ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ತಕ್ಷಣ ಅರ್ಥ ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ಪ್ರಶ್ನೆಗೂ ತಕ್ಷಣ ಉತ್ತರ ಸಿಗಬೇಕೆಂದೂ ಇಲ್ಲ… । ಡಾ. ಸಹನಾ ಪ್ರಿಯದರ್ಶಿನಿ
ಒಬ್ಬ ಯುವ ಝೆನ್ ಶಿಷ್ಯನು, ಜೀವನದ ಆಳವಾದ ಸತ್ಯಗಳನ್ನು ಅರಿತುಕೊಳ್ಳಬೇಕೆಂಬ ತೀವ್ರ ಆಸೆ ಯಿಂದ ತನ್ನ ಗುರುಗಳ ಬಳಿಗೆ ಬಂದನು.
ಗುರುಗಳು ಅವನಿಗೆ ಹೇಳಿದರು:
“ಎರಡು ಕೈಗಳನ್ನು ಸೇರಿಸಿ ಚಪ್ಪಾಳೆ ತಟ್ಟಿದಾಗ ಸದ್ದು ಕೇಳಿಸುತ್ತದೆ. ಈಗ ನೀನು ಹೋಗಿ ಒಂದು ಕೈಯ ಸದ್ದು ಹೇಗಿರುತ್ತದೆ ಎಂಬುದನ್ನು ಕಂಡುಹಿಡಿದು ಬಾ.”
ಶಿಷ್ಯನಿಗೆ ಗೊಂದಲವಾಯಿತು.
ಅವನು ಅಲ್ಲಿಂದ ಹೊರಟು, ಏಕಾಂತದಲ್ಲಿ ಕುಳಿತು ಧ್ಯಾನ ಮಾಡಲು ಆರಂಭಿಸಿದ.
ಸ್ವಲ್ಪ ಸಮಯದ ನಂತರ ಉತ್ಸಾಹದಿಂದ ಗುರುಗಳ ಬಳಿಗೆ ಮರಳಿ ಬಂದ.
“ಗುರುಗಳೇ! ಮರಗಳ ನಡುವೆ ಬೀಸುವ ಗಾಳಿಯ ಸದ್ದನ್ನು ಕೇಳಿದೆ. ಅದೇ ಒಂದು ಕೈಯ ಸದ್ದೇ?”
ಗುರುಗಳು ತಲೆಯಾಡಿಸಿದರು.
“ಅಲ್ಲ.”
ಶಿಷ್ಯನು ಮತ್ತೆ ಧ್ಯಾನಕ್ಕೆ ಮರಳಿದ.
ಕೆಲವು ದಿನಗಳ ನಂತರ ಮತ್ತೆ ಬಂದ.
“ಗುರುಗಳೇ, ಹರಿಯುವ ತೊರೆಯ ನೀರಿನ ಸದ್ದನ್ನು ಕೇಳಿದೆ. ಬಹುಶಃ ಅದೇ ಇರಬಹುದೇ?”
ಗುರುಗಳು ಮತ್ತೆ ಹೇಳಿದರು:
“ಅಲ್ಲ.”
ಶಿಷ್ಯನು ತನ್ನ ಹುಡುಕಾಟವನ್ನು ಮುಂದುವರಿಸಿದ.
ಹಕ್ಕಿಗಳ ಕಲರವವನ್ನು ಕೇಳಿದ. ಮಳೆಯ ಸದ್ದನ್ನು ಕೇಳಿದ. ಹೆಜ್ಜೆಗಳ ಸದ್ದು, ಗಂಟೆಯ ನಾದ, ಕೀಟಗಳ ಧ್ವನಿ, ಕೊನೆಗೆ ತನ್ನ ಉಸಿರಾಟದ ಸದ್ದನ್ನೂ ಆಲಿಸಿದ.
ಪ್ರತಿ ಬಾರಿ ಉತ್ತರ ಸಿಕ್ಕಿತು ಎಂದುಕೊಂಡಾಗಲೂ, ತಾನು ಇನ್ನೂ ಯಾವುದೋ ಸಾಮಾನ್ಯ ಸದ್ದನ್ನೇ ಹುಡುಕುತ್ತಿದ್ದೇನೆ ಎಂಬುದು ಅವನಿಗೆ ಅರಿವಾಗುತ್ತಿತ್ತು.
ಕೊನೆಗೆ ಉತ್ತರ ಹುಡುಕಿ ಹುಡುಕಿ ಅವನು ಸುಸ್ತಾದ.
