ಬೌದ್ಧ ಸಿದ್ಧರು ತಾಂತ್ರಿಕರ ವಿನಾಯಕನನ್ನು ತಮ್ಮ ಮಂಡಲದಲ್ಲಿ ಸೇರಿಸಿಕೊಂಡರು. ಆದರೆ ಅವರು ಗಣೇಶನನ್ನು ನೇರವಾಗಿ ಹಿಂದೂ ಪುರಾಣಗಳಲ್ಲಿ ಇರುವಂತೆಯೇ ನಿರೂಪಿಸಲಿಲ್ಲ. ಬದಲಿಗೆ, ವಿಘ್ನರಾಜನಾಗಿದ್ದ ಗಣೇಶನನ್ನು ‘ಅಭಿಚಾರ’ ವಿಧಿಯ ಮೂಲಕ ಪರಿವರ್ತಿಸಿಕೊಂಡರು. ಅವನನ್ನು ಮಂಜುಶ್ರೀ ಬೋಧಿಸತ್ವನ ಬೌದ್ಧಿಕ ಶಕ್ತಿಯ ಒಂದು ಅಂಗವನ್ನಾಗಿ ಪುನರ್ ವ್ಯಾಖ್ಯಾನ ಮಾಡಿದರು; ಬೌದ್ಧ ಧರ್ಮದ ತತ್ವಗಳಿಗೆ ಧಕ್ಕೆ ಬಾರದಂತೆ ಗಣೇಶನನ್ನು ತಮ್ಮ ಸಂಪ್ರದಾಯದೊಳಗೆ ಲೀನಗೊಳಿಸಿಕೊಂಡರು… ~ ಚೇತನಾ ತೀರ್ಥಹಳ್ಳಿ
ವಿಘ್ನ ನಿವಾರಕ ಗಣೇಶ ಭಾರತದಲ್ಲಿ ಮಾತ್ರವಲ್ಲ, ಪೂರ್ವ ಮತ್ತು ದಕ್ಷಿಣ ಏಷ್ಯಾದಲ್ಲಿ ಕೂಡ ಜನಪ್ರಿಯ ದೇವತೆ. ಇದಕ್ಕೆ ಕಾರಣವಾಗಿದ್ದು ಬೌದ್ಧ ಧರ್ಮ ಅನ್ನುವುದು ಕುತೂಹಲಕರ ಸಂಗತಿ.
ಗಣೇಶ, ಮೂಲತಃ ಹಿಂದೂ ಧರ್ಮೀಯರ ದೇವತೆ. ವೇದಗಳಲ್ಲಿ ‘ಗಣಾನಾಂ ಅಧಿಪತಿ’ಯಾಗಿಯೂ ಪುರಾಣಗಳಲ್ಲಿ ಪಾರ್ವತೀಸುತನಾಗಿಯೂ ಕಾಣಿಸಿಕೊಳ್ಳುವ ಈತ, ಜನಪದರ ಪ್ರೀತಿಯ ದೈವವಾಗಿ ಹೆಚ್ಚು ಪ್ರಸಿದ್ಧ. ಇಂಥಾ ಗಣೇಶ ಬೌದ್ಧ ಧರ್ಮದ ಭಾಗವಾಗಿದ್ದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.
