ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಮುಲ್ಲಾ ನಸ್ರುದ್ದೀನ್ ನನ್ನು ಮಾರುಕಟ್ಟೆಯಲ್ಲಿ ಜನ ಆಗಾಗ ತಮಾಷೆ ಮಾಡುತ್ತಿದ್ದರು. ಯಾರಾದರೂ ಅವನಿಗೆ ಒಂದು ದೊಡ್ಡ ನಾಣ್ಯ ಮತ್ತು ಒಂದು ಸಣ್ಣ ನಾಣ್ಯದ ನಡುವೆ ಆಯ್ಕೆ ಮಾಡುವ ಅವಕಾಶ ನೀಡಿದಾಗ, ಅವನು ಯಾವಾಗಲೂ ಸಣ್ಣ ನಾಣ್ಯವನ್ನೇ ಆಯ್ಕೆ ಮಾಡುತ್ತಿದ್ದ. ಇದನ್ನು ನೋಡಿ ಜನ, “ಇವನು ಮೂರ್ಖ” ಎಂದು ನಗುತ್ತಿದ್ದರು.
ಒಂದು ದಿನ ಒಬ್ಬ ದಯಾಳು ವ್ಯಕ್ತಿ ನಸ್ರುದ್ದೀನ್ ನ ಪ್ರಶ್ನೆ ಮಾಡಿದ :
“ದೊಡ್ಡ ನಾಣ್ಯವನ್ನೇ ಯಾಕೆ ನೀನು ಆಯ್ಕೆ ಮಾಡಿಕೊಳ್ಳಬಾರದು? ಆಗ ಜನ ನಿನ್ನನ್ನು ಮೂರ್ಖನೆಂದು ಭಾವಿಸುವುದನ್ನು ನಿಲ್ಲಿಸುತ್ತಾರೆ.”
ನಸ್ರುದ್ದೀನ್ ಮುಗುಳ್ನಗುತ್ತಾ ಉತ್ತರಿಸಿದ :
“ನಾನು ದೊಡ್ಡ ನಾಣ್ಯವನ್ನು ತೆಗೆದುಕೊಂಡರೆ ಆಗ ಈ ಆಟವೇ ಮುಗಿದುಹೋಗುತ್ತದೆ. ಜನರು ಮತ್ತೆ ನನಗೆ ನಾಣ್ಯಗಳನ್ನು ನೀಡುವುದಿಲ್ಲ. ಆದರೆ ನಾನು ಸಣ್ಣ ನಾಣ್ಯವನ್ನೇ ಆಯ್ಕೆ ಮಾಡುತ್ತಾ ಹೋದರೆ, ಕಾಲಕ್ರಮೇಣ ನಾನು ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಬಹುದು.”
ಜ್ಞಾನ ಎಂದರೆ ಯಾವಾಗಲೂ ಬುದ್ಧಿವಂತನಂತೆ ಕಾಣುವುದಲ್ಲ.
ಕೆಲವೊಮ್ಮೆ ನಿಜವಾದ ಬುದ್ಧಿವಂತ, ದೊಡ್ಡ ಉದ್ದೇಶಕ್ಕಾಗಿ ತನ್ನನ್ನು ಜನರು ಕಡಿಮೆ ಅಂದಾಜು ಮಾಡಲಿ, ತಪ್ಪಾಗಿ ಅರ್ಥಮಾಡಿಕೊಳ್ಳಲಿ, ಅಥವಾ ತನ್ನನ್ನು ನೋಡಿ ನಗಲಿ ಎಂದು ಸಹಿಸಿಕೊಳ್ಳಲು ಸಿದ್ಧನಾಗಿರುತ್ತಾನೆ.
ಅಹಂಕಾರವು ಯಾವಾಗಲೂ ತಾನು ಬುದ್ಧಿವಂತನೆಂದು ಕಾಣಬೇಕೆಂದು ಬಯಸುತ್ತದೆ.
ಜ್ಞಾನವು ಯಾವುದು ಫಲಪ್ರದವೋ ಅದನ್ನು ಮಾತ್ರ ಹುಡುಕುತ್ತದೆ.
ಪ್ರತಿಯೊಂದು ವಾದವನ್ನೂ ಗೆಲ್ಲಬೇಕಾದ ಅಗತ್ಯವಿಲ್ಲ.
ಪ್ರತಿಯೊಂದು ತಪ್ಪು ಕಲ್ಪನೆಯನ್ನು ಸರಿಪಡಿಸಬೇಕಾದ ಅಗತ್ಯವಿಲ್ಲ.
ಮತ್ತು ಮೂರ್ಖನಂತೆ ಕಾಣುವ ಪ್ರತಿಯೊಬ್ಬನೂ ನಿಜವಾಗಿಯೂ ಮೂರ್ಖನಾಗಿರುವುದಿಲ್ಲ.
ಇತರರನ್ನು ಮೆಚ್ಚಿಸಬೇಕೆಂಬ ಹಂಬಲವನ್ನು ಬಿಟ್ಟಾಗ ಒಂದು ರೀತಿಯ ಆಂತರಿಕ ಸ್ವಾತಂತ್ರ್ಯ ದೊರೆಯುತ್ತದೆ. ಮೌನದಲ್ಲಿರುವ ಜ್ಞಾನವು, ಅಹಂಕಾರದಿಂದ ಎಂದಿಗೂ ಸಾಧಿಸಲಾಗದ ಅನೇಕ ಸಂಗತಿಗಳನ್ನು ಸಾಧಿಸುತ್ತದೆ.
ನೀವು ಮಾಡುವ ಕೆಲಸ ನಿಜವಾಗಿಯೂ ಬುದ್ಧಿವಂತಿಕೆಯದ್ದಾಗಿದ್ದರೆ, ಮೂರ್ಖನಂತೆ ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ.

