ಒಂದು ಕ್ಷಣದ ಜಾಗೃತ ಜೀವನವೇ ಮೇಲು : ಬುದ್ಧ – ಪಟಾಚಾರಾ ನಡುವಿನ ಸಂವಾದ

ದುಃಖಿಸದಿರು ಪಟಾಚಾರಾ, ಈ ಸಂಸಾರದಲ್ಲಿ ನೀನು ನಿನ್ನ ಪ್ರೀತಿಪಾತ್ರರ ಸಾವಿಗೆ ಸುರಿಸಿರುವ ಕಣ್ಣೀರು ನಾಲ್ಕು ಮಹಾಸಮುದ್ರಗಳ ನೀರಿಗಿಂತಲೂ ಹೆಚ್ಚಾಗಿದೆ. ಹುಟ್ಟು ಮತ್ತು ಸಾವು ಈ ಜಗತ್ತಿನ ನಿಯಮ. ಇದರಿಂದ ಯಾರೂ ಯಾರನ್ನೂ ರಕ್ಷಿಸುವುದು ಅಸಾಧ್ಯ. ಬುದ್ಧನ ಮಾತುಗಳಿಂದ ಪಟಾಚಾರಳ ಮನಸ್ಸು ಶಾಂತವಾಯಿತು. ಧಮ್ಮಕ್ಕೆ ಶರಣಾಗಿ ಬಿಕ್ಖುಣಿ ಸಂಘಕ್ಕೆ ಸೇರಿಕೊಂಡಳು । ಸಂಗ್ರಹ – ಅನುವಾದ : ಚೇತನಾ ತೀರ್ಥಹಳ್ಳಿ (ಆಧಾರ : ಧಮ್ಮಪದದ 113ನೇ ಗಾಥೆ)

ಪಟಾಚಾರಾ ಹೆಸರಿನ ಒಬ್ಬ ಹೆಣ್ಣುಮಗಳು ತನ್ನ ಪತಿ, ಇಬ್ಬರು ಮಕ್ಕಳು, ತಂದೆ-ತಾಯಿ ಮತ್ತು ಸಹೋದರರನ್ನು ಒಂದೇ ದಿನದಲ್ಲಿ ಕಳೆದುಕೊಂಡು ತೀವ್ರ ದುಃಖದಿಂದ ಹುಚ್ಚಳಾಗಿ ಅಲೆಯುತ್ತಿದ್ದ ಪಟಾಚಾರಳು, ಜೇತವನ ವಿಹಾರದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಬುದ್ಧನ ಬಳಿ ಬಂದಳು. ಶೋಕದಿಂದ ಕಂಗೆಟ್ಟು ಮೈಮೇಲಿನ ಬಟ್ಟೆ ಜಾರಿ ಹೋಗಿದ್ದನ್ನೂ ಗಮನಿಸದೆ ನಡೆಯುತ್ತಿದ್ದ ಅವಳನ್ನು ಅಲ್ಲಿದ್ದ ಜನರು ತಡೆಯಲು ಯತ್ನಿಸಿದರು. ಆಗ ಬುದ್ಧನು ಕರುಣೆಯಿಂದ, “ಅವಳನ್ನು ತಡೆಯಬೇಡಿ, ಹತ್ತಿರ ಬರಲು ಬಿಡಿ” ಎಂದು ಹೇಳಿ ತನ್ನ ಬಳಿಗೆ ಕರೆಸಿಕೊಂಡನು. ಅವಳು ಹತ್ತಿರ ಬಂದಾಗ ಅತ್ಯಂತ ಮೃದುವಾದ ಧ್ವನಿಯಲ್ಲಿ “ಮಗಳೇ, ನಿನ್ನ ಪ್ರಜ್ಞೆಯನ್ನು ಮರಳಿ ಪಡೆದುಕೋ” ಅಂದನು. ಅವನ ಮಾತುಗಳಿಂದ ಎಚ್ಚೆತ್ತ ಪಟಾಚಾರ, ಅವನ ಪಾದಕ್ಕೆರಗಿ ತನ್ನ ದುಃಖ ತೋಡಿಕೊಂಡಳು.

ಪಟಾಚಾರಾ: ಭಗವನ್, ನನಗೆ ಯಾರೂ ಇಲ್ಲ. ಒಂದು ನದಿ ಪ್ರವಾಹದಲ್ಲಿ ನನ್ನ ಕಿರಿಯ ಮಗು ಕೊಚ್ಚಿಹೋಯಿತು, ನನ್ನ ಹಿರಿಯ ಮಗನನ್ನು ಹದ್ದು ಹೊತ್ತೊಯ್ದಿತು. ದಾರಿಯಲ್ಲಿ ಹಾವು ಕಚ್ಚಿ ಗಂಡನೂ ತೀರಿಕೊಂಡ. ಬಿರುಗಾಳಿಗೆ ಮನೆ ಕುಸಿದು ನನ್ನ ಹೆತ್ತವರು ಮತ್ತು ಒಡಹುಟ್ಟಿದವರು ಸಾವನ್ನಪ್ಪಿದರು. ನಾನೀಗ ಸಂಪೂರ್ಣ ಅನಾಥೆ.

