ಶಬ್ದದ ಮೂಲಕ ಸೆನ್ಸಾರ್

ಶಬ್ದದ ಮೂಲಕ ಸೆನ್ಸಾರ್” (Censorship through Noise) ಅನ್ನು ಎದುರಿಸುವುದು ಸುಲಭವಲ್ಲ, ಪೊಮೆರಾಂಟ್ಸೆವ್ ಅವರ ಪ್ರಕಾರ ಇದರ ಪರಿಹಾರ ಕೇವಲ ಸತ್ಯಾಂಶ ಪರಿಶೀಲನೆ (fact-checking) ಅಲ್ಲ.
ಬದಲಾಗಿ, ಈ ಇಡೀ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪಾರದರ್ಶಕತೆ (transparency) ಇರಬೇಕು… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಏನನ್ನಾದರೂ ಮರೆಮಾಚಬೇಕು ಎಂದು ಬಯಸುವ  ರಾಜಕಾರಣಿ ಏನು ಮಾಡುತ್ತಾನೆ? ಅಥವಾ, ಮಾಧ್ಯಮಗಳ ಗಮನವನ್ನು ತನ್ನ ಇಷ್ಟದ ದಿಕ್ಕಿಗೆ ತಿರುಗಿಸಲು ಬಯಸುವ ಸರ್ಕಾರ ಏನು ಮಾಡುತ್ತದೆ? ಅದು ಒಂದರ ಹಿಂದೆ ಒಂದರಂತೆ ಹೊಸಹೊಸ ಸುದ್ದಿಗಳನ್ನು ಹೊರಬಿಡುತ್ತದೆ. ತನ್ನ ಬೆಂಬಲಿಗರು, ಸಾವಿರಾರು influencer ಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಜನರು  ಅವನ್ನು ನಿರಂತರವಾಗಿ ಮರುಹಂಚುವಂತೆ (share), ಇಷ್ಟಪಡುವಂತೆ (like), ಮತ್ತು ಪ್ರತಿಕ್ರಿಯಿಸುವಂತೆ (comment) ಮಾಡುತ್ತದೆ. ಇದನ್ನೇ ಅವರು Flood the Zone ಎಂದು ಕರೆಯುತ್ತಾರೆ. ಅಂದರೆ, ಜನರೆಲ್ಲರೂ ಬೇರೆಬೇರೆ ವಿಷಯಗಳ ಬಗ್ಗೆ ಮಾತನಾಡುವಂತೆ, ಅವರ  ಗಮನ ಬೇರೆಡೆಗೆ ಚದುರಿಹೋಗುವಂತೆ ಮಾಡುವುದು. ಹೀಗೆ ಮಾಡಿದರೆ, ತಾವು ಮರೆಮಾಚಲು ಬಯಸುವ ನಿಜವಾದ ವಿಷಯದ ಕಡೆಗೆ ಯಾರೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ತಮ್ಮ This Is Not Propaganda ಎಂಬ ಪುಸ್ತಕದಲ್ಲಿ ಪತ್ರಕರ್ತ ಪೀಟರ್ ಪೊಮೆರಾಂಟ್ಸೆವ್ (Peter Pomerantsev) ಇದನ್ನೇ “ಶಬ್ದದ ಮೂಲಕ ಸೆನ್ಸಾರ್” (Censorship through Noise) ಎಂದು ಕರೆಯುತ್ತಾರೆ.
ಮಾಹಿತಿ ಯುದ್ಧದ (Information Warfare) ಕುರಿತು ದಶಕಗಳ ಕಾಲ ಅಧ್ಯಯನ ನಡೆಸಿರುವ ಪೊಮೆರಾಂಟ್ಸೆವ್ ಅವರ ವಾದವೇನೆಂದರೆ, ಇಂದಿನ ಸರ್ಕಾರಗಳಿಗೆ ಯಾವುದಾದರೂ ಸುದ್ದಿಯನ್ನು ನೇರವಾಗಿ ನಿಗ್ರಹಿಸುವ ಅಗತ್ಯವೇ ಇಲ್ಲ. ಅದಕ್ಕೆ ಬದಲಾಗಿ, ಜನರ ಗಮನವನ್ನು ಮಿನುಗುವ, ಸಂಚಲನಕಾರಿ, ಅಥವಾ ಹಾಸ್ಯಾಸ್ಪದವಾದ ಮತ್ತೊಂದು ವಿಷಯದತ್ತ ತಿರುಗಿಸಿದರೆ ಸಾಕು. ಯಾರೊಬ್ಬರ ಮಾತಿನ ಸ್ವಾತಂತ್ರ್ಯವನ್ನು ನಿಷೇಧಿಸುವ ಅಗತ್ಯವಿಲ್ಲ; ಎಲ್ಲೆಡೆ ಅಷ್ಟೊಂದು ಗದ್ದಲವನ್ನು ಸೃಷ್ಟಿಸಿದರೆ ಸಾಕು, ಆ ಗದ್ದಲದ ನಡುವೆ ಅವರ ಧ್ವನಿ ಯಾರಿಗೂ ಕೇಳಿಸುವುದಿಲ್ಲ.

