ಪ್ರೇಮದ ಮೂರು ಹಂತಗಳು

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ



ಪ್ರೇಮದಲ್ಲಿ ಮೂರು ಹಂತಗಳಿವೆ — Potentia, Actus ಮತ್ತು Habitus. ಮೂರನೆಯ ಹಂತವಾದ Habitusನಲ್ಲಿ, ಸ್ವತಃ ನೀವೇ ಪ್ರೇಮವಾಗಿ ಬಿಡುತ್ತೀರಿ.

Potentia ಎಂದರೆ ಹುಟ್ಟಲು ಸಿದ್ಧವಾಗಿರುವ ಸ್ಥಿತಿ; ಹುಟ್ಟುವಷ್ಟು ಪರಿಪಕ್ವವಾಗಿದ್ದರೂ ಇನ್ನೂ ಹುಟ್ಟಿಲ್ಲ.
ಗರ್ಭಧಾರಣೆಯ ಒಂಬತ್ತು ತಿಂಗಳುಗಳು ಪೂರ್ಣಗೊಂಡಿವೆ. ಯಾವುದೇ ಕ್ಷಣದಲ್ಲಿ ಮಗು ಹುಟ್ಟಬಹುದು. ಆದರೆ ಇನ್ನೂ ಹುಟ್ಟಿಲ್ಲ. ಅದು ಖಂಡಿತವಾಗಿಯೂ ಹುಟ್ಟೇ  ಹುಟ್ಟುತ್ತದೆ ಎಂಬ ಅನಿವಾರ್ಯತೆಯೂ ಇಲ್ಲ; ಹುಟ್ಟಬಹುದು, ಹುಟ್ಟದೆಯೂ ಇರಬಹುದು. ಹುಟ್ಟಲು ಸಹಾಯ ಮಾಡದಿದ್ದರೆ ಅದು ಅಲ್ಲಿಯೇ ಉಳಿಯಬಹುದು; ಹಾಗೆಯೇ ಉಳಿದುಕೊಂಡು, ನೀವು ಸಾಯುವಂತೆಯೂ ಆಗಬಹುದು. ಇದೇ ಮಾನವ ಜೀವನದ ದುರಂತ: ಪ್ರೇಮವು ‘Potentia’ಯಲ್ಲೇ, ಒಂದು ಬೀಜದ ರೂಪದಲ್ಲೇ , ಉಳಿದುಬಿಡುತ್ತದೆ; ಎಂದಿಗೂ ಅರಳುವುದಿಲ್ಲ. ಪ್ರೇಮ ಅರಳಿದಾಗ ತೃಪ್ತಿ ಉಂಟಾಗುತ್ತದೆ. ಪ್ರೇಮ ಅರಳಿದಾಗ ಅಲ್ಲಿ ದೇವರು ಇರುತ್ತಾನೆ. ದೇವರು ಎಂದರೆ ಅರಳಿದ ಪ್ರೇಮದ ಅನುಭವವೇ ಹೊರತು ಮತ್ತೇನೂ ಅಲ್ಲ.

ನೀವು ನಿಜವಾಗಿ ಪ್ರೀತಿಸಿದಾಗ, ನಿಮ್ಮೊಳಗೆ ದೇವರ ಸಾನ್ನಿಧ್ಯವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.
ಜೀಸಸ್  ಹೇಳುತ್ತಾನೆ:
“God is love — ದೇವರು ಪ್ರೇಮ.”
ಆದರೆ ನಾನು ಹೇಳುತ್ತೇನೆ:
“Love is God — ಪ್ರೇಮವೇ ದೇವರು.”
ದೇವರು ಎರಡನೆಯದು; ಪ್ರೇಮವೇ ಮೊದಲನೆಯದು. ನೀವು ದೇವರನ್ನು ಮರೆತರೂ ಏನೂ ಕಳೆದುಹೋಗುವುದಿಲ್ಲ. ಆದರೆ ನೀವು ಪ್ರೇಮವನ್ನು ಮರೆತರೆ, ಪ್ರೇಮವನ್ನೂ ಕಳೆದುಕೊಳ್ಳುತ್ತೀರಿ, ದೇವರನ್ನೂ ಕಳೆದುಕೊಳ್ಳುತ್ತೀರಿ. ನೀವು ದೇವರನ್ನು ಮರೆತು, ಸಂಪೂರ್ಣವಾಗಿ ಪ್ರೇಮದೊಳಗೆ ಪ್ರವೇಶಿಸಿದರೂ ಏನೂ ಕಳೆದುಹೋಗುವುದಿಲ್ಲ, ನೀವು ಪ್ರೇಮವನ್ನು ಹೊಂದುವಿರಿ.

