ದಿ ಮ್ಯಾಕ್ರೋಪುಲೋಸ್ ಕೇಸ್

‘ದಿ ಮ್ಯಾಕ್ರೋಪುಲೋಸ್ ಕೇಸ್’ ಎನ್ನುವುದು ಜೆಕ್ ನಾಟಕಕಾರ ಕಾರಲ್ ಚಾಪೆಕ್ (Karel Čapek) ಅವರ ನಾಟಕವನ್ನು ಆಧರಿಸಿದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

‘ದಿ ಮ್ಯಾಕ್ರೋಪುಲೋಸ್ ಕೇಸ್’ ತತ್ತ್ವಶಾಸ್ತ್ರದಲ್ಲಿನ “ನೀವು ಏನು ಮಾಡುತ್ತೀರಿ?” ಎನ್ನುವ ಅತ್ಯಂತ ಕುತೂಹಲಕಾರಿ ಎಂಬ ಪ್ರಶ್ನೆಗಳಲ್ಲಿ ಒಂದಾಗಿದೆ. ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ನೀವು ಕೇಳಬಹುದು. ಏಕೆಂದರೆ ಅವರು ನೀಡುವ ಉತ್ತರಗಳು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಸಂಗತಿಗಳನ್ನು ಬಹಿರಂಗಪಡಿಸುತ್ತವೆ.

‘ದಿ ಮ್ಯಾಕ್ರೋಪುಲೋಸ್ ಕೇಸ್’ ಎನ್ನುವುದು ಜೆಕ್ ನಾಟಕಕಾರ ಕಾರಲ್ ಚಾಪೆಕ್ (Karel Čapek) ಅವರ ನಾಟಕವನ್ನು ಆಧರಿಸಿದೆ. ಅದರಲ್ಲಿ ಒಬ್ಬ ಯುವತಿಗೆ ಒಂದು ಮಾಂತ್ರಿಕ ಔಷಧವನ್ನು ನೀಡಲಾಗುತ್ತದೆ. ಆ ಔಷಧವು ಆಕೆಗೆ ಇನ್ನೂ 300 ವರ್ಷಗಳ ಕಾಲ ಬದುಕುವ ಸಾಮರ್ಥ್ಯವನ್ನು ನೀಡುತ್ತದೆ. ಹೀಗೆ, ತನ್ನ 342ನೇ ವಯಸ್ಸಿನಲ್ಲಿ, ಆಕೆಗೆ ಮತ್ತೆ ಅದೇ ಔಷಧವನ್ನು ನೀಡಲಾಗುತ್ತದೆ. ಆದರೆ ಆ ವೇಳೆಗೆ ಆಕೆ ತನ್ನ ಎಲ್ಲ ಸ್ನೇಹಿತರನ್ನೂ ಮೀರಿಸಿ ಬದುಕಿರುತ್ತಾಳೆ. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಸಾಯುವುದನ್ನು ಆಕೆ ನೋಡಿರುತ್ತಾಳೆ. ಸಾಮ್ರಾಜ್ಯಗಳು ಹುಟ್ಟಿ ಬೆಳೆದು ನಂತರ ನಾಶವಾಗಿರುವುದನ್ನು ನೋಡಿರುತ್ತಾಳೆ. ರಾಷ್ಟ್ರಗಳು ಹುಟ್ಟಿ, ಅಳಿದು ಹೋಗುವುದನ್ನೂ ಕಂಡಿರುತ್ತಾಳೆ.
ಹಾಗಾದರೆ, ಇದೇ ಜೀವನವನ್ನು ಇನ್ನೂ 300 ವರ್ಷಗಳ ಕಾಲ ಮುಂದುವರಿಸಲು ಆಕೆ ಬಯಸುತ್ತಾಳೆಯೇ?

