ಶಕ್ತಿಯ ಕೃಪೆ ಇಲ್ಲದೆ ಸೃಷ್ಟಿ – ಸ್ಥಿತಿ – ಲಯ ಅಸಾಧ್ಯ : ಸೌಂದರ್ಯಲಹರೀ

ಸೌಂದರ್ಯ ಲಹರಿಯ ಮೊದಲ ಎರಡು ಶ್ಲೋಕಗಳು – ಭಾವಾರ್ಥ ಮತ್ತು ವ್ಯಾಖ್ಯಾನವನ್ನು ನನ್ನ ಗ್ರಹಿಕೆಯ ಮಿತಿಗೆ ಒಳಪಟ್ಟು ಇಲ್ಲಿ ಬರೆಯುತ್ತಿದ್ದೇನೆ… । ಚೇತನಾ ತೀರ್ಥಹಳ್ಳಿ

ಸೌಂದರ್ಯ ಲಹರೀ, ಆದಿ ಶಂಕರರು ಜಗನ್ಮಾತೆಯನ್ನು ಸ್ತುತಿಸಿ ರಚಿಸಿರುವ ಅತ್ಯದ್ಭುತ ಭಕ್ತಿ ಕಾವ್ಯ. ಈ ರಚನೆಯನ್ನು ಅರ್ಥ ಮಾಡಿಕೊಳ್ಳಲು ಹಲವು ಬಗೆಗಳಿವೆ. ಕೇವಲ ಪದಗಳನ್ನು ಆಯಾ ಪದಗಳಾಗಿಯೇ ಅರ್ಥ ಮಾಡಿಕೊಳ್ಳುವುದು ಒಂದು ಬಗೆಯಾದರೆ, ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ತತ್ವದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಮತ್ತೊಂದು ಬಗೆ. ಈ ರಚನೆಯ ರಚಯಿತರು ಶಂಕರರೇ ಆದ್ದರಿಂದ, ಅದನ್ನು ಅವರ ಸಿದ್ಧಾಂತದ ಹಿನ್ನೆಲೆಯಲ್ಲೇ ಅರ್ಥ ಮಾಡಿಕೊಳ್ಳುವುದು ಹೆಚ್ಚು ಸೂಕ್ತ ಅನ್ನಿಸುತ್ತದೆ.

ಸೌಂದರ್ಯ ಲಹರಿಯ ಮೊದಲ ಎರಡು ಶ್ಲೋಕಗಳು – ಭಾವಾರ್ಥ ಮತ್ತು ವ್ಯಾಖ್ಯಾನವನ್ನು ಇಲ್ಲಿ ನೀಡಲಾಗಿದೆ.

ಶ್ಲೋಕ 1

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ।
ಅಥಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ॥

ಶಿವನು ‘ಶಕ್ತಿ’ಯೊಡನೆ (ನಿನ್ನೊಡನೆ) ಕೂಡಿದ್ದರೆ ಮಾತ್ರ ಈ ಜಗತ್ತನ್ನು ಸೃಷ್ಟಿಸಲು, ಪಾಲಿಸಲು ಮತ್ತು ಲಯ ಮಾಡಲು ಸಮರ್ಥನಾಗುತ್ತಾನೆ. ಆ ಶಕ್ತಿಯೇ ಇಲ್ಲದಿದ್ದರೆ ಅವನಿಗೆ ಸ್ವಲ್ಪವೂ ಚಲಿಸಲು ಸಾಧ್ಯವಿಲ್ಲ. ಆದ್ದರಿಂದ ಹರಿ, ಹರ, ಬ್ರಹ್ಮ ಮುಂತಾದ ತ್ರಿಮೂರ್ತಿಗಳಿಂದಲೂ ಪೂಜಿಸಲ್ಪಡುವ ನಿನ್ನನ್ನು, ಪೂರ್ವಜನ್ಮದಲ್ಲಿ ಪುಣ್ಯ ಮಾಡದವನು ಹೇಗೆ ತಾನೇ ನಮಸ್ಕರಿಸಲು ಅಥವಾ ಸ್ತುತಿಸಲು ಸಾಧ್ಯ?

