ನಮ್ಮ ಹೃದಯಕ್ಕೆ ಸಾಂತ್ವನ ಹೇಳುವ ಮತ್ತು ನಮ್ಮನ್ನು ನೋಯಿಸಿದ ವ್ಯಕ್ತಿಗೆ ಸಹಾಯಮಾಡಲು ಸಾಧ್ಯವಾಗುವಂಥ ಕರುಣೆಯ ಚೈತನ್ಯವನ್ನು ನಮ್ಮೊಳಗೆ ಹುಟ್ಟಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ. ನಾವು ಅವರನ್ನು ಶಿಕ್ಷಿಸಿದರೆ ಅವರ ನೋವು, ನರಳಾಟ ಹೆಚ್ಚಾಗುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.6 : ಶಾಂತಿ । ಶಾಂತಿಯುತ ಕ್ರಾಂತಿ
ಕೆಲವರು ಸೇಡನ್ನು ತೀರಿಸಿಕೊಳ್ಳಲು ತಮ್ಮ ಇಡೀ ಬದುಕನ್ನು ವ್ಯಯಿಸುತ್ತಾರೆ. ಸೇಡಿನ ಬಯಕೆ ಅಥವಾ ಇಚ್ಛೆ ಬೇರೆಯವರಿಗೆ ಮಾತ್ರವಲ್ಲ ಸ್ವತಃ ಸೇಡನ್ನು ಹೊಂದಿರುವ ವ್ಯಕ್ತಿಯನ್ನೂ ನರಳಿಸುತ್ತದೆ. ಮನಸಿನೊಳಗಿರುವ ಸೇಡಿನ ಬೆಂಕಿಯನ್ನು ತಣಿಸಲು ಬೇಕಾದದ್ದು ಕರುಣೆ ಮಾತ್ರ. ಕರುಣೆ ಅನ್ನುವುದು ಎಲ್ಲಾದರೂ ಮಾರಾಟಕ್ಕೆ ಸಿಗುವುದಾಗಿದ್ದರೆ ಎಲ್ಲರೂ ಅದನ್ನು ಖರೀದಿಸಿ ಜಗತ್ತಿನಲ್ಲಿರುವ ದ್ವೇಷ ಹಿಂಸೆಗಳನ್ನು ಸುಲಭವಾಗಿ ಇಲ್ಲವಾಗಿಸಬಹುದಾಗಿತ್ತು. ಕರುಣೆ ಹುಟ್ಟುವುದು ಒಬ್ಬೊಬ್ಬರ ಹೃದಯದಲ್ಲೂ ಮಾತ್ರವೇ. ಕರುಣೆ ಹುಟ್ಟಲು ನಾವೇ ಕರುಣೆಯನ್ನು ಸತತವಾಗಿ ಅಳವಡಿಸಿಕೊಳ್ಳುತ್ತಲೇ ಇರಬೇಕು.
ಅಮೆರಿಕ ಈಗ ಭಯ, ನರಳಾಟ, ದ್ವೇಷಗಳ ಉರಿಯಲ್ಲಿ ಬೇಯುತ್ತಿದೆ. ನಾವೇಕೆ ಇಂಥ ಇಷ್ಟು ದೊಡ್ಡ ಪ್ರಮಾಣದ ಹಿಂಸೆಯಲ್ಲಿ ಸಿಕ್ಕಿಬಿದ್ದಿದ್ದೇವೆ ಎಂದು ನಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕು.
ಉಗ್ರಗಾಮಿಗಳಲ್ಲಿ ದ್ವೇಷ ತುಂಬಿದೆ. ಅವರು ತಮ್ಮ ಪ್ರಾಣ ತೆತ್ತಾದರರೂ ಸರಿ ಬೇರೆಯವರೆಲ್ಲರೂ ನರಳುವಂತೆ ಮಾಡುತ್ತಾರೆ. ಉಗ್ರಗಾಮಿಗಳಲ್ಲಿರುವ ಮಹಾನ್ ದ್ವೇಷ ನಮಗೆ ಕಾಣುತ್ತದೆ. ಆ ದ್ವೇಷದ ಅಡಿಯಲ್ಲಿ ಏನಿದೆ? ಗಮನಿಸಿ ನೋಡಿದರೆ ಅಲ್ಲಿ “ಅನ್ಯಾಯ” ಕಾಣುತ್ತದೆ. ಅವರು ಮಾಡುವ ಹಿಂಸೆಯನ್ನು ತಡೆಯಲು ದಾರಿಗಳನ್ನು ಹುಡುಕಲೇಬೇಕು. ಅವರಲ್ಲಿರುವ ಹಿಂಸೆ ಹೊತ್ತಿ ಉರಿಯುತ್ತಿರುವಾಗ ಸೆರೆಮನೆಯಲ್ಲಿಡುವುದೂ ಅಗತ್ಯವೇ. ಆದರೆ, ಮುಖ್ಯವಾದ ಸಂಗತಿ ಏನೆಂದರೆ “ಹಿಂಸೆಗೆ ಕಾರಣವಾಗುವ ಅನ್ಯಾಯವನ್ನು ನಿವಾರಿಸುವಲ್ಲಿ ನಮ್ಮ ಜವಾಬ್ದಾರಿ ಏನು?” ಎಂದು ಕಂಡುಕೊಳ್ಳಬೇಕು.
