ಹಣೆಪಟ್ಟಿಗಳು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #4.7

ಎಲ್ಲ ಬಗೆಯ ಹಣೆಪಟ್ಟಿಗಳನ್ನು ಸುಲಿದು ಹಾಕುವುದು ಮುಖ್ಯ. ಅಗ ಮಾತ್ರ ನಾವು ನಿಜವಾದ ಶಾಂತಿಯನ್ನು ಬದುಕಿನಲ್ಲಿ ಕಾಣಬಹುದು. ಇಂಥ ಹೆಸರಿಗೆ, ಹಣೆಪಟ್ಟಿಗೆ ಜನ ಬಲವಾಗಿ ಅಂಟಿಕೊಂಡಿರುತ್ತಾರೆ. ಹಾಗಾಗಿ ನಾವು ಚಹರೆಗಳ ಬಗ್ಗೆ, ಅನ್ಯಾಯದ ಬಗ್ಗೆ ಮಾತಾಡುವಾಗ ಮೃದುವಾದ, ಪ್ರೀತಿ ತುಂಬಿದ ಮಾತನ್ನು ಬಳಸಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 4.7 : ಶಾಂತಿ । ಹಣೆಪಟ್ಟಿಗಳು

ಇಸ್ರೇಲಿ, ಪ್ಯಾಲೆಸ್ತೀನಿನವರು, ಬೌದ್ಧರು, ಯೆಹೂದಿಗಳು, ಮುಸಲ್ಮಾನರು ಅನ್ನುವಂಥ ಹಣೆಪಟ್ಟಿಗಳು ನಮ್ಮನ್ನು ದೂರ ದೂರ ಮಾಡಿವೆ. ಇಂಥ ಪದ ಕಿವಿಗೆ ಬಿದ್ದ ತಕ್ಷಣ ನಮ್ಮ ಮನಸಿನಲ್ಲಿ ಒಂದು ಬಿಂಬ ಮೂಡುತ್ತದೆ. ತಕ್ಷಣವೇ ಆ ಬಿಂಬ, ಆ ವ್ಯಕ್ತಿಗಿಂತ ನಾವು ಬೇರೆ ಎಂದು ಭಾವಿಸುತ್ತೇವೆ. ನಮ್ಮನ್ನು ಹೀಗೆ ಬೇರೆ ಬೇರೆ ಮಾಡುವ ಆಲೋಚನೆಯ ಎಷ್ಟೋ ಬಗೆಗಳನ್ನು ಅಭ್ಯಾಸಮಾಡಿಕೊಂಡಿದ್ದೇವೆ, ಆ ಕಾರಣಕ್ಕೆ ನಾವೂ ನೋವು ತಿನ್ನುತ್ತ ಬೇರೆಯವರನ್ನೂ ನೋಯಿಸುತ್ತಾ ಇದ್ದೇವೆ.