ವ್ಯಾಖ್ಯಾನ

ಶಕ್ತಿಯ ಸಾಹಚರ್ಯ ಇಲ್ಲದಿದ್ದರೆ ಶಿವನಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಶಿವ – ಸ್ಥಿರ, ಶಕ್ತಿ – ಚರ. ಶಿವ ಲೋಕಕ್ಕೆ ಮಂಗಳವನ್ನುಂಟು ಮಾಡಬೇಕೆಂದರೆ ಆ ಮಂಗಳದ ತರಂಗಗಳನ್ನು ಹೊತ್ತೊಯ್ಯಲು ಶಕ್ತಿಯು ವಾಹಕವಾಗಬೇಕು. ಇಲ್ಲವಾದಲ್ಲಿ ಶಿವನ ಸಂಕಲ್ಪ ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ಶಿವ ಮಾತ್ರವಲ್ಲ, ಪುರುಷಸ್ವಭಾವವೇ ಸ್ಥಿರವಾದ್ದರಿಂದ, ಹರಿ – ಬ್ರಹ್ಮಾದಿಗಳೂ ಶಕ್ತಿಯ ಸಹಾಯ ಪಡೆದೇ ಸೃಷ್ಟಿ – ಸ್ಥಿತಿಯ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಹಾಗೆಂದೇ ಅವರು ಕೂಡ ಶಕ್ತಿಯನ್ನು ಪೂಜಿಸುವರು. ಇಂಥಾ ಶಕ್ತಿಯನ್ನು ಸ್ತುತಿಸುವ ಸಾಮರ್ಥ್ಯ ಪಡೆಯಲು ಪೂರ್ವಜನ್ಮದ ಪುಣ್ಯವಿದ್ದರಷ್ಟೆ ಸಾಧ್ಯ.

ಹರಿ – ಹರ – ಬ್ರಹ್ಮಾದಿಗಳು ಪರಬ್ರಹ್ಮದ ಕಾರ್ಯ ನಿಮಿತ್ತ ವಿಸ್ತರಣೆಗಳು. ಸ್ತ್ರೀ – ಪುರುಷ ಭೇದಗಳೂ ಕಾರ್ಯಾನುಕೂಲ ವಿಸ್ತರಣೆಗಳೇ. ಆದರೆ ಸ್ತ್ರೀ ಪರಬ್ರಹ್ಮಕ್ಕೆ ಹೆಚ್ಚು ಹತ್ತಿರ. ಏಕೆಂದರೆ ಪರಬ್ರಹ್ಮ ಹೊಮ್ಮಿದ್ದೇ ಹಿರಣ್ಯಗರ್ಭದಿಂದ. ಮತ್ತು, ಹುಟ್ಟು ನೀಡುವ ಆ ಹಿರಣ್ಯಗರ್ಭದ ಸ್ವಭಾವ ಹೆಣ್ಣಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲ. ಮತ್ತು ಆ ಗರ್ಭದ ಮೂರ್ತರೂಪವೇ ಜಗಜ್ಜನನಿಯ ರೂಪ; ಶಂಕರರು ಆರಾಧಿಸಿದ ತ್ರಿಪುರಸುಂದರಿಯ ರೂಪ.

ಪರಬ್ರಹ್ಮವನ್ನು ಆಗುಮಾಡಿದ ಹಿರಣ್ಯಗರ್ಭ ಧಾರಿಣಿಯೇ ಶಕ್ತಿ. ಈ ಶಕ್ತಿಯ ಅಭಯವಿಲ್ಲದೆ ಸೃಷ್ಟಿ – ಸ್ಥಿತಿ – ಲಯಗಳು ಸಾಧ್ಯವಿಲ್ಲ ಅನ್ನುವುದು ಈ ಶ್ಲೋಕದ ಒಟ್ಟು ಅರ್ಥ.