ಮೊದಲನೆಯದಾಗಿ; ಬೌದ್ಧ ಧರ್ಮ ಉಗಮಗೊಂಡ ಸುಮಾರು ಒಂದು ಸಾವಿರ ವರ್ಷಗಳ ಬಳಿಕ, ಅದರ ಮೂಲ ಚಿಂತನೆ ಮತ್ತು ಸ್ವರೂಪದಲ್ಲಿ ಬದಲಾವಣೆಗಳು ಆಗತೊಡಗಿದವು. ಜನಸಾಮಾನ್ಯರಿಗೆ ಅವರದೇ ಬಗೆಯಲ್ಲಿ, ಅವರಿಗೆ ಇಷ್ಟವಾಗುವ ರೂಪದಲ್ಲಿ ಧಮ್ಮ ಪ್ರಚಾರ ಮಾಡಬೇಕು ಅನ್ನುವ ಉದ್ದೇಶದಿಂದ; ಮತ್ತು ಜನರಲ್ಲಿ ಧಮ್ಮದ ಬಗೆಗಿನ ಪರಕೀಯ ಭಾವನೆ ನಿವಾರಿಸುವ ಬಯಕೆಯಿಂದ, ಬೌದ್ಧ ಪ್ರಚಾರಕರು ಸ್ಥಳೀಯ ಜನಪದ – ಪುರಾಣಗಳ ಇಷ್ಟದೈವಗಳನ್ನು ಧಮ್ಮದೊಳಗೆ ಸೇರಿಸಿಕೊಂಡರು. ಹೀಗೆ ಸೇರ್ಪಡೆಗೊಂಡ ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದ.
ಎರಡನೆಯದಾಗಿ; ವಜ್ರಯಾನ ಬೌದ್ಧ ಧರ್ಮದ ಪ್ರಭಾವ ಹೆಚ್ಚಿದಂತೆಲ್ಲ, ಹಿಂದೂ ಮತ್ತು ಬೌದ್ಧ ತಂತ್ರಗಳ ನಡುವೆ ಆಚಾರ – ವಿಚಾರಗಳ ವಿನಿಮಯವೂ ಹೆಚ್ಚುತ್ತ ಹೋಯಿತು. ಈ ಅವಧಿಯಲ್ಲಿ ಬೌದ್ಧ ಸಿದ್ಧರು ತಾಂತ್ರಿಕರ ವಿನಾಯಕನನ್ನು ತಮ್ಮ ಮಂಡಲದಲ್ಲಿ ಸೇರಿಸಿಕೊಂಡರು. ಆದರೆ ಅವರು ಗಣೇಶನನ್ನು ನೇರವಾಗಿ ಹಿಂದೂ ಪುರಾಣಗಳಲ್ಲಿ ಇರುವಂತೆಯೇ ನಿರೂಪಿಸಲಿಲ್ಲ. ಬದಲಿಗೆ, ವಿಘ್ನರಾಜನಾಗಿದ್ದ ಗಣೇಶನನ್ನು ‘ಅಭಿಚಾರ’ ವಿಧಿಯ ಮೂಲಕ ಪರಿವರ್ತಿಸಿಕೊಂಡರು. ಅವನನ್ನು ಮಂಜುಶ್ರೀ ಬೋಧಿಸತ್ವನ ಬೌದ್ಧಿಕ ಶಕ್ತಿಯ ಒಂದು ಅಂಗವನ್ನಾಗಿ ಪುನರ್ ವ್ಯಾಖ್ಯಾನ ಮಾಡಿದರು; ಬೌದ್ಧ ಧರ್ಮದ ತತ್ವಗಳಿಗೆ ಧಕ್ಕೆ ಬಾರದಂತೆ ಗಣೇಶನನ್ನು ತಮ್ಮ ಸಂಪ್ರದಾಯದೊಳಗೆ ಲೀನಗೊಳಿಸಿಕೊಂಡರು. ಸರಿಸುಮಾರು ಇದೇ ಅವಧಿಯಲ್ಲಿ ಮತ್ತು ಇವೇ ಕಾರಣಗಳಿಂದಾಗಿ ಜೈನರೂ ಗಣಪತಿಯನ್ನು ತಮ್ಮ ಆರಾಧ್ಯ ದೇವತೆಗಳ ಸಾಲಿಗೆ ಸೇರಿಸಿಕೊಂಡರು; ಶಾಸನ ದೇವತೆಯ ಸ್ಥಾನ ಕೊಟ್ಟು ಪೂಜಿಸಿದರು.
