ಚರ್ಚೆಯ ಸೋಲು ಗೆಲುವು ವೈಯಕ್ತಿಕವಾಗೋದು ಏಕೆ?

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಕೆಲವರು ವಾದದಲ್ಲಿ ತಾವು ಸ್ಪಷ್ಟವಾಗಿ ಸೋತಿದ್ದರೂ ವಾದವನ್ನು ಏಕೆ ಮುಂದುವರಿಸುತ್ತಾರೆ?
ಕೆಲವರು ಚರ್ಚೆಯನ್ನು ಏಕೆ ವೈಯಕ್ತಿಕ ಅವಮಾನವಾಗಿ, ಅಥವಾ ತಮ್ಮ ಅಹಂಕಾರದ ಪ್ರಶ್ನೆಯಾಗಿ ಪರಿಗಣಿಸುತ್ತಾರೆ? ಲೇಖಕಿ ಜೂಲಿಯಾ ಗ್ಯಾಲೆಫ್ (Julia Galef) ಇದರ ಬಗ್ಗೆ ಒಂದು ಆಸಕ್ತಿದಾಯಕ ಉತ್ತರವನ್ನು ನೀಡುತ್ತಾರೆ. ಗ್ಯಾಲೆಫ್ ಅವರ ಪ್ರಕಾರ, ಯಾವುದೇ ಚರ್ಚೆ ಅಥವಾ ವಾದದಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಜನರಿರುತ್ತಾರೆ, ಸೈನಿಕರು (Soldiers) ಮತ್ತು ಶೋಧಕರು (Scouts).

ಸೈನಿಕನ ದೃಷ್ಟಿಯಲ್ಲಿ ತನ್ನ ನಂಬಿಕೆಯೇ ಒಂದು ಕೋಟೆ. ಅದನ್ನು ಯಾವುದೇ ಬೆಲೆ ಕೊಟ್ಟಾದರೂ ಕಾಪಾಡಬೇಕು. ಆದ್ದರಿಂದ ಅವನಿಗೆ ಚರ್ಚೆ, ಸತ್ಯವನ್ನು ಹುಡುಕುವ ಪ್ರಯತ್ನವಲ್ಲ; ಅದು ಗೆಲ್ಲಬೇಕಾದ ಯುದ್ಧ. ಅವರ ಭಾಷೆಯಲ್ಲೇ ಅದು ಗೋಚರಿಸುತ್ತದೆ. ಅವರು ಎದುರಾಳಿಯ ವಾದವನ್ನು “ಗುಂಡಿಕ್ಕಿ ಕೆಡವುತ್ತಾರೆ”, ಒಂದು ನಿಲುವಿನ ಮೇಲೆ “ದಾಳಿ ಮಾಡುತ್ತಾರೆ”, ಒಬ್ಬ ನಾಸ್ತಿಕನು ಹತ್ತು ಕ್ರೈಸ್ತರನ್ನು “ಸೋಲಿಸಿದ”, ಅಥವಾ ಒಬ್ಬ ಸಸ್ಯಾಹಾರಿ ಮಾಂಸಾಹಾರಿಯನ್ನು “ಧ್ವಂಸ ಮಾಡಿದ” ಎಂದು ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಚರ್ಚೆ ಎಂದರೆ ಜಯ-ಪರಾಜಯದ ಕದನ.

ಇದಕ್ಕೆ ವಿರುದ್ಧವಾಗಿ ಶೋಧಕ (Scout) ಇರುತ್ತಾನೆ.
ಒಬ್ಬ ಶೋಧಕನನ್ನು ಒಂದು ಪ್ರದೇಶವನ್ನು ಪರಿಶೀಲಿಸಿ ಅದರ ನಿಖರವಾದ ನಕ್ಷೆಯನ್ನು ತಯಾರಿಸಲು ಕಳುಹಿಸಲಾಗುತ್ತದೆ. ಅಲ್ಲಿ ನಿಜವಾಗಿ ಏನಿದೆ ಎನ್ನುವುದರ ಬಗ್ಗೆ ಅವನಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ. ಅವನು ಒಂದು ಸೇತುವೆ ಇರುತ್ತದೆ ಎಂದು ನಿರೀಕ್ಷಿಸಿ, ಅಲ್ಲಿ ನದಿ ಇದೆ ಎಂದು ಕಂಡುಕೊಂಡರೆ, ಅದನ್ನು ಅವನು ತನ್ನ ಸೋಲು ಅಥವಾ ಅವಮಾನವೆಂದು ಭಾವಿಸುವುದಿಲ್ಲ. ಬದಲಾಗಿ, “ನನ್ನ ನಕ್ಷೆ ಇನ್ನಷ್ಟು ಸರಿಯಾಯಿತು; ನನ್ನ ತಿಳುವಳಿಕೆ ಇನ್ನಷ್ಟು ವಿಸ್ತರಿಸಿತು; ಮುಂದಿನ ಪ್ರಯಾಣ ಈಗ ಇನ್ನಷ್ಟು ಸುಲಭವಾಯಿತು” ಎಂದು ಸಂತೋಷಪಡುತ್ತಾನೆ.

