ಮೌನದ ಸ್ಫೋಟ !

ಮತ್ತು ಸಾಕ್ಷಿಭಾವ ನೂರು ಪ್ರತಿಶತವಾಗಿದ್ದಾಗ, ಸಂಪೂರ್ಣವಾಗಿ, ಪರಿಪೂರ್ಣ ಜಾಗೃತಿಯೊಂದಿಗೆ ನೀವು ಅಲ್ಲಿ ಇದ್ದಾಗ, ಆ ಸಂಚಾರವೇ ಮಾಯವಾಗುತ್ತದೆ. ಆ ಖಾಲಿಯಾದ ಮನಸ್ಸನ್ನು ನೋಡುವುದೇ ನಿಜವಾದ ಮೌನ ~ ಓಶೋ (The Sound of One Hand Clapping) । ಕನ್ನಡಕ್ಕೆ : ಚಿದಂಬರ ನರೇಂದ್ರ

ನೀವು ನಿಮ್ಮ ಮನಸ್ಸಿನ ಗದ್ದಲವನ್ನು ಗಮನಿಸಲು ಪ್ರಾರಂಭಿಸಿದಾಗ ನಿಜವಾದ ಮೌನ ಸಂಭವಿಸುತ್ತದೆ.

ಮನಸ್ಸಿನಲ್ಲಿ ನಿರಂತರವಾಗಿ ಒಂದು ರೀತಿಯ ಸಂಚಾರ ನಡೆಯುತ್ತಿರುತ್ತದೆ ; ಆಲೋಚನೆಗಳು, ನೆನಪುಗಳು, ಕಲ್ಪನೆಗಳು, ಸಾವಿರಾರು ಆಸೆಗಳು…

ಮನಸ್ಸು ಯಾವಾಗಲೂ ಎಲ್ಲ ದಿಕ್ಕುಗಳಲ್ಲೂ ಓಡಾಡುತ್ತಿರುವ ಜನಸಂದಣಿಯಂತಿರುತ್ತದೆ.

ನೀವು ರಸ್ತೆಯ ಬದಿಯಲ್ಲಿ ನಿಂತು, ಆ ಸಂಚಾರವನ್ನು ಸುಮ್ಮನೆ ಗಮನಿಸುತ್ತಾ ಇರಬಲ್ಲಿರಾದರೆ, ಯಾವುದನ್ನೂ ಮೌಲ್ಯಮಾಪನ ಮಾಡದೆ, ಯಾವ ತೀರ್ಪನ್ನೂ ನೀಡದೆ, ಏನನ್ನೂ ಖಂಡಿಸದೆ, ಯಾವುದನ್ನೂ ಹೊಗಳದೆ…

ನದಿಯ ದಡದಲ್ಲಿ ಕುಳಿತು, ನದಿಯ ನೀರು ಹರಿಯುವುದನ್ನು ಯಾವುದೇ ಸಂಬಂಧವಿಲ್ಲದೆ, ಯಾವುದೇ ಹಸ್ತಕ್ಷೇಪವಿಲ್ಲದೆ, ಕೇವಲ ಸಾಕ್ಷಿಯಾಗಿ ನೋಡುತ್ತಿರುವಂತೆ…

ಆಗ ಒಂದು ಅದ್ಭುತ ಸಂಭವಿಸುತ್ತದೆ.

ನಿಮ್ಮ ಸಾಕ್ಷಿಭಾವ ಆಳವಾಗುತ್ತಾ ಹೋದಂತೆ, ಮನಸ್ಸಿನ ರಸ್ತೆಯಲ್ಲಿರುವ ಆಲೋಚನೆಗಳ ಸಂಚಾರವೂ ಅದೇ ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ.

ಸಾಕ್ಷಿಭಾವ ಶೂನ್ಯವಾಗಿದ್ದಾಗ, ಮನಸ್ಸಿನ ಸಂಚಾರ ನೂರು ಪ್ರತಿಶತ, ಅದು ಅತ್ಯಂತ ಗದ್ದಲದ ಸಮಯ.

ಸಾಕ್ಷಿಭಾವ ಐವತ್ತು ಪ್ರತಿಶತವಾಗಿದ್ದಾಗ, ಸಂಚಾರವೂ ಐವತ್ತು ಪ್ರತಿಶತ.

ಸಾಕ್ಷಿಭಾವ ತೊಂಬತ್ತೊಂಬತ್ತು ಪ್ರತಿಶತವಾಗಿದ್ದಾಗ, ಸಂಚಾರ ಕೇವಲ ಒಂದು ಪ್ರತಿಶತ.

ಮತ್ತು ಸಾಕ್ಷಿಭಾವ ನೂರು ಪ್ರತಿಶತವಾಗಿದ್ದಾಗ, ಸಂಪೂರ್ಣವಾಗಿ, ಪರಿಪೂರ್ಣ ಜಾಗೃತಿಯೊಂದಿಗೆ ನೀವು ಅಲ್ಲಿ ಇದ್ದಾಗ, ಆ ಸಂಚಾರವೇ ಮಾಯವಾಗುತ್ತದೆ.

ಆ ಖಾಲಿಯಾದ ಮನಸ್ಸನ್ನು ನೋಡುವುದೇ ನಿಜವಾದ ಮೌನ.

ಆಗ ನಿಮ್ಮ ಅಸ್ತಿತ್ವದ ಅತ್ಯಂತ ಆಳವಾದ ಕೇಂದ್ರದಿಂದ ಮೌನವು ಸ್ಫೋಟದಂತೆ ಹೊರಹೊಮ್ಮುತ್ತದೆ.

ಅದು ತನ್ನ ದಳಗಳನ್ನು ನಿಧಾನವಾಗಿ ತೆರೆದುಕೊಳ್ಳುವ ಕಮಲದ ಹೂವಿನಂತಿರುತ್ತದೆ.

ಆ ಮೌನವು ಮುಕ್ತಿಯನ್ನು ನೀಡುತ್ತದೆ.

ನಾನು ಕಲಿಸುವುದು ಅಂತಹ ಮೌನವನ್ನೇ…

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.