ಸಂಗ್ರಹ – ಅನುವಾದ್ : ಚಿದಂಬರ ನರೇಂದ್ರ
ಯಾರಾದರೂ ನಿಜವಾಗಿಯೂ ಒಳ್ಳೆಯ ವ್ಯಕ್ತಿಯೇ, ಅಥವಾ ಅವರು ಕೇವಲ ಒಳ್ಳೆಯವರಂತೆ ನಟಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಒಂದು ಪರೀಕ್ಷೆಯಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಮೇಲೆ ಈ ಪರೀಕ್ಷೆಯನ್ನು ಪ್ರಯೋಗಿಸಿ, ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನ ನೀವು ನೋಡಬಹುದು. ಈ ಕಲ್ಪನೆ ಪ್ಲೇಟೋನ ಕಾಲಕ್ಕೆ ಸೇರಿದ್ದು; ಇದರ ಕೇಂದ್ರಬಿಂದು ಒಂದು ಮಾಯಾ ಉಂಗುರ.
ಒಂದು ಕ್ಷಣ ಊಹೆ ಮಾಡಿಕೊಳ್ಳಿ, ಯಾರೋ ನಿಮಗೆ ಒಂದು ಉಂಗುರವನ್ನು ಕೊಡುತ್ತಾರೆ. ಆ ಉಂಗುರವನ್ನು ಧರಿಸಿದರೆ, ನೀವು ಅದೃಶ್ಯರಾಗುವ ಶಕ್ತಿಯನ್ನು ಪಡೆಯುತ್ತೀರಿ. ಆಗ ನೀವು, ನಿಮಗೆ ಇಷ್ಟವಾದ ಎಲ್ಲೆಡೆ ಹೋಗಬಹುದು, ಮನಸ್ಸಿಗೆ ಬಂದದ್ದನ್ನೆಲ್ಲ ಮಾಡಬಹುದು. ಯಾರೂ ನಿಮ್ಮನ್ನು ನೋಡಲಾರರು, ನಿಮ್ಮ ಧ್ವನಿಯನ್ನೂ ಕೇಳಲಾರರು. ಹೀಗಿರುವಾಗ, ನಿಮ್ಮ ಮನಸ್ಸಿನ ಆಳದಲ್ಲಿ ಪ್ರಾಮಾಣಿಕವಾಗಿ ಉತ್ತರಿಸಿ, ನೀವು ಮೊದಲು ಮಾಡುವ ಕೆಲಸ ಯಾವುದು?
ಈ ‘ಗೈಜಿಸ್‌ನ ಉಂಗುರ’ (Ring of Gyges) ಎಂಬ ಚಿಂತನಾ ಪ್ರಯೋಗವು ಪ್ಲೇಟೋನ ರಿಪಬ್ಲಿಕ್ ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಗ್ಲಾಕನ್ ಎಂಬ ಪಾತ್ರವು, ಇಂತಹ ಉಂಗುರವನ್ನು ಪಡೆದ ಬಹುತೇಕ ಎಲ್ಲರೂ ಅದನ್ನು ಯಾವುದಾದರೂ ಅನೈತಿಕ ಕೆಲಸಕ್ಕಾಗಿ ಬಳಸುತ್ತಾರೆ ಎಂದು ಹೇಳುತ್ತದೆ.
