ಗುರುವಿನ ನೋಟ

ನೀನು ಎಷ್ಟೇ ದೂರದಲ್ಲಿದ್ದರೂ, ಗುರು ನಿನ್ನಲ್ಲಿ ಕೇವಲ ಎರಡು ಸಂಗತಿಗಳನ್ನು ಮಾತ್ರ ನೋಡುತ್ತಾನೆ : ಈ ಕ್ಷಣದಲ್ಲಿ ನೀನು ಹೇಗಿದ್ದೀಯೆ ಮತ್ತು ನಿನ್ನೊಳಗೆ ಅಡಗಿರುವ ಸಾಧ್ಯತೆ ಏನು. ಆ ಸಾಧ್ಯತೆ ಯಾವ ಕ್ಷಣದಲ್ಲಾದರೂ ಸ್ಫೋಟಗೊಂಡು ಅರಳಬಹುದು. ಅವನು ನಿನ್ನೊಳಗಿನ ಮೊಗ್ಗಿನಲ್ಲಿಯೇ ಅರಳಿದ ಹೂವನ್ನು ನೋಡುತ್ತಾನೆ, ಅದರ ಪರಿಮಳವು ಹೊರಹೊಮ್ಮುವುದನ್ನೂ ಕಾಣುತ್ತಾನೆ… । ಓಶೋ (Sat Chit Anand / Gratitude Is The Only Prayer) ; ಕನ್ನಡಕ್ಕೆ : ಚಿದಂಬರ ನರೇಂದ್ರ

ಗುರು, ಶಿಷ್ಯನನ್ನು ನೋಡುವುದಕ್ಕೂ, ಶಿಷ್ಯ, ಗುರುವನ್ನು ನೋಡುವುದಕ್ಕೂ ಇರುವ ವ್ಯತ್ಯಾಸವೇನು?

“ಗುರು ನಿನ್ನನ್ನು ನೀನು ಈಗ ಹೇಗಿದ್ದೀಯೋ ಹಾಗೆ ಮಾತ್ರ ನೋಡುವುದಿಲ್ಲ; ನೀನು ಮುಂದೆ ಏನಾಗಬಲ್ಲೆ ಎನ್ನುವುದನ್ನೂ ನೋಡುತ್ತಾನೆ. ನಿನ್ನೊಳಗಿನ ಬೀಜದಲ್ಲಿ ವಸಂತವನ್ನೂ, ಅರಳಲಿರುವ ಹೂವನ್ನೂ ಅವನು ನೋಡುತ್ತಾನೆ.

ನೀನು ಗುರುವನ್ನು ನೋಡುವಾಗ, ನೀನು ಯಾವ ದೂರದಿಂದ ಅವನನ್ನು ನೋಡುತ್ತಿದ್ದೀಯ ಎನ್ನುವುದರ ಮೇಲೆ ನಿನ್ನ ನೋಡುವಿಕೆ ಅವಲಂಬಿತವಾಗಿರುತ್ತದೆ. ನೀನು ಕೇವಲ ವಿದ್ಯಾರ್ಥಿಯಾಗಿದ್ದರೆ, ಅವನ ಸುಂದರವಾದ ಮಾತುಗಳು, ತರ್ಕಗಳು, ವಿಚಾರಧಾರೆ ಮತ್ತು ಸಿದ್ಧಾಂತಗಳು ಮಾತ್ರ ನಿನಗೆ ಕಾಣಿಸುತ್ತವೆ. ನೀನು ಅವನನ್ನು ಶಿಷ್ಯನಾಗಿ ನೋಡುತ್ತಿದ್ದರೆ, ಅವನ ಮಾತುಗಳಿಗಿಂತ ಅವನ ಮೌನದಲ್ಲಿ ಹೆಚ್ಚು ಕಾಣುತ್ತಾನೆ; ಅವನು ನೀಡುವ ಉಪನ್ಯಾಸಕ್ಕಿಂತ ಅವನ ಸಾನ್ನಿಧ್ಯದಲ್ಲಿ ಹೆಚ್ಚು ಕಾಣುತ್ತಾನೆ; ಅವನು ಮಾತನಾಡುವ ವಿಚಾರಗಳು ಮತ್ತು ತತ್ತ್ವಗಳಿಗಿಂತ ಅವನ ಕಣ್ಣುಗಳಲ್ಲಿ ಹೆಚ್ಚು ಕಾಣುತ್ತಾನೆ; ಅವನ ಮಾತುಗಳಿಗಿಂತ ಅವನ ಸನ್ನೆಗಳು, ಅವನ ಕೃಪೆ ಮತ್ತು ಅವನ ಸಹಜ ಸೌಂದರ್ಯದಲ್ಲಿ ಹೆಚ್ಚು ಕಾಣುತ್ತಾನೆ.