ಇನ್ನೊಬ್ಬರಲ್ಲಿ ಇರುವ ಮನುಷ್ಯರನ್ನು ಗುರುತಿಸುವುದು, ಹಾಗೆಯೇ ನಮ್ಮೊಳಗಿರುವ ಮನುಷ್ಯರನ್ನು ಬೇರೆಯವರು ಗುರುತಿಸುವಂತೆ ಮಾಡುವುದು ಬಹಳ ಮುಖ್ಯ. ಎಲ್ಲ ಮನುಷ್ಯರೂ ಪೂರಾ ಒಂದೇ ಥರ. ನಾವು ಹಚ್ಚಿರುವ ಹಲವು ಪದರಗಳ ಹಣೆಪಟ್ಟಿಗಳ ಕಾರಣಕ್ಕೆ ಜನ ನಮಗೆ ಮನುಷ್ಯರ ಹಾಗೆ ಕಾಣುವುದಿಲ್ಲ. ನಿಮ್ಮನ್ನು ನೀವು ಬೌದ್ಧ ಎಂದುಕೊಂಡರೆ, ಆ ಹಣೆಪಟ್ಟಿ ಬಳಸಿ ನಿಮ್ಮನ್ನು ನೀವೇ ಕರೆದುಕೊಂಡರೆ ಆ ಕಾರಣಕ್ಕೇ ಬೇರೆಯವರು ನಿಮ್ಮನ್ನು ಬೌದ್ಧರೆಂದು ಮಾತ್ರ ನೋಡುತ್ತಾರೆಯೇ ಹೊರತು ನಿಮ್ಮೊಳಗಿರುವ ಮನುಷ್ಯ ಅವರಿಗೆ ಕಾಣುವುದಿಲ್ಲ. ಈ ಮಾತು ಕ್ರಿಶ್ಚಿಯನ್‌, ಯೆಹೂದಿ, ಮುಸ್ಲಿಂ ಮೊದಲಾಗಿ ಎಲ್ಲ ಹಣೆಪಟ್ಟಿಗಳಿಗೂ ನಿಜ. ಇಂಥದೊಂದು ಹಣೆಪಟ್ಟಿ ನಿಮ್ಮ ಚಹರೆಯ ಮುಖ್ಯಲಕ್ಷಣವೇ ಆಗಿರಬಹುದು. ಆದರೂ ಅದು ಇಡಿಯಾಗಿ ನೀವು ಏನೋ ಅದನ್ನು ಹೇಳವುದಿಲ್ಲ.  ಈ ಐಡಿಯಾಗಳಲ್ಲಿ, ಕಲ್ಪನೆ, ಬಿಂಬಗಳಲ್ಲಿ ಸಿಕ್ಕಿಬಿದ್ದವರು ಇನ್ನೊಬ್ಬ ವ್ಯಕ್ತಿಯನ್ನು ಮನುಷ್ಯ ಎಂದು ಕಾಣಲಾರರು.

ಎಲ್ಲ ಬಗೆಯ ಹಣೆಪಟ್ಟಿಗಳನ್ನು ಸುಲಿದು ಹಾಕುವುದು ಮುಖ್ಯ. ಅಗ ಮಾತ್ರ ನಾವು ನಿಜವಾದ ಶಾಂತಿಯನ್ನು ಬದುಕಿನಲ್ಲಿ ಕಾಣಬಹುದು. ಇಂಥ ಹೆಸರಿಗೆ, ಹಣೆಪಟ್ಟಿಗೆ ಜನ ಬಲವಾಗಿ ಅಂಟಿಕೊಂಡಿರುತ್ತಾರೆ. ಹಾಗಾಗಿ ನಾವು ಚಹರೆಗಳ ಬಗ್ಗೆ, ಅನ್ಯಾಯದ ಬಗ್ಗೆ ಮಾತಾಡುವಾಗ ಮೃದುವಾದ, ಪ್ರೀತಿ ತುಂಬಿದ ಮಾತನ್ನು ಬಳಸಬೇಕು.

ವೈಯಕ್ತಿಕ ವ್ಯಾಜ್ಯದಲ್ಲಿ ಎರಡು ಪಕ್ಷದವರೂ ಅನ್ಯಾಯಕ್ಕೆ ಒಳಗಾದವರೇ ಆಗಿರುತ್ತಾರೆ. ಇದನ್ನು ತಿಳಿಯುವುದು ಬಹಳ ಮುಖ್ಯ. ನಮ್ಮ ಹೃದಯದಲ್ಲಿ ಅರಿವು, ಕರುಣೆ ಹುಟ್ಟಿದರೆ ಸಿಟ್ಟು, ಹಿಂಸೆ, ದ್ವೇಷ, ಹತಾಶೆಗಳ ವಿಷ ಇಲ್ಲವಾಗುತ್ತದೆ. ದಾರಿ ಸ್ಪಷ್ಟವಾಗಿದೆ. ನಮ್ಮೊಳಗೆ ಒಳನೋಟದ ಅರಿವು, ಕರುಣೆಗಳನ್ನು ಮೂಡಿಸಿಕೊಳ್ಳುವುದೊಂದೇ ನಿಜವಾದ ಪರಿಹಾರ. ಆಗ ಮಾತ್ರ ನಮ್ಮ ಕಣ್ಣಿಗೆ ಮನುಷ್ಯರು ಕಾಣುತ್ತಾರೆ; ಬೌದ್ಧರು, ಮುಸಲ್ಮಾನರು, ಯೆಹೂದಿಗಳು, ಇವರು ಅಮೆರಿಕದ ಪರ, ಅವರು ಅರಬ್‌ರ ಪರ ಅನ್ನುವಂಥ ಹೊರ ಪದರಗಳ ವಿವರದಿಂದ ನಾವು ಮೋಸಹೋಗುವುದು ತಪ್ಪುತ್ತದೆ.

