ಪ್ರತಿಯೊಂದು ಜೀವನಕ್ಕೂ ತನ್ನದೇ ಆದ ಪಶ್ಚಾತ್ತಾಪದ ರುಚಿ ಇರುತ್ತದೆ. ನಾವು ಬದುಕದೇ ಉಳಿದ ಜೀವನಕ್ಕಾಗಿ, ಆರಿಸಿಕೊಳ್ಳದೇ ಬಿಟ್ಟ ದಾರಿಗಾಗಿ, ಮನಸ್ಸಿನೊಳಗೆ ಯಾವಾಗಲೂ ಒಂದು ಶೋಕ ಇರುತ್ತದೆ । ಚಿದಂಬರ ನರೇಂದ್ರ
ನೋವಿಲ್ಲದ ಜೀವನ ಎನ್ನುವುದು ಇಲ್ಲವೇ ಇಲ್ಲ. ದುಃಖವನ್ನೂ ಪಶ್ಚಾತ್ತಾಪವನ್ನೂ ಸಂಪೂರ್ಣವಾಗಿ ತಪ್ಪಿಸಿಕೊಳ್ಳುವ ಯಾವುದೇ ಮಾರ್ಗವಿಲ್ಲ. ಹೌದು, ನಾವು ಮಾಡುವ ಪ್ರತಿಯೊಂದು ಆಯ್ಕೆಯೂ ನಮ್ಮೊಳಗೆ ಹೊಸ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ನಮ್ಮ ಜೀವನವನ್ನು ಹೊಸ ದಾರಿಯತ್ತ ತಿರುಗಿಸುತ್ತದೆ. ಆದರೆ ಯಾವ ದಾರಿಯನ್ನು ಆರಿಸಿಕೊಂಡರೂ ಅದರೊಂದಿಗೆ ಏನನ್ನಾದರೂ ನಾವು ಕಳೆದುಕೊಳ್ಳಲೇಬೇಕಾಗುತ್ತದೆ.
ಇದನ್ನೇ ಮ್ಯಾಟ್ ಹೇಗ್ ತಮ್ಮ ಅದ್ಭುತ ಕೃತಿ “ ದಿ ಮಿಡ್‌ನೈಟ್ ಟ್ರೇನ್ “ನಲ್ಲಿ ಟಚ್ ಮಾಡುತ್ತಾರೆ.
ಜೀವನದಲ್ಲಿ ಅನೇಕ ರೀತಿಯ “ಸಾವುಗಳು” ಸಂಭವಿಸುತ್ತವೆ. ನಮ್ಮ ಯೌವನದ ಸಾವು, ನಮ್ಮ ಆದರ್ಶಗಳ ಸಾವು, ಒಂದು ಸಂಬಂಧದ, ಒಂದು ಸ್ನೇಹದ, ಒಂದು ಆತ್ಮೀಯ ಬಾಂಧವ್ಯದ ಅಂತ್ಯ ಕೂಡ ಒಂದು ರೀತಿಯ ಸಾವೇ. ಮತ್ತು ಕೆಲವೊಮ್ಮೆ, ಆ ಸಂಬಂಧಗಳನ್ನು ಕೊನೆಗಾಣಿಸುವವರು ಬೇರೆ ಯಾರೂ ಅಲ್ಲ, ನಾವೇ. ನಾವು ತೆಗೆದುಕೊಳ್ಳುವ ಒಂದು ನಿರ್ಧಾರ, ಒಂದು ಆಯ್ಕೆ, ಆ ಬಾಂಧವ್ಯಗಳಿಗೆ ಅಂತ್ಯ ಹಾಡುತ್ತದೆ.
ಹೇಗ್ ಅವರ ಕಾದಂಬರಿಯಲ್ಲಿನ ವಿಲ್ಬರ್ ಎಂಬ ಪಾತ್ರವು, ಜೀವನದ ನಿಲ್ದಾಣಗಳ ಮೂಲಕ ಸಂಚರಿಸುವ ರೈಲಿನಲ್ಲಿರುವ ಒಂದು ಆತ್ಮ. ಅವನು ತನ್ನ ಜೀವನದಲ್ಲಿ ಎದುರಾದ ಎಲ್ಲ ತಿರುವುಗಳನ್ನು ಹಿಂದಿರುಗಿ ನೋಡುತ್ತಾನೆ, ಬೇರೆ ರೀತಿಯಲ್ಲಿ ಆಯ್ಕೆ ಮಾಡಬಹುದಾಗಿದ್ದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾನೆ.