ಕೆಲವೊಮ್ಮೆ ನಾವು ಪ್ರೀತಿಸುವ ವ್ಯಕ್ತಿ—ನಮ್ಮ ಮಗು, ಬದುಕಿನ ಸಂಗಾತಿ, ತಂದೆ-ತಾಯಿಯರು ಕ್ರೂರವಾಗಿ ನಡೆದುಕೊಳ್ಳುತ್ತಾರೆ. ನಾವು ನರಳುತ್ತೇವೆ, ಸಿಟ್ಟುಗೊಳ್ಳುತ್ತೇವೆ. ಗಮನಿಸಿ ನೋಡಿ, ಹಿಂಸೆಯಾಗುವುದು, ನರಳಾಟವಿರುವುದು ನಮಗೆ ಮಾತ್ರವಲ್ಲ, ಕ್ರೂರವಾಗಿ ನಡೆದುಕೊಂಡವರೂ ನೋವು, ಹಿಂಸೆ ಅನುಭವಿಸುತ್ತಿರುತ್ತಾರೆ. ಹಾಗಲ್ಲದಿದ್ದರೆ ಅವರು ಸಿಟ್ಟುಗೊಳ್ಳಲು ಕಾರಣವೇ ಇರುತ್ತಿರಲಿಲ್ಲ. ನಾವು ಪ್ರೀತಿಸುವ ವ್ಯಕ್ತಿಗೆ ತನ್ನ ನರಳಾಟದಿಂದ ಹೊರಬರುವ ದಾರಿ ಕಾಣದೆ ಸಿಟ್ಟುಗೊಂಡು ಕ್ರೂರವಾಗಿ ವರ್ತಿಸಿರಬಹುದು.
ಹಾಗಾಗಿ ನಮ್ಮ ಪ್ರೀತಿಯ ವ್ಯಕ್ತಿ ತನ್ನೊಳಗಿನ ದ್ವೇಷ, ಹಿಂಸೆಯನ್ನು ನಮ್ಮ ಮೇಲೆ ಎರಚಾಡಿರಬಹುದು. ನಮ್ಮ ಹೃದಯಕ್ಕೆ ಸಾಂತ್ವನ ಹೇಳುವ ಮತ್ತು ನಮ್ಮನ್ನು ನೋಯಿಸಿದ ವ್ಯಕ್ತಿಗೆ ಸಹಾಯಮಾಡಲು ಸಾಧ್ಯವಾಗುವಂಥ ಕರುಣೆಯ ಚೈತನ್ಯವನ್ನು ನಮ್ಮೊಳಗೆ ಹುಟ್ಟಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ. ನಾವು ಅವರನ್ನು ಶಿಕ್ಷಿಸಿದರೆ ಅವರ ನೋವು, ನರಳಾಟ ಹೆಚ್ಚಾಗುತ್ತದೆ.
