ದೊಡ್ಡ ಸಂತೋಷವಾಗಲಿ ಅಥವಾ ದೊಡ್ಡ ದುಃಖವಾಗಲಿ, ಎರಡೂ ಶಾಶ್ವತವಾಗಿ ನಮ್ಮ ಸಂತೋಷದ ಮಟ್ಟವನ್ನು ಬದಲಾಯಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಮನಸ್ಸು ಹೊಸ ಪರಿಸ್ಥಿತಿಗೆ ಹೊಂದಿಕೊಂಡು, ಮತ್ತೆ ಹಿಂದಿನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ಕೊನೆಗೂ ನಿಮಗೆ ಬೇಕಾಗಿದ್ದನ್ನು ಪಡೆದುಕೊಂಡಿದ್ದೀರಿ ಎಂದು ಊಹಿಸಿಕೊಳ್ಳಿ. ಆ ಅದ್ಭುತವಾದ ಮನೆಯ ಕೀಲಿಗಳು ನಿಮ್ಮ ಕೈಗೆ ಸಿಗುತ್ತವೆ, ನಿಮಗೆ ಹೊಸ ಉದ್ಯೋಗ ಸಿಗುತ್ತದೆ, ಹೊಸ ಫೋನ್ ಸಿಗುತ್ತದೆ, ಮತ್ತು ಸುಮಾರು ಒಂದು ವಾರದವರೆಗೆ ನಿಮಗೆ ಅದ್ಭುತವಾದ ಅನುಭವವಾಗುತ್ತದೆ. ಆದರೆ ನಂತರ, ನಿಧಾನವಾಗಿ, ದಿನಗಳು ಕಳೆದಂತೆ, ನೀವು ಹಿಂದೆ ಹೇಗಿದ್ದೀರೋ ಸರಿಸುಮಾರು ಅದೇ ರೀತಿಯ ಭಾವನೆಗಳು ಮತ್ತೆ ನಿಮ್ಮೊಳಗೆ ಮೂಡಲು ಪ್ರಾರಂಭಿಸುತ್ತವೆ. ಮತ್ತೆ ನೀವು ಅಶಾಂತರಾಗುತ್ತೀರಿ, ಮತ್ತೆ ಮುಂದಿನದನ್ನು ಹುಡುಕಲು ಪ್ರಾರಂಭಿಸುತ್ತೀರಿ.
1970ರ ದಶಕದಲ್ಲಿ ಮನೋವಿಜ್ಞಾನಿಗಳಾದ ಬ್ರಿಕ್‌ಮನ್ ಮತ್ತು ಕ್ಯಾಂಪ್‌ಬೆಲ್ ಇದನ್ನು “ಹೆಡೋನಿಕ್ ಟ್ರೆಡ್‌ಮಿಲ್” (Hedonic Treadmill) ಎಂದು ಕರೆದರು.
ಇದರ ಅರ್ಥವೇನೆಂದರೆ, ನಮ್ಮ ಜೀವನದಲ್ಲಿ ಏನೇ ಸಂಭವಿಸಿದರೂ, ಅದು ನಮಗೆ ಲಾಟರಿ ಗೆಲ್ಲುವಂತಹ ಅಪಾರ ಸಂತೋಷವನ್ನು ನೀಡಿದರೂ ಅಥವಾ ಅದು ಕಾಲು ಮುರಿಯುವಂತಹ ದುಃಖದ ಅನುಭವವಾಗಿದ್ದರೂ, ಕೆಲವು ಸಮಯದ ನಂತರ ನಾವು ಸಾಮಾನ್ಯವಾಗಿ ನಮ್ಮದೇ ಆದ ಒಂದು ಮೂಲಭೂತ ಸಂತೋಷದ ಮಟ್ಟಕ್ಕೆ (baseline level of happiness) ಮರಳುತ್ತೇವೆ. ಅಂದರೆ, ದೊಡ್ಡ ಸಂತೋಷವಾಗಲಿ ಅಥವಾ ದೊಡ್ಡ ದುಃಖವಾಗಲಿ, ಎರಡೂ ಶಾಶ್ವತವಾಗಿ ನಮ್ಮ ಸಂತೋಷದ ಮಟ್ಟವನ್ನು ಬದಲಾಯಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಮನಸ್ಸು ಹೊಸ ಪರಿಸ್ಥಿತಿಗೆ ಹೊಂದಿಕೊಂಡು, ಮತ್ತೆ ಹಿಂದಿನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ವಿಕಾಸವಾದದ (Evolutionary) ದೃಷ್ಟಿಕೋನದಿಂದ ನೋಡಿದರೂ, ಇದು ಅರ್ಥಪೂರ್ಣವಾಗಿದೆ. ಏಕೆಂದರೆ ನಮ್ಮ ಪೂರ್ವಜರು ಬಹಳ ಕಾಲ ತೃಪ್ತಿಯಿಂದ ಇರಲು ಸಾಧ್ಯವಿರಲಿಲ್ಲ. ನೀವು ತೃಪ್ತರಾಗಿದ್ದರೆ, ಬೇಟೆಯಾಡುವುದನ್ನು ನಿಲ್ಲಿಸುತ್ತೀರಿ, ಚಲಿಸುವುದನ್ನು ನಿಲ್ಲಿಸುತ್ತೀರಿ ಮತ್ತು ಸ್ಪರ್ಧಿಸುವುದನ್ನೂ ನಿಲ್ಲಿಸುತ್ತೀರಿ. ಆದ್ದರಿಂದ, ನಮ್ಮ ಮೆದುಳು ಇನ್ನಷ್ಟು ಏನನ್ನಾದರೂ ಹುಡುಕುತ್ತಾ, ನಿರಂತರವಾಗಿ ಮುಂದುವರಿಯುವಂತೆ ರೂಪುಗೊಂಡಿದೆ. ಸಮಸ್ಯೆಯೆಂದರೆ, ನಮ್ಮ ಆಧುನಿಕ ಜಗತ್ತಿನಲ್ಲಿ ಈ ಅಶಾಂತಿ ನಮಗೆ ಸಾಧಿಸಲಾಗದ ಅಥವಾ ಸಾಧಿಸಿದರೂ ಶಾಶ್ವತವಾದ ಸಂತೋಷವನ್ನು ನೀಡದ ವಸ್ತುಗಳ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತಿದೆ.
ಮುಂದಿನ ವೇತನ ಹೆಚ್ಚಳದಲ್ಲಿ, ಮುಂದಿನ ಖರೀದಿಯಲ್ಲಿ, ಮುಂದಿನ ಸಾಧನೆಯಲ್ಲಿ ನಮ್ಮ ಸಂತೋಷ ಅಡಗಿದೆ ಎಂದು ಭಾವಿಸುವುದು ಸುಲಭ. ಆದರೆ ಪ್ರತಿಬಾರಿಯೂ ನಾವು ಅವುಗಳನ್ನು ಪಡೆದ ನಂತರ, ಅವುಗಳ ಹೊಸತನದ ಆಕರ್ಷಣೆ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಮತ್ತೆ ನಮಗೆ ಅದೇ ರೀತಿಯ ಮತ್ತೊಂದು ಸಂತೋಷದ ಅನುಭವ ಬೇಕಾಗುತ್ತದೆ.
ಈ “ಹೆಡೋನಿಕ್ ಟ್ರೆಡ್‌ಮಿಲ್”ನಿಂದ ಸಂಪೂರ್ಣ ಪರಿಹಾರವೇನೂ ಇಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದರಿಂದ ಒಂದು ಮುಖ್ಯ ವಿಷಯವನ್ನು ನಾವು ಅರಿತುಕೊಳ್ಳಬಹುದು. ಮನುಷ್ಯನ ಮೆದುಳು ಯಾವಾಗಲೂ ಸಂತೋಷವಾಗಿರುವಂತೆ ರೂಪುಗೊಂಡಿಲ್ಲ. ದಿನದ ಪ್ರತಿಯೊಂದು ಕ್ಷಣದಲ್ಲೂ ನಾವು ಅತ್ಯಂತ ಉತ್ಸಾಹಭರಿತವಾದ, ಪರಮಾನಂದದ ಅನುಭವವನ್ನು ಪಡೆಯುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಿರಂತರವಾಗಿ ಆಳವಾದ ದುಃಖದಲ್ಲಿಯೂ ಇರುವುದಿಲ್ಲ. ನೀವು ಜೀವನದ ಕೆಲವು ಕ್ಷಣಗಳನ್ನು ಆನಂದಿಸಬಹುದು. ಹಾಗೆಯೇ, ಜೀವನವನ್ನು ಒಟ್ಟಾರೆಯಾಗಿ ಕೂಡ ಆನಂದಿಸಬಹುದು. ಆದರೆ ಪ್ರತಿಯೊಂದು ಕ್ಷಣದಲ್ಲೂ, ಪ್ರತಿಯೊಂದು ವಿಷಯದಲ್ಲೂ, ಸದಾಕಾಲವೂ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ.

