ಪಾದರಕ್ಷೆಯೊಳಗಿನ ಕಲ್ಲು ಜೆನ್ ಕ್ಷಣ #16

ನಿಜವಾದ ಶಾಂತಿ ನಮ್ಮ ಸುತ್ತಲಿನ ಪರಿಸ್ಥಿತಿಗಳನ್ನು ಬದಲಾಯಿಸುವುದರಿಂದ ಸಿಗುವುದಿಲ್ಲ. ಅದು ನಮ್ಮೊಳಗೆ ನಾವು ಹೊತ್ತುಕೊಂಡಿರುವ ಸಣ್ಣಸಣ್ಣ ಭಾರಗಳನ್ನು ಇಳಿಸುವುದರಿಂದ ದೊರೆಯುತ್ತದೆ… ।  ಡಾ. ಸಹನಾ ಪ್ರಿಯದರ್ಶಿನಿ

ಒಬ್ಬ ಯುವ ಶಿಷ್ಯನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಝೆನ್ ಮಠಕ್ಕೆ ಬಂದನು.

ಅವನು ಗುರುಗಳಿಗೆ ಹೇಳಿದನು, “ಗುರುಗಳೇ, ನಾನು ಅನೇಕ ಪುಸ್ತಕಗಳನ್ನು ಓದಿದ್ದೇನೆ. ಪ್ರತಿದಿನ ಧ್ಯಾನ ಮಾಡುತ್ತೇನೆ. ಆದರೂ ನನ್ನ ಮನಸ್ಸಿಗೆ ಶಾಂತಿ ಸಿಗುತ್ತಿಲ್ಲ.”

ಗುರುಗಳು ಮುಗುಳ್ನಕ್ಕು ತಲೆಯಾಡಿಸಿದರು.

ಮರುದಿನ ಬೆಳಿಗ್ಗೆ ಅವರು ಶಿಷ್ಯನನ್ನು ಪರ್ವತದ ದಾರಿಯಲ್ಲಿ ನಡೆಯಲು ಕರೆದುಕೊಂಡು ಹೋದರು. ಹೊರಡುವ ಮುನ್ನ, ಗುರುಗಳು ಯಾರಿಗೂ ತಿಳಿಯದಂತೆ ಶಿಷ್ಯನ ಪಾದರಕ್ಷೆಯೊಳಗೆ ಒಂದು ಪುಟ್ಟ ಕಲ್ಲನ್ನು ಹಾಕಿದರು.

ಆರಂಭದಲ್ಲಿ ಶಿಷ್ಯನು ಅದನ್ನು ಲೆಕ್ಕಿಸಲಿಲ್ಲ.

“ಇಷ್ಟು ಚಿಕ್ಕ ಕಲ್ಲು ತಾನೇ,” ಎಂದುಕೊಂಡ. ಸ್ವಲ್ಪ ದೂರ ನಡೆದಂತೆ ಆ ಕಲ್ಲು ಅವನ ಪಾದಕ್ಕೆ ಚುಚ್ಚತೊಡಗಿತು. ಪ್ರತಿ ಹೆಜ್ಜೆಯೂ ನಿಧಾನವಾಗಿ ನೋವನ್ನು ಉಂಟುಮಾಡತೊಡಗಿತು.

ಹಕ್ಕಿಗಳ ಚಿಲಿಪಿಲಿ, ಮರಗಳ ಸೌಂದರ್ಯ, ತಂಪಾದ ಗಾಳಿ….ಆಹ್ಲಾದಕರವಾದ  ವಾತಾವರಣ… ಆದರೆ ಅವನ ಗಮನವೆಲ್ಲ ಪಾದರಕ್ಷೆಯೊಳಗಿನ ಆ ಕಲ್ಲಿನ ಮೇಲೆಯೇ ಇತ್ತು. ಸುಮಾರು ಒಂದು ಗಂಟೆ ನಡೆದ ನಂತರ ಅವನಿಗೆ ಸಹಿಸಲಾಗಲಿಲ್ಲ.

“ಗುರುಗಳೇ,” ಎಂದನು, “ಒಂದು ಕ್ಷಣ ನಿಲ್ಲಬಹುದೇ? ನನ್ನ ಪಾದರಕ್ಷೆಯೊಳಗೆ ಒಂದು ಕಲ್ಲಿದೆ.”

