ನಮ್ಮ ನಿಜವಾದ ಸಮಸ್ಯೆ ಏನೆಂದರೆ…

ಆರ್ಡ್ ಹೇಳುವುದೇನೆಂದರೆ, ನಾವು ಕೆಟ್ಟವರಾಗಿರುವುದೇ ಸಮಸ್ಯೆಯಲ್ಲ. ಸಮಸ್ಯೆ ಎಂದರೆ, ನಮ್ಮ ತಂತ್ರಜ್ಞಾನವು ನಮ್ಮ ವಿಕಾಸಾತ್ಮಕ ಸಾಮರ್ಥ್ಯವನ್ನು ಬಹಳ ಹಿಂದಿಕ್ಕಿದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜೀವಶಾಸ್ತ್ರಜ್ಞ ಎಡ್ವರ್ಡ್ ವಿಲ್ಸನ್ ಅವರ ಪ್ರಕಾರ, ಮಾನವರ ಸಮಸ್ಯೆ ಎನ್ನುವುದು, ನಮ್ಮ ಭಾವನೆಗಳು ಇನ್ನೂ ಪ್ಯಾಲಿಯೊಲಿಥಿಕ್, ಅಂದರೆ ಶಿಲಾಯುಗದ ಕಾಲದಲ್ಲಿರುವಂತಿವೆ; ನಮ್ಮ ಸಂಸ್ಥೆಗಳು ಮಧ್ಯಯುಗದ ಮನಸ್ಥಿತಿಯಲ್ಲಿವೆ; ಆದರೆ ನಮ್ಮ ತಂತ್ರಜ್ಞಾನ ದೇವರಷ್ಟು ಶಕ್ತಿಶಾಲಿಯಾಗಿದೆ.

ಚಿಂತಕ ಟೋಬಿ ಆರ್ಡ್ ಅವರ ವಾದದ ಪ್ರಕಾರ, ಇದು ಕೇವಲ ಒಂದು ಸೈದ್ಧಾಂತಿಕ ಸಮಸ್ಯೆಯಲ್ಲ, ಇದು ನಮ್ಮ ಅಸ್ತಿತ್ವಕ್ಕೇ ಸಂಬಂಧಿಸಿದ ಸಮಸ್ಯೆ. ತಮ್ಮ The Precipice ಕೃತಿಯಲ್ಲಿ ಆರ್ಡ್ ಹೇಳುವುದೇನೆಂದರೆ, ನಾವು ಈಗ ಒಂದು ಮಹತ್ವದ ತಿರುವಿನ ಹಂತವನ್ನು ತಲುಪಿದ್ದೇವೆ. ಸುಮಾರು 3 ಲಕ್ಷ ವರ್ಷಗಳ ಕಾಲ, ಮಾನವರು ಬಹುತೇಕ ಶಕ್ತಿಹೀನರಾಗಿದ್ದರೂ ಸುರಕ್ಷಿತರಾಗಿದ್ದರು. ಪ್ರಕೃತಿ ನಮ್ಮನ್ನು ನಾಶಮಾಡಬಹುದಿತ್ತು; ನಾವು ಪರಸ್ಪರರನ್ನು ಕೊಲ್ಲಬಹುದಿತ್ತು, ಮತ್ತೆ ಮತ್ತೆ. ಆದರೆ ಇಡೀ ಮಾನವಕುಲವನ್ನೇ ಸಂಪೂರ್ಣವಾಗಿ ನಾಶಮಾಡುವಷ್ಟು ಶಕ್ತಿ ನಮ್ಮಲ್ಲಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಅಣ್ವಸ್ತ್ರಗಳು, ಕೃತಕ ಬುದ್ಧಿಮತ್ತೆ (AI), ಮತ್ತು ಸಂಶ್ಲೇಷಿತ ಜೀವಶಾಸ್ತ್ರ (Synthetic Biology) , ಇವುಗಳೆಲ್ಲವೂ ಕೇವಲ ಮಾನವಕುಲವನ್ನೇ ನಾಶಮಾಡುವ ಸಾಮರ್ಥ್ಯ ಹೊಂದಿರುವುದಲ್ಲ, ಇಡೀ ಭೂಮಿಯನ್ನೇ ಮಾನವ ವಾಸಕ್ಕೆ ಅಯೋಗ್ಯವಾಗಿಸುವಷ್ಟು ಶಕ್ತಿಯನ್ನು ಹೊಂದಿವೆ. ಆದರೆ ಇಂತಹ ಅಪಾರ ಶಕ್ತಿಯನ್ನು ಹೊಂದಿರುವ ನಮ್ಮ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆಗಳು, ರಾಷ್ಟ್ರಗಳು, ಪರಸ್ಪರ ಸ್ಪರ್ಧಿಸುವ ಬಣಗಳು, ಮತ್ತು ನಿಧಾನವಾಗಿ ಕಾರ್ಯನಿರ್ವಹಿಸುವ ಆಡಳಿತ ವ್ಯವಸ್ಥೆಗಳು, ಇನ್ನೂ ಬಹಳ ಹಳೆಯ ಮನಸ್ಥಿತಿಯಲ್ಲೇ ನಿರ್ಮಾಣಗೊಂಡಿವೆ.

