ನಮ್ಮೊಳಗೆ ಸಂತೋಷ ಇರದಿದ್ದರೆ, ಶಾಂತಿ ಇರದಿದ್ದರೆ ಬೇರೆಯವರೊಡನೆ—ನಾವು ಪ್ರೀತಿಸುವವರೊಡನೆ, ಒಂದೇ ಸೂರಿನ ಅಡಿಯಲ್ಲಿ ಇರುವ ನಮ್ಮವರೊಡನೆ ಕೂಡ, ಸಂತೋಷ, ಶಾಂತಿಗಳನ್ನು ಹಂಚಿಕೊಳ್ಳಲು ಆಗದು. ನಮ್ಮೊಳಗೆ ನೆಮ್ಮದಿ, ಸಂತೋಷಗಳಿದ್ದರೆ ನಮ್ಮ ಮುಖ ಹೂವಿನ ಹಾಗೆ ಅರಳುವದು, ನಗು ಮೂಡುವುದು, ಮನೆಯವರು, ನಮ್ಮ ಸುತ್ತಲಿನವರು, ಇಡೀ ಸಮಾಜ ನಮ್ಮ ಶಾಂತಿ, ಸಮಾಧಾನಗಳ ಲಾಭ ಪಡೆಯುವರು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.12 : ಶಾಂತಿ । ಶಾಂತಿಯ ಕ್ರಿಯೆ
ಬದುಕಿನ ತುಂಬ ಸಂಕಟ, ವೇದನೆ, ಯಾತನೆ ತುಂಬಿವೆ. ಹಾಗೆಯೇ ಅನೇಕ ಅಚ್ಚರಿಗಳೂ ಇವೆ—ನೀಲಿಯ ಆಕಾಶ, ಬೆಳಗಿನ ಎಳೆ ಬಿಸಿಲು, ಮಗುವಿನ ಹೊಳಪಿನ ಕಣ್ಣು. ವೇದನೆ ಅನುಭವಿಸಿದೆ ಸಾಲದು, ಬದುಕಿನ ಅಚ್ಚರಿಗಳನ್ನೂ ನಾವು ಮುಟ್ಟಿ ಅನುಭವಿಸಬೇಕು. ಬದುಕಿನ ಅಚ್ಚರಿಗಳು ನಮ್ಮೊಳಗೂ ನಮ್ಮ ಸುತ್ತಲೂ ಎಲ್ಲೆಲ್ಲೂ ಯಾವಾಗಲೂ ಇದ್ದೇ ಇವೆ.
ನಮ್ಮೊಳಗೆ ಸಂತೋಷ ಇರದಿದ್ದರೆ, ಶಾಂತಿ ಇರದಿದ್ದರೆ ಬೇರೆಯವರೊಡನೆ—ನಾವು ಪ್ರೀತಿಸುವವರೊಡನೆ, ಒಂದೇ ಸೂರಿನ ಅಡಿಯಲ್ಲಿ ಇರುವ ನಮ್ಮವರೊಡನೆ ಕೂಡ, ಸಂತೋಷ, ಶಾಂತಿಗಳನ್ನು ಹಂಚಿಕೊಳ್ಳಲು ಆಗದು. ನಮ್ಮೊಳಗೆ ನೆಮ್ಮದಿ, ಸಂತೋಷಗಳಿದ್ದರೆ ನಮ್ಮ ಮುಖ ಹೂವಿನ ಹಾಗೆ ಅರಳುವದು, ನಗು ಮೂಡುವುದು, ಮನೆಯವರು, ನಮ್ಮ ಸುತ್ತಲಿನವರು, ಇಡೀ ಸಮಾಜ ನಮ್ಮ ಶಾಂತಿ, ಸಮಾಧಾನಗಳ ಲಾಭ ಪಡೆಯುವರು.
