ಬೋಧಿಸತ್ವನ ಸಾವಿರ ಕೈಗಳು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #4.5

ಸಾವಿರ ಕೈಗಳ ಬೋಧಿಸತ್ವನನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದೆ ಅವನ ಒಂದೊಂದು ಅಂಗೈಯಲ್ಲೂ ಕಣ್ಣು ಇರುವುದು ಕಾಣುತ್ತದೆ. ಅಂಗೈಯಲ್ಲಿರುವ ಕಣ್ಣು ವಿವೇಕ, ಅರಿವು ಅಥವಾ “ಪ್ರಜ್ಞಾ”ಗಳ ಸಂಕೇತ. ನಮ್ಮ ಬದುಕಿನ ದಾರಿಯಲ್ಲಿ ವಿವೇಕ, ಕರುಣೆಗಳೆರಡೂ ಬೇಕು. ಅರಿವು, ವಿವೇಕಗಳು ಪ್ರೀತಿ, ಕರುಣೆ, ಸಹಾನುಭೂತಿಗಳನ್ನು ತರುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 4.5 : ಶಾಂತಿ । ಬೋಧಿಸತ್ವನ ಸಾವಿರ ಕೈಗಳು

ಏಶಿಯದ ಬಹಳಷ್ಟು ಬೌದ್ಧ ದೇವಾಲಯಗಳಲ್ಲಿ ಅವಲೋಕಿತೇಶ್ವರ ಬೋಧಿಸತ್ವನ ವಿಗ್ರಹವಿರುತ್ತದೆ. ಅದಕ್ಕೆ ಸಾವಿರ ಕೈಗಳಿರುತ್ತವೆ. ಒಂದೊಂದು ಕೈಯಲ್ಲೂ ಒಂದೊಂದು ಉಪಕರಣವೋ ವಸ್ತುವೋ ಇರುತ್ತದೆ. ಇವೆಲ್ಲವೂ ಬೋಧಿಸತ್ನು ಅರಿವು-ಕರುಣೆಗಳನ್ನು ವ್ಯಕ್ತಪಡಿಸಬಲ್ಲ ಮಾನುಷ ಕ್ರಿಯೆಗಳನ್ನು ಸೂಚಿಸುತ್ತವೆ. ಅವನ ಒಂದು ಕೈಯಲ್ಲಿ ಪುಸ್ತಕವಿದ್ದರೆ ಇನ್ನೊಂದರಲ್ಲಿ ಗಂಟೆ ಇರುತ್ತದೆ. ಮತ್ತೊಂದರಲ್ಲಿ ಸಂಗೀತ ವಾದ್ಯ. ಬೋಧಿಸತ್ವನ ಆಧುನಿಕ ಶಿಲ್ಪದಲ್ಲಿ ಕಂಪ್ಯೂಟರನ್ನು ಹಿಡಿದಿರುವ ಕೈ ಕೂಡ ಒಂದಿರಬಹುದು. 

ಬೋಧಿಸತ್ವನ ಸಾವಿರ ಕೈಗಳಲ್ಲಿ ಯಾವುದೋ ಒಂದರಲ್ಲಿ ಗನ್‌ ಕೂಡ ಇರಬಹುದು. ಆಯುಧವನ್ನು ಹಿಡಿದಿದ್ದರೂ ಬೋಧಿಸತ್ವನಾಗಿ ಉಳಿಯಲು ಆದೀತೇ? ಉಳಿಯಬಹುದು, ಸಾಧ್ಯವಿದೆ. ವಿಯೆಟ್ನಾಂನ ದೇವಸ್ಥಾನಗಳ ಮಹಾದ್ವಾರದ ಎಡಬದಿಯಲ್ಲಿ ನಗುಮುಖದಿಂದ ಸ್ವಾಗತ ಕೋರುವ ಮೃದು ಸ್ವಭಾವದ ಬೋಧಿಸತ್ವನ ವಿಗ್ರಹ, ಬಲ ಬದಿಯಲ್ಲಿ ಆಯುಧವನ್ನು ಝಳಪಿಸುತ್ತಿರುವ ಉಗ್ರ ಬೋಧಿಸತ್ವನ ವಿಗ್ರಹ ಇರುತ್ತವೆ.  ವಿಯೆಟ್ನಾಮೀ ಭಾಷೆಯಲ್ಲಿರುವ ಈ ವಿಗ್ರಹದ ಹೆಸರನ್ನು ಅಕ್ಷರಶಃ ಅನುವಾದಿಸಿದರೆ “ಸುಡುಮೋರೆಯ ಭೋಧಿಸತ್ವ” ಎಂದಾಗುತ್ತದೆ. ಅವನ ಮುಖ, ಕಣ್ಣು ಕೆಂಡದ ಹಾಗಿರುತ್ತವೆ, ಮೂಗು, ಬಾಯಿಗಳಿಂದ ಹೊಗೆ ಹೊಮ್ಮುತ್ತಿರುತ್ತದೆ. ಇದು ರಕ್ಷಕ ಬೋಧಿಸತ್ವನ ಪ್ರಾಚೀನ ರೂಪ.. ಇವನು ಹಸಿದ ಪ್ರೇತಾತ್ಮಗಳನ್ನು ತಡೆಯುವ ಶಕ್ತಿ ಇರುವವು. ಹಸಿದಿರುವ ಪ್ರೇತಗಳಿಗೆ ನೈವೇದ್ಯ ಅರ್ಪಿಸುವಾಗ ಈ ಬೋಧಿಸತ್ವ ಬಂದು ನಮ್ಮನ್ನು ಕಾಪಾಡಲೆಂದು ಪ್ರಾರ್ಥಿಸುತ್ತೇವೆ. ಯಾಕೆಂದರೆ ಹಸಿದ ಭೂತಪ್ರೇತಗಳೊಡನೆ ಸಹಿಸಲಾಗದ ಸದ್ದು, ಗದ್ದಲ, ಅವ್ಯವಸ್ಥೆಗಳೂ ಬರುತ್ತವೆ. ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಲು, ಹಸಿದ ಭೂತಪ್ರೇತಗಳನ್ನು ಪಳಗಿಸಲು ಉಗ್ರ ಬೋಧಿಸತ್ವ ಬೇಕು. ಅವನು ಪೋಲೀಸು ಮುಖ್ಯಸ್ಥನಂತಿರುವ ಬೋಧಿಸತ್ವ.

