ಕಥೆಗಳ 4 ಮೂಲಭೂತ ವಿಧಗಳು

ಈ ಕ್ಷಣದಲ್ಲಿ ನೀವು ಬದುಕುತ್ತಿರುವ ಕಥೆ ಈ ನಾಲ್ಕರಲ್ಲಿ ಯಾವುದು?… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

1972ರಲ್ಲಿ, ಬೋರ್ಹೆಸ್ (Borges) “The Four Cycles” ಎನ್ನುವ ತಮ್ಮ ಪ್ರಬಂಧದಲ್ಲಿ, ಜಗತ್ತಿನಲ್ಲಿ ಮೂಲಭೂತವಾಗಿ ನಾಲ್ಕೇ ವಿಧದ ಕಥೆಗಳಿವೆ ಎಂದು ವಾದಿಸಿದರು. ಪ್ರತಿಯೊಂದು ಪುಸ್ತಕವಾಗಿರಲಿ, ಸಿನಿಮಾವಾಗಿರಲಿ, ಅಥವಾ ಬೆಂಕಿಯ ಸುತ್ತ ಕುಳಿತು ಹೇಳುವ ಯಾವುದೇ ಪುರಾತನ ಕಥೆಯಾಗಿರಲಿ, ಅವುಗಳೆಲ್ಲವೂ ಈ ನಾಲ್ಕು ಮೂಲಭೂತ ಕಥಾ ವಿನ್ಯಾಸಗಳಲ್ಲೊಂದನ್ನು ಅನುಸರಿಸುತ್ತವೆ. ಇದಕ್ಕಿಂತಲೂ ಆಸಕ್ತಿದಾಯಕವಾದ ಸಂಗತಿಯೆಂದರೆ, ಪ್ರತಿಯೊಬ್ಬ ಮನುಷ್ಯನ ಜೀವನವೂ ಇದೇ ನಾಲ್ಕು ಕಥಾ ವಿನ್ಯಾಸಗಳಲ್ಲಿ ಒಂದನ್ನು ಅನುಸರಿಸುತ್ತದೆ ಎಂದು ಅವರು ಸೂಚಿಸುತ್ತಾರೆ. ಏಕೆಂದರೆ, ಕೊನೆಗೂ ನಾವು ಹೇಳುವ ಕಥೆಗಳು ನಾವು ಬದುಕುವ ಜೀವನವನ್ನೇ ಪ್ರತಿಬಿಂಬಿಸುತ್ತವೆ. ಆ ನಾಲ್ಕು ಕಥೆಗಳು ಇವು:

  1. ರಕ್ಷಿಸುವುದು — The Siege

ಅಪಾಯ ಅಥವಾ ಶತ್ರುವಿನಿಂದ ನಮ್ಮದು ಎಂದು ಭಾವಿಸುವ ವ್ಯಕ್ತಿ, ಸ್ಥಳ ಅಥವಾ ಮೌಲ್ಯವನ್ನು ರಕ್ಷಿಸುವುದು. ಉದಾ: Seven Samurai , ಗ್ರಾಮವನ್ನು ದರೋಡೆಕೋರರಿಂದ ರಕ್ಷಿಸುವುದು.

  1. ಮನೆಗೆ ಮರಳುವುದು — The Long Return

ದೂರ ಹೋಗಿ, ಅನೇಕ ಕಷ್ಟಗಳನ್ನು ಎದುರಿಸಿ, ತನ್ನ ಮನೆ, ತನ್ನವರ ಅಥವಾ ತನ್ನ ಮೂಲಸ್ಥಿತಿಗೆ ಮರಳುವ ಪ್ರಯಾಣ. ಉದಾ: Odysseus, ಇಥಾಕಾಗೆ ಮರಳುವುದು.

  1. ಹುಡುಕಾಟ — The Quest

ಯಾವುದೋ ವಸ್ತು, ವ್ಯಕ್ತಿ, ಸತ್ಯ, ಗುರಿ ಅಥವಾ ಜೀವನದ ಅರ್ಥವನ್ನು ಹುಡುಕುವ ಪ್ರಯಾಣ.
ಉದಾ: Frodo , ಉಂಗುರವನ್ನು ನಾಶಮಾಡುವ ಗುರಿಯೊಂದಿಗೆ ಹೊರಡುವುದು.

  1. ತ್ಯಾಗ — The Sacrifice

ಒಂದು ಆದರ್ಶ, ಪ್ರೀತಿ, ನಂಬಿಕೆ ಅಥವಾ ದೊಡ್ಡ ಗುರಿಗಾಗಿ ತನ್ನನ್ನೇ ತಾನು ತ್ಯಾಗ ಮಾಡುವುದು. ಉದಾ: Jesus ಮಾನವಕುಲಕ್ಕಾಗಿ ತನ್ನನ್ನೇ ಅರ್ಪಿಸಿಕೊಳ್ಳುವುದು.

