ಆಂತರಿಕ ಲಾಭ ಮತ್ತು ಬಾಹ್ಯ ಲಾಭ

ಆಸಕ್ತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡರೆ, ಜೀವನದಲ್ಲಿ ಒಂದು ದಿನವೂ ಕೆಲಸ ಮಾಡಬೇಕಾಗುವುದಿಲ್ಲ ಅನ್ನೋದು ಅತ್ಯಂತ ಕೆಟ್ಟ ಸಲಹೆಗಳಲ್ಲಿ ಒಂದು. ಯಾಕೆ ಗೊತ್ತಾ? … । ಸಂಗ್ರಹ – ಅನುವಾದ್ : ಚಿದಂಬರ ನರೇಂದ್ರ

ಒಂದು ಪ್ರಸಿದ್ಧವಾದ ಪ್ರಚಲಿತ ತಿಳುವಳಿಕೆ, ನೀವು ಯಾವುದನ್ನಾದರೂ ಮಾಡಲು ಇಷ್ಟಪಡುತ್ತಿದ್ದರೆ ಮತ್ತು ಅದನ್ನು ಚೆನ್ನಾಗಿ ಮಾಡಬಲ್ಲವರಾಗಿದ್ದರೆ, ಅದರಿಂದ ಹಣ ಸಂಪಾದಿಸಲು ಪ್ರಯತ್ನಿಸಬೇಕು ಎನ್ನುವುದು. “ನಿಮ್ಮ ಆಸಕ್ತಿಯನ್ನೇ ನಿಮ್ಮ ಉದ್ಯೋಗವನ್ನಾಗಿ ಮಾಡಿಕೊಂಡರೆ, ಜೀವನದಲ್ಲಿ ನೀವು ಒಂದು ದಿನವೂ ಕೆಲಸ ಮಾಡಬೇಕಾಗುವುದಿಲ್ಲ!” ಎನ್ನುವ ಮಾತನ್ನೂ ನಾವು ಕೇಳಿದ್ದೇವೆ.

ಆದರೆ ತತ್ವಜ್ಞಾನಿ ಅಲಸ್ಟೇರ್ ಮ್ಯಾಕಿಂಟೈರ್ (Alastair MacIntyre) ಅವರ ಪ್ರಕಾರ, ಯಾರಿಗಾದರೂ ನೀಡಬಹುದಾದ ಅತ್ಯಂತ ಕೆಟ್ಟ ಸಲಹೆಗಳಲ್ಲಿ ಇದೂ ಒಂದು. ಮ್ಯಾಕಿಂಟೈರ್ ‘ಆಂತರಿಕ ಲಾಭ’ (Internal Good) ಮತ್ತು ‘ಬಾಹ್ಯ ಲಾಭ’ (External Good) ಎಂಬ ಎರಡು ವಿಷಯಗಳ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಾರೆ.

ಆಂತರಿಕ ಲಾಭ ಎಂದರೆ, ನಾವು ಯಾವುದನ್ನಾದರೂ ಮಾಡುವಾಗ ಅಥವಾ ಅದರಲ್ಲಿ ಸಾಧನೆ ಮಾಡುವಾಗ, ಆ ಕೆಲಸವನ್ನು ಮಾಡುವುದರಿಂದಲೇ ದೊರೆಯುವ ಸಂತೋಷ ಮತ್ತು ತೃಪ್ತಿ.

ಉದಾಹರಣೆಗೆ:

  • ಓಟಗಾರನೊಬ್ಬ ತನ್ನದೇ ಹಿಂದಿನ ಅತ್ಯುತ್ತಮ ಸಮಯವನ್ನು ಮೀರಿಸುವುದು.
  • ಗಿಟಾರ್ ವಾದಕನೊಬ್ಬ ಕಷ್ಟಕರವಾದ ಸಂಗೀತದ ಭಾಗವನ್ನು ಅತ್ಯುತ್ತಮವಾಗಿ ನುಡಿಸುವುದು.
  • Content creator ಒಬ್ಬ ತಾನು ಹೆಮ್ಮೆಪಡುವಂತಹ ಒಂದು ವಿಡಿಯೊವನ್ನು ಸೃಷ್ಟಿಸುವುದು.

ಇವೆಲ್ಲವೂ ಆಂತರಿಕ ಲಾಭಗಳು.