ಹುಡುಕುವುದನ್ನೇ ನಿಲ್ಲಿಸಿದ.
ಮೌನವಾಗಿ ಕುಳಿತ.
ತಾನು ಕೇಳುತ್ತಿರುವುದಕ್ಕೆ ಹೆಸರಿಡಲು ಪ್ರಯತ್ನಿಸಲಿಲ್ಲ.
ತನ್ನ ಉತ್ತರ ಸರಿಯೋ ತಪ್ಪೋ ಎಂದು ಯೋಚಿಸಲಿಲ್ಲ.
ಅಲ್ಲಿ ಉಳಿದದ್ದು ಕೇವಲ ಮೌನ.
ಆ ಮೌನದಲ್ಲಿ ಅವನೊಳಗೆ ಏನೋ ಬದಲಾಯಿತು.
ಮತ್ತೆ ಗುರುಗಳ ಬಳಿಗೆ ಬಂದಾಗ ಅವನು ಯಾವುದೇ ಉತ್ತರ ನೀಡಲಿಲ್ಲ.
ಸುಮ್ಮನೆ ತಲೆಬಾಗಿ ನಮಸ್ಕರಿಸಿದ.
ಗುರುಗಳು ಮುಗುಳ್ನಕ್ಕರು.
ಈ ಬಾರಿ ವಿವರಿಸಲು ಏನೂ ಉಳಿದಿರಲಿಲ್ಲ.
“ಮೌನ” ಎಂದರೆ ಏನು?
ಈ ಕಥೆಯಲ್ಲಿನ ಮೌನ ಎಂದರೆ ಮಾತನಾಡದೆ ಇರುವುದಲ್ಲ. ಮನಸ್ಸಿನಲ್ಲಿ ನಿರಂತರವಾಗಿ ನಡೆಯುವ, ತೀರ್ಪು, ಹೋಲಿಕೆ, ಊಹೆ, ಭಯ, ಪಶ್ಚಾತ್ತಾಪ, ಅತಿಯಾದ ವಿಶ್ಲೇಷಣೆ ಇವುಗಳಿಂದ ಸ್ವಲ್ಪ ದೂರ ನಿಂತು ಪರಿಸ್ಥಿತಿಯನ್ನು ಅದು ಇರುವಂತೆಯೇ ನೋಡುವುದು.
ನಮಗೆ ಸಮಸ್ಯೆ ಎದುರಾದಾಗ ಮೂರು ಸರಳ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು:
ನಿಜವಾಗಿ ನಡೆದದ್ದು ಏನು?
ಅದರ ಬಗ್ಗೆ ನಾನು ಏನು ಊಹಿಸಿಕೊಳ್ಳುತ್ತಿದ್ದೇನೆ?
ಈಗ ನಾನು ಮಾಡಬಹುದಾದದ್ದು ಏನು?
ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ತಕ್ಷಣ ಅರ್ಥ ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ಪ್ರಶ್ನೆಗೂ ತಕ್ಷಣ ಉತ್ತರ ಸಿಗಬೇಕೆಂದೂ ಇಲ್ಲ.
“ಒಂದು ಕೈಯ ಸದ್ದು ಹೇಗಿರುತ್ತದೆ?” ಎಂಬ ಪ್ರಶ್ನೆಗೆ ನೇರವಾದ ಉತ್ತರ ಇಲ್ಲ. ಗುರುಗಳಿಗೆ ಶಿಷ್ಯನಿಂದ ಯಾವುದೋ ಒಂದು ಸದ್ದಿನ ಹೆಸರು ಬೇಕಾಗಿರಲಿಲ್ಲ. ಬದಲಾಗಿ, ಪ್ರತಿಯೊಂದಕ್ಕೂ ಉತ್ತರ ಹುಡುಕುವ ಮನಸ್ಸಿನ ಸ್ವಭಾವವನ್ನು ಶಿಷ್ಯನು ಅರಿತುಕೊಳ್ಳಬೇಕು ಎಂಬುದೇ ಅವರ ಉದ್ದೇಶ.
ನಮ್ಮ ಜೀವನದಲ್ಲಿಯೂ ಹೀಗೆಯೇ. ಯಾವುದಾದರೂ ಸಮಸ್ಯೆ ಬಂದಾಗ, ಘಟನೆ ನಡೆದಾಗ ಅಥವಾ ಯಾರಾದರೂ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡಾಗ ಮನಸ್ಸು ತಕ್ಷಣ ಅದಕ್ಕೆ ಅರ್ಥ ಕೊಡಲು ಪ್ರಾರಂಭಿಸುತ್ತದೆ. ಉದಾಹರಣೆಗೆ,
1. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ
ಒಬ್ಬ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಪಡೆದಿದ್ದಾಳೆ.
