ಮನುಷ್ಯರು ನಮ್ಮ ಶತ್ರುಗಳಲ್ಲ. ಇನ್ನೊಬ್ಬರು, ಮತ್ತೊಬ್ಬರು ನಮ್ಮ ಶತ್ರುಗಳಲ್ಲ. ನಮ್ಮ ಒಳಗಿರುವ, ಇನ್ನೊಬ್ಬರಲ್ಲೂ ಇರುವ ಹಿಂಸೆ, ಮೌಢ್ಯ, ಅನ್ಯಾಯಗಳೇ ನಮ್ಮ ಶತ್ರುಗಳು. ಕರುಣೆ ಮತ್ತು ಅರಿವುಗಳ ಬಲ ನಮಗಿದ್ದಾಗ ನಾವು ಬೇರೆಯವರ ವಿರುದ್ಧ ಕಾದಾಡುವುದಿಲ್ಲ, ದಾಳಿ ನಡೆಸುವ, ಅಧಿಕಾರ ಚಲಾಯಿಸುವ, ಶೋಷಿಸುವ ಪ್ರವೃತ್ತಿಗಳ ವಿರುದ್ಧ ಕಾದಾಡುತ್ತೇವೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.4 : ಶಾಂತಿ । ಹೀರೋಯಿಸಂ
ಅರಿವು-ಕರುಣೆ ಇವು ನಮ್ಮ ಚೈತನ್ಯದ ಬಲು ದೊಡ್ಡ ಆಕರಗಳು. ಅವು ಮೌಢ್ಯ-ಜಡತ್ವಗಳ ವಿರುದ್ಧ ಸ್ಥಿತಿಗಳು. ಕರುಣೆಯು ನಿಷ್ಕ್ರಿಯತೆ, ದುರ್ಬಲತೆ, ಹೇಡಿತನ ಎಂದು ನೀವು ಅಂದುಕೊಳ್ಳುವುದಾದರೆ ನಿಜವಾದ ಅರಿವು, ಕರುಣೆಗಳ ಪರಿಚಯವೇ ನಿಮಗಿಲ್ಲ ಅನ್ನಬೇಕಾಗುತ್ತದೆ. ಕರುಣೆಯುಳ್ಳ ಜನ ಅನ್ಯಾಯವನ್ನು ವಿರೋಧಿಸುವುದಿಲ್ಲ, ಅನ್ಯಾಯಕ್ಕೆ ಸವಾಲು ಎಸೆಯುವುದಿಲ್ಲ ಎಂದು ತಿಳಿದಿದ್ದರೆ ಅದು ತಪ್ಪು ತಿಳಿವಳಿಕೆ.
ನೀವು ಹಿಂಸೆಯಿರದ ಕರುಣೆಯೊಡನೆ ವರ್ತಿಸುವಾಗ ದ್ವಂದ್ವವಿರದೆ ನಡೆದುಕೊಳ್ಳಬೇಕು, ಬಹಳ ಬಲಶಾಲಿಗಳೂ ಆಗಿರಬೇಕು. ನಿಮ್ಮ ವರ್ತನೆ ಸಿಟ್ಟಿನ ಪ್ರತಿಕ್ರಿಯೆಯಲ್ಲ, ಶಿಕ್ಷಿಸಲು ಅಥವ ನಿಂದಿಸಲು ಮಾಡುವ ಕೆಲಸವೂ ಅಲ್ಲ. ನಿಮ್ಮೊಳಗಿನ ಕರುಣೆ ನಿರಂತರವಾಗಿ ಬೆಳೆಯುತ್ತಿರುವಾಗ ಅನ್ಯಾಯದ ವಿರುದ್ಧ ನೀವು ನಡೆಸುವ ಹೋರಾಟದಲ್ಲಿ ಗೆಲುವು ಪಡೆಯುತ್ತೀರಿ. ಮಹಾತ್ಮ ಗಾಂಧಿ ಅಂಥವರಲ್ಲಿ ಒಬ್ಬರು. ಅವರ ಬಳಿ ಬಾಂಬು, ಗನ್ನುಗಳು ಇರಲಿಲ್ಲ. ಅವರದೇ ರಾಜಕೀಯ ಪಕ್ಷವೂ ಇರಲಿಲ್ಲ. ಇಡಿತನದ, ಪೂರ್ಣತೆಯ ಒಳನೋಟ, ಕರುಣೆಯ ಶಕ್ತಿಗಳ ಆಧಾರದ ಮೇಲೆ ಅವರು ವರ್ತಿಸಿದರೇ ಹೊರತು ಸಿಟ್ಟು ಅವರ ವರ್ತನೆಯ ಮೂಲದಲ್ಲಿ ಇರಲಿಲ್ಲ..