ಶೋಧಕ (Scout) ಆಗಿರುವುದಕ್ಕೂ ಅಥವಾ ಸೈನಿಕ (Soldier) ಆಗಿರುವುದಕ್ಕೂ ಬುದ್ಧಿವಂತಿಕೆಯೊಂದಿಗೆ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ತುಂಬಾ ಬುದ್ಧಿವಂತರಾಗಿರುವುದು ಕೆಲವೊಮ್ಮೆ ನಿಮ್ಮನ್ನು ಒಬ್ಬ ಉತ್ತಮ ಸೈನಿಕನನ್ನಾಗಿ ಮಾಡಬಹುದು. ಏಕೆಂದರೆ ತೀಕ್ಷ್ಣವಾದ ಬುದ್ಧಿಶಕ್ತಿಯು, ಒಬ್ಬ ಶೋಧಕನು ಈಗಾಗಲೇ ಕೈಬಿಟ್ಟಿರಬಹುದಾದ ನಿಲುವನ್ನೂ ಸಮರ್ಥವಾಗಿ ರಕ್ಷಿಸಬಲ್ಲದು. ಅಂತಹ ಮನಸ್ಸು ಯಾವಾಗಲೂ ವಿರುದ್ಧವಾದ ಸಾಕ್ಷ್ಯವನ್ನು ತಳ್ಳಿಹಾಕಲು ಯಾವುದಾದರೂ ಕಾರಣವನ್ನು ಕಂಡುಕೊಳ್ಳುತ್ತದೆ. ಅಥವಾ ವಾಕ್ಚಾತುರ್ಯ, ಗೊಂದಲಮಯ ಪದಗಳ ಆಟ ಮತ್ತು ತರ್ಕಗಳ ಹಿಂದೆ ಅಡಗಿಕೊಂಡು ತನ್ನ ನಿಲುವನ್ನು ಉಳಿಸಿಕೊಳ್ಳುತ್ತದೆ.

ಗ್ಯಾಲೆಫ್ ಅವರ ಪ್ರಕಾರ, ಪ್ರತಿಯೊಬ್ಬರೂ ತಮ್ಮನ್ನು ತಾವು ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: “ನಾನು ತಪ್ಪು ಎಂದು ಸಾಬೀತುಪಡಿಸಲು ನನಗೆ ಯಾವ ರೀತಿಯ ಸಾಕ್ಷ್ಯ ಬೇಕಾಗುತ್ತದೆ?” ಮತ್ತು, “ಅದು ನಿಜವಾಗಿಯೂ ಸಂಭವಿಸಿದರೆ, ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ?” ಈ ಪ್ರಶ್ನೆಗಳಿಗೆ  ಪ್ರಾಮಾಣಿಕವಾಗಿ ಉತ್ತರಿಸಿ. ಒಂದು ವೇಳೆ ಯಾವುದೇ ಸಾಕ್ಷ್ಯವೂ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಲಾರದು, ಮತ್ತು ನೀವು ಕೋಪದಿಂದ ಅಥವಾ ಹೋರಾಟದ ಮನೋಭಾವದಿಂದ ಪ್ರತಿಕ್ರಿಯಿಸುತ್ತೀರಿ ಎನ್ನುವುದು ನಿಮ್ಮ ಉತ್ತರವಾಗಿದ್ದರೆ, ನೀವು ಯಾವ ರೀತಿಯ ಚರ್ಚಾಕಾರರೆಂಬುದು ನಿಮಗೆ ಸ್ಪಷ್ಟವಾಗುತ್ತದೆ.

ಸೈನಿಕನು ಸತ್ಯವನ್ನು ತನ್ನ ನಂಬಿಕೆಗೆ ಹೊಂದಿಸಲು ಪ್ರಯತ್ನಿಸುತ್ತಾನೆ. ಶೋಧಕನು ತನ್ನ ನಂಬಿಕೆಯನ್ನು ಸತ್ಯಕ್ಕೆ ಹೊಂದಿಸಲು ಪ್ರಯತ್ನಿಸುತ್ತಾನೆ. ನಿಜವಾದ ಬುದ್ಧಿವಂತಿಕೆ ಎಂದರೆ ಯಾವಾಗಲೂ ವಾದದಲ್ಲಿ ಗೆಲ್ಲುವುದು ಅಲ್ಲ; ಹೊಸ ಸಾಕ್ಷ್ಯದ ಎದುರು ತನ್ನ ಅಭಿಪ್ರಾಯವನ್ನು ಬದಲಾಯಿಸುವ ಧೈರ್ಯವನ್ನು ಹೊಂದಿರುವುದು.

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.