ಸುಮ್ಮನೆ ಎದುರುಬದಿರು ಕೂತು ಸಂಧಾನ ಮಾಡುವುದರಿಂದ ಅಥವ ಯೋಜನೆಗಳನ್ನು ರೂಪಿಸುವುದರಿಂದ ಶಾಂತಿ ದೊರೆಯದು. ಸ್ವತಃ ನಿಮ್ಮಲ್ಲಿ ಮತ್ತು ನಿಮ್ಮೊಡನೆ ಇರುವವರಲ್ಲಿ ಶಾಂತಿ ಇರದಿದ್ದರೆ ನೀವು ಮಾಡುವ ಯಾವ ಚಟುವಟಿಕೆಗಳೂ ಶಾಂತಿಯನ್ನು ತರುವ ಕ್ರಿಯೆಗಳಾಗುವುದಿಲ್ಲ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.3 : ಶಾಂತಿ । ಬೌದ್ಧ ನಿಶ್ಚಯದ ದಾರಿ
ಬೌದ್ಧ ನಿಶ್ಚಯ, ಅಥವಾ ಎಂಗೇಜ್ಡ್ ಬುದ್ಧಿಸಂ ಎಂಬ ಬದುಕಿನ ಕ್ರಮವನ್ನು ವಿಯೆಟ್ನಾಂನಲ್ಲಿ ಆರಂಭಮಾಡಿದೆವು. ದೇವಸ್ಥಾನಗಳಲ್ಲಿ ಮಾತ್ರವಲ್ಲ, ಸಮಾಜ, ಶಾಲೆ, ನಮ್ಮ ಕುಟುಂಬ, ನಮ್ಮ ಉದ್ಯೋಗದ ಸ್ಥಳ, ನಮ್ಮ ರಾಜಕೀಯ, ನಮ್ಮ ಸೈನ್ಯ, ಒಟ್ಟಾರೆ ಬದುಕಿನ ಪ್ರತಿಯೊಂದು ಸಂಗತಿಯಲ್ಲೂ ಬೌದ್ಧವನ್ನು ನಿಜಮಾಡಿಕೊಳ್ಳುವ ನಿಶ್ಚಯ ಅದು. ಕರುಣೆ ಮತ್ತು ಅರಿವು ಎಲ್ಲೆಲ್ಲೂ ಇರಲೇಬೇಕು.
ಶಾಂತಿಗಾಗಿ ಕ್ರಿಯಾಶೀಲರಾಗಲು ಅನೇಕರು ಸಿದ್ಧರಾಗಿದ್ದೇವೆ. ಆದರೆ ನಮ್ಮೊಳಗೆ ಶಾಂತಿ ಇರುವುದಿಲ್ಲ. ಶಾಂತಿ ಇರಬೇಕು ಎಂದು ಸಿಟ್ಟಿನಲ್ಲಿ ಕೂಗಾಡುತ್ತೇವೆ. ನಮ್ಮ ಹಾಗೆಯೇ ಶಾಂತಿಯನ್ನು ಬಯಸುವವರ ಮೇಲೆ ಸಿಟ್ಟುಗೊಳ್ಳುತ್ತೇವೆ. ಶಾಂತಿ ಸ್ಥಾಪನೆಯಲ್ಲಿ ತೊಡಗಿರುವ ಗುಂಪುಗಳು ಕೂಡ ಎಷ್ಟೋ ಸಲ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುತ್ತವೆ. ಒಬ್ಬೊಬ್ಬರ ಹೃದಯದಲ್ಲಿ ಶಾಂತಿ ಇರದಿದ್ದರೆ ಶಾಂತಿಗಾಗಿ ಒಟ್ಟುಗೂಡಿ ಕೆಲಸ ಮಾಡುವ ಗುಂಪಿನಲ್ಲೂ ಶಾಂತಿ ಇರದು. ಸಾಂಗತ್ಯ, ಸಾಮರಸ್ಯ ಇರದಿದ್ದರೆ ಭರವಸೆಯೂ ಉಳಿಯದು. ನಾವು ಛಿದ್ರವಾಗಿದ್ದರೆ, ಹತಾಶರಾಗಿದ್ದರೆ ಸೇವೆಯಿರಲಿ, ಯಾವ ಕೆಲಸವನ್ನೂ ಮಾಡಲಾರೆವು.
ಶಾಂತಿ ನಮ್ಮಿಂದಲೇ ಮೂಡಬೇಕು. ಸುಮ್ಮನೆ ಕುಳಿತಿರುವ, ಗಮನವಿರಿಸಿ ನಡೆಯುವ, ನಮ್ಮ ದೇಹದ ಬಗ್ಗೆ ಎಚ್ಚರವಹಿಸುವ ಅಭ್ಯಾಸಗಳ ಮೂಲಕ ನಮ್ಮ ಮೈಯಲ್ಲಿ ಮನಸಿನಲ್ಲಿ ಇರುವ ಟೆನ್‌ಶನ್‌ಗಳನ್ನು ನೀಗಿಕೊಂಡು ಶಾಂತರಾಗಬೇಕು.ಮೊದಲು ನಾವು ಶಾಂತರಾಗಿರುವುದು ಮುಖ್ಯ. ಆ ತಳಹದಿಯ ಮೇಲೆ ಶಾಂತಿಗಾಗಿ ಕೆಲಸ ಮಾಡಬಹುದು.