ಆದರೆ ಬಾಹ್ಯ ಲಾಭ ಎಂದರೆ, ಯಾವುದನ್ನಾದರೂ ಮಾಡುವುದಕ್ಕೆ ಪ್ರತಿಯಾಗಿ ನಮಗೆ ದೊರೆಯುವ ಹಣ ಅಥವಾ ಪ್ರತಿಫಲ. ಅದು ಹಣವಾಗಿರಬಹುದು; ಆದರೆ ಅದಷ್ಟೇ ಅಲ್ಲ. ಪ್ರತಿಷ್ಠೆ, ಸ್ಥಾನಮಾನ, ಗೌರವ, ಸಾಮಾಜಿಕ ಮಾನ್ಯತೆ, ಅಥವಾ ಅಧಿಕಾರ ಕೂಡ ಬಾಹ್ಯ ಲಾಭಗಳಾಗಬಹುದು.

ಸಮಸ್ಯೆಯೇನೆಂದರೆ, ಈ ಎರಡೂ ಪರಸ್ಪರ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಬಾಹ್ಯ ಲಾಭವನ್ನು ಪಡೆಯಲು ಒಂದು ಮಟ್ಟದ ಸ್ಪರ್ಧಾತ್ಮಕತೆ ಅಗತ್ಯವಾಗುತ್ತದೆ. ನೀವು ಎಷ್ಟು ಚೆನ್ನಾಗಿ ಮಾಡುತ್ತೀರೋ, ಅದರ ಅನುಪಾತದಲ್ಲಿಯೇ ಹೆಚ್ಚು ಅಥವಾ ಕಡಿಮೆ ಹಣವನ್ನು ಪಡೆಯುತ್ತೀರಿ.

ಹೀಗಾಗಿ, ಬಾಹ್ಯ ಲಾಭವನ್ನು ಪಡೆಯಬೇಕಾದರೆ ನೀವು ಸ್ಪರ್ಧಾತ್ಮಕವಾಗಿ, ಕಠಿಣ ಪರಿಶ್ರಮದಿಂದ, ಕೆಲವೊಮ್ಮೆ ನಿರ್ದಯವಾಗಿಯೂ ಇರಬೇಕಾಗುತ್ತದೆ. ಅಂದರೆ, ನೀವು ಬೇರೆಯವರನ್ನು ಮೀರಿಸಬೇಕು. ಆದ್ದರಿಂದ, ಆಂತರಿಕ ಲಾಭವನ್ನು ಬಾಹ್ಯ ಲಾಭವನ್ನಾಗಿ ಪರಿವರ್ತಿಸುವುದು, ಆ ಕೆಲಸದ ಮೂಲ ಸ್ವರೂಪವನ್ನೇ ಹಾಳುಮಾಡಬಹುದು. ಹಣಕ್ಕಾಗಿ ಮಾತ್ರ ಗಿಟಾರ್ ನುಡಿಸುವ ಸಂಗೀತಗಾರನನ್ನು ನೋಡಿ.
ಲೈಕ್‌ಗಳಿಗಾಗಿ ಮಾತ್ರ ಪೋಸ್ಟ್ ಮಾಡುವ content creator ನ ನೋಡಿ.

ಕ್ರಮೇಣ, ಆ ಕೆಲಸದಿಂದ ದೊರೆಯುತ್ತಿದ್ದ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಅದು ಹೆಚ್ಚು ಸ್ವಾರ್ಥಪರ, ಉಪಯುಕ್ತತಾವಾದಿ (utilitarian) ಸ್ವರೂಪಕ್ಕೆ ತಿರುಗುತ್ತದೆ. ಆದ್ದರಿಂದ, ನೀವು ಇಷ್ಟಪಡುವ ಕೆಲಸವನ್ನು ಹಣ ಗಳಿಸುವ ಅವಕಾಶವಾಗಿ ಪರಿವರ್ತಿಸಲು ತಕ್ಷಣವೇ ಮುಂದಾಗಬೇಕು ಎಂದು ಹೇಳುವವರ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ ಹಣ ಚೆನ್ನಾಗಿಯೇ ಸಿಗಬಹುದು. ಆದರೆ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ:

ನೀವು ಹಿಂದೆ ಪ್ರೀತಿಸುತ್ತಿದ್ದ ವಿಷಯಗಳನ್ನೇ ಇನ್ನು ಮುಂದೆ ಆನಂದಿಸಲು ಸಾಧ್ಯವಾಗದಿದ್ದರೆ, ನೀವು ಗಳಿಸಿದ ಆ ಹಣವನ್ನು ಕೊನೆಗೆ ಯಾವುದಕ್ಕಾಗಿ ಖರ್ಚು ಮಾಡುತ್ತೀರಿ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.