ಬುದ್ಧ: ದುಃಖಿಸದಿರು ಪಟಾಚಾರಾ, ಈ ಸಂಸಾರದಲ್ಲಿ ನೀನು ನಿನ್ನ ಪ್ರೀತಿಪಾತ್ರರ ಸಾವಿಗೆ ಸುರಿಸಿರುವ ಕಣ್ಣೀರು ನಾಲ್ಕು ಮಹಾಸಮುದ್ರಗಳ ನೀರಿಗಿಂತಲೂ ಹೆಚ್ಚಾಗಿದೆ. ಹುಟ್ಟು – ಸಾವುಗಳು ಸೃಷ್ಟಿಯ ನಿಯಮ. ಇದರಿಂದ ಯಾರೂ ಯಾರನ್ನೂ ರಕ್ಷಿಸಲಾಗದು.

ಬುದ್ಧನ ಮಾತುಗಳಿಂದ ಪಟಾಚಾರಳ ಮನಸ್ಸು ಶಾಂತವಾಯಿತು. ಧಮ್ಮಕ್ಕೆ ಶರಣಾಗಿ ಬಿಕ್ಖುಣಿ ಸಂಘಕ್ಕೆ ಸೇರಿಕೊಂಡಳು.

ಒಮ್ಮೆ ಪಟಾಚಾರಾ ಕಾಲು ತೊಳೆದುಕೊಳ್ಳುತ್ತಿದ್ದಾಗ ನೀರು ಭೂಮಿಯಲ್ಲಿ ಹರಿದು ಇಂಗಿಹೋಗುವುದನ್ನು ನೋಡಿದಳು. ನೀರಿನ ಕೆಲವು ಧಾರೆಗಳು ಸ್ವಲ್ಪ ದೂರ ಹೋಗಿ ಇಂಗಿದರೆ, ಇನ್ನು ಕೆಲವು ಧಾರೆಗಳು ಹತ್ತಿರದಲ್ಲೇ ಇಂಗಿಹೋದವು. ಅದನ್ನು ಕಂಡು ಅವಳಿಗೆ ತನ್ನ ಮಕ್ಕಳ, ಗಂಡ ಮತ್ತು ಹೆತ್ತವರ ಸಾವು ನೆನಪಾಯಿತು. ಬದುಕೂ ಹೀಗೇ… ಕೆಲವರು ಬೇಗ ಸಾಯುತ್ತಾರೆ, ಕೆಲವರು ತಡವಾಗಿ ಸಾಯುತ್ತಾರೆ; ಎಲ್ಲವೂ ಅನಿತ್ಯ ಎಂದು ಆಕೆಗೆ ಅನ್ನಿಸಿತು.

ಆಗ ಬುದ್ಧನು ಅವಳ ಮುಂದೆ ಕಾಣಿಸಿಕೊಂಡು, “ಪಟಾಚಾರಾ, ನಿನ್ನ ಆಲೋಚನೆ ಸರಿಯಾಗಿದೆ. ಹುಟ್ಟು ಸಾವಿನ ಸತ್ಯ*ವರಿಯದೆ ನೂರು ವರ್ಷ ಜೀವಿಸುವುದಕ್ಕಿಂತ, ಅದನ್ನು ಅರಿತು ಬದುಕುವ ಒಂದು ಕ್ಷಣದ ಜಾಗೃತ ಜೀವನವೇ ಮೇಲು” ಎಂದು ಹೇಳಿದನು. ಇದನ್ನು ಕೇಳಿದ ಕೂಡಲೇ ಪಟಾಚಾರಳಿಗೆ ಸಂಪೂರ್ಣ ಜ್ಞಾನೋದಯವಾಯಿತು.


*ಗಾಥೆಯಲ್ಲಿ ಬುದ್ಧನು ಪಂಚಸ್ಕಂಧಗಳು ಎಂದು ಹೇಳುತ್ತಾನೆ. ಬೌದ್ಧ ದರ್ಶನದ ಪ್ರಕಾರ, ನಾವು ಯಾವುದನ್ನು ‘ನಾನು’, ‘ನನ್ನ ಆತ್ಮ’ ಅಥವಾ ‘ವ್ಯಕ್ತಿತ್ವ’ ಎಂದು ಕರೆಯುತ್ತೇವೆಯೋ, ಅದು ಶಾಶ್ವತವಾದದ್ದಲ್ಲ. ಬದಲಿಗೆ ಅದು ನಿರಂತರವಾಗಿ ಬದಲಾಗುವ ಐದು ತತ್ವ ಅಥವಾ ಸ್ಕಂಧಗಳ (ರೂಪ, ವೇದನಾ, ಸಂಜ್ಞಾ, ಸಂಸ್ಕಾರ ಮತ್ತು ವಿಜ್ಞಾನ) ಮೊತ್ತವಾಗಿದೆ. ಬುದ್ಧನು ಈ ಐದೂ ಸ್ಕಂಧಗಳು ಕ್ಷಣಕ್ಷಣಕ್ಕೂ ಹುಟ್ಟುತ್ತಾ, ಅಳಿಯುತ್ತಾ (ಉದಯ-ವ್ಯಯ) ಸಾಗುತ್ತವೆ ಎಂದು ಬೋಧಿಸುತ್ತಾನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.