ಆತ್ಮದ ರಹಸ್ಯ ಜ್ಞಾನ : ಯಮಧರ್ಮ – ನಚಿಕೇತರ ಸಂವಾದ

ಅತಿಥಿಯಾದ ನಚಿಕೇತನನ್ನು ಮೂರು ದಿನ ಕಾಯಿಸಿದುದಕ್ಕಾಗಿ ಯಮಧರ್ಮನು ಮೂರು ವರ ನೀಡುವೆ, ಬೇಕಾದ್ದನ್ನು ಕೇಳು ಅನ್ನುತ್ತಾನೆ. ಆಗ ನಚಿಕೇತನು ಅವನಲ್ಲಿ ಆತ್ಮವಿದ್ಯೆಯನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ನಡೆದ ಯಮ – ನಚಿಕೇತರ ನಡುವೆ ನಡೆದ ಸಂವಾದವನ್ನು ಕಠೋಪನಿಷತ್ತಿನಲ್ಲಿ ನಿರೂಪಿಸಲಾಗಿದ್ದು, ಅದರ ಆಯ್ದ ಭಾಗ ಇಲ್ಲಿದೆ.

ನಚಿಕೇತ – ಯಾವ ವಿಧದ ಶರೀರದಿಂದ ಬ್ರಹ್ಮಜ್ಞಾನವನ್ನು ಪಡೆಯಬಹುದು ?
ಯಮಧರ್ಮ – ಮನುಷ್ಯಶರೀರವೆಂಬುದು ಒಂದು ನಗರ. ಆ ನಗರದ ಮಧ್ಯಭಾಗವೇ ಹೃದಯ. ಆ ಹೃದಯದಲ್ಲಿ ವಾಸಿಸುವವನೇ ಬ್ರಹ್ಮ.ಈ ರಹಸ್ಯವನ್ನು ಅರಿತು ಮನುಷ್ಯರು ಯಾವಾಗಲೂ ಭಗವಂತನ ಧ್ಯಾನ ಹಾಗೂ ಚಿಂತನೆಯನ್ನು ಮಾಡುತ್ತಿರಬೇಕು. ಅಂತಹ ಮನುಷ್ಯರು ಯಾವಾಗಲೂ ದುಃಖಿಗಳಾಗಿರಲು ಸಾಧ್ಯವಿಲ್ಲ. ಸದಾ ಪರಮಾತ್ಮನನ್ನೇ ಭಜಿಸುವ ಜನರು ದೇಹಾವಸಾನದ ನಂತರ ಜನ್ಮ-ಮೃತ್ಯು ಬಂಧನಗಳಿಂದ ದೂರವಾಗುತ್ತಾರೆ.

ನಚಿಕೇತ – ಹೃದಯದಲ್ಲಿರುವ ಪರಮಾತ್ಮನನ್ನು ಅರಿಯುವುದು ಹೇಗೆ ?
ಯಮಧರ್ಮ – ಮನುಷ್ಯರು ತಮ್ಮ ಹೃದಯದಲ್ಲಿಯೇ ಪರಮಾತ್ಮನಿರುವುದನ್ನು ಜ್ಞಾನದಿಂದ ಅರಿಯಬೇಕು. ಹಾಗೇ ಇನ್ನೊಬ್ಬರ ಹೃದಯದಲ್ಲೂ ಭಗವಂತನಿದ್ದಾನೆಂಬ ಅರಿವು ಹೊಂದಿರಬೇಕು. ಆಗ ಮಾತ್ರ ಮನುಷ್ಯ ದ್ವೇಷ ಅಸೂಯೆ ರಾಗ ಕಾಮ ಕ್ರೋಧ ಲೋಭ ಮೋಹವೇ ಮೊದಲಾದ ದುರ್ಗುಣಗಳಿಂದ ಮುಕ್ತನಾಗಲು ಸಾಧ್ಯ.

ನಚಿಕೇತ – ಆತ್ಮದ ಸ್ವರೂಪವೇನು ?
ಯಮಧರ್ಮ – ಶರೀರ ನಾಶವಾದರೂ ಆತ್ಮಕ್ಕೆ ನಾಶವಿಲ್ಲ. ಭೋಗವಿಲಾಸಗಳನ್ನು ಬಯಸುವ, ಅನಿತ್ಯವಾಗಿರುವ, ನಾಶವಾಗುವ ಈ ಜಡಶರೀರದೊಂದಿಗೆ ಆತ್ಮಕ್ಕೆ ಯಾವುದ  ಸಂಬಂಧವಿಲ್ಲ. ಆತ್ಮವು ಅನಂತ, ಅನಾದಿ ಹಾಗೂ ನಿರಾಕಾರ. ಅದಕ್ಕೆ ಯಾವ ಗುಣದೋಷಗಳೂ ಇಲ್ಲ; ಕಾರ್ಯ ಕಾರಣಗಳಾಗಲೀ ಜನನ ಮರಣಗಳಾಗಲೀ ಇರುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.