ಅವನು ಉತ್ತರಿಸದೆ ಬಿಟ್ಟ ಸಂದೇಶಗಳ ಬಗ್ಗೆ ಯೋಚಿಸುತ್ತಾನೆ. “ನಾನು ಬ್ಯುಸಿ” ಎಂದು ಹೇಳಿ ದೂರವಿಟ್ಟ ಭಾನುವಾರಗಳ ಬಗ್ಗೆ ಚಿಂತಿಸುತ್ತಾನೆ. ತಾನೇ ಮುಚ್ಚಿದ ಬಾಗಿಲುಗಳನ್ನು, ತನ್ನ ಜೀವನದ ಹೊರಗೇ ಉಳಿಸಿದ ಜನರನ್ನು ನೆನಪಿಸಿಕೊಳ್ಳುತ್ತಾನೆ. ಸಾವಿನ ನಂತರ ಸಿಗುವ ಸಂಪೂರ್ಣ ಸ್ಪಷ್ಟತೆಯಿಂದ ತನ್ನ ಜೀವನವನ್ನು ಹಿಂದಿರುಗಿ ನೋಡಿದಾಗ, ಆಗ ಅತಿ ಸಣ್ಣದು, ಕಡಿಮೆ ಮುಖ್ಯ ಎಂದು ಅನಿಸಿದ್ದ ಆ ನಿರ್ಧಾರಗಳೇ ತನ್ನೊಳಗೆ ಮತ್ತೊಂದು ವ್ಯಕ್ತಿತ್ವವನ್ನು ರೂಪಿಸಿದವು ಮತ್ತು ಇತರ ಅನೇಕ ಸಾಧ್ಯತೆಗಳ “ಸಾವಿಗೆ” ಕಾರಣವಾದವು ಎನ್ನುವುದನ್ನು ಅವನು ತಿಳಿದುಕೊಳ್ಳುತ್ತಾನೆ. ಆದರೆ ವಿಲ್ಬರ್ ಒಂದು ಮಹತ್ವದ ಸತ್ಯವನ್ನು ಅರಿತುಕೊಳ್ಳುತ್ತಾನೆ: ಇದನ್ನು ತಪ್ಪಿಸುವ ಯಾವುದೇ ಮಾರ್ಗವಿಲ್ಲ.
ಪ್ರತಿಯೊಂದು ಜೀವನಕ್ಕೂ ತನ್ನದೇ ಆದ ಪಶ್ಚಾತ್ತಾಪದ ರುಚಿ ಇರುತ್ತದೆ. ನಾವು ಬದುಕದೇ ಉಳಿದ ಜೀವನಕ್ಕಾಗಿ, ಆರಿಸಿಕೊಳ್ಳದೇ ಬಿಟ್ಟ ದಾರಿಗಾಗಿ, ಮನಸ್ಸಿನೊಳಗೆ ಯಾವಾಗಲೂ ಒಂದು ಶೋಕ ಇರುತ್ತದೆ.
ನೀವು ಕಾಲವನ್ನು ಹಿಂದಕ್ಕೆ ತಿರುಗಿಸಿ, ಆ ತಿರುವಿನ ಕ್ಷಣಗಳಿಗೆ ಮತ್ತೆ ಹೋಗಿ ಬೇರೆ ನಿರ್ಧಾರ ತೆಗೆದುಕೊಂಡರೂ, ಆ ಸಮಯದಲ್ಲಿ ಅದು ಹೆಚ್ಚು ಒಳ್ಳೆಯ ಆಯ್ಕೆಯಂತೆ ಕಂಡರೂ ಸಹ, ಆ ಜೀವನವೂ ಕೊನೆಗೆ ಪಶ್ಚಾತ್ತಾಪದ ಕತ್ತಲಿನಿಂದ ಆವರಿಸಲ್ಪಟ್ಟ ಯಾವುದೋ ಒಂದು ನಿಲ್ದಾಣಕ್ಕೇ ನಿಮ್ಮನ್ನು ಕರೆದೊಯ್ಯುತ್ತದೆ.
ಹೀಗಾಗಿ, ಪ್ರಶ್ನೆ “ಯಾವ ಆಯ್ಕೆ ಅಥವಾ ಯಾವ ಜೀವನ ನೋವಿಲ್ಲದೆ ಕೊನೆಗೊಳ್ಳುತ್ತಿತ್ತು?” ಎನ್ನುವುದಲ್ಲ. ಏಕೆಂದರೆ ಅಂತಹ ಯಾವ ಆಯ್ಕೆಯೂ ಇಲ್ಲ.
ನಿಜವಾದ ಪ್ರಶ್ನೆ: “ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಭಯವು ನನ್ನ ಜೀವನದಲ್ಲಿರುವ ಎಲ್ಲ ಸಂತೋಷವನ್ನು ಕಸಿದುಕೊಳ್ಳದಂತೆ, ನನ್ನ ಜೀವನವನ್ನು ಅದು ಇರುವಂತೆಯೇ ನಾನು ಹೇಗೆ ಪ್ರೀತಿಸಬಹುದು? ಹೇಗೆ ಅದನ್ನು ಅಮೂಲ್ಯವೆಂದು ಕಾಣಬಹುದು?” ಎನ್ನುವುದಾಗಿದೆ
ಯಾಕೆಂದರೆ ಬದುಕಿನ ಸಾರ್ಥಕತೆ ಎಂದರೆ ನೋವಿಲ್ಲದ ದಾರಿಯನ್ನು ಹುಡುಕುವುದಲ್ಲ; ನೋವು, ಪಶ್ಚಾತ್ತಾಪ ಮತ್ತು ಅನಿಶ್ಚಿತತೆಗಳ ನಡುವೆಯೂ ನಮಗೆ ಸಿಕ್ಕಿರುವ ಈ ಜೀವನವನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ಅಪ್ಪಿಕೊಳ್ಳುವುದಾಗಿದೆ.