ಅವರು ಬ್ಯಾಂಕ್ ದರೋಡೆ ಮಾಡಬಹುದು, ಯಾರನ್ನಾದರೂ ಗುಪ್ತವಾಗಿ ಹಿಂಬಾಲಿಸಿ ಅವರ ಮೇಲೆ ಕಣ್ಣಿಡಬಹುದು, ತಮ್ಮಗೆ ಇಷ್ಟವಿಲ್ಲದವರಿಗೆ ಹಾನಿ ಮಾಡಬಹುದು, ಸಾಮಾನ್ಯ ಸಂದರ್ಭಗಳಲ್ಲಿ ಮಾಡಲು ಧೈರ್ಯವಿಲ್ಲದ ಅಥವಾ ಮಾಡದ ಅನೇಕ ಕೆಲಸಗಳನ್ನು ಅವರು ಮಾಡುತ್ತಾರೆ. ನಮ್ಮನ್ನು ಯಾರೂ ನೋಡುತ್ತಿಲ್ಲ, ಯಾರೂ ನಮ್ಮನ್ನು ಪ್ರಶ್ನಿಸುವುದಿಲ್ಲ ಎಂಬ ಭರವಸೆ ಇದ್ದರೂ ನಾವು ನೈತಿಕವಾಗಿ ನಡೆದುಕೊಳ್ಳುತ್ತೇವೆಯೇ? ಅದೇ ನಮ್ಮ ನಿಜವಾದ ವ್ಯಕ್ತಿತ್ವವನ್ನು ಪರೀಕ್ಷಿಸುವ ಮಾನದಂಡ. ಆದರೆ ನಿಜವಾದ ಪರೀಕ್ಷೆ, ನಾವು ಒಳ್ಳೆಯ ಕೆಲಸಗಳನ್ನು ಯಾಕೆ ಮಾಡುತ್ತೇವೆ ಎನ್ನುವುದರಲ್ಲಿದೆ.
ನಾವು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಕಾರಣ, ಅದಕ್ಕಾಗಿ ನಮಗೆ ಬಹುಮಾನ ಸಿಗಲಿ, ಜನರು ನಮ್ಮನ್ನು ಒಳ್ಳೆಯವರು ಎಂದು ಹೊಗಳಲಿ ಎನ್ನುವ ಆಸೆಯೇ? ಅಥವಾ ಅದು ಮಾಡಲೇಬೇಕಾದ ಸರಿಯಾದ ಕೆಲಸ ಎನ್ನುವ ಕಾರಣಕ್ಕಾಗಿ ನಾವು ಹಾಗೆ ಮಾಡುತ್ತೇವೆಯೇ?
ಏಕೆಂದರೆ, ಪ್ಲೇಟೋನ ದೃಷ್ಟಿಯಲ್ಲಿ, ವಿಶೇಷವಾಗಿ ಸಾಕ್ರಟೀಸ್‌ನ ಪ್ರಕಾರ, ನಿಜವಾದ ಸಜ್ಜನರು ಇತರರು ತಮ್ಮ ಬಗ್ಗೆ ಏನು ನೋಡುತ್ತಾರೆ, ಏನು ಕೇಳುತ್ತಾರೆ, ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಸ್ವಲ್ಪವೂ ಕಾಳಜಿ ಮಾಡುವುದಿಲ್ಲ. ಅವರ ಕಾಳಜಿ ನ್ಯಾಯದ ಬಗ್ಗೆ ಮಾತ್ರ.
ಅವರ ಕಾಳಜಿ ಒಳ್ಳೆಯತನದ ಬಗ್ಗೆ ಮಾತ್ರ.
ಹಾಗಾದರೆ, ಪ್ಲೇಟೋನ ಮಾನದಂಡದ ಪ್ರಕಾರ ನೀವು ಒಬ್ಬ ಒಳ್ಳೆಯ ವ್ಯಕ್ತಿಯೇ? ನಿಮ್ಮ ಸ್ನೇಹಿತರು ಕೂಡ?
ನೀವು ನಿಜವಾಗಿ ಕೂಡ ಒಳ್ಳೆಯ ವ್ಯಕ್ತಿಯೇ, ಅಥವಾ ಜನರು ನಿಮ್ಮನ್ನು ಒಳ್ಳೆಯವರು ಎಂದು ನೋಡಬೇಕು ಎನ್ನುವ ಆಸೆ, ನಿಮ್ಮ ಒಳ್ಳೆಯತನದ ಮೂಲವೇ?