ಗುರುಗಳು ನಗುತ್ತಾ ಹೇಳಿದರು, “ಖಂಡಿತ.”

ಶಿಷ್ಯನು ಪಾದರಕ್ಷೆಯನ್ನು ತೆಗೆದು ಕಲ್ಲನ್ನು ಹೊರಗೆ ಬೀಳಿಸಿದ. ಕ್ಷಣಮಾತ್ರದಲ್ಲಿ ಅವನಿಗೆ ಎಷ್ಟೋ ನಿರಾಳವಾದ ಅನುಭವವಾಯಿತು.

ಅವರು ಮತ್ತೆ ನಡೆಯತೊಡಗಿದರು.

ಪರ್ವತಗಳು ಅದೇ ಇದ್ದವು. ಹಕ್ಕಿಗಳು ಅದೇ ರೀತಿ ಹಾಡುತ್ತಲೇ ಇದ್ದವು. ತಂಪಾದ ಗಾಳಿಯೂ ಅದೇ ಇತ್ತು. ಆದರೆ ಈಗ ಎಲ್ಲವೂ ಅವನಿಗೆ ಶಾಂತವಾಗಿಯೂ ಸುಂದರವಾಗಿಯೂ ಕಾಣಿಸಿತು.

ಗುರುಗಳು ಕೇಳಿದರು,

“ಈಗ ಈ ಜಗತ್ತು ಇನ್ನಷ್ಟು ಸುಂದರವಾಗಿದೆಯೇ?”

ಶಿಷ್ಯನು ಉತ್ತರಿಸಿದನು,

“ಇಲ್ಲ ಗುರುಗಳೇ. ಜಗತ್ತು ಬದಲಾಗಿಲ್ಲ. ಬದಲಾಗಿದ್ದು ನನ್ನ ಪಾದರಕ್ಷೆಯೊಳಗಿನ ಕಲ್ಲು ಮಾತ್ರ.”

ಗುರುಗಳು ಪ್ರೀತಿಯಿಂದ ಅವನತ್ತ ನೋಡಿದರು. “ಅದೇ ಜೀವನದ ಸತ್ಯ.” “ಹೆಚ್ಚಿನ ಜನರು ತಮ್ಮೊಳಗಿನ ಕಲ್ಲನ್ನು ಹೊತ್ತುಕೊಂಡೇ ಜಗತ್ತನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ.”

ಶಿಷ್ಯನಿಗೆ ಅರ್ಥವಾಗಲಿಲ್ಲ.

ಗುರುಗಳು ಮುಂದುವರಿಸಿದರು.

“ದ್ವೇಷ, ಅಸೂಯೆ, ಅಪರಾಧಭಾವ, ಕೋಪ, ಅಹಂಕಾರ ಮತ್ತು ಅಂತ್ಯವಿಲ್ಲದ ಚಿಂತೆ, ಇವೆಲ್ಲವೂ ನಾವು ಮನಸ್ಸಿನೊಳಗೆ ಹೊತ್ತುಕೊಂಡಿರುವ ಕಲ್ಲುಗಳು. ಜಗತ್ತು ನಮ್ಮನ್ನು ಕಾಡುತ್ತಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಅನೇಕ ಬಾರಿ ನಮ್ಮೊಳಗಿನ ಆ ಪುಟ್ಟ ಕಲ್ಲೇ ಪ್ರತಿಯೊಂದು ಹೆಜ್ಜೆಯನ್ನೂ ನೋವಿನಿಂದ ತುಂಬಿಸುತ್ತದೆ.”

ಶಿಷ್ಯನು ಮುಗುಳ್ನಗುತ್ತಾ  ನಮಸ್ಕರಿಸಿದ.

