Agrippa’s Trilemma ಸರಿ ಎಂದಾದರೆ, ನಮ್ಮ ಯಾವುದೇ ನಂಬಿಕೆಯನ್ನು ಸಂಪೂರ್ಣವಾಗಿ ಸಮರ್ಥಿಸುವುದು ಸಾಧ್ಯವಿಲ್ಲ. ಆದ್ದರಿಂದ, ಚರ್ಚೆ ಮತ್ತು ವಾದ-ವಿವಾದಗಳು ಸತ್ಯವನ್ನು ಕಂಡುಹಿಡಿಯುವುದಕ್ಕಿಂತ, ಪ್ರತಿಷ್ಠೆ (status), ಅಧಿಕಾರ (power), ಅಥವಾ ವ್ಯಕ್ತಿತ್ವದ ಆಕರ್ಷಣೆ (charisma) ಇವುಗಳ ಸುತ್ತವೇ ತಿರುಗುವ ಸಾಧ್ಯತೆ ಹೆಚ್ಚು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ಯಾವತ್ತೂ “ನಾನು ಸರಿಯಾಗಿದ್ದೇನೆ” ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಯಾವುದೇ ನಂಬಿಕೆಯನ್ನು ಅದು ಸತ್ಯವೋ ಅಥವಾ ಅಸತ್ಯವೋ ಎಂದು ಅಂತಿಮವಾಗಿ ನಿರ್ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಚರ್ಚೆ, ವಾದ-ವಿವಾದ ಮತ್ತು ಎಲ್ಲ ತಾರ್ಕಿಕ ವಿಚಾರಣೆಯಲ್ಲಿಯೂ ಒಂದು ಹಂತ ಬರುತ್ತದೆ; ಅಲ್ಲಿ ನೀವು ಮುಂದೆ ಸಾಗಲು ಸಾಧ್ಯವಾಗದೆ ನಿಲ್ಲಬೇಕಾಗುತ್ತದೆ. ನೀವು ಪ್ರಯತ್ನವನ್ನು ಮುಂದುವರಿಸಬಹುದು, ಆದರೆ Agrippa’s Trilemma ದ ಪ್ರಕಾರ, ಕೊನೆಗೆ ನೀವು ತಪ್ಪಿಸಿಕೊಳ್ಳಲಾಗದ ಮೂರು ಸಮಸ್ಯೆಗಳಲ್ಲಿ ಒಂದನ್ನು ಎದುರಿಸಲೇಬೇಕಾಗುತ್ತದೆ.
ಮೊದಲನೆಯದು ‘ಅನಂತ ಹಿಮ್ಮೆಟ್ಟುವಿಕೆ’ (Infinite Regress). ಇದರಲ್ಲಿ ನೀವು ‘ಏಕೆ?’ ಎನ್ನುವ ಪ್ರಶ್ನೆಗೆ, ಇನ್ನೊಂದು ಕಾರಣ, ಅದಕ್ಕೆ ಮತ್ತೊಂದು ಕಾರಣ ಎಂದು ಅಂತ್ಯವಿಲ್ಲದ ಸರಪಳಿಯಲ್ಲಿ ಸಾಗುತ್ತೀರಿ. ಕೊನೆಗೆ ನಿಮ್ಮ ನಂಬಿಕೆಗೆ ಯಾವುದೇ ದೃಢವಾದ ಅಡಿಪಾಯವೇ ಉಳಿಯುವುದಿಲ್ಲ.
ಎರಡನೆಯದು ‘ವೃತ್ತಾಕಾರ ತರ್ಕ’ (Circular Reasoning). ಇದರಲ್ಲಿ ಒಬ್ಬ ವ್ಯಕ್ತಿಯ ವಾದವು ತಾನು ಈಗಾಗಲೇ ಹೇಳಿರುವ ವಿಷಯವನ್ನೇ ಮತ್ತೆ ಮತ್ತೆ ತನ್ನ ವಾದಕ್ಕೆ ಆಧಾರವಾಗಿ ಬಳಸುತ್ತದೆ.
ಉದಾಹರಣೆಗೆ, ಒಬ್ಬರು ಹೀಗೆ ಹೇಳುತ್ತಾರೆ:
“ನನ್ನ ಪವಿತ್ರ ಗ್ರಂಥವು ಸತ್ಯ.”
ನೀವು ಕೇಳುತ್ತೀರಿ:
“ಅದು ಸತ್ಯ ಎಂದು ನಿಮಗೆ ಹೇಗೆ ಗೊತ್ತು?”
ಅವರು ಉತ್ತರಿಸುತ್ತಾರೆ:
“ಏಕೆಂದರೆ ಅದು ದೇವರ ನುಡಿ.”
