ಕೊಡಲಿ ಕಳ್ಳ : ಜೆನ್ ಕ್ಷಣ #14

ಮನೋವಿಜ್ಞಾನದಲ್ಲಿ ಇದಕ್ಕೆ ಹತ್ತಿರವಾದ ಪ್ರವೃತ್ತಿಯನ್ನು  ಕನ್ಫರ್ಮೇಶನ್           ಬಯಾಸ್ (Confirmation Bias)ಎಂದು ಕರೆಯುತ್ತಾರೆ. ಅಂದರೆ, ನಾವು ಈಗಾಗಲೇ ನಂಬಿರುವುದನ್ನು ಸಮರ್ಥಿಸುವ ಸಂಗತಿಗಳನ್ನು ಹೆಚ್ಚು ಗಮನಿಸುವುದು ಮತ್ತು ಅದಕ್ಕೆ ವಿರುದ್ಧವಾದ ಸಂಗತಿಗಳನ್ನು ಕಡೆಗಣಿಸುವುದು… । ಡಾ. ಸಹನಾ ಪ್ರಿಯದರ್ಶಿನಿ

ಒಂದು ದಿನ ರೈತನೊಬ್ಬನ ಕೊಡಲಿ ಕಾಣೆಯಾಯಿತು.ಅವನು ಮನೆಯೆಲ್ಲ ಹುಡುಕಿದ. ಕೊಟ್ಟಿಗೆಯಲ್ಲಿ ನೋಡಿದ. ಹೊಲದಲ್ಲೂ ಹುಡುಕಿದ. ಆದರೆ ಕೊಡಲಿ ಎಲ್ಲಿಯೂ ಸಿಗಲಿಲ್ಲ. ಆಗ ಅವನಿಗೆ ತನ್ನ ಪಕ್ಕದ ಮನೆಯ ಹುಡುಗನ ಮೇಲೆ ಅನುಮಾನ ಬಂತು.ಮರುದಿನ ಬೆಳಿಗ್ಗೆ ಆ ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ರೈತ ಗಮನಿಸಿದ. ಅವನನ್ನು ಸೂಕ್ಷ್ಮವಾಗಿ ನೋಡುತ್ತಾ ಮನಸ್ಸಿನಲ್ಲೇ ಅಂದುಕೊಂಡ:

“ಅವನು ನಡೆಯುವ ರೀತಿಯನ್ನು ನೋಡು! ಕೊಡಲಿ ಕದ್ದವನಂತೆಯೇ   ನಡೆಯುತ್ತಿದ್ದಾನೆ.”

ಸ್ವಲ್ಪ ಸಮಯದ ನಂತರ ಆ ಹುಡುಗ ಯಾರೊಂದಿಗೋ ಮಾತನಾಡುತ್ತಿರುವುದನ್ನು ನೋಡಿದ.

ರೈತ ಮತ್ತೆ ಯೋಚಿಸಿದ:

“ಅವನು ಮಾತನಾಡುವ ರೀತಿಯನ್ನೇ ನೋಡು! ಏನೋ ತಪ್ಪು ಮಾಡಿದವನಂತೆ ಮಾತನಾಡುತ್ತಿದ್ದಾನೆ.”

ಅಷ್ಟರಲ್ಲಿ ಹುಡುಗ ರೈತನ ಕಡೆ ನೋಡಿದ. ತಕ್ಷಣ ರೈತನ ಮನಸ್ಸು ಹೇಳಿತು:

“ಅವನ ಕಣ್ಣುಗಳನ್ನು ನೋಡು! ನನ್ನ ಕಡೆ ಸರಿಯಾಗಿ ನೋಡಲೂ ಆಗುತ್ತಿಲ್ಲ. ಖಂಡಿತವಾಗಿಯೂ ನನ್ನ ಕೊಡಲಿಯನ್ನು ಇವನೇ ಕದ್ದಿದ್ದಾನೆ.”

ಈಗ ಆ ಹುಡುಗ ಏನೇ ಮಾಡಿದರೂ ರೈತನಿಗೆ ಅನುಮಾನಾಸ್ಪದವಾಗಿಯೇ ಕಾಣುತ್ತಿತ್ತು.

ಅವನು ನಡೆಯುವ ರೀತಿ…

ಮಾತನಾಡುವ ರೀತಿ…

ನೋಡುವ ರೀತಿ…

ಅಷ್ಟೇ ಏಕೆ, ಅವನು ಸುಮ್ಮನಿದ್ದರೂ ಅದೂ ಅನುಮಾನಾಸ್ಪದವಾಗಿಯೇ ಕಾಣುತ್ತಿತ್ತು!

ಕೊನೆಗೆ ರೈತ ಒಂದು ತೀರ್ಮಾನಕ್ಕೆ ಬಂದ:

“ಇದರಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ಕೊಡಲಿಯನ್ನು ಕದ್ದವನು ಇವನೇ!”