ಇದು ಬಿಡುಗಡೆಯ ಕ್ರಮ. ನಮ್ಮ ಐಡಿಯಾ, ನಮ್ಮ ಮೂರ್ಖತನ, ಪ್ರತ್ಯೇಕತೆಯ ಭಾವನೆಗಳಿಂದ ಬಿಡುಗಡೆ ಪಡೆಯುವ ಕ್ರಮ. ಈ ಭೂಮಿ ಚೆಲುವಾಗಿದೆ. ನಮ್ಮೆಲ್ಲರಿಗೂ ಇಲ್ಲಿ ಜಾಗವಿದೆ. ಆದರೂ ಒಬ್ಬರನ್ನೊಬ್ಬರು ಕೊಲ್ಲುತ್ತೇವೆ. ಪ್ರತಿಯೊಬ್ಬರೂ ಅವರವರ ನೋವು ತಿನ್ನುತ್ತಿರುವ ಮನುಷ್ಯರೇ ಎಂದು ನೋಡಲು ನಮಗೆ ಸಾಧ್ಯವಾದಾಗ ಒಬ್ಬರು ಇನ್ನೊಬ್ಬರನ್ನು ಕೊಲ್ಲಲ್ಲು ಹಿಂಜರಿಯುತ್ತೇವೆ. ಎಲ್ಲರೂ ಶಾಂತಿಯಿಂದ ಬದುಕುವ ಅವಕಾಶಕ್ಕಾಗಿ ದುಡಿಯೋಣ.

*

ಕಸವರಮೆಂಬುದು ಮಿಗೆಸೈ

ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ ॥

ಕಸವೇಂ ಕಸವರಮೇನು

ಬ್ಬಸಮಂ ಬಸಮಿಲ್ಲದಿರ್ದ್ದು ಮಾಡುವರೆಲ್ಲಂ ॥ ೧೭೭ ॥ (ಪ. ೩)

 “ಪರ ಧರ್ಮೀಯರ ವಿಚಾರ ಮಾರ್ಗವನ್ನೂ, ಅವರ ಧರ್ಮಾಚಾರವನ್ನೂ ಸೈರಿಸುವಷ್ಟು – ಸೈರಿಸಿ ಅವರಿಗೂ ನೆರವಾಗುವಷ್ಟು ಅಂತಶೃಕ್ತಿ ಇದ್ದರೆ ಮಾತ್ರವೇ “ಕಸವರ” (ಐಶ್ವರ್ಯ) ಸಫಲವಾಗುವುದು. ಹಾಗಿಲ್ಲವಾದರೆ ಕಸವರವೇನು, ಕಸವೇನು? ಎರಡೂ ಒಂದೇ ಎಂದು ತಾತ್ರರ್ಯ. – ಈ ಐಶ್ವರ್ಯದ ಮದದಿಂದಾಗಿ ಹಲವರು ಲೋಕಕ್ಕೇ ಉಬ್ಬಸವನ್ನೊದಗಿಸಿ ಬಿಡುತ್ತಾರೆ.”

–ಕವಿರಾಜಮಾರ್ಗದ ಒಂದು ಪದ್ಯದ ಬಗ್ಗೆ ಮುಳಿಯತಿಮ್ಮಪ್ಪಯ್ಯನವರು ಮಾಡಿರುವ ವಿವರಣೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.