ಬೋರ್ಹೆಸ್ ಅವರ ಉದ್ದೇಶ ಈ ಕಥೆಗಳೆಲ್ಲವೂ ಒಂದೇ ರೀತಿಯಾಗಿ ಪುನರಾವರ್ತನೆಯಾಗುತ್ತಿವೆ, ಆದ್ದರಿಂದ ಅವು ಬೇಸರದವು ಎಂದು ಹೇಳುವುದಲ್ಲ. ಬದಲಾಗಿ, ಅವರು ನಮಗೆ ನೆನಪಿಸುವುದು ಏನೆಂದರೆ, ಮನುಷ್ಯರು ನಾವು ಅಂದುಕೊಳ್ಳುವಷ್ಟು ಪರಸ್ಪರ ಭಿನ್ನರಲ್ಲ. ತತ್ತ್ವಶಾಸ್ತ್ರದಲ್ಲಿ ಇದನ್ನು “Structuralism, ರಚನಾವಾದ ಎಂದು ಕರೆಯಲಾಗುತ್ತದೆ. ಮಾನವ ಜೀವನದ ಆಳದಲ್ಲಿ ಕೆಲವು ಸಾರ್ವತ್ರಿಕ ಮತ್ತು ಕೆಲವು ಸಾಮಾನ್ಯ ರಚನೆಗಳು ಇವೆ ಎನ್ನುವುದು ಇದರ ಮೂಲಭಾವ. ಆದರೆ ಇದರರ್ಥ ಎಲ್ಲ ಮನುಷ್ಯರೂ ಒಂದೇ ರೀತಿಯವರು ಎಂದಲ್ಲ. ನಮ್ಮ ಜೀವನಗಳ ಮೂಲ ವಿನ್ಯಾಸಗಳು ಕೆಲವೇ ಕೆಲವು ಆಗಿರಬಹುದು; ಆದರೆ ಆ ಜೀವನಗಳ ವಿವರಗಳು ಮಾತ್ರ ಅನಂತ ವೈವಿಧ್ಯತೆಯಿಂದ ಕೂಡಿರುತ್ತವೆ.

ನಾವೆಲ್ಲರೂ ನಮಗೆ ಅಮೂಲ್ಯವಾದುದನ್ನು ರಕ್ಷಿಸಲು ಬಯಸುತ್ತೇವೆ. ನಾವೆಲ್ಲರೂ ಯಾವುದೋ ಒಂದು ರೀತಿಯಲ್ಲಿ “ಮನೆಗೆ” ಮರಳಲು ಬಯಸುತ್ತೇವೆ.
ನಾವೆಲ್ಲರೂ ನಮ್ಮ ಜೀವನದಲ್ಲಿ ಯಾವುದೋ ಕಳೆದುಹೋದ ವಸ್ತುವನ್ನು, ಅರ್ಥವನ್ನು ಅಥವಾ ಸತ್ಯವನ್ನು ಹುಡುಕುತ್ತಲೇ ಇರುತ್ತೇವೆ.
ಮತ್ತು ಕೆಲವೊಮ್ಮೆ… ನಾವು ಏನನ್ನೂ ಮಾಡಲು ಸಾಧ್ಯವಾಗದೆ, ಜಗತ್ತು ನಮ್ಮ ಕಣ್ಣೆದುರೇ ಬೆಂಕಿಯಲ್ಲಿ ಉರಿದು ಕುಸಿಯುವುದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕಾಗುತ್ತದೆ. ಹೀಗಾಗಿ, ಇದು ಒಂದು ಕುತೂಹಲಕರವಾದ ಅಥವಾ ಬಹುಶಃ ಸ್ವಲ್ಪ ದುಃಖಕರವಾದ ಪ್ರಶ್ನೆ:

ಈ ಕ್ಷಣದಲ್ಲಿ ನೀವು ಬದುಕುತ್ತಿರುವ ಕಥೆ ಈ ನಾಲ್ಕರಲ್ಲಿ ಯಾವುದು?

ನೀವು ರಕ್ಷಿಸುತ್ತಿರುವಿರಾ?
ಮನೆಗೆ ಹಿಂದಿರುಗುವ ಪ್ರಯಾಣದಲ್ಲಿದ್ದೀರಾ?
ಯಾವುದನ್ನೋ ಹುಡುಕುತ್ತಿದ್ದೀರಾ?
ಅಥವಾ ಯಾವುದೋ ಒಂದು ದೊಡ್ಡ ಆದರ್ಶಕ್ಕಾಗಿ ನಿಮ್ಮನ್ನೇ ನೀವು ತ್ಯಾಗ ಮಾಡಿಕೊಳ್ಳುತ್ತಿದ್ದೀರಾ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.