ಮರುದಿನ ರೈತ ತನ್ನ ಹೊಲಕ್ಕೆ ಹೋದ. ಬೇಲಿಯ ಪಕ್ಕದಲ್ಲಿದ್ದ ಒಣಹುಲ್ಲನ್ನು ಸರಿಸುತ್ತಿದ್ದಾಗ ಅದರ ಕೆಳಗೆ ಏನೋ ಬಿದ್ದಿರುವುದು ಕಂಡಿತು. ನೋಡಿದರೆ, ಅವನ ಕೊಡಲಿ ಅಲ್ಲಿಯೇ ಇತ್ತು! ಕೆಲವು ದಿನಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವಾಗ ತಾನೇ ಅದನ್ನು ಅಲ್ಲಿ ಬಿಟ್ಟು ಬಂದಿದ್ದೆ ಎಂಬುದು ಅವನಿಗೆ ನೆನಪಾಯಿತು.

ರೈತನಿಗೆ ತನ್ನ ಬಗ್ಗೆ  ಮುಜುಗರವಾಯಿತು.

ಅದೇ ಸಂಜೆ ಪಕ್ಕದ ಮನೆಯ ಹುಡುಗ ಮತ್ತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ.

ರೈತ ಅವನನ್ನು ನೋಡಿದ.

ಹುಡುಗ ಮೊದಲಿನಂತೆಯೇ ನಡೆಯುತ್ತಿದ್ದ.

ಮೊದಲಿನಂತೆಯೇ ಮಾತನಾಡುತ್ತಿದ್ದ.

ಮೊದಲಿನಂತೆಯೇ ನೋಡುತ್ತಿದ್ದ.

ಅವನಲ್ಲಿ ಏನೂ ಬದಲಾಗಿರಲಿಲ್ಲ.

ಆದರೆ ವಿಚಿತ್ರವೆಂದರೆ…

ಈಗ ಅವನು ಕಳ್ಳನಂತೆ ಕಾಣುತ್ತಿರಲಿಲ್ಲ!

ಈ ಕಥೆ ತುಂಬಾ ಸರಳವಾಗಿ ಕಾಣಿಸಿದರೂ, ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು  ತಿಳಿಸುತ್ತದೆ.

ರೈತನ ಕೊಡಲಿ ಕಾಣೆಯಾದಾಗ ಅವನು ಪಕ್ಕದ ಮನೆಯ ಹುಡುಗನ ಮೇಲೆ ಅನುಮಾನಪಡುತ್ತಾನೆ. ಒಮ್ಮೆ “ಇವನೇ ಕದ್ದಿರಬೇಕು” ಎಂಬ ಭಾವನೆ ಮನಸ್ಸಿನಲ್ಲಿ ಬಂದ ನಂತರ, ಹುಡುಗನ ಪ್ರತಿಯೊಂದು ನಡೆ-ನುಡಿಯೂ ಅವನಿಗೆ ಅನುಮಾನಾಸ್ಪದವಾಗಿ ಕಾಣುತ್ತದೆ.

ಹುಡುಗ ನಡೆಯುವುದು ಕಳ್ಳನಂತೆ ಕಾಣುತ್ತದೆ. ಅವನು ಮಾತನಾಡುವುದು ತಪ್ಪು ಮಾಡಿದವನಂತೆ ಕೇಳಿಸುತ್ತದೆ. ಅವನು ರೈತನ ಕಡೆ ನೋಡಿದರೂ ಅನುಮಾನ. ನೋಡದಿದ್ದರೂ ಅನುಮಾನ! ಆದರೆ ತನ್ನ ಕೊಡಲಿ ಹೊಲದಲ್ಲೇ ಸಿಕ್ಕ ನಂತರ ಅದೇ ಹುಡುಗನನ್ನು ನೋಡಿದಾಗ ಅವನು ಸಹಜವಾಗಿಯೇ ಕಾಣುತ್ತಾನೆ.

ಹುಡುಗ ಬದಲಾಗಲಿಲ್ಲ.
ಬದಲಾಗಿದ್ದು ರೈತನ ದೃಷ್ಟಿಕೋನ.

ಇದೇ ಈ ಕಥೆಯ ಮುಖ್ಯ ಸಂದೇಶ.

ಒಮ್ಮೆ ನಾವು ಯಾರೊಬ್ಬರ ಬಗ್ಗೆ ಒಂದು ಅಭಿಪ್ರಾಯವನ್ನು ರೂಪಿಸಿಕೊಂಡರೆ, ನಂತರ ಅವರು ಮಾಡುವ ಪ್ರತಿಯೊಂದು ಕೆಲಸವನ್ನೂ ಆ ಅಭಿಪ್ರಾಯದ ಕನ್ನಡಕದ ಮೂಲಕವೇ ನೋಡಲು ಪ್ರಾರಂಭಿಸುತ್ತೇವೆ.