ಒಂದು ದಿನ ಪ್ರೇಮ ಅರಳಿದಾಗ, ನಿಮ್ಮೊಳಗೆ ದೇವರ ಸಾನ್ನಿಧ್ಯವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.
ನೀವು ಅದನ್ನು ‘ದೇವರು’ ಎಂದು ಕರೆಯದೇ ಇರಬಹುದು, ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಹೆಸರುಗಳು ಮುಖ್ಯವಲ್ಲ. ‘ದೇವರು’ ಎಂಬ ಪದವೇ ದೇವರಲ್ಲ. ನೀವು ಅದಕ್ಕೆ ಬೇರೆ ಯಾವುದಾದರೂ ಹೆಸರನ್ನು ಕೊಡಬಹುದು. ಅಥವಾ ಯಾವುದೇ ಹೆಸರನ್ನೂ ಕೊಡದೆಯೂ ಇರಬಹುದು. ಅದರ ಬಗ್ಗೆ ಮೌನವಾಗಿಯೇ ಉಳಿಯಬಹುದು. ಅಷ್ಟು ಜೀವಂತವಾದ, ಅಷ್ಟು ಆಳವಾದ ಅನುಭವಕ್ಕೆ ಒಂದು ಪದವನ್ನು ಬಳಸುವುದೇ ಅದಕ್ಕೆ ಮಾಡುವ ಅವಮಾನವೆಂದು ನಿಮಗೆ ಅನಿಸಬಹುದು. ಅಂತಹ ಸಂದರ್ಭದಲ್ಲಿ ಮೌನವೇ ನಿಜವಾದ ಗೌರವವಾಗಬಹುದು.
ಆದ್ದರಿಂದ ಪ್ರೇಮದ ಮೊದಲ ಹಂತ Potentia.

ಎರಡನೆಯ ಹಂತ  : Actus

ಪ್ರೇಮದ ಎರಡನೆಯ ಹಂತ Actus.  ಅಂದರೆ ಪ್ರೇಮವು ವಾಸ್ತವವಾಗಿ ವ್ಯಕ್ತವಾಗುವ ಸ್ಥಿತಿ. ಆದರೆ ಅದು ಬರುತ್ತದೆ ಮತ್ತು ಹೋಗುತ್ತದೆ. ಕೆಲವೊಮ್ಮೆ ಅದು ಸಂಪೂರ್ಣವಾಗಿ ಜೀವಂತವಾಗಿರುತ್ತದೆ. ನಿಮ್ಮ ಹೃದಯದಲ್ಲಿ ಸ್ಪಂದಿಸುತ್ತಾ, ಮಿಡಿಯುತ್ತಾ ಇರುತ್ತದೆ. ಮತ್ತೆ ಕೆಲವೊಮ್ಮೆ ಅದು ಕಣ್ಮರೆಯಾಗುತ್ತದೆ. ಅದು ಇನ್ನೂ ಒಂದು ಭಾವಸ್ಥಿತಿ (mood)ಯಷ್ಟೇ , ಅದು ಬರುತ್ತದೆ, ಹೋಗುತ್ತದೆ.