                                  ******************************************************

ನಿಜವಾದ ಶಾಂತಿ ನಮ್ಮ ಸುತ್ತಲಿನ ಪರಿಸ್ಥಿತಿಗಳನ್ನು ಬದಲಾಯಿಸುವುದರಿಂದ ಸಿಗುವುದಿಲ್ಲ. ಅದು ನಮ್ಮೊಳಗೆ ನಾವು ಹೊತ್ತುಕೊಂಡಿರುವ ಸಣ್ಣಸಣ್ಣ ಭಾರಗಳನ್ನು ಇಳಿಸುವುದರಿಂದ ದೊರೆಯುತ್ತದೆ. ಒಂದು ಕೆಟ್ಟ ನೆನಪು, ಹಳೆಯ ದ್ವೇಷ, ಹೇಳದ ಭಯ ಅಥವಾ ಮನಸ್ಸಿನೊಳಗಿನ ನೋವು, ಇವು ನಮ್ಮ ಇಡೀ ಜೀವನದ ಅನುಭವವನ್ನೇ ಬದಲಾಯಿಸಬಲ್ಲವು. ಈ ಒಳಗಿನ “ಕಲ್ಲುಗಳನ್ನು” ನಾವು ತೆಗೆದುಹಾಕಿದಾಗ, ಹೊರಗಿನ ಜಗತ್ತು ಬದಲಾಗದಿದ್ದರೂ ಜೀವನ ಹಗುರವಾಗಿ, ಸುಂದರವಾಗಿ ಕಾಣಲು ಆರಂಭಿಸುತ್ತದೆ.

. ಹಳೆಯ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು

ಒಬ್ಬ ಸ್ನೇಹಿತ ಹಲವು ವರ್ಷಗಳ ಹಿಂದೆ ನೋವಾಗುವ ಮಾತು ಹೇಳಿದ್ದಾನೆ. ಇಂದಿಗೂ ಅದನ್ನೇ ನೆನೆದು ಮನಸ್ಸಿಗೆ ನೋವು ಮಾಡಿಕೊಂಡಿರುತ್ತೇವೆ.

ಕಲ್ಲು: ದ್ವೇಷ.

ಝೆನ್ ಪಾಠ: ಕ್ಷಮಿಸುವುದು  ಎದುರಿನವನಿಗಿಂತ ಮೊದಲು ನಮ್ಮ ಮನಸ್ಸನ್ನೇ ಮುಕ್ತಗೊಳಿಸುತ್ತದೆ.

. ಸದಾ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು

ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ನಮ್ಮ ಬದುಕನ್ನು ಹೋಲಿಸುತ್ತೇವೆ.

ಕಲ್ಲು: ಹೋಲಿಕೆ.

ಝೆನ್ ಪಾಠ: ಹೋಲಿಕೆಯನ್ನು ಬಿಟ್ಟಾಗಲೇ ತೃಪ್ತಿಯ ಜೀವನ ಆರಂಭವಾಗುತ್ತದೆ.

. ವಿಫಲತೆಯ ಭಯ

ತಪ್ಪಾಗಬಹುದು ಎಂಬ ಭಯದಿಂದ ಹೊಸ ಪ್ರಯತ್ನವನ್ನೇ ಮಾಡುವುದಿಲ್ಲ.

ಕಲ್ಲು: ಭಯ.

ಝೆನ್ ಪಾಠ: ದಾರಿ ಸುಲಭವಾದಾಗ ಬೆಳವಣಿಗೆ ಆಗುವುದಿಲ್ಲ; ಭಯವನ್ನು ಬಿಟ್ಟಾಗ ಬೆಳವಣಿಗೆ ಆರಂಭವಾಗುತ್ತದೆ.

. ಕುಟುಂಬದಲ್ಲಿನ ಸಣ್ಣ ತಪ್ಪು ತಿಳುವಳಿಕೆ

ಒಂದು ಸಣ್ಣ ತಪ್ಪು ತಿಳುವಳಿಕೆ ಹಲವು ವರ್ಷಗಳ ಮೌನಕ್ಕೆ ಕಾರಣವಾಗುತ್ತದೆ.

ಕಲ್ಲು: ಅಹಂಕಾರ.

ಝೆನ್ ಪಾಠ: ಒಂದು ಪ್ರಾಮಾಣಿಕ ಮಾತುಕತೆ ಹಲವು ವರ್ಷಗಳ ನೋವನ್ನು ಕರಗಿಸಬಲ್ಲದು.

ಕಡೆಯ  ಮಾತು

ಜೀವನದ ದೊಡ್ಡ ಅಡೆತಡೆಗಳು ಅನೇಕ ಬಾರಿ ನಮ್ಮ ಮುಂದಿರುವ ದಾರಿಯಲ್ಲಿರುವುದಿಲ್ಲ; ನಮ್ಮೊಳಗೆ ನಾವು ಹೊತ್ತುಕೊಂಡಿರುವ ಪುಟ್ಟ ಕಲ್ಲುಗಳಲ್ಲಿರುತ್ತವೆ.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.