ಮನೋವಿಜ್ಞಾನದಲ್ಲಿ ಇದಕ್ಕೆ ಹತ್ತಿರವಾದ ಪ್ರವೃತ್ತಿಯನ್ನು  ಕನ್ಫರ್ಮೇಶನ್           ಬಯಾಸ್ (Confirmation Bias)ಎಂದು ಕರೆಯುತ್ತಾರೆ. ಅಂದರೆ, ನಾವು ಈಗಾಗಲೇ ನಂಬಿರುವುದನ್ನು ಸಮರ್ಥಿಸುವ ಸಂಗತಿಗಳನ್ನು ಹೆಚ್ಚು ಗಮನಿಸುವುದು ಮತ್ತು ಅದಕ್ಕೆ ವಿರುದ್ಧವಾದ ಸಂಗತಿಗಳನ್ನು ಕಡೆಗಣಿಸುವುದು.

ನಮ್ಮ ಮಕ್ಕಳು, ಸ್ನೇಹಿತರು, ವಿದ್ಯಾರ್ಥಿಗಳು ಅಥವಾ ಕುಟುಂಬದವರ ವರ್ತನೆಯನ್ನು ಕೆಲವೊಮ್ಮೆ ವಾಸ್ತವದ ಆಧಾರದ ಮೇಲೆ ಅಲ್ಲ, ನಮ್ಮ ಅನುಮಾನ ಮತ್ತು ಪೂರ್ವಗ್ರಹದ ಮೂಲಕ ಅರ್ಥೈಸುತ್ತೇವೆ. ಉದಾಹರಣೆಗೆ, ಹದಿಹರೆಯದ ಮಗಳು ಕೋಣೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ, ತಾಯಿ “ಏನೋ ಮುಚ್ಚಿಡುತ್ತಿದ್ದಾಳೆ” ಎಂದುಕೊಳ್ಳಬಹುದು. ಸ್ನೇಹಿತೆ ವಾಟ್ಸಪ್ ಸಂದೇಶಕ್ಕೆ ಉತ್ತರಿಸದಿದ್ದರೆ “ನನ್ನಿಂದ ದೂರವಾಗುತ್ತಿದ್ದಾಳೆ” ಎಂದು ಭಾವಿಸಬಹುದು. ಆದರೆ ನಿಜವಾದ ಕಾರಣ ಬೇರೆ ಇರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಒಬ್ಬರ ಬಗ್ಗೆ ಮೊದಲೇ ಮಾಡಿಕೊಂಡ ಅಭಿಪ್ರಾಯದಂತೆ ಅವರ ಪ್ರತಿಯೊಂದು ಮಾತು ಅಥವಾ ವರ್ತನೆಯನ್ನು ಅರ್ಥೈಸುವ ಸಾಧ್ಯತೆ ಇದೆ.

ನಮ್ಮ ಬಗ್ಗೆ ನಮಗಿರುವ ಅಭಿಪ್ರಾಯದಲ್ಲೂ ಇದೇ ನಡೆಯುತ್ತದೆ. “ನಾನು ಓದಿನಲ್ಲಿ ಬುದ್ಧಿವಂತನಲ್ಲ” ಎಂದುಕೊಂಡ ವಿದ್ಯಾರ್ಥಿ ಕಡಿಮೆ ಅಂಕಗಳನ್ನು ತನ್ನ ನಂಬಿಕೆಗೆ ಸಾಕ್ಷಿಯೆಂದುಕೊಂಡು, ಉತ್ತಮ ಅಂಕಗಳನ್ನು ಕಡೆಗಣಿಸಬಹುದು. ಆದ್ದರಿಂದ ಯಾರನ್ನಾದರೂ ತೀರ್ಮಾನಿಸುವ ಮೊದಲು, “ನನಗೆ ನಿಜವಾಗಿ ಗೊತ್ತಿರುವುದು ಯಾವುದು? ನಾನು ಊಹಿಸುತ್ತಿರುವುದು ಯಾವುದು? ಇದಕ್ಕೆ ಬೇರೆ ಕಾರಣ ಇರಬಹುದೇ?” ಎಂದು ಪ್ರಶ್ನಿಸಬೇಕು. ಮುಖ್ಯವಾಗಿ, “ಇದೇ ಕೆಲಸವನ್ನು ನನಗೆ ಇಷ್ಟವಾದ ವ್ಯಕ್ತಿ ಮಾಡಿದ್ದರೆ, ನಾನು ಇದೇ ರೀತಿ ಅರ್ಥೈಸುತ್ತಿದ್ದೆನೇ?” ಎಂದು ಕೇಳಿಕೊಳ್ಳಬೇಕು. ಕೆಲವೊಮ್ಮೆ ಕಳೆದುಹೋಗಿರುವುದು ಕೊಡಲಿ ಮಾತ್ರ; ಆದರೆ ನಮ್ಮ ಅನುಮಾನದಿಂದ ನಾವು ಒಬ್ಬ ನಿರಪರಾಧಿಯ ಬಗ್ಗೆ ಸಂಪೂರ್ಣ ಕಥೆಯನ್ನೇ ಕಟ್ಟಿಬಿಡುತ್ತೇವೆ.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.