ಅವು ಮುಖ್ಯವಾಗಿ ಕೃಷಿ ಆಧಾರಿತ ಸಮಾಜಗಳಿಗೆ ಅನುಗುಣವಾಗಿ ರೂಪುಗೊಂಡಿದ್ದವು, ಸೀಮಿತ ಮತದಾನದ ಹಕ್ಕು ಹೊಂದಿದ್ದ, ಇಂಟರ್ನೆಟ್ ಎಂಬುದೇ ಇಲ್ಲದ ಕಾಲದ ಸಮಾಜಗಳಿಗೆ. ಇನ್ನು, ಆ ಸಮಾಜಗಳಲ್ಲಿ ಬದುಕುತ್ತಿರುವ ಮಾನವರ ಮನಸ್ಸು ಕೂಡ ಮೂಲತಃ ಶಿಲಾಯುಗದ ಮನಸ್ಸೇ. ನಾವು ಗುಸುಗುಸು ಮಾತುಗಳಲ್ಲಿ ಆಸಕ್ತಿ ತೋರಲು, ಸೇಡು ತೀರಿಸಿಕೊಳ್ಳಲು, ಸಣ್ಣ ಗುಂಪುಗಳಲ್ಲಿ ಬದುಕಲು ಮತ್ತು ಇತರರೊಂದಿಗೆ ಹೋಲಿಸಿಕೊಂಡು ನಮ್ಮ ಸ್ಥಾನವನ್ನು ನಿರ್ಧರಿಸಿಕೊಳ್ಳಲು ಸಹಜವಾಗಿ ರೂಪುಗೊಂಡಿದ್ದೇವೆ.

ಆರ್ಡ್ ಹೇಳುವುದೇನೆಂದರೆ, ನಾವು ಕೆಟ್ಟವರಾಗಿರುವುದೇ ಸಮಸ್ಯೆಯಲ್ಲ. ಸಮಸ್ಯೆ ಎಂದರೆ, ನಮ್ಮ ತಂತ್ರಜ್ಞಾನವು ನಮ್ಮ ವಿಕಾಸಾತ್ಮಕ ಸಾಮರ್ಥ್ಯವನ್ನು ಬಹಳ ಹಿಂದಿಕ್ಕಿದೆ.
ನಮ್ಮ ಮೆದುಳು ಇನ್ನೂ ಪ್ರಾಬಲ್ಯ, ಸ್ಥಾನಮಾನ ಮತ್ತು ಅಧಿಕಾರದ ಶ್ರೇಣಿಗಳ ಹಿಂದೆ ಓಡುತ್ತಿದೆ. ಆದರೆ ನಾವು ನಿರ್ಮಿಸಿರುವ ತಂತ್ರಜ್ಞಾನಗಳು ಇಡೀ ಮಾನವಕುಲವನ್ನೇ ಅಳಿಸಿಹಾಕುವಷ್ಟು ಶಕ್ತಿಶಾಲಿಯಾಗಿವೆ. ಆದರೂ ಆರ್ಡ್ ನಿರಾಶಾವಾದಿಯಲ್ಲ. ಅವರು ನಂಬುವುದೇನೆಂದರೆ, ಇಡೀ ಮಾನವಕುಲವನ್ನು ಒಂದು ಸಮಗ್ರ ಸಮುದಾಯವಾಗಿ ನೋಡುವಂತಹ ಜಾಗೃತಿಯನ್ನು ಬೆಳೆಸುವ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ತಂತ್ರಜ್ಞಾನದ ಶಕ್ತಿಗೆ ತಕ್ಕಂತಹ ಹೊಸ ಸಂಸ್ಥೆಗಳನ್ನು ನಿರ್ಮಿಸುವಷ್ಟು ಬುದ್ಧಿವಂತಿಕೆಯೂ ನಮ್ಮಲ್ಲಿದೆ.

ಆದರೆ ನಿಜವಾದ ಪ್ರಶ್ನೆ ಇದು:

ನಾವು ಆ ಬದಲಾವಣೆಯನ್ನು ಸಮಯಕ್ಕೆ ಸರಿಯಾಗಿ ಅರಿತುಕೊಳ್ಳುತ್ತೇವೆಯೇ? ಅಥವಾ, ತಪ್ಪು ಮನಸ್ಥಿತಿಯಲ್ಲಿರುವ ತಪ್ಪು ವ್ಯಕ್ತಿಯೊಬ್ಬನು ಆ ದೊಡ್ಡ ಕೆಂಪು ಗುಂಡಿಯನ್ನು ಒತ್ತುವ ಮುನ್ನವೇ ನಾವು ಅದನ್ನು ಅರಿತುಕೊಳ್ಳಲು ವಿಫಲರಾಗುತ್ತೇವೆಯೇ?


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.