ಸಂಗೀತದಾಚೆಗೆ ಒಂದೇ ಹೆಜ್ಜೆ – ಧ್ಯಾನ

ಹೇಗೆ ಬೆಳಕು ಮತ್ತು ಕತ್ತಲೆ ಒಂದಕ್ಕೊಂದು ಜೊತೆಗಿರುವವೋ, ಹಾಗೆಯೇ ಶಬ್ದ ಮತ್ತು ಮೌನವೂ ಜೊತೆಯಲ್ಲಿವೆ. ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದು ಒಂದೇ ಶಕ್ತಿಯ ಎರಡು ಮುಖಗಳು… ~ ಓಶೋ / The boat to the other shore is Love । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಸಂಗೀತವು ಧ್ಯಾನಕ್ಕೆ ಅತ್ಯಂತ ಸಮೀಪವಾದದ್ದು. ಸಂಗೀತದಾಚೆಗೆ ಒಂದೇ ಹೆಜ್ಜೆ ಇಟ್ಟರೆ ನೀವು ಧ್ಯಾನದಲ್ಲಿರುತ್ತೀರಿ. ಮತ್ತು ಸಂಗೀತವು ಅತ್ಯಂತ ಸುಂದರವಾದ ದ್ವಾರ. ಸಂಗೀತವನ್ನು ಎಷ್ಟು ಸಂಪೂರ್ಣವಾಗಿ ಆಲಿಸಬೇಕು ಎಂದರೆ, ಆಲಿಸುವವನೇ ಆ ಆಲಿಸುವಿಕೆಯಲ್ಲಿ ಕರಗಿಹೋಗಬೇಕು. ಅಲ್ಲಿ ಸಂಗೀತ ಮಾತ್ರ ಇರಬೇಕು; ನೀವು ಇರಬಾರದು. ನೀವು ಒಂದು ಶೂನ್ಯತೆಯಾಗಬೇಕು, ಮತ್ತು ಸಂಗೀತವು ಆ ಶೂನ್ಯತೆಯನ್ನು ತುಂಬಬೇಕು.

ಅಲ್ಲಿ ವೀಕ್ಷಕನೂ ಇರಬಾರದು; ಸಂಗೀತವನ್ನು ಮೆಚ್ಚಲು, ತೀರ್ಮಾನಿಸಲು ಅಥವಾ ಅಳೆಯಲು ಯಾರೂ ಇರಬಾರದು. ಯಾವುದೇ ತೀರ್ಪಿಲ್ಲದೆ, ಯಾವುದೇ ಮೌಲ್ಯಮಾಪನವಿಲ್ಲದೆ ಸಂಗೀತವನ್ನು ಆಲಿಸಿ. ಆಗ ಅದು ನಿಮ್ಮ ಅತ್ಯಂತ ಆಳವಾದ ಧ್ಯಾನವಾಗಿ ಪರಿಣಮಿಸುತ್ತದೆ. ಯಾವುದೇ ಸಂಗೀತವಾದರೂ ಸಾಕು. ನಿಧಾನವಾಗಿ, ನಿಧಾನವಾಗಿ, ಹೇಗೆ ಆಲಿಸಬೇಕು ಎಂಬ ಆ ಕೌಶಲ್ಯ ನಿಮಗೆ ತಿಳಿಯತೊಡಗುತ್ತದೆ. ಆಗ ಯಾವುದೇ ಶಬ್ದವಾದರೂ ಸಾಕಾಗುತ್ತದೆ. ಹೌದು, ಈಗ ಹಾದುಹೋಗುತ್ತಿರುವ ರೈಲಿನ ಶಬ್ದವೂ ನಿಮ್ಮೊಳಗೆ ಮೌನವನ್ನು ಸೃಷ್ಟಿಸಲು ಸಾಕಾಗುತ್ತದೆ. ಏಕೆಂದರೆ ಶಬ್ದವು ಒಂದು ಧ್ರುವ; ಮೌನವು ಅದೇ ಶಕ್ತಿಯ ಮತ್ತೊಂದು ಧ್ರುವ. ಸರಿಯಾಗಿ ಆಲಿಸುವುದು ಹೇಗೆ ಎನ್ನುವುದು ನಿಮಗೆ ತಿಳಿದಿದ್ದರೆ, ಪ್ರತಿಯೊಂದು ಶಬ್ದವೂ ನಿಮ್ಮೊಳಗೆ ಮೌನವನ್ನು ಹುಟ್ಟಿಸಬಲ್ಲದು.

