Cognitive Atrophy ಎಂದರೆ, ಮೆದುಳಿನ ಒಂದು ನಿರ್ದಿಷ್ಟ ಸಾಮರ್ಥ್ಯವನ್ನು ನೀವು ಎಷ್ಟು ಕಡಿಮೆ ಬಳಸುತ್ತೀರೋ, ಅದನ್ನು ಮತ್ತೆ ಬಳಸುವ ನಿಮ್ಮ ಸಾಮರ್ಥ್ಯವೂ ಅಷ್ಟೇ ಕಡಿಮೆಯಾಗುತ್ತದೆ ಎನ್ನುವ ಕಲ್ಪನೆ. ಕೆಲವೊಮ್ಮೆ, ಕೊನೆಗೆ ಅದನ್ನು ಬಳಸುವ ಸಾಮರ್ಥ್ಯವನ್ನೇ ನೀವು ಕಳೆದುಕೊಳ್ಳಬಹುದು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಕೆಲವರು ಒಂದು ಆ್ಯಪ್ ಕೂಡ ಬಳಸದೆ ನಗರದಲ್ಲಿ ನಡೆಯಲು ಸಾಧ್ಯವಿಲ್ಲ ಎನ್ನುವಂತಾಗಿದ್ದಾರೆ. ಈಗೀಗ, ಕೆಲವರು AI ಬಳಸದೇ ಒಂದು ಇಮೇಲ್‌ನ್ನೂ ಬರೆಯಲೂ ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ಬಂದು ತಲುಪಿದ್ದಾರೆ.
ಕೆನಡಾದ ತತ್ವಜ್ಞಾನಿ ಮಾರ್ಷಲ್ ಮೆಕ್ಲುಹಾನ್ ಒಮ್ಮೆ ನಮ್ಮ ತಂತ್ರಜ್ಞಾನಗಳು ನಮ್ಮ ಸಾಮರ್ಥ್ಯಗಳನ್ನು ವಿಸ್ತರಿಸುವುದರ ಜೊತೆಗೆ, ನಮ್ಮ ಕೆಲವು ಸಹಜ ಸಾಮರ್ಥ್ಯಗಳನ್ನು ಕುಂಠಿತಗೊಳಿಸಬಹುದು ಎಂದು ವಾದಿಸಿದ್ದರು. ಚಕ್ರವು ನಮ್ಮ ಕಾಲುಗಳಿಂದ ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ದೂರ ನಮ್ಮನ್ನು ಕೊಂಡೊಯ್ದಿತು; ಆದರೆ ಅದೇ ಸಮಯದಲ್ಲಿ ನಮ್ಮ ಕಾಲುಗಳ ಬಳಕೆಯನ್ನು ಕಡಿಮೆ ಮಾಡಿ ಅವುಗಳನ್ನು ದುರ್ಬಲಗೊಳಿಸಿತು. ಇದನ್ನೇ Cognitive Atrophy ಎಂದು ಕರೆಯಲಾಗುತ್ತದೆ.
Cognitive Atrophy ಎಂದರೆ, ಮೆದುಳಿನ ಒಂದು ನಿರ್ದಿಷ್ಟ ಸಾಮರ್ಥ್ಯವನ್ನು ನೀವು ಎಷ್ಟು ಕಡಿಮೆ ಬಳಸುತ್ತೀರೋ, ಅದನ್ನು ಮತ್ತೆ ಬಳಸುವ ನಿಮ್ಮ ಸಾಮರ್ಥ್ಯವೂ ಅಷ್ಟೇ ಕಡಿಮೆಯಾಗುತ್ತದೆ ಎನ್ನುವ ಕಲ್ಪನೆ. ಕೆಲವೊಮ್ಮೆ, ಕೊನೆಗೆ ಅದನ್ನು ಬಳಸುವ ಸಾಮರ್ಥ್ಯವನ್ನೇ ನೀವು ಕಳೆದುಕೊಳ್ಳಬಹುದು.