ವಾಸ್ತವ: ಅವಳಿಗೆ ಈ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ.
ಆದರೆ ಮನಸ್ಸು ಹೇಳುತ್ತದೆ:
“ನಾನು ಬುದ್ಧಿವಂತಳಲ್ಲ.”
“ನನ್ನ ಸ್ನೇಹಿತರೆಲ್ಲ ನನಗಿಂತ ಮುಂದೆ ಹೋಗುತ್ತಾರೆ.”
“ನನ್ನ ಭವಿಷ್ಯ ಹಾಳಾಯಿತು.”
“ಅಪ್ಪ–ಅಮ್ಮನಿಗೆ ನಾನು ನಿರಾಶೆ ಮಾಡಿದೆ.”
ಒಂದು ಪರೀಕ್ಷೆಯ ಫಲಿತಾಂಶವನ್ನು ಮನಸ್ಸು ಇಡೀ ಜೀವನದ ತೀರ್ಪಾಗಿ ಪರಿವರ್ತಿಸಿದೆ.
ಇಲ್ಲಿ ಝೆನ್ ದೃಷ್ಟಿಕೋನ ವೇನೆಂದರೆ,
“ನನಗೆ ಕಡಿಮೆ ಅಂಕ ಬಂದಿದೆ. ಅಷ್ಟೇ. ಈಗ ನಾನು ಏನು ಮಾಡಬಹುದು?”
ತಪ್ಪುಗಳನ್ನು ಗುರುತಿಸಬಹುದು, ಓದುವ ವಿಧಾನ ಬದಲಾಯಿಸಬಹುದು, ಶಿಕ್ಷಕರ ಸಹಾಯ ಪಡೆಯಬಹುದು, ಮತ್ತೆ ಪ್ರಯತ್ನಿಸಬಹುದು.
ಘಟನೆಯನ್ನು ಒಪ್ಪಿಕೊಳ್ಳುವುದು ಸೋಲಲ್ಲ; ಅದನ್ನು ಅನಗತ್ಯ ಭಯವಿಲ್ಲದೆ ನೋಡುವುದು.
2. ಮಕ್ಕಳು ನಮ್ಮ ಮಾತು ಕೇಳದಾಗ
ತಾಯಿ ತನ್ನ ಮಗನಿಗೆ, “ಮೊಬೈಲ್ ಬಿಟ್ಟು ಓದು” ಎಂದು ಹೇಳುತ್ತಾಳೆ. ಮಗ ತಕ್ಷಣ ಕೇಳುವುದಿಲ್ಲ.
ತಾಯಿಯ ಮನಸ್ಸಿನಲ್ಲಿ:
“ಈಗಿನ ಮಕ್ಕಳಿಗೆ ತಂದೆ–ತಾಯಿಯ ಬಗ್ಗೆ ಗೌರವವೇ ಇಲ್ಲ.”
“ಇವನ ಭವಿಷ್ಯ ಏನಾಗುತ್ತದೋ!”
“ನಾನು ಅವನಿಗಾಗಿ ಇಷ್ಟೆಲ್ಲ ಮಾಡುತ್ತೇನೆ, ಆದರೆ ಅವನಿಗೆ ನನ್ನ ಮಾತಿನ ಬೆಲೆಯೇ ಇಲ್ಲ.”
ಎಂಬ ಆಲೋಚನೆಗಳು ಬರಬಹುದು.
ಆದರೆ ವಾಸ್ತವವೇನು?
ಆ ಕ್ಷಣದಲ್ಲಿ ಮಗ ಮೊಬೈಲ್ ಬಿಟ್ಟಿಲ್ಲ.
ಅಷ್ಟೇ.
ಅವನಿಗೆ ಓದುವ ಒತ್ತಡವಿದೆಯೇ? ಸ್ನೇಹಿತರೊಂದಿಗೆ ಏನಾದರೂ ಸಮಸ್ಯೆಯಿದೆಯೇ? ಮೊಬೈಲ್ ಅವನಿಗೆ ಒತ್ತಡದಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿದೆಯೇ? ಅಥವಾ ಸರಳವಾಗಿ ಅಭ್ಯಾಸವಾಗಿದೆಯೇ?
ತಕ್ಷಣ ತೀರ್ಪು ಕೊಡುವುದಕ್ಕಿಂತ ಮೊದಲು ಕೇಳುವುದು ಮತ್ತು ಅರ್ಥಮಾಡಿಕೊಳ್ಳುವುದು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು.