ಶ್ಲೋಕ 2

ತನಿಯಾಂಸಂ ಪಾಂಸುಂ ತವ ಚರಣಪಂಕೇರುಹಭವಂ ವಿರಿಂಚಿಃ ಸಂಚಿನ್ವನ್ ವಿರಚಯತಿ ಲೋಕಾನವಿಕಲಂ ।
ವಹತ್ಯೇನಂ ಶೌರಿಃ ಕಥಮಪಿ ಸಹಸ್ರೇಣ ಶಿರಸಾಂ ಹರಃ ಸಂಕ್ಷುದ್ಯೈನಂ ಭಜತಿ ಭಸಿತೋದ್ಧೂಲನವಿಧಿಂ॥

ನಿನ್ನ ಪಾದಕಮಲಗಳ ಒಂದು ಸಣ್ಣ ಧೂಳಿನ ಕಣವನ್ನು ಶೇಖರಿಸಿ ಬ್ರಹ್ಮನು ಈ ಸಮಸ್ತ ಜಗತ್ತನ್ನು ಸೃಷ್ಟಿಸುತ್ತಾನೆ. ಆದಿಶೇಷನ ರೂಪದಲ್ಲಿರುವ ವಿಷ್ಣುವು ತನ್ನ ಸಾವಿರ ಹೆಡೆಗಳಿಂದ ಕಷ್ಟಪಟ್ಟು ಆ ಜಗತ್ತನ್ನು ಹೊರುತ್ತಾನೆ. ಕೊನೆಯಲ್ಲಿ ಪ್ರಳಯಕಾಲದಲ್ಲಿ ಶಿವನು ಆ ಜಗತ್ತನ್ನು ಭಸ್ಮವನ್ನಾಗಿ ಮಾಡಿ ತನ್ನ ದೇಹಕ್ಕೆ ಲೇಪಿಸಿಕೊಳ್ಳುತ್ತಾನೆ.

ವ್ಯಾಖ್ಯಾನ

ಈ ಹರಿ ಹರ ಬ್ರಹ್ಮಾದಿಗಳು ಶಕ್ತಿಯ ಸಹಾಯದಿಂದ ಹೇಗೆ ತಮ್ಮ ಕರ್ತವ್ಯ ನಡೆಸುತ್ತಾರೆ? ಬ್ರಹ್ಮನು ಆದಿಶಕ್ತಿಯ ಪಾದದ ಒಂದು ಸಣ್ಣ ಧೂಳಿನ ಕಣವನ್ನು ತೆಗೆದುಕೊಂಡು ಭೌತಿಕ ಜಗತ್ತನ್ನು ಸೃಷ್ಟಿಸುತ್ತಾನೆ! ನಾವು ನೋಡುತ್ತಿರುವ ಅಥವಾ ನಮ್ಮ ಗ್ರಹಿಕೆಗೆ ನಿಲುಕಿರುವ ಈ ಜಗತ್ತು ನಮಗೆ ಕಾಣದ, ನಾವು ಊಹಿಸಲೂ ಆಗದ ಅಗಾಧ ಬ್ರಹ್ಮಾಂಡದಲ್ಲಿ ಒಂದು ಚಿಕ್ಕ ಚುಕ್ಕೆ ಮಾತ್ರ. ಅಲ್ಲವೆ? ಇದು ವೈಜ್ಞಾನಿಕ ಸತ್ಯ. ಶಂಕರರು ಹೇಳುತ್ತಿರುವುದು ಅದನ್ನೇ. ಶಕ್ತಿಯ ಪಾದಧೂಳಿಯ ಒಂದು ಚಿಕ್ಕ ಕಣದಿಂದ ಈ ಜಗತ್ತು ನಿರ್ಮಾಣಗೊಂಡಿದೆ; ಈ ಜಗತ್ತು ಅಗಾಧ ಬ್ರಹ್ಮಾಂಡದಲ್ಲಿ ಒಂದು ಧೂಳಿನ ಕಣ ಮಾತ್ರ!

