ಮಹತ್ವದ ದುಃಖ

ಇದು ನಿಮ್ಮೊಳಗಿನ ಖಾಲಿತನವನ್ನು ಅನುಭವಿಸುವ ಸಮಯವಲ್ಲ. ಇದು ನಿಮ್ಮೊಳಗಿನ ವಿಶಾಲತೆಯನ್ನು ಅನುಭವಿಸುವ ಸಮಯ. ನೀವು ‘ಖಾಲಿತನ’ ಎಂದು ಕರೆಯುತ್ತಿರುವುದು ನಿಜವಾಗಿ ವೈಶಾಲ್ಯ ~ Osho / The rebellious spirit

ನಾನು ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಾಗ, ಒಂದು ಕಡೆ ಅಪಾರವಾದ ನಿರಾಶಾವಾದದ ಪೂರ್ವಾಗ್ರಹಗಳನ್ನೂ, ಮತ್ತೊಂದು ಕಡೆ ಅಪಾರವಾದ ಭರವಸೆಯನ್ನು ಹೊತ್ತುಕೊಂಡು ಬಂದಿದ್ದೆ. ಈಗ ನನ್ನ ಎಲ್ಲ ನಿರೀಕ್ಷೆಗಳು ಮತ್ತು ನಕಾರಾತ್ಮಕತೆಗಳು ಕಣ್ಮರೆಯಾಗಿವೆ. ಆದರೆ ಒಂದು ಮಹತ್ತರವಾದ ದುಃಖವನ್ನು ಮಾತ್ರ ಹೊರತುಪಡಿಸಿ, ನನ್ನೊಳಗೆ ಮತ್ತೇನೂ ಉಳಿದಿಲ್ಲ ಎನ್ನುವಂತೆ ನನಗೆ ಅನಿಸುತ್ತಿದೆ.

ಈ ದುಃಖ ಬಹಳ ಮಹತ್ವದ್ದು.

ಮಾನವ ಮನೋವಿಜ್ಞಾನದಲ್ಲಿ ಅರ್ಥಮಾಡಿಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಸಂಗತಿಗಳಲ್ಲಿ ಇದೂ ಒಂದು. ನಿಮ್ಮ ದುಃಖ ಕಣ್ಮರೆಯಾದರೂ, ನಿಮಗೆ ದುಃಖವಾಗಬಹುದು.
ಏಕೆಂದರೆ ಎಷ್ಟೋ ವರ್ಷಗಳಿಂದ ನೀವು ಆ ದುಃಖಕ್ಕೆ ಒಗ್ಗಿಕೊಂಡಿದ್ದೀರಿ. ಅದು ಇಷ್ಟು ವರ್ಷಗಳಿಂದ ನಿಮ್ಮ ಅತ್ಯಂತ ಪರಿಚಿತ ಸಂಗಾತಿಯಾಗಿತ್ತು. ಆದ್ದರಿಂದ ಹಳೆಯ ದುಃಖವು ಕಣ್ಮರೆಯಾದಾಗ, ನಿಮಗೆ ಒಳಗೆ ಒಂದು ಶೂನ್ಯತೆ ಉಂಟಾದಂತೆ ಅನಿಸುತ್ತದೆ.

ಹಳೆಯ ನೋವು ಇಲ್ಲ.
ಹಳೆಯ ವೇದನೆ ಇಲ್ಲ.
ಹಳೆಯ ಸಂಕಟವೂ ಇಲ್ಲ.

ನಿಮ್ಮ ದುಃಖಭರಿತ ಭೂತಕಾಲದೊಂದಿಗೆ ನೀವು ನಿರಂತರವಾಗಿ ತೊಡಗಿಸಿಕೊಂಡಿದ್ದಿರಿ. ಈಗ ಇದ್ದಕ್ಕಿದ್ದಂತೆ ನಿಮ್ಮೊಳಗೆ ಏನೂ ಇಲ್ಲದಂತೆ ಅನಿಸುತ್ತದೆ. ಆಗ ಒಂದು ದುಃಖ ಆವರಿಸುತ್ತದೆ. ಒಬ್ಬ ಸ್ನೇಹಿತ ನಿಮ್ಮನ್ನು ಬಿಟ್ಟುಹೋದಾಗ ಉಂಟಾಗುವ ಅದೇ ರೀತಿಯ ದುಃಖ. ಇದನ್ನು ಒಮ್ಮೆ ನೀವು ಅರ್ಥಮಾಡಿಕೊಂಡರೆ, ನೀವು ಒಂದು ಆಂತರಿಕ ಪರಿವರ್ತನೆಯ ಮೂಲಕ ಸಾಗಬಹುದು.

ಇದು ನಿಮ್ಮೊಳಗಿನ ಖಾಲಿತನವನ್ನು ಅನುಭವಿಸುವ ಸಮಯವಲ್ಲ. ಇದು ನಿಮ್ಮೊಳಗಿನ ವಿಶಾಲತೆಯನ್ನು ಅನುಭವಿಸುವ ಸಮಯ. ನೀವು ‘ಖಾಲಿತನ’ ಎಂದು ಕರೆಯುತ್ತಿರುವುದು ನಿಜವಾಗಿ ವೈಶಾಲ್ಯ.

ಹಳೆಯ ಸ್ನೇಹಿತರು ಹೋಗಿದ್ದಾರೆ.
ಹಳೆಯ ಪೂರ್ವಗ್ರಹಗಳು ಹೋಗಿವೆ.
ಹಳೆಯ ನಕಾರಾತ್ಮಕತೆ ಹೋಗಿದೆ.
ಹಳೆಯ ಸ್ಥಿರವಾದ ಕಲ್ಪನೆಗಳು ಮತ್ತು ಅಭಿಪ್ರಾಯಗಳು ಹೋಗಿವೆ.

ಈಗ ನೀವು ವಿಶಾಲರಾಗಿದ್ದೀರಿ.

ಮೊದಲಿಗೆ ಆ ವಿಶಾಲತೆಯಲ್ಲಿ ಇರುವುದು ವಿಚಿತ್ರವಾಗಿ ಅನಿಸಬಹುದು. ಏಕೆಂದರೆ ಅದಕ್ಕೆ ನೀವು ಇನ್ನೂ ಒಗ್ಗಿಕೊಂಡಿಲ್ಲ. ಆದರೆ ನೀವು ನಿಧಾನವಾಗಿ ಅದಕ್ಕೆ ಒಗ್ಗಿಕೊಂಡಂತೆ, ಈ ವಿಶಾಲತೆಯೇ ದೇವರ ದೇವಾಲಯವಾಗುತ್ತದೆ. ಆದ್ದರಿಂದ ಅದನ್ನು ‘ಖಾಲೀತನ’ ಎಂದು ಕರೆಯಬೇಡಿ. ಪದಗಳು ಬಹಳ ಮಹತ್ವವನ್ನು ಹೊಂದಿವೆ. ನೀವು ಯಾವುದಕ್ಕೆ ಯಾವ ಹೆಸರನ್ನು ಕೊಡುತ್ತೀರೋ, ಕ್ರಮೇಣ ಅದೇ ರೀತಿಯಲ್ಲಿ ಅದನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.