ನೀವು ಕೂತು, ಮೈ ಮನಸುಗಳನ್ನು ಶಾಂತವಾಗಿರಿಸಿಕೊಂಡು ಉಸಿರಾಡಲು ಶುರು ಮಾಡಿದ ಕ್ಷಣವೇ ಶಾಂತಿ ಎಂಬುದು ನಿಜವಾಗುತ್ತದೆ, ವಾಸ್ತವವಾಗುತ್ತದೆ. ಅಂಥ ಉಸಿರಾಟವೇ ಪ್ರಾರ್ಥನೆ. ನಿಮ್ಮೊಳಗೆ ಶಾಂತಿ ಇರುವಾಗ ಬೇರೆಯವರೊಡನೆ ಸಂಬಂಧ ಏರ್ಪಡಿಸಿಕೊಳ್ಳುವುದು, ಬೇರೆಯವರೂ ನಿಮ್ಮಂತೆ ಶಾಂತವಾಗಿರುವ ಹಾಗೆ ಪ್ರಭಾವ ಬೀರುವುದು ಸಾಧ್ಯವಾಗುತ್ತದೆ. ನೀವು ಒಟ್ಟಾಗಿ ಶಾಂತಿಯ ಕಾಯ, ಶಾಂತಿಸಂಘವಾಗುತ್ತೀರಿ. ಜನರನ್ನು ಸಂಪರ್ಕಿಸಿ ಶಾಂತಿಯ ಸೇವೆಗೆ ಅವರನ್ನು ಆಹ್ವಾನಿಸವುದು ಸಾಧ್ಯವಾಗುತ್ತದೆ. ಶಾಂತವಾಗಿ ನೋಡುವುದು, ಶಾಂತವಾಗಿ ಮಾತಾಡುವುದು, ಶಾಂತವಾಗಿ ಸ್ಪಂದಿಸುವುದು ಹೇಗೆಂದು ನಿಮಗೆ ಗೊತ್ತಿರುವುದರಿಂದ ಬೇರೆಯವರೂ ಹಾಗೇ ಬದುಕುವಂತೆ, ಶಾಂತಿಯನ್ನು ಪಸರಿಸುವಂತೆ ಮಾಡಲು ಆಗುತ್ತದೆ.
ಸುಮ್ಮನೆ ಎದುರುಬದಿರು ಕೂತು ಸಂಧಾನ ಮಾಡುವುದರಿಂದ ಅಥವ ಯೋಜನೆಗಳನ್ನು ರೂಪಿಸುವುದರಿಂದ ಶಾಂತಿ ದೊರೆಯದು. ಸ್ವತಃ ನಿಮ್ಮಲ್ಲಿ ಮತ್ತು ನಿಮ್ಮೊಡನೆ ಇರುವವರಲ್ಲಿ ಶಾಂತಿ ಇರದಿದ್ದರೆ ನೀವು ಮಾಡುವ ಯಾವ ಚಟುವಟಿಕೆಗಳೂ ಶಾಂತಿಯನ್ನು ತರುವ ಕ್ರಿಯೆಗಳಾಗುವುದಿಲ್ಲ. ನಮ್ಮ ಕಾರ್ಪೊರೇಶನ್, ನಗರ, ಶಾಲೆಗಳಲ್ಲಿ ಶಾಂತಿಯನ್ನು ಅಭ್ಯಾಸಮಾಡಬೇಕು. ಪಾಠ ಹೇಳುವವರು ಶಾಂತಿಯನ್ನು ಅಭ್ಯಾಸಮಾಡಿ ಬೆಳೆಸಿಕೊಂಡು ಮಕ್ಕಳಿಗೂ ಶಾಂತಿಯನ್ನು ಕಲಿಸಬೇಕು
ದೇಶದ ಅಧ್ಯಕ್ಷರು ಅಥವಾ ರಾಜಕೀಯ ಪಕ್ಷದ ಮುಖಂಡರು ಮೊದಲು ತಮ್ಮ ಮೈ ಮನಸುಗಳಲ್ಲಿ ಶಾಂತಿ ಇರಲಿ ಎಂದು ಪ್ರಾರ್ಥಿಸಬೇಕು. ಆಮೇಲೆ ಮಾತ್ರ ಇತರರನ್ನೂ ತಮ್ಮೊಡನೆ ಶಾಂತಿಯ ಕೆಲಸದಲ್ಲಿ ತೊಡಗುವಂತೆ ಮಾಡುವಲ್ಲಿ ಪರಿಣಾಮವನ್ನು ಕಾಣಬಹುದು. ಆದರ್ಶ ಸ್ಥಿತಿಯೆಂದರೆ ಪ್ರತಿಯೊಂದು ಶಾಂತಿ ಸಮ್ಮೇಳನವೂ ನಡಿಗೆಯ ಧ್ಯಾನ, ಕುಳಿತು ಮಾಡುವ ಧ್ಯಾನಗಳೊಂದಿಗೆ ಆರಂಭವಾಗಬೇಕು. ಮೈ, ಮನಸು, ಆಲೋಚನೆಗಳಲ್ಲಿ ಇರುವ ಟೆನ್‌ಶನ್, ಸಿಟ್ಟು, ಭಯಗಳನ್ನು ನೀಗಿಕೊಳ್ಳುವ ದಾರಿಯನ್ನು ತೋರುವವರು ಒಬ್ಬರಿರಬೇಕು. ಇದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಆಧ್ಯಾತ್ಮಿಕ ಆಯಾಮದಲ್ಲಿ ಬದುಕುವುದ್ನು ಆರಂಭವಾಗುತ್ತದೆ. ಇದು ಬೌದ್ಧ ನಿಶ್ಚಯದ ದಾರಿ.

