಜ ಮಾನವೀಯತೆಯಿಂದ ದೂರವಾದ ರೂಪವನ್ನು ಪಡೆದುಕೊಂಡಿದೆ.
1981ರಲ್ಲಿ ಫ್ರೆಂಚ್ ತತ್ವಜ್ಞಾನಿ Jean Baudrillard, ಒಂದು ಮಹತ್ವದ ವಿಚಾರವನ್ನು ಮಂಡಿಸಿದರು. ಅವರ ಪ್ರಕಾರ, ಆಧುನಿಕ ಮಾಧ್ಯಮಗಳು ತಾವು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ನೈಜ ಜಗತ್ತನ್ನು ಅಲ್ಲದೇ, ಅದರ ಪ್ರತಿರೂಪವನ್ನು (simulacrum) ನಮ್ಮ ಮುಂದೆ ಇಡುತ್ತವೆ. ಅದೇ ರೀತಿಯಲ್ಲಿ, ಇಂದಿನ ಇಂಟರ್‌ನೆಟ್‌ನಲ್ಲೂ ನಮ್ಮ ಕಾಮೆಂಟ್‌ಗಳು, ಸಂದೇಶಗಳು ಮತ್ತು ಪೋಸ್ಟ್‌ಗಳು ಈಗ ಸಾಮಾನ್ಯ ಮಾನವ ಜೀವನದ ವಾಸ್ತವಿಕತೆಯನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ, ಅವು ಬಾಟ್‌ಗಳು ಮತ್ತು ನಕಲಿ ಖಾತೆಗಳು ನಿರ್ಮಿಸಿರುವ ಒಂದು ಕೃತಕ ಜಗತ್ತಿನ ಪ್ರತಿಬಿಂಬಗಳಾಗಿವೆ.
ಹೀಗಾಗಿ, ನಾವು ನಿಜವಾದ ಮತ್ತೊಬ್ಬ ಮನುಷ್ಯನೊಂದಿಗೆ ಮಾತನಾಡುವ ಅವಕಾಶ ಸಿಕ್ಕರೂ, ಅವನೊಂದಿಗೆ ಸಹಜ ಮಾನವೀಯ ರೀತಿಯಲ್ಲಿ ಮಾತನಾಡುವುದಿಲ್ಲ. ಬದಲಾಗಿ, ಆ ಕೃತಕ ಪ್ರತಿರೂಪದ (simulacrum) ನಿಯಮಗಳಿಗೆ ತಕ್ಕಂತೆ, ಇಂಟರ್‌ನೆಟ್ ನಮಗೆ ಕಲಿಸಿದ ಭಾಷೆಯಲ್ಲಿಯೇ ಸಂವಹನ ನಡೆಸುತ್ತೇವೆ. ಈ ರೀತಿಯಾಗಿ, ನಾವು ವಿಚಿತ್ರವಾದ, ಅಸ್ವಾಭಾವಿಕವಾದ ಮತ್ತು ಕನಸಿನಂತೆಯೇ ಭಾಸವಾಗುವ ಆನ್‌ಲೈನ್ ಭಾಷೆಯೊಳಗೆ ಸಿಲುಕಿಕೊಳ್ಳುತ್ತೇವೆ. ನಮ್ಮ ನಡುವಳಿಕೆ, ನಮ್ಮ ನಿಜವಾದ ಮನಸ್ಸು ಬಯಸುವ ರೀತಿಗೆ ಹೊಂದಿಕೊಳ್ಳುವುದಿಲ್ಲ; ಅದು ಇಂಟರ್‌ನೆಟ್‌ನ ಕೃತಕ ಸಂಸ್ಕೃತಿಗೆ ಹೊಂದಿಕೊಳ್ಳುತ್ತದೆ. ಹೀಗೆ, ಅರಿವಿಲ್ಲದೆಯೇ ನಾವು Dead Internet ಎಂಬ ಕೃತಕ ಜಗತ್ತಿನೊಳಗೆ ಬಂಧಿಗಳಾಗಿಬಿಡುತ್ತೇವೆ.
*********************************