ಆರಂಭದಲ್ಲಿ ಬೌದ್ಧರ ಗಣಪತಿಯು ವಿಘ್ನಗಳನ್ನು ತಂದಿಡುವ ತಂಟೆಕೋರ ವಿಘ್ನರಾಜನಾಗಿದ್ದ. ಅವನನ್ನು ಮಟ್ಟ ಹಾಕಿದರಷ್ಟೆ ಧಮ್ಮ ಸಾಧನೆ ಸಾಧ್ಯ ಎಂದು ಸಾಧಕರು ಭಾವಿಸಿದ್ದರು. ಅನಂತರದಲ್ಲಿ, ಬಹುಶಃ ಜನರ ನಡುವೆ ಪ್ರಚಲಿತವಿದ್ದ ನಂಬಿಕೆಯ ಕಾರಣದಿಂದ, ಅವನನ್ನು ಬೌದ್ಧಮಂಡಲದ ಒಳಗೆ ಬಿಟ್ಟುಕೊಂಡು ವಿಘ್ನನಿವಾರಕನನ್ನಾಗಿ ಮಾಡಿಕೊಳ್ಳಲಾಯಿತು; ಅದಕ್ಕೆ ತಕ್ಕಂತೆ ಕತೆಯನ್ನೂ ಹೆಣೆಯಲಾಯಿತು. ಅದರಂತೆ, ಅವಲೋಕಿತೇಶ್ವರನು ಗಣಪತಿಯ ತಂಟೆಕೋರತನವನ್ನು ಕಡಿಮೆ ಮಾಡಲೆಂದೇ ಅವನೊಳಗೆ ಪ್ರವೇಶಿಸಿ, ಅವನನ್ನು ಶಮನಗೊಳಿಸಿ, ವಿಘ್ನಗಳನ್ನು ತಂದಿಡುವ ಬದಲು ಅವನ್ನು ನಿವಾರಿಸುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡಿದನು. ಈ ಕತೆಯ ಕಾರಣದಿಂದಾಗಿ ಗಣೇಶನನ್ನು ಅವಲೋಕಿತೇಶ್ವರನ ಅಂಶವನ್ನಾಗಿ ನೋಡುವ ಪರಿಪಾಠ ಬೆಳೆಯಿತು.
ಬೌದ್ಧ ಧರ್ಮದ ಮಾತಂಗಿ ಸೂತ್ರದಲ್ಲಿ, ಬುದ್ಧನು ಚಾಂಡಾಲ ಕನ್ಯೆ ‘ಪ್ರಕೃತಿ’ಗೆ ಧಮ್ಮ ದೀಕ್ಷೆ ನೀಡುವ ಕತೆಯಿದೆ. ಈ ಕನ್ಯೆಯೇ ಮಾತಂಗಿ. 7ನೇ ಶತಮಾನದ ವಜ್ರಯಾನಿ ಬೌದ್ಧರು ಹಿಂದೂ ತಾಂತ್ರಿಕರ ಉಪಾಸನಾ ದೇವತೆ ಮಾತಂಗಿಯನ್ನು ಬೌದ್ಧ ಸಾಹಿತ್ಯದ ಮಾತಂಗಿಯೊಡನೆ ಸಮೀಕರಿಸಿಕೊಂಡರು. ಹಿಂದೂಗಳಲ್ಲಿ ಆದಿಶಕ್ತಿ ಜಗನ್ಮಾತೆಯೇ ಮಾತಂಗಿ, ಗಣೇಶ ಅವಳ ಮಗ. ಶಾಕ್ತ ಸಂಪ್ರದಾಯದಲ್ಲಿ ಪ್ರಚಲಿತವಿದ್ದ, ಮಾತಂಗಿಯು ಎಂಜಲು ಮಾಡಿದ ಆಹಾರವನ್ನು (ಉಚ್ಛಿಷ್ಟ) ಸೇವಿಸಿದ ಗಣೇಶನ ಕತೆಯನ್ನು ಬೌದ್ಧರು ಸಾಮಾಜಿಕ ತಾರತಮ್ಯ ನಿವಾರಣೆಯ ಸಂಕೇತವನ್ನಾಗಿ ಬಿಂಬಿಸಿದರು. ಹೀಗೆ ಗಣೇಶ, ಬೌದ್ಧ ಧರ್ಮಕ್ಕೆ ಪ್ರವೇಶ ಪಡೆಯುತ್ತಲೇ ಸಮಾನತೆಯ ಪ್ರಚಾರಕನಾಗಿ ರೂಪುಗೊಂಡ ಮತ್ತು ಸೂತ್ರದಲ್ಲಿನ ಮಾತಂಗಿಯ ಪರಿವಾರ ದೇವತೆಯಾಗಿ ಸ್ಥಾನ ಪಡೆದ.