ತತ್ತ್ವಜ್ಞಾನಿ ಬರ್ನಾರ್ಡ್ ವಿಲಿಯಮ್ಸ್ (Bernard Williams) ಅವರ ವಾದವೇನೆಂದರೆ, ಬಹುತೇಕ ಎಲ್ಲರೂ ಆ ಔಷಧವನ್ನು ನಿರಾಕರಿಸುತ್ತಾರೆ. ಏಕೆಂದರೆ, ನೀವು ಪ್ರೀತಿಸಿದವರನ್ನೆಲ್ಲಾ ಕಳೆದುಕೊಂಡ ನಂತರವೂ ಬದುಕನ್ನು ಮುಂದುವರಿಸಬೇಕಾದ ನೋವು ಮಾತ್ರವಲ್ಲ, ಜೀವನವೇ ಕ್ರಮೇಣ ಬೇಸರದಿಂದ ಕೂಡಿದುದಾಗುತ್ತದೆ.

ನಾಟಕದಲ್ಲಿ, ಆ ಪಾತ್ರವು ಸಂಬಂಧಗಳ ಬಗ್ಗೆ ಕ್ರಮೇಣ ಭಾವನಾತ್ಮಕವಾಗಿ ಕೋಲ್ಡ್ ಆಗುತ್ತಾಳೆ. ಆಕೆಗೆ ಸಂಬಂಧಗಳ ಬಗ್ಗೆ ಕಾಳಜಿ ಇರುವುದಿಲ್ಲ. ಮಾಡಲು ಹೊಸ ಕೆಲಸಗಳೇ ಉಳಿದಿಲ್ಲ. ಕೈಗೊಳ್ಳಲು ಹೊಸ ಯೋಜನೆಗಳಿಲ್ಲ. ಆಸಕ್ತಿಯಿಂದ ತೊಡಗಿಸಿಕೊಳ್ಳಲು ಹೊಸ ಹವ್ಯಾಸಗಳೂ ಉಳಿದಿಲ್ಲ. ಜೀವನವೇ ಬೇಸರವಾಗಿ ಪರಿಣಮಿಸಿದೆ.

ವಿಲಿಯಮ್ಸ್ ಅವರ ಪ್ರಕಾರ, ಜೀವನವನ್ನು ನಾವು ಸವಿಯುವುದು, ಅದು ಒಂದು ದಿನ ಕೊನೆಗೊಳ್ಳುತ್ತದೆ ಎನ್ನುವ ಕಾರಣದಿಂದಲೇ. ಜೀವನವು ಅಮೂಲ್ಯವೆಂದು ನಮಗೆ ಅನಿಸುವುದಕ್ಕೆ ಅದರ ಅಂತ್ಯವಿದೆ ಎಂಬ ಸತ್ಯವೂ ಒಂದು ಕಾರಣ. ನೀವು ಶಾಶ್ವತವಾಗಿ ಬದುಕಲು ಸಾಧ್ಯವಿದ್ದರೆ, ಯಾವುದಕ್ಕೂ ತುರ್ತು ಇರುವುದಿಲ್ಲ. ಯಾವುದನ್ನೂ ಈಗಲೇ ಮಾಡಬೇಕೆಂಬ ಅಗತ್ಯವಿರುವುದಿಲ್ಲ. ಯಾವುದೂ ವಿಶೇಷವಾಗಿ ಅಮೂಲ್ಯವೆಂದು ಅನಿಸುವುದಿಲ್ಲ.

ಹಾಗಾದರೆ, ನೀವು ಏನು ಮಾಡುತ್ತೀರಿ?
ನಿಮಗೆ ಇನ್ನೂ 300 ವರ್ಷಗಳ ಕಾಲ ಬದುಕುವ ಅವಕಾಶ ನೀಡಿದರೆ, ಅದನ್ನು ಸ್ವೀಕರಿಸುತ್ತೀರಾ? ಅಥವಾ ಮರಣ, ಅನಾರೋಗ್ಯ ಮತ್ತು ಜೀವನದ ಸೀಮಿತತೆ, ಇವುಗಳೇ ಜೀವನಕ್ಕೆ ಅರ್ಥ ಮತ್ತು ಮೌಲ್ಯವನ್ನು ನೀಡುವ ಸಂಗತಿಗಳಾಗಿರುವುದರಿಂದ, ಅವುಗಳನ್ನು ಸ್ವಾಗತಿಸುವುದೇ ಉತ್ತಮವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.