ನೀಲಿ ಬಾನಿನ ಚೆಲುವನ್ನು ಕಂಡು ಸಂತೋಷಪಡಲು ಪ್ರಯತ್ನಪಡಬೇಕೇ? ಸಂತೋಷಪಡುವುದು ಹೇಗೆಂದು ಅಭ್ಯಾಸ ಮಾಡಿಕೊಳ್ಳಬೇಕೇ? ಇಲ್ಲ, ಸಂತೋಷ ಆಗುತ್ತದೆ ನಮಗೆ. ನಮ್ಮ ಬದುಕಿನ ಪ್ರತಿ ಕ್ಷಣವೂ, ಪ್ರತಿ ನಿಮಿಷವೂ ನಾವು ಹೀಗೆ ಸಂತೋಷದಿಂದ ಇರಬಹುದು. ನಾವು ಯಾರೇ ಆಗಿರಲಿ, ಎಲ್ಲೇ ಇರಲಿ, ಎಳೆ ಬಿಸಿಲನ್ನು, ಇಷ್ಟವಾಗುವವರ ಒಡನಾಟವನ್ನು, ನಮ್ಮ ಉಸಿರಾಟವನ್ನು ಕೂಡ ಸಂತೋಷವಾಗಿ ಅನುಭವಿಸಬಲ್ಲೆವು. ನೀಲಿ ಬಾನನ್ನು ಕಂಡು ಖುಷಿಪಡಲು ಚೀನಕ್ಕೋ ಆಸ್ಟ್ರೇಲಿಯಕ್ಕೋ ಹೋಗಬೇಕಾಗಿಲ್ಲ. ನಮ್ಮ ಉಸಿರಾಟವನ್ನು ಆನಂದಿಸಲು ಭವಿಷ್ಯದ ಯಾವುದೊ ಒಂದು ದಿನಕ್ಕಾಗಿ ಕಾಯುವುದೊ, ಕಾಲಯಂತ್ರದಲ್ಲಿ ಕೂತು ಪ್ರಯಾಣ ಮಾಡುವುದೋ ಬೇಕಾಗಿಲ್ಲ. ಈಗಲೇ, ಈ ಕ್ಷಣವೇ ಇವನ್ನೆಲ್ಲ ನಾವು ಕಂಡು, ನೋಡಿ, ಮುಟ್ಟಿ, ಅನುಭವಿಸಿ ಆನಂದಿಸಬಹುದು. ಸಂಕಟ, ವೇದನೆಗಳು ಮಾತ್ರವೇ ನಮ್ಮ ಅರಿವಿಗೆ ಬರುತ್ತಿದೆ ಅಂದರೆ ನಾವು ನತದೃಷ್ಟರು.
ನಾವು ಎಷ್ಟು ಬ್ಯುಸಿ ಅಂದರೆ ನಾವು ಪ್ರೀತಿಸುವ ಮನುಷ್ಯರನ್ನು, ನಮ್ಮ ಮನೆಯಲ್ಲೇ ಇರುವವರನ್ನು ಕೂಡ, ಸರಿಯಾಗಿ ನೋಡಲು, ನಮ್ಮನ್ನೇ ನಾವು ನೋಡಿಕೊಳ್ಳಲು ನಮಗೆ ಸಮಯವೇ ಇಲ್ಲ. ಸಮಾಜ ಹೇಗೆ ವ್ಯವಸ್ಥೆಗೊಂಡಿದೆಯೆಂದರೆ ನಮಗೊಂದಿಷ್ಟು ವಿರಾಮದ ಸಮಯ ದೊರೆತರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ನಮಗೆ ಗೊತ್ತಿಲ್ಲ, ನಮ್ಮೊಡನೆ ಇರಲು ನಮಗೆ ತಿಳಿದಿಲ್ಲ. ನಮಗೆ ದೊರೆಯುವ ತೀರ ಸ್ವಲ್ಪ ವಿರಾಮದ ಸಮಯವನ್ನು ಕಳೆಯಲು ಲಕ್ಷಾಂತರ ದಾರಿಗಳಿವೆ—ಟಿವಿ ಹಾಕುತ್ತೇವೆ, ಫೋನು ಎತ್ತಿಕೊಳ್ಳುತ್ತೇವೆ, ಅಥವಾ ಕಾರು ಹತ್ತಿ ಎಲ್ಲಿಗಾದರೂ ಹೊರಡುತ್ತೇವೆ. ನಮ್ಮೊಡನೆ ನಾವಿರುವ ಅಭ್ಯಾಸವೇ ನಮಗಿಲ್ಲ. ನಮ್ಮಿಂದಲೇ ನಾವು ತಪ್ಪಿಸಿಕೊಳ್ಳಲು ಹೆಣಗುವವರ ಹಾಗೆ ನಡೆದುಕೊಳ್ಳುತ್ತೇವೆ.
ಧ್ಯಾನವೆಂದರೆ ಆಗುತ್ತಿರುವ ಎಲ್ಲದರ ಬಗ್ಗೆ, ನಮ್ಮ ಮೈ, ನಮ್ಮ ಭಾವನೆ, ನಮ್ಮ ಮನಸ್ಸು, ನಾವಿರುವ ಲೋಕದ ಬಗ್ಗೆ ಅರಿವು, ಎಚ್ಚರ.