ಆದಿಶೇಷನು ಈ ಜಗತ್ತನ್ನು ತನ್ನ ಹೆಡೆಗಳ ಮೇಲೆ ಹೊತ್ತಿದ್ದಾನೆ. ಆದಿಶೇಷನಿಗೆ ಸಂಕರ್ಷಣ ಎಂಬ ಹೆಸರೂ ಇದೆ. ಇದರರ್ಥ ಆಕರ್ಷಿಸುವಂಥದ್ದು – ಯಾವುದು ಆಕರ್ಷಿಸಲ್ಪಡುವುದೋ ಅದು. ನಮ್ಮ ಇಂದಿನ ವಿಜ್ಞಾನದ ಕಾಣ್ಕೆಯಂತೆ ಗುರುತ್ವಾಕರ್ಷಣೆ ನಿಯಮದ ಮೇಲೆ ಜಗತ್ತು ನಿಂತಿದೆ. ನಮ್ಮ ಇಂದಿನ ವ್ಯಾಖ್ಯಾನಕ್ಕಿಂತ ಹಿಂದಿನವರ ವ್ಯಾಖ್ಯಾನ ಭಿನ್ನವಾಗಿರಬಹುದು ಮತ್ತು ಗುರುತ್ವಾಕರ್ಷಣೆಯ ನಿಯಮ ನಮ್ಮ ಪೂರ್ವಜರ ಸಹಜ ಅರಿವಿನ, ಹೆಚ್ಚುವರಿಯಾಗಿ ವ್ಯಾಖ್ಯಾನಿಸುವ ಗೋಜಿಗೆ ಹೋಗಿರದಿದ್ದ ಸಂಗತಿಯೂ ಆಗಿರಬಹುದು. ನಮ್ಮ ವಿಜ್ಞಾನಿಗಳು ಕಾಲಾಂತರದಲ್ಲಿ ಕಂಡುಕೊಂಡ ಮೂಲಭೂತ ವೈಜ್ಞಾನಿಕ ಸಂಗತಿಗಳು, ಅದನ್ನು ಕಂಡುಕೊಳ್ಳುವ ಮೊದಲೇ ಆದಿಮಾನವರ ಕೈಯಲ್ಲಿ ಬದುಕಿನ ಸಹಜ ಭಾಗವಾಗಿ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಾಗುತ್ತಿತ್ತಲ್ಲವೆ? ಹಾಗೇ ಇದೂ. ಕೊನೆಯದಾಗಿ ಪ್ರಳಯದ ಪರಿಕಲ್ಪನೆ, ಸೃಷ್ಟಿಯಾದ ಪ್ರತಿಯೊಂದಕ್ಕೂ ಅಂತ್ಯ ಇದ್ದೇ ಇದೆಯೆಂಬ ಸಹಜ ನಿಯಮವನ್ನು ಸೂಚಿಸುತ್ತದೆಯಷ್ಟೆ. ಲಯಕಾರ್ಯ ಶಿವನ ಕರ್ತವ್ಯ. ಕೊನೆಗೊಳ್ಳುವ ಎಲ್ಲವನ್ನೂ ಅವನು ಹುಡಿಯಾಗಿಸಿ ತನ್ನ ಮೈಗೆ ಬಳಿದುಕೊಳ್ಳುತ್ತಾನೆ ಅನ್ನುವುದು – ಕೊನೆಗೊಮ್ಮೆ ಎಲ್ಲವೂ ಕತ್ತಲಲ್ಲಿ ಒಂದಾಗಿಹೋಗುವವು ಎಂಬುದರ ರೂಪಕ. ಲಯಕರ್ತ ಶಿವ – ಮಹಾಕಾಲ. ಮಹಾಕಾಲನೆಂದರೆ ಕಪ್ಪುಕುಳಿ. ಕೊನೆಗೆ ಸಮಸ್ತ ಜಗತ್ತು ಅಲ್ಲಿ ಇಲ್ಲವಾಗುವುದು ಎಂದರ್ಥ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.