ಹಿಂಸೆಗೆ ಪ್ರತಿ ಹಿಂಸೆಯೇ ಉತ್ತವಾದರೆ ಹಿಂಸೆ ಹೆಚ್ಚುತ್ತದೆ, ಅನ್ಯಾಯ ಬೆಳೆಯುತತದೆ, ನರಳಾಟ, ನೋವು ಇವೆಲ್ಲ ಹಿಂಸೆಗೆ ಒಳಗಾದವರಲ್ಲೂ, ಹಿಂಸೆ ಮಾಡಿದವರಲ್ಲೂ ಬೆಳೆಯುತ್ತವೆ. ಈ ವಿವೇಕ ನಮ್ಮೆಲ್ಲರಲ್ಲೂ ಇದೆ. ಆಳ ಉಸಿರಾಟದ ಮೂಲಕ ಈ ವಿವೇಕದ ಬೀಜ ನಮ್ಮ ಅರಿವಿಗೆ ಬರುತ್ತದೆ. ಅಮೆರಿಕದ ಪ್ರಜೆಗಳು ಒಂದೇ ಒಂದು ವಾರದಷ್ಟು ಕಾಲ ತಮ್ಮೊಳಗಿನ ಕರುಣೆಯನ್ನು ವ್ಯಕ್ತಪಡಿಸಿದರೆ ದೇಶದಲ್ಲಿರುವ ಹಿಂಸೆ, ಸಿಟ್ಟುಗಳ ಪ್ರಮಾಣ ಅಗಾಧ ಪ್ರಮಾಣದಲ್ಲಿ ತಗ್ಗುತ್ತದೆ. ನಮ್ಮೊಳಗಿರುವ ವಿವೇಕ, ಕರುಣೆಗಳ ಬೀಜಕ್ಕೆ ನೀರೆರೆದು, ಎಚ್ಚರದ ಗಮನದೊಂದಿಗೆ ವಸ್ತುಗಳನ್ನು ಉಪಯೋಗಿಸಲು ಕಲಿತರೆ ಅದು ಶಾಂತಿಯುತ ಕ್ರಾಂತಿಗೆ ಕಾರಣವಾಗುತ್ತದೆ. ಇಂಥ ಕ್ರಾಂತಿ ಮಾತ್ರ ನಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಬಲ್ಲದು.
*
ಈ ಬಸವ-ವಚನವನ್ನು ನೋಡಿ:
ನಮ್ಮ ಮೇಲೆ ಸಿಟ್ಟುಗೊಂಡವರನ್ನು ಕುರಿತು ನಾನು ಯಾಕೆ ಕೋಪ ತಾಳಲಿ? ನನ್ನ ಕೋಪದಿಂದ ಅವರಿಗಾಗುವ ನಷ್ಟವೇನು,ನನಗೆ ಆಗುವ ಲಾಭವೇನು ಎಂದು ಈ ವಚನ ಕೇಳುತ್ತದೆ.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
ಮುನಿಸಿನ ಬಗ್ಗೆ ಗಜೇಶ ಮಸಣಯ್ಯ ಲಘುವಾದ ಧಾಟಿಯಲ್ಲಿ ಘನವಾದ ಮಾತು ಹೇಳಿರುವುದು ಇಲ್ಲಿದೆ
ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ.
ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ.
ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ.
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ
ನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ
ಅಲ್ಲಮ ವಚನವು ಎಂದೋ ಆದ ಘಟನೆಗೆ ಇಂದು ಸೇಡು ತೀರಿಸುವ, ಮುನಿವ ವ್ಯರ್ಥವಾದ ಕ್ರಿಯೆಯನ್ನು ಅನಿರೀಕ್ಷಿತ ಹೋಲಿಕೆಗಳ ಮೂಲಕ ಹೇಳುತ್ತಿದೆ
ಸೇಡು ಗತಕಾಲದ ನೆರಳು, ಅದನ್ನು ಇಂದು ಹೂಳಿ ಹಾಕಲು ಸಾಧ್ಯವಿಲ್ಲ. ಸಮುದ್ರದಾಚೆಯ ತಡಿಯಲ್ಲಿರುವ ಕಳ್ಳನನ್ನು ಇಲ್ಲಿಂದ ಬೈದರೆ ಸಾಯುತ್ತಾನೆಯೇ? ಸೇಡು, ಮುನಿಸು ಎಲ್ಲೋ ನಮ್ಮ ಆಚೆ ದೂರದಲ್ಲಿರುವುದಲ್ಲ, ಇಲ್ಲೇ ನಮ್ಮೊಳಗೇ ಇರುವುದು, ನೆರಳಿನ ಹಾಗೆ ನಮ್ಮೊಡನೆಯೇ ಇರುವುದು:
ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲಾ.
ನೆಳಲು ಸಾಯಬಲ್ಲುದೆ ಅಂಗಪ್ರಾಣಿಗಳಿಗೆ ?
ಸಮುದ್ರದಾಚೆಯ ತಡಿಯಲ್ಲಿ ಕಳ್ಳನ ಕಂಡು,
ಇಲ್ಲಿಂದ ಮುನಿದು ಬೈದಡೆ, ಅವ ಸಾಯಬಲ್ಲನೆ ?
ಭಾವದಲ್ಲಿ ಹೊಲಿದ ಹೊಲಿಗೆಯ ಭೇದವನರಿಯರು,
ಕಾಮಿಸಿದಡುಂಟೆ ನಮ್ಮ ಗುಹೇಶ್ವರಲಿಂಗವು ?

