ಸಂಗ್ರಹ – ಭಾವಾನುವಾದ : ಚೇತನಾ ತೀರ್ಥಹಳ್ಳಿ
ಮಹಾಕಾಳಿ: ಮಹಾದೇವ, ಸಾಧಕರು ದ್ವೈತಾದ್ವೈತದ ಗೊಂದಲಗಳನ್ನು ಮೀರಿ, ಅನಂತವಾದ ಚೈತನ್ಯದ ಆಗಸದಲ್ಲಿ ವಿಲೀನವಾಗುವ ಬಗೆ ಯಾವುದು?
ಮಹಾದೇವ: ನಾನು ನಿರಾಕಾರ, ನಿಶ್ಚಲ ಮತ್ತು ಶೂನ್ಯ. ನಿನ್ನ ಸಾಕಾರ ರೂಪಗಳು, ನಿನ್ನ ಉಸಿರಾಟದ ಗತಿ ಹಾಗೂ ನಿನ್ನ ಸೃಷ್ಟಿ ಮತ್ತು ಸಂಹಾರದ ಲಯಗಳ ಕುರಿತು ಧ್ಯಾನಿಸುವ ಸಾಧಕರು ದ್ವೈತದ ಭೇದಭಾವದ ಪರದೆಯನ್ನು ಸೀಳಿ, ನೀನು ಮತ್ತು ನಾನು ಒಂದೇ ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ನನ್ನನ್ನು ನೋಡಬೇಕೆಂದರೆ ನನ್ನನ್ನು ಹೊಂದಬೇಕೆಂದರೆ, ನಿನ್ನ ಮೂಲಕವೇ ಹಾದು ಬರಬೇಕು. ನೀನು ನನ್ನ ದ್ವಾರ. ಮಹಾಕಾಳಿ, ನೀನೇ ನನ್ನನ್ನು ಹಿಡಿದಿಡುವ ಪಾತ್ರ. ಜ್ವಾಲೆಯನ್ನು ಅದರ ಉಷ್ಣತೆಯಿಂದ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಪ್ರಜ್ಞೆಯನ್ನು (ಚೈತನ್ಯವನ್ನು) ಅದರ ಶಕ್ತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ.