ನೀವು ಮತ್ತೆ ಕೇಳುತ್ತೀರಿ:
“ಅದು ದೇವರ ವಚನ ಎಂದು ನಿಮಗೆ ಹೇಗೆ ಗೊತ್ತು?”
ಅವರು ಉತ್ತರಿಸುತ್ತಾರೆ :
“ಏಕೆಂದರೆ ಪವಿತ್ರ ಗ್ರಂಥವೇ ಹಾಗೆ ಹೇಳುತ್ತದೆ. ಮತ್ತು ಪವಿತ್ರ ಗ್ರಂಥವು ಸತ್ಯ!”
ಹೀಗೆ ವಾದವು ಹೊಸ ಸಾಕ್ಷ್ಯವನ್ನು ನೀಡದೆ, ತನ್ನನ್ನು ತಾನೇ ಸತ್ಯವೆಂದು ಸಾಬೀತುಪಡಿಸಲು ಪ್ರಯತ್ನಿಸುತ್ತದೆ. ಇದನ್ನೇ ‘ವೃತ್ತಾಕಾರ ತರ್ಕ’ ಎಂದು ಕರೆಯುತ್ತಾರೆ.
ಮೂರನೆಯದು, ಮತ್ತು ಬಹುಶಃ ಅತ್ಯಂತ ಸಾಮಾನ್ಯವಾದದ್ದು, ‘ಹಠಾತ್ ಪ್ರತಿಪಾದನೆ’ (Dogmatic Assertion). ಯಾವುದೇ ಚರ್ಚೆ ಅಥವಾ ವಾದ-ವಿವಾದದಲ್ಲಿ ಒಂದು ಹಂತ ಬರುತ್ತದೆ; ಆಗ ಒಂದು ಪಕ್ಷ ಅಥವಾ ಎರಡೂ ಪಕ್ಷಗಳು ಕೊನೆಗೆ ಹೀಗೆ ಹೇಳಬೇಕಾಗುತ್ತದೆ:
“ಅದು ನನ್ನ ನಂಬಿಕೆ.” ಅಥವಾ “ಅದು ಹಾಗೆಯೇ !” ಉದಾಹರಣೆಗೆ:
“ಮಾನವ ಜೀವವು ಏಕೆ ಅಮೂಲ್ಯ?”
ಅದಕ್ಕೆ ಉತ್ತರ:
“ಅದು ಅಮೂಲ್ಯ ಅಷ್ಟೇ!”
ಇಂತಹ ಉತ್ತರವು ಯಾವುದೇ ಹೆಚ್ಚುವರಿ ಕಾರಣ ಅಥವಾ ಸಾಕ್ಷ್ಯವನ್ನು ನೀಡುವುದಿಲ್ಲ; ಅದು ಕೇವಲ ನಂಬಿಕೆಯನ್ನು ಅಂತಿಮ ಸತ್ಯವೆಂದು ಘೋಷಿಸುತ್ತದೆ.
Agrippa’s Trilemma ಸರಿ ಎಂದಾದರೆ, ನಮ್ಮ ಯಾವುದೇ ನಂಬಿಕೆಯನ್ನು ಸಂಪೂರ್ಣವಾಗಿ ಸಮರ್ಥಿಸುವುದು ಸಾಧ್ಯವಿಲ್ಲ. ಆದ್ದರಿಂದ, ಚರ್ಚೆ ಮತ್ತು ವಾದ-ವಿವಾದಗಳು ಸತ್ಯವನ್ನು ಕಂಡುಹಿಡಿಯುವುದಕ್ಕಿಂತ, ಪ್ರತಿಷ್ಠೆ (status), ಅಧಿಕಾರ (power), ಅಥವಾ ವ್ಯಕ್ತಿತ್ವದ ಆಕರ್ಷಣೆ (charisma) ಇವುಗಳ ಸುತ್ತವೇ ತಿರುಗುವ ಸಾಧ್ಯತೆ ಹೆಚ್ಚು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಬಳಿ ಉಳಿಯುವುದು ಕೇವಲ ಅಭಿಪ್ರಾಯಗಳು ಮಾತ್ರ. ಆಗ ಮುಖ್ಯ ಪ್ರಶ್ನೆ : “ಯಾರ ಅಭಿಪ್ರಾಯವು ಹೆಚ್ಚು ಆಕರ್ಷಕವಾಗಿ, ಹೆಚ್ಚು ನಂಬುವಂತೆ ಮತ್ತು ಹೆಚ್ಚು ಒಪ್ಪಿಕೊಳ್ಳುವಂತೆ ಕಾಣಿಸುತ್ತದೆ?” ಎನ್ನುವುದು.