ಮನುಷ್ಯರು ನಮ್ಮ ಶತ್ರುಗಳಲ್ಲ. ಇನ್ನೊಬ್ಬರು, ಮತ್ತೊಬ್ಬರು ನಮ್ಮ ಶತ್ರುಗಳಲ್ಲ. ನಮ್ಮ ಒಳಗಿರುವ, ಇನ್ನೊಬ್ಬರಲ್ಲೂ ಇರುವ ಹಿಂಸೆ, ಮೌಢ್ಯ, ಅನ್ಯಾಯಗಳೇ ನಮ್ಮ ಶತ್ರುಗಳು. ಕರುಣೆ ಮತ್ತು ಅರಿವುಗಳ ಬಲ ನಮಗಿದ್ದಾಗ ನಾವು ಬೇರೆಯವರ ವಿರುದ್ಧ ಕಾದಾಡುವುದಿಲ್ಲ, ದಾಳಿ ನಡೆಸುವ, ಅಧಿಕಾರ ಚಲಾಯಿಸುವ, ಶೋಷಿಸುವ ಪ್ರವೃತ್ತಿಗಳ ವಿರುದ್ಧ ಕಾದಾಡುತ್ತೇವೆ. ಬೇರೆಯವರನ್ನು ಕೊಲ್ಲುವುದು ನಮ್ಮ ಆಸೆಯಲ್ಲ, ಆದರೆ ಬೇರೆಯವರು ನಮ್ಮನ್ನೋ ಇತರ ಜನಸಮುದಾಯವನ್ನೋ ಆಳಲು, ಶೋಷಣೆ ಮಾಡಲು ಬಿಡುವುದೂ ಇಲ್ಲ.
ನೀವು ಮೂರ್ಖರಲ್ಲ. ನೀವು ವಿವೇಕಿಗಳು. ನಿಮಗೆ ಒಳನೋಟ ಸಿಕ್ಕಿದೆ. ಕರುಣೆಯಂದ ಇರುವುದು ಅಂದರೆ ಜನ ತಮಗೆ ತಾವೇ ಅಥವ ನಿಮಗೆ ಹಿಂಸೆ ಮಾಡುವುದನ್ನು ಸಹಿಸಿಕೊಳ್ಳುವುದಲ್ಲ. ಕರುಣೆಯುಳ್ಳವರಾಗುವುದು ಅಂದರೆ ವಿವೇಕಿಗಳಾಗುವುದು. ಪ್ರೀತಿಯ ಮೂಲದಿಂದ ಹೊಮ್ಮುವ ಅಹಿಂಸೆ—ಅದು ಮಾತ್ರವೇ ವಿವೇಕದ ಕ್ರಿಯೆ.
*
ಹಿಂಸೆ-ಅಹಿಂಸೆಗಳನ್ನು ಕುರಿತು ಗಾಂಧೀಜಿಯವರು ಹೇಳಿರುವ ಕೆಲವು ಮುಖ್ಯ ಮಾತುಗಳನ್ನು ನೋಡಿ.
ಹಿಂಸೆಯ ಮೂಲಕ ಪಡೆಯುವ ಗೆಲುವು ಗೆಲುವಲ್ಲ, ಅದು ಸೋಲು.
“ಅಹಿಂಸೆಯು ಅಧಿಕಾರವನ್ನು “ಹಿಡಿದಿಟ್ಟುಕೊಳ್ಳಲಾರದು.” ಅಧಿಕಾರವನ್ನು ಪಡೆಯುವುದು ಅಹಿಂಸೆಯ ಗುರಿಯೂ ಅಲ್ಲ. ಆದರೆ ಅಹಿಂಸೆಯು ಸರ್ಕಾರವನ್ನು ವಶಪಡಿಸಿಕೊಳ್ಳದೆ ಅಧಿಕಾರವನ್ನು ನಿಯಂತ್ರಿಸಿ ಸರಿದಾರಿಯಲ್ಲ ನಡೆಯುವಂತೆ ಮಾಡಬಲ್ಲುದು.”
“ಅಹಿಂಸೆಯು ಧೈರ್ಯದ ಉತ್ತುಂಗ ಶಿಖರ”
“ಅಹಿಂಸೆಯೆಂದರೆ ಹೇಡಿತನದ ಶರಣಾಗತಿಯಲ್ಲ, ಕೆಡುಕನ್ನು ಮಾಡುತ್ತಿರುವವರ ಇಚ್ಛೆಯಗೆ ವಿರುದ್ಧವಾಗಿ ಎದ್ದು ನಿಲ್ಲುವುದು.”
“ಹಿಂಸೆಯ ಮೂಲಕ ದೊರೆಯಿತೆನಿಸುವ ಗೆಲುವು ತಾತ್ಕಾಲಿಕ, ಅದು ಉಂಟುಮಾಡುವ ಕೆಡುಕಿನ ಪರಿಣಾಮ ಶಾಶ್ವತ.”