ಬೌದ್ಧ ಧರ್ಮದಲ್ಲಿ ಗಣೇಶನಿಗೆ ಸ್ಥಾನ ಕಲ್ಪಿಸಿದ್ದು ಭಾರತೀಯ ಬೌದ್ಧರೇ ಆದರೂ ಅದನ್ನು ಅಧಿಕೃತವಾಗಿ ಸ್ಥಾಪಿಸಿದ್ದು ಮತ್ತು ಪೂರ್ವ ಏಷ್ಯಾದ್ಯಂತ ಹರಡಿದ್ದು ಚೀನೀಯರು. ‘ಹುವಾನ್‌ಶಿ ತಿಯಾನ್’ ಹೆಸರಿನಿಂದ ಅನುವಾದಗೊಂಡು ಬೌದ್ಧ ಧರ್ಮದೊಡನೆ ಚೀನಾದಲ್ಲಿ ನೆಲೆಯೂರಿದ ಗಣಪ, ಅಲ್ಲಿಯ ಬೌದ್ಧರ ಪಾಲಿಗೆ ವಿಘ್ನನಿವಾರಕ ಮಾತ್ರವಲ್ಲ, ಪರಮಾನಂದ ನೀಡುವ ದೇವತೆಯಾಗಿಯೂ ಸ್ಥಾನ ಪಡೆದ. ಅನಂತರ, ಅಲ್ಲಿಯ ನೆಲಮೂಲದ ದಾವ್ ತತ್ವದಂತೆ ಯಿನ್ – ಯಾನ್ ಸಮತೋಲನ ಸೂಚಿಸುವ ಜೋಡಿ ಗಣಪರನ್ನು ಚಿತ್ರಿಸುವ ರೂಢಿ ಬೆಳೆಯಿತು.
ಚೀನಾದ ಧಮ್ಮ ಪ್ರಚಾರಕ ಕೂಕೈ (ಕೋಬೋ ದೈಶಿ), 9ನೇ ಶತಮಾನದಲ್ಲಿ ಬುದ್ಧನೊಡನೆ ಗಣೇಶನನ್ನೂ ಜಪಾನಿಗೆ ಕೊಂಡೊಯ್ದ. ಜಪಾನ್‌ನಲ್ಲಿ ಶೋತೆನ್ ಮತ್ತು ಕಾಂಗಿತೆನ್ ಹೆಸರಿನಿಂದ ಖ್ಯಾತನಾದ ಗಣಪ, ಯಶಸ್ಸಿನ ದೇವತೆಯಾಗಿ, ಸಮುರಾಯ್‌ಗಳ ಆರಾಧ್ಯನಾಗಿ ಪ್ರಸಿದ್ಧನಾದ. ಕ್ರಮೇಣ ಬೌದ್ಧ ಧರ್ಮದ ಆಸರೆಯಿಂದ ಬಿಡಿಸಿಕೊಂಡು, ಪ್ರತ್ಯೇಕ ದೇವತೆಯಾಗಿ ಹೊರಹೊಮ್ಮಿದ. ಪರಿಣಾಮವಾಗಿ, ಇಂದು ಜಪಾನ್‌ನಲ್ಲಿ ನೂರಾರು ಶೋತೆನ್ ದೇವಾಲಯಗಳನ್ನು ನೋಡಬಹುದು.