ಈ ಉಗ್ರ ರೂಪವೂ ಅವಲೋಕಿತೇಶ್ವರನ ಅವತಾರವೇ. ಅವಲೋಕಿತೇಶ್ವರನು ಮೃದು, ಮಧುರ, ತಾಯಿಯಂಥ ಸ್ವಭಾವದ ಬೋಧಿಸತ್ವ ಹೇಗೋ ಹಾಗೆಯೇ ಹಸಿದ ಭೂತಕ್ಕೆ ಆಹಾರವಾಗದಂತೆ ನಮ್ಮನ್ನು ಕಾಪಾಡುವ ಉಗ್ರರೂಪಿಯೂ ಹೌದು.  ಅವಲೋಕಿತೇಶ್ವರನನನ್ನು ಸಾಧು ಸ್ವಭಾವದ ದೈವವಾಗಿ ಮಾತ್ರ ಕಾಣುವುದಾದರೆ ಅವನ ನಿಜವನ್ನು ನಾವು ಕಾಣದವರಾಗುತ್ತೇವೆ. ಬೋಧಿಸತ್ವನ ಕರುಣೆಯ ಅನೇಕ ರೂಪಗಳನ್ನು ಗಹನವಾಗಿ ಅರಿಯುವುದು ಮುಖ್ಯ.

ಸಾವಿರ ಕೈಗಳ ಬೋಧಿಸತ್ವನನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದೆ ಅವನ ಒಂದೊಂದು ಅಂಗೈಯಲ್ಲೂ ಕಣ್ಣು ಇರುವುದು ಕಾಣುತ್ತದೆ. ಅಂಗೈಯಲ್ಲಿರುವ ಕಣ್ಣು ವಿವೇಕ, ಅರಿವು ಅಥವಾ “ಪ್ರಜ್ಞಾ”ಗಳ ಸಂಕೇತ. ನಮ್ಮ ಬದುಕಿನ ದಾರಿಯಲ್ಲಿ ವಿವೇಕ, ಕರುಣೆಗಳೆರಡೂ ಬೇಕು. ಅರಿವು, ವಿವೇಕಗಳು ಪ್ರೀತಿ, ಕರುಣೆ, ಸಹಾನುಭೂತಿಗಳನ್ನು ತರುತ್ತದೆ. ಅವಲೋಕಿತೇಶ್ವರನಿಗೆ ಸಾವಿರ ಕೈಗಳು ಇರುವುದು ಯಾಕೆಂದರೆ ವಿವಿಧ ಉಪಕರಣಗಳನ್ನು ಬಳಸುತ್ತಾ ವಿವಿಧ ರೂಪಗಳಲ್ಲಿ ಅವನು ವ್ಯಕ್ತನಾಗಬೇಕು. ಅದಕ್ಕೇ ಒಂದೊಂದು ಕೈಯಲ್ಲೂ ಒಂದೊಂದು ಉಪಕರಣೆ, ಮತ್ತು, ಜೊತೆಗೇ ವಿವೇಕದ ಕಣ್ಣು.

ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ ,
ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
ಮನದ ಭಿಕ್ಷವನುಂಡು, ತನು ಪರಿಣಾಮವನೆಯ್ದಿಹ
ಘನಮಹಿಮರ ತೋರಯ್ಯಾ ಗುಹೇಶ್ವರಾ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.