3. ಯಾರಾದರೂ ನಮ್ಮ ಸಂದೇಶಕ್ಕೆ ಉತ್ತರಿಸದಿದ್ದಾಗ
ನಾವು ಆತ್ಮೀಯ ವ್ಯಕ್ತಿಯೊಬ್ಬರಿಗೆ ಸಂದೇಶ ಕಳುಹಿಸುತ್ತೇವೆ. ಗಂಟೆಗಳು ಕಳೆದರೂ ಉತ್ತರ ಬರುವುದಿಲ್ಲ.
ಮನಸ್ಸು ತಕ್ಷಣ ಕೆಲಸ ಆರಂಭಿಸುತ್ತದೆ:
“ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ.”
“ಬಹುಶಃ ನನ್ನ ಮೇಲೆ ಕೋಪವಿರಬಹುದು.”
“ನಾನೇನಾದರೂ ತಪ್ಪಾಗಿ ಮಾತನಾಡಿದ್ದೇನಾ?”
ಆದರೆ ವಾಸ್ತವ ಒಂದೇ:
ಇನ್ನೂ ಉತ್ತರ ಬಂದಿಲ್ಲ.
ಅವರು ಕೆಲಸದಲ್ಲಿ ಬ್ಯುಸಿಯಾಗಿರಬಹುದು, ಪ್ರಯಾಣದಲ್ಲಿರಬಹುದು, ಸಂದೇಶ ನೋಡಿರದೇ ಇರಬಹುದು.
ಉತ್ತರ ಬರುವ ಮೊದಲೇ ನಮ್ಮ ಮನಸ್ಸು ಒಂದು ಸಂಪೂರ್ಣ ಕಥೆಯನ್ನು ರಚಿಸಿಬಿಟ್ಟಿರುತ್ತದೆ!
ನಮಗೆ ನೋವು ಕೊಡುವುದು ಕೆಲವೊಮ್ಮೆ ಘಟನೆಗಿಂತ, ಅದರ ಬಗ್ಗೆ ನಾವು ಮಾಡಿಕೊಂಡ ಊಹೆಗಳೇ .
4. ಭವಿಷ್ಯದ ಬಗ್ಗೆ ಆತಂಕ
ಮಕ್ಕಳ ಶಿಕ್ಷಣ, ಉದ್ಯೋಗ, ಹಣಕಾಸು, ಕುಟುಂಬ, ಇವೆಲ್ಲದರ ಬಗ್ಗೆ ನಾವು ಕೆಲವೊಮ್ಮೆ ವರ್ಷಗಳ ಮುಂಚೆಯೇ ಚಿಂತಿಸುತ್ತೇವೆ.
“ಮುಂದೆ ಏನಾಗುತ್ತದೆ?”
“ಅವನಿಗೆ ಒಳ್ಳೆಯ ಕೆಲಸ ಸಿಗದಿದ್ದರೆ?”
“ಅವಳು ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ?”
ಇನ್ನೂ ನಡೆಯದಿರುವ ಘಟನೆಗಳನ್ನು ಮನಸ್ಸು ಕಲ್ಪಿಸಿಕೊಂಡು, ಇಂದು ಅದರ ನೋವನ್ನು ಅನುಭವಿಸುತ್ತದೆ.
ಝೆನ್ ನಮ್ಮನ್ನು ವರ್ತಮಾನಕ್ಕೆ ಕರೆತರುತ್ತದೆ:
“ಈ ಕ್ಷಣದಲ್ಲಿ ನಿಜವಾಗಿ ಯಾವ ಸಮಸ್ಯೆ ಇದೆ?”
ನಾಳೆಯ ಸಮಸ್ಯೆ ಬಂದಾಗ ಅದನ್ನು ಎದುರಿಸಬಹುದು. ಆದರೆ ಇನ್ನೂ ಬರದ ಸಮಸ್ಯೆಯನ್ನು ಇಂದು ಬದುಕುವ ಅಗತ್ಯವಿಲ್ಲ.
ಘಟನೆ ಒಂದು.
ಅದರ ಬಗ್ಗೆ ನಮ್ಮ ಮನಸ್ಸು ಕಟ್ಟುವ ಕಥೆ ಮತ್ತೊಂದು.
ಈ ಎರಡರ ನಡುವಿನ ವ್ಯತ್ಯಾಸವನ್ನು ಅರಿಯುವುದೇ ನಿಜವಾದ ‘ಅರಿವು’.
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