ಚೀನೀ ಧಮ್ಮ ಪ್ರಚಾರಕರೊಡನೆ ‘ಹಾನ್‌ಹಿಚಿಯಾನ್’ ಹೆಸರಿನಲ್ಲಿ ಕೊರಿಯಾ ಪ್ರವೇಶಿಸಿದ ಗಣೇಶ, ಅಲ್ಲಿ ವಿದ್ಯಾದೇವತೆಯಾಗಿಯೂ, ಗ್ರಂಥಗಳನ್ನು ರಕ್ಷಿಸುವ ಗ್ರಂಥಪಾಲನಾಗಿಯೂ ಪ್ರಚುರಗೊಂಡ. ಉತ್ತರ ವಿಯೆಟ್ನಾಮ್‌ನಲ್ಲಿ ‘ಹುವಾನ್‌ಶಿ ತಿಯಾನ್’ ಹೆಸರಿನಿಂದ ಪರಿಚಿತನಾಗಿದ್ದ ಗಣಪ, ದಕ್ಷಿಣದಲ್ಲಿ ಭಾರತ ಮೂಲದ ಚಂಪಾ ಸಾಮ್ರಾಜ್ಯದ ಆಡಳಿತದ ಪ್ರಭಾವದಿಂದ ಹಿಂದೂ – ಬೌದ್ಧ ಸಂಪ್ರದಾಯಗಳ ಸಮ್ಮಿಶ್ರಣ ರೂಪದಲ್ಲಿ ಜನಪ್ರಿಯನಾದ.
ಭಾರತದಲ್ಲಿ ಬೌದ್ಧ ಸಿದ್ಧರು ಮತ್ತು ತಾಂತ್ರಿಕ ಸಾಧಕರು ಗಣೇಶನನ್ನು ಸಂಪೂರ್ಣ ಸ್ವತಂತ್ರ ಭಗವಂತನನ್ನಾಗಿ ನೋಡದೆ, ಬೋಧಿಸತ್ವ ಅವಲೋಕಿತೇಶ್ವರನ ಕರುಣಾಮಯಿ ರೂಪವನ್ನಾಗಿ ಮತ್ತು ಧರ್ಮಪಾಲನನ್ನಾಗಿ ಮಾತ್ರ ಕಂಡರು. ಚೀನಾದ ಬೌದ್ಧರೂ ಇದನ್ನೇ ಅನುಸರಿಸಿದರು. ಆದ್ದರಿಂದ ಭಾರತದಲ್ಲಾಗಲೀ, ಚೀನಾ ಮತ್ತು ಕೊರಿಯಾದಲ್ಲಾಗಲೀ ಗಣೇಶನು ಬೌದ್ಧ ವಿಹಾರಗಳ ಗೋಡೆ – ದಾರಂದಗಳಲ್ಲಿ ಮಾತ್ರ ಸ್ಥಾನ ಪಡೆದನೇ ಹೊರತು, ಪ್ರತ್ಯೇಕ ದೇಗುಲಗಳಲ್ಲಿ ಪೂಜೆಗೊಳ್ಳಲಿಲ್ಲ. ಆದರೆ ಜಪಾನೀ ಬೌದ್ಧರು ಗಣೇಶನಿಗೆ ಪ್ರತ್ಯೇಕ ಗುರುತು ಮತ್ತು ಸ್ಥಾನ ಕೊಟ್ಟು, ದೇಗುಲಗಳನ್ನು ಕಟ್ಟಿದರು. ಅದೇ ರೀತಿ ದಕ್ಷಿಣ ವಿಯೆಟ್ನಾಮಿನ ಬೌದ್ಧರೂ ಹಿಂದೂ ಸಂಪ್ರದಾಯದಂತೆ ದೇಗುಲ ನಿರ್ಮಿಸಿ ಗಣೇಶನನ್ನು ಪ್ರತಿಷ್ಠಾಪಿಸಿದರು.
ಹೀಗೆ ವಿಘ್ನ ನಿವಾರಕ ಗಣಪತಿ, ಬೌದ್ಧರಿಂದಾಗಿ ಧರ್ಮಾತೀತ ದೇವತೆಯಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡ.