ಉದಾಹರಣೆಗೆ, ನೀವು ಗಿಟಾರ್ ನುಡಿಸುವುದನ್ನು ನಿಲ್ಲಿಸಿದರೆ, ನಿಮ್ಮ ಬೆರಳುಗಳ ಚುರುಕುತನ ಮತ್ತು ಅವುಗಳನ್ನು ನಿಖರವಾಗಿ ಮೂವ್ ಮಾಡುವ ಸಾಮರ್ಥ್ಯ ನಿಧಾನವಾಗಿ ಕಡಿಮೆಯಾಗುತ್ತದೆ. ಹೊಸ ಹಾಗೂ ಸವಾಲಿನ ಪುಸ್ತಕಗಳನ್ನು ಓದುವುದನ್ನು ನಿಲ್ಲಿಸಿದರೆ, ನಿಮ್ಮ ಭಾಷಾ ಸಾಮರ್ಥ್ಯ ಮತ್ತು ಅಭಿವ್ಯಕ್ತಿಯ ವ್ಯಾಪ್ತಿ ಕುಗ್ಗುತ್ತದೆ. ದೀರ್ಘಕಾಲದವರೆಗೆ ಯಾವುದರ ಮೇಲೂ ಏಕಾಗ್ರತೆಯಿಂದ ಗಮನ ಕೇಂದ್ರೀಕರಿಸುವುದನ್ನು ನಿಲ್ಲಿಸಿದರೆ, ನಿಮ್ಮ ಗಮನ ಕೇಂದ್ರೀಕರಿಸುವ ಸಾಮರ್ಥ್ಯವೂ ನಿಧಾನವಾಗಿ ಕ್ಷೀಣಿಸುತ್ತದೆ. ಸರಳವಾಗಿ ಹೇಳುವುದಾದರೆ: ನಾವು ಯಾವ ಸಾಮರ್ಥ್ಯವನ್ನು ನಿರಂತರವಾಗಿ ಬಳಸುವುದಿಲ್ಲವೋ, ಕಾಲಕ್ರಮೇಣ ಆ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.
ಆದರೆ ಈಗ ಎಲ್ಲದರಲ್ಲೂ AI ಸೇರಿಕೊಳ್ಳುತ್ತಿರುವ ಈ ಕಾಲದಲ್ಲಿ, ಎಂದಿಗಿಂತಲೂ ಹೆಚ್ಚು ಮಹತ್ವ ಪಡೆದಿರುವ ಒಂದು ಪ್ರಶ್ನೆ ಇದೆ:
“ನಮ್ಮ ಮೆದುಳಿನ ಯಾವ ಸಾಮರ್ಥ್ಯಗಳನ್ನು ನಾವು ಬಿಟ್ಟುಕೊಡಲು ಸಿದ್ಧರಿದ್ದೇವೆ?”
ನೀವು ಹಲವಾರು ಮೂಲಗಳನ್ನು ಸ್ವತಃ ಹುಡುಕಿ, ಪರಿಶೀಲಿಸುವ ಸಾಮರ್ಥ್ಯವನ್ನು ಬಿಟ್ಟುಕೊಡಲು ಸಿದ್ಧರಿದ್ದೀರಾ? ಅಥವಾ, ಯಾರ ಸಹಾಯವೂ ಇಲ್ಲದೆ ಸ್ವತಃ ಒಂದು ಅರ್ಥಪೂರ್ಣ ಹಾಗೂ ಸುಸಂಬದ್ಧ ಇಮೇಲ್ ಬರೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದಕ್ಕೆ ನಿಮಗೆ ಒಪ್ಪಿಗೆಯಿದೆಯೇ?
ನಿಮ್ಮದೇ ಆದ ಕಲೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು, ಮತ್ತು ನಿಮ್ಮ ಸ್ವಂತ ಅಭಿಪ್ರಾಯಗಳನ್ನು ನೀವು ಬಯಸಿದ ರೀತಿಯಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಬಿಟ್ಟುಕೊಡಲು ನೀವು ಸಿದ್ಧರಿದ್ದೀರಾ?
ವಾಸ್ತವವಾಗಿ, ಸಮಸ್ಯೆ Cognitive Atrophy ಎನ್ನುವುದರಲ್ಲಿ ಮಾತ್ರ ಇಲ್ಲ. ಏಕೆಂದರೆ ನಮ್ಮ ಅಗತ್ಯಗಳು ಮತ್ತು ನಮ್ಮ ಬಯಕೆಗಳಿಗೆ ಅನುಗುಣವಾಗಿ ನಮ್ಮ ಚಿಂತನಾ ಸಾಮರ್ಥ್ಯಗಳು ಬೆಳೆಯುತ್ತವೆ ಅಥವಾ ಕ್ಷೀಣಿಸುತ್ತವೆ.
ಹಾಗಾದರೆ ನಿಜವಾದ ಪ್ರಶ್ನೆ ಏನು?
ನಮ್ಮ ಮೆದುಳನ್ನು ನಾವು ಏನು ಮಾಡಲು ಬಯಸುತ್ತೇವೆ?
ಅದಕ್ಕಿಂತಲೂ ಆಳವಾದ ಪ್ರಶ್ನೆ ಎಂದರೆ—
ನಮ್ಮ ಅಂತರಂಗದ ಜೀವನ ಹೇಗಿರಬೇಕು ಎಂದು ನಾವು ಬಯಸುತ್ತೇವೆ? ನಮ್ಮ ಅನುಭವಗಳು ಹೇಗಿರಬೇಕು ಎಂದು ನಾವು ಬಯಸುತ್ತೇವೆ?