ಹೇಗೆ ಬೆಳಕು ಮತ್ತು ಕತ್ತಲೆ ಒಂದಕ್ಕೊಂದು ಜೊತೆಗಿರುವವೋ, ಹಾಗೆಯೇ ಶಬ್ದ ಮತ್ತು ಮೌನವೂ ಜೊತೆಯಲ್ಲಿವೆ. ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದು ಒಂದೇ ಶಕ್ತಿಯ ಎರಡು ಮುಖಗಳು.
ಆದ್ದರಿಂದ, ಯಾರಾದರೂ ಸರಿಯಾಗಿ ಆಲಿಸುವುದನ್ನು ಕಲಿತರೆ, ಪ್ರತಿಯೊಂದು ಶಬ್ದವೂ ಅವರೊಳಗೆ ಮೌನವನ್ನು ಪ್ರಚೋದಿಸುತ್ತದೆ. ಇದೇ ಸಂಗೀತದ ಸೌಂದರ್ಯ. ಮೊದಲ ಬಾರಿಗೆ ಸಂಗೀತವನ್ನು ಈ ರೀತಿಯಾಗಿ ಆಲಿಸಿದಾಗ, ಒಂದು ಅದ್ಭುತವಾದ ಸಂಗತಿಯನ್ನು ನೀವು ಅರಿಯುತ್ತೀರಿ. ಆಲಿಸುವಾಗ ನೀವು ಮೌನವಾಗುತ್ತೀರಿ. ನಂತರ ನಿಧಾನವಾಗಿ ಇತರ ಶಬ್ದಗಳೊಂದಿಗೆಯೂ ನೀವು ಪ್ರಯತ್ನಿಸಬಹುದು.

ಮತ್ತು ಒಂದು ದಿನ, ಏಕಾಏಕಿ, ನೀವು ಜನಜಂಗುಳಿಯ ಮಾರುಕಟ್ಟೆಯ ಮಧ್ಯದಲ್ಲಿ ನಿಂತಿರುತ್ತೀರಿ. ಸುತ್ತಲೂ ಎಲ್ಲೆಡೆ ಗದ್ದಲ, ಶಬ್ದ, ಗಲಾಟೆ ಇರುತ್ತದೆ. ಆದರೆ ನೀವು ಮಾತ್ರ ಆಳವಾದ ಮೌನದಲ್ಲಿರುತ್ತೀರಿ, ಚಂಡಮಾರುತದ ಮಧ್ಯದಲ್ಲಿರುವ ನಿಶ್ಚಲ ಕೇಂದ್ರದಂತೆ.

ಇದೇ ನನ್ನ ಸನ್ಯಾಸಿಗಳಿಗೆ ಇರುವ ಸಂದೇಶ:

ಅವರು ಅಸ್ತಿತ್ವದ ಮತ್ತು ಜೀವನದ ಬಿರುಗಾಳಿಯ ಮಧ್ಯೆಯೇ ಮೌನವಾಗಿರಬೇಕು. ಅವರು ಪಲಾಯನವಾದಿಗಳಾಗಬಾರದು. ಜೀವನದಿಂದ ದೂರ ಓಡಿ ಹೋಗಬಾರದು. ಅವರು ಮಾರುಕಟ್ಟೆಯಲ್ಲಿಯೇ ಧ್ಯಾನಿಸಬೇಕು. ಅವರು ತಮ್ಮ ಜೀವನವನ್ನೇ ಪರಿವರ್ತಿಸಬೇಕು. ಮತ್ತು ಪರಿವರ್ತನೆಗೆ ವೈರುಧ್ಯದ ಸವಾಲು ಅಗತ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.