ಪೀಟರ್ ಪೊಮೆರಾಂಟ್ಸೆವ್ ಅವರ ಪ್ರಕಾರ, ಆಧುನಿಕ ಸೆನ್ಸಾರ್‌ಶಿಪ್‌ನ ಉದ್ದೇಶ ಜನರಿಗೆ ಮಾಹಿತಿ ಸಿಗದಂತೆ ಮಾಡುವುದಲ್ಲ; ಬದಲಾಗಿ, ಅವರನ್ನು ಅತಿಯಾದ ಮಾಹಿತಿಯ ಪ್ರವಾಹದಲ್ಲಿ ಮುಳುಗಿಸುವುದಾಗಿದೆ. ಅಸಂಖ್ಯಾತ bot ಗಳು ( bot ಎನ್ನುವುದು ರಿಪಿಟೇಟಿವ್ ಕೆಲಸ ಮಾಡುವ ಕಂಪ್ಯೂಟರ್ ಪ್ರೋಗ್ರಾಂ, robot ನ ಶಾರ್ಟ ಫಾರ್ಮ) ಟ್ರೋಲ್‌ಗಳು (trolls), ಮತ್ತು ಸುಳ್ಳು ಸುದ್ದಿಗಳ (fake news) ಮೂಲಕ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಜನರು ಗುರುತಿಸಲಾಗದಂತೆ ಮಾಡಲಾಗುತ್ತದೆ. ಪರಿಣಾಮವಾಗಿ, ಅವರು ಪರಸ್ಪರ ಅರ್ಥಪೂರ್ಣವಾಗಿ ಸಂವಾದ ನಡೆಸಲು ಸಾಧ್ಯವಾಗುವುದಿಲ್ಲ; ಒಬ್ಬರನ್ನೊಬ್ಬರು ನಂಬುವುದೂ ಕಷ್ಟವಾಗುತ್ತದೆ.

ಇಂತಹ “ಶಬ್ದದ ಮೂಲಕ ಸೆನ್ಸಾರ್” (Censorship through Noise) ಅನ್ನು ಎದುರಿಸುವುದು ಸುಲಭವಲ್ಲ, ಪೊಮೆರಾಂಟ್ಸೆವ್ ಅವರ ಪ್ರಕಾರ ಇದರ ಪರಿಹಾರ ಕೇವಲ ಸತ್ಯಾಂಶ ಪರಿಶೀಲನೆ (fact-checking) ಅಲ್ಲ.
ಬದಲಾಗಿ, ಈ ಇಡೀ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪಾರದರ್ಶಕತೆ (transparency) ಇರಬೇಕು.
ಅಂದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ:

* ಅವರ ಅಲ್ಗಾರಿದಮ್‌ಗಳು (algorithms) ಹೇಗೆ ಕಾರ್ಯನಿರ್ವಹಿಸುತ್ತವೆ?
* ಅತಿ ಜೋರಾಗಿ ಕೇಳಿಸುತ್ತಿರುವ ಧ್ವನಿಗಳು ಯಾರವು?
* ಮತ್ತು ಆ ಧ್ವನಿಗಳನ್ನು ಕೃತಕವಾಗಿ (artificially) ಏಕೆ ಮತ್ತು ಹೇಗೆ ಹೆಚ್ಚು ಜನರಿಗೆ ತಲುಪುವಂತೆ ಮಾಡಲಾಗುತ್ತಿದೆ?

ಗದ್ದಲವನ್ನು ಮತ್ತಷ್ಟು ಗದ್ದಲದಿಂದ ಸೋಲಿಸಲು ಸಾಧ್ಯವಿಲ್ಲ. ಅತಿಯಾಗಿ ಕೂಗುತ್ತಿರುವವರು ಯಾರು, ಮತ್ತು ಅವರಿಗೆ ಬಲ ತುಂಬುತ್ತಿರುವವರು ಯಾರು ಎಂಬುದನ್ನು ಗುರುತಿಸಿ, ಅವರನ್ನು ಸಾರ್ವಜನಿಕವಾಗಿ ಪ್ರಶ್ನಿಸಬೇಕು. ಅದೇ ಈ ಸಮಸ್ಯೆಯನ್ನು ಎದುರಿಸುವ ಮೊದಲ ಹೆಜ್ಜೆ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.