ಅದು ನಿಮ್ಮ ಬಳಿಗೆ ಬರಲು ಪ್ರಾರಂಭಿಸಿದೆಯಾದರೆ,  ತಂಗಾಳಿಯಂತೆ ಬರುತ್ತದೆ. ಹೆಚ್ಚೆಂದರೆ ಅದು ಒಂದು ಸಂಬಂಧವಾಗಿ ರೂಪುಗೊಳ್ಳಬಹುದು. ಆದರೆ ಅದು ಇನ್ನೂ ನಿಮ್ಮ ಅಸ್ತಿತ್ವದ ಸ್ಥಿತಿಯಾಗಿಲ್ಲ. ಉಸಿರಾಟದಂತೆ ಅದು ಇಪ್ಪತ್ತನಾಲ್ಕು ಗಂಟೆಗಳೂ ನಿಮ್ಮೊಳಗೆ ಇರುವುದಿಲ್ಲ. ಅದು ಒಬ್ಬ ಅತಿಥಿ, ಒಬ್ಬ ಬಂದವನು ಮಾತ್ರ . ಆದರೆ ಆ ಅತಿಥಿಯನ್ನು ಸ್ವಾಗತಿಸುವ ಮನೆಯ ಯಜಮಾನನೇ ಇನ್ನೂ ಪ್ರೇಮದ ಸ್ಥಿತಿಯಲ್ಲಿ ಇಲ್ಲ.

ಮೂರನೆಯ ಹಂತ — Habitus

ಮೂರನೆಯ ಹಂತ ಸಂಭವಿಸಿದಾಗ, ಅದನ್ನೇ ನಾನು Habitus ಎಂದು ಕರೆಯುತ್ತೇನೆ. ಪ್ರೇಮವು ನಿಮ್ಮ ಅಸ್ತಿತ್ವದ ಸ್ವಭಾವವೇ ಆಗಿಬಿಡುತ್ತದೆ. ಆಗ ನೀವು ಪ್ರೇಮದಲ್ಲಿಯೇ ನೆಲೆಸಿರುತ್ತೀರಿ. ಪ್ರೇಮವೇ ನಿಮ್ಮ ಮನೆ. ನೀವು ಎಲ್ಲಿಗೆ ಹೋದರೂ, ಏನೇ ಮಾಡಿದರೂ, ನೀವು ಪ್ರೇಮದಲ್ಲಿಯೇ ಇರುತ್ತೀರಿ.

ಸ್ನೇಹಿತನೊಂದಿಗೆ ಇದ್ದರೂ,  ಪ್ರೇಮದಲ್ಲಿಯೇ.
ಶತ್ರುವಿನೊಂದಿಗೆ ಇದ್ದರೂ, ಪ್ರೇಮದಲ್ಲಿಯೇ.

ಯಾರಾದರೂ ನಿಮ್ಮನ್ನು ನೋಯಿಸಿದರೂ, ನೀವು ಪ್ರೇಮದಲ್ಲಿಯೇ ಇರುತ್ತೀರಿ. ಯಾರಾದರೂ ನಿಮ್ಮನ್ನು ಪ್ರಶಂಸಿಸಿದರೂ, ನೀವು ಪ್ರೇಮದಲ್ಲಿಯೇ ಇರುತ್ತೀರಿ.
ಯಾರಾದರೂ ನಿಮ್ಮನ್ನು ಅವಮಾನಿಸಿದರೂ, ನೀವು ಪ್ರೇಮದಲ್ಲಿಯೇ ಇರುತ್ತೀರಿ. ಯಾವುದೂ ನಿಮ್ಮನ್ನು ಬದಲಾಯಿಸುವುದಿಲ್ಲ. ಏಕೆಂದರೆ, ನೀವು ಪ್ರೇಮಿಸುವವರಲ್ಲ, ನೀವೇ ಸ್ವತಃ ಪ್ರೇಮವಾಗಿದ್ದೀರಿ, You are love.

— ಓಶೋ / What Is, Is, What Ain’t, Ain’t

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.