ಆದರೆ ನೀನು ಅವನನ್ನು ಭಕ್ತನ ಅಂತರಂಗದಿಂದ ನೋಡುತ್ತಿದ್ದರೆ, ಆಗ ನೀನು ಅವನಲ್ಲಿ ಕೇವಲ ಒಂದು ಕನ್ನಡಿಯನ್ನೇ ಕಾಣುತ್ತೀಯ. ಆ ಕನ್ನಡಿಯಲ್ಲಿ ನಿನ್ನ ಪರಮಸ್ವರೂಪವೇ ಪ್ರತಿಫಲಿಸುತ್ತದೆ.

ಆದ್ದರಿಂದ, ನೀನು ಏನನ್ನು ನೋಡುತ್ತೀಯ ಎನ್ನುವುದು ನಿನ್ನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ನೀನು ಎಲ್ಲಿದ್ದೀಯ, ಎಲ್ಲಿ ನಿಂತಿದ್ದೀಯ, ಗುರುನಿಂದ ಎಷ್ಟು ದೂರದಲ್ಲಿದ್ದೀಯ, ಇವೆಲ್ಲದರ ಮೇಲೆ ನಿನ್ನ ನೋಡುವಿಕೆ ನಿರ್ಧಾರವಾಗುತ್ತದೆ.

ಆದರೆ ಗುರುವಿನ ವಿಷಯದಲ್ಲಿ ಮಾತ್ರ ಹೀಗೆ ಅಲ್ಲ.

ನೀನು ಎಷ್ಟೇ ದೂರದಲ್ಲಿದ್ದರೂ, ಗುರು ನಿನ್ನಲ್ಲಿ ಕೇವಲ ಎರಡು ಸಂಗತಿಗಳನ್ನು ಮಾತ್ರ ನೋಡುತ್ತಾನೆ : ಈ ಕ್ಷಣದಲ್ಲಿ ನೀನು ಹೇಗಿದ್ದೀಯೆ ಮತ್ತು ನಿನ್ನೊಳಗೆ ಅಡಗಿರುವ ಸಾಧ್ಯತೆ ಏನು. ಆ ಸಾಧ್ಯತೆ ಯಾವ ಕ್ಷಣದಲ್ಲಾದರೂ ಸ್ಫೋಟಗೊಂಡು ಅರಳಬಹುದು. ಅವನು ನಿನ್ನೊಳಗಿನ ಮೊಗ್ಗಿನಲ್ಲಿಯೇ ಅರಳಿದ ಹೂವನ್ನು ನೋಡುತ್ತಾನೆ, ಅದರ ಪರಿಮಳವು ಹೊರಹೊಮ್ಮುವುದನ್ನೂ ಕಾಣುತ್ತಾನೆ.

ಆದರೆ ಇನ್ನೂ ವಿದ್ಯಾರ್ಥಿಗಳೂ ಆಗದ, ಕೇವಲ ವೀಕ್ಷಕರಾಗಿ ಅಥವಾ ಕುತೂಹಲಕ್ಕಾಗಿ ಬಂದಿರುವ ಅನೇಕ ಜನರಿದ್ದಾರೆ.
ಅವರಲ್ಲಿ ಗುರುವು ಏನನ್ನೂ ಕಾಣಲಾರನು. ಅವರು ಅಷ್ಟು ದೂರದಲ್ಲಿರುತ್ತಾರೆ, ಅಜ್ಞಾನವೆಂಬ ಕತ್ತಲಿನಲ್ಲಿ ಅಷ್ಟು ಆಳವಾಗಿ ಮುಳುಗಿರುತ್ತಾರೆ. ಅವರು ಯಾರು, ಮುಂದೆ ಏನಾಗಬಲ್ಲರು ಎನ್ನುವುದನ್ನು ನೋಡುವುದೇ ಅಸಾಧ್ಯವಾಗುತ್ತದೆ. ಅವರ ದೂರವು ತುಂಬಾ ಹೆಚ್ಚಾಗಿದೆ; ಅವರ ಸುತ್ತಲೂ ಕತ್ತಲೆ ತುಂಬಿಕೊಂಡಿದೆ. ಅವರಿಗೂ ಗುರುವಿನಲ್ಲಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ…
ಬಹುಶಃ ದೂರದಿಂದ ಕೇಳಿಬರುವ ಅವನ ಮಾತುಗಳ ಪ್ರತಿಧ್ವನಿ ಮಾತ್ರ ಕೇಳಿಸಬಹುದು. ಆದರೆ ಅದಕ್ಕಿಂತ ಹೆಚ್ಚಿನದೇನೂ ಕಾಣುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.