ದಿನ ದಿನವೂ ಸಾವಿರಾರು ಮಕ್ಕಳು ಹಸಿವಿನಿಂದ ಸಾಯುತಿವೆ. ಬಲಾಢ್ಯ ರಾಷ್ಟ್ರಗಳು ನಮ್ಮ ಇಡೀ ಭೂಮಿಯನ್ನು ಹಲವು ಬಾರಿ ನಾಶ ಮಾಡಬಲ್ಲ ಅಣ್ವಸ್ತ್ರ ಇಟ್ಟುಕೊಂಡಿವೆ. ಆದರೂ ಸೂರ್ಯೋದಯ ಚೆಲುವಾಗಿದೆ, ನಮ್ಮ ಗೋಡೆಯ ಪಕ್ಕದಲ್ಲಿ ಅರಳಿರುವ ಗುಲಾಬಿ ಚಂದವಾಗಿದೆ, ಬದುಕು ಭೀಕರ, ಹೌದು. ಬದುಕು ಅಚ್ರರಿಯ ಆಶ್ಚರ್ಯ, ಹೌದು. ಈ ಭೀಕರತೆ ಈ ಚೆಲುವು ಎರಡನ್ನೂ ಮುಟ್ಟಿ ಅನುಭವಿಸುವ ಅಭ್ಯಾಸದ ಅನುಷ್ಠಾನವೇ ಧ್ಯಾನ. ಧ್ಯಾನಮಾಡಲು ನಾವು ಮುಖ ಬಿಗಿದುಗೊಂಡು ಗಂಭೀರವಾಗಿಯೇ ಇರಬೇಕು ಎಂದೇನಿಲ್ಲ.
ಧ್ಯಾನ ಚೆನ್ನಾಗಿ ನಡೆಯಲು ನಾವು ನಗುನಗುತ್ತಿರಬೇಕು. ಇತ್ತೀಚೆಗೆ ಮಕ್ಕಳ ಗುಂಪಿನಲ್ಲಿ ಕೂತಿದ್ದೆ. ಟಿಮ್ ಎಂಬ ಹುಡುಗನ ನಗು ತುಂಬ ಚಂದವಾಗಿತ್ತು. ʻಟಿಮ್, ನಿನ್ನ ಸ್ಮೈಲ್ ತುಂಬ ಚಂದವಾಗಿದೆ,ʼ ಅಂದೆ. ಅದಕ್ಕೆ ಅವನು ʻಥ್ಯಾಂಕ್ಯೂ,ʼ ಅಂದ. ʻನೀನು ನನಗೆ ಥ್ಯಾಂಕ್ಯೂ ಹೇಳಬೇಕಾಗಿಲ್ಲ. ನಾನು ನಿನಗೆ ಥ್ಯಾಂಕ್ಸ್ ಹೇಳಬೇಕು. ನಿನ್ನ ನಗುವಿನಿಂದ ನನ್ನ ಬದುಕು ಸುಂದರವಾಗಿದೆ. ಥ್ಯಾಂಕ್ಯೂ ಅನ್ನುವ ಬದಲು ʻಯು ಆರ್ ವೆಲ್ಕಮ್ʼ ಅನ್ನು,ʼ ಅಂತ ಹೇಳಿದೆ.
ಮಗುವಿನ ಮುಖದಲ್ಲಿ ನಗು ಅರಳಿದರೆ, ವಯಸ್ಕರ ಮುಖದಲ್ಲಿ ನಗು ಅರಳಿದರೆ, ಅದು ಮುಖ್ಯವಾದ ಸಂಗತಿ. ನಮ್ಮ ದಿನ ನಿತ್ಯದ ಬದುಕಿನಲಲಿ ನಾವು ನಗು ಅರಳಿಸಿಕೊಳ್ಳಬಲ್ಲೆವಾದರೆ, ನಾವು ಶಾಂತವಾಗಿ, ಸಂತೋಷವಾಗಿ ಇರಬಲ್ಲೆವಾದರೆ ಅದರಿಂದ ನಮಗೆ ಮಾತ್ರವಲ್ಲ, ಎಲ್ಲರಿಗೂ ಲಾಭ ದೊರೆಯುತ್ತದೆ.
ಇದು ಶಾಂತಿಯನ್ನು ತರುವ ಕ್ರಿಯೆಯ ಮೂಲಭೂತ ರೂಪ. ಮಗು ನಗುವುದನ್ನು ಕಂಡು ನಾನೂ ಸಂತೋಷವಾಗುತ್ತೇನೆ, ನನಗೆ ಸಂತೋಷವಾಯಿತೆಂಬ ಅರಿವಿನಿಂದ ಮಗು ಕೂಡ ʻಯು ಆರ್ ವೆಲ್ಕಮ್,ʼ ಅನ್ನುತ್ತದೆ.

