ನೀವು ಯಾವುದೋ ವಿಷಯದ ಮುಖ್ಯಾಂಶವನ್ನು ಮಾತ್ರ ಕಲಿತಿದ್ದರೆ, ಅಥವಾ ಯಾವುದನ್ನಾದರೂ ಗೂಗಲ್ ಮೂಲಕ ತಿಳಿದುಕೊಂಡಿದ್ದರೆ, ಆ ವಿಷಯವನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಅದರ ಹಿಂದಿನ ಮೂಲಭೂತ ರಚನೆಗಳು ಮತ್ತು ಸಂಬಂಧಗಳು ನಿಮಗೆ ತಿಳಿದಿರುವುದಿಲ್ಲ. ಇದಕ್ಕೆ ಪರಿಹಾರವೇನು? । ಕನ್ನಡಕ್ಕೆ : ಚಿದಂಬರ ನರೇಂದ್ರ
ಇಂದಿನ ಸಮಸ್ಯೆಯೇನೆಂದರೆ, ಅನೇಕ ಜನರಿಗೆ ವಿಷಯಗಳ ಬಗ್ಗೆ ಗೂಗಲ್ನಿಂದ ಸಿಗುವಷ್ಟು ಜ್ಞಾನ ಮಾತ್ರ ಇರುತ್ತದೆ; ಆದರೆ ಅದರ ಹಿಂದಿರುವ ಆಳವಾದ ಮತ್ತು ಹೆಚ್ಚು ಮಹತ್ವದ ಅರಿವು ಇರುವುದಿಲ್ಲ. ಆದರೆ ಈ ಸಮಸ್ಯೆಯನ್ನು ಸರಿಪಡಿಸಲು ಒಂದು ಮಾರ್ಗವಿದೆ. 2016ರಲ್ಲಿ ತತ್ವಜ್ಞಾನಿ ಮೈಕೆಲ್ ಪ್ಯಾಟ್ರಿಕ್ ಲಿಂಚ್ ಅವರು “ಗೂಗಲ್ ಜ್ಞಾನ” ಎನ್ನುವುದಕ್ಕೆ ಒಂದು ಅರ್ಥವನ್ನು ನೀಡಿದರು. ಅದರ ಪ್ರಕಾರ, ಯಾವುದೋ ಒಂದು ವಿಷಯವನ್ನು ತಿಳಿದಿರುವುದು, ಆದರೆ ಆ ವಿಷಯವನ್ನು ರೂಪಿಸುವ ಅದರ ಹಿಂದಿನ ಮೂಲಭೂತ ರಚನೆಗಳು ಮತ್ತು ಸಂಬಂಧಗಳನ್ನು ತಿಳಿಯದೇ ಇರುವುದು “ಗೂಗಲ್ ಜ್ಞಾನ”.
ಉದಾಹರಣೆಗೆ, ಬಿಳಿ ರಕ್ತಕಣಗಳು ಕಾಯಿಲೆಗಳ ವಿರುದ್ಧ ಹೋರಾಡುತ್ತವೆ ಎನ್ನುವುದು ನಿಮಗೆ ತಿಳಿದಿರಬಹುದು. ಆದರೆ ರಕ್ತವು ದೇಹದಾದ್ಯಂತ ಹೇಗೆ ಸಂಚರಿಸುತ್ತದೆ? ಆ ರಕ್ತಕಣಗಳು ನಿಜವಾಗಿ ಏನು ಮಾಡುತ್ತವೆ? ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ಇನ್ಯಾವೆಲ್ಲ ಅಂಶಗಳು ಪಾತ್ರವಹಿಸುತ್ತವೆ? ಇವೆಲ್ಲ ನಿಮಗೆ ತಿಳಿದಿದೆಯೇ? ನಿಮ್ಮ ಬಳಿ ಒಂದು ಉತ್ತರ ಇದೆ. ನಿಮ್ಮ ಬಳಿ ಒಂದು ಸತ್ಯಾಂಶ ಇದೆ. ಆದರೆ ಆ ಸತ್ಯಾಂಶವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಅದರ ಹಿನ್ನೆಲೆ ಮತ್ತು ಅದು ನೆಲೆಗೊಂಡಿರುವ ಸಂಪೂರ್ಣ ಪರಿಸರ ನಿಮಗೆ ತಿಳಿದಿಲ್ಲ. ಆದರೆ ಈ ಸಮಸ್ಯೆ ಕೇವಲ ಗೂಗಲ್ಗೆ ಮಾತ್ರ ಸೀಮಿತವಾಗಿಲ್ಲ.
ಯಾವುದೋ ಪಬ್ ಕ್ವಿಜ್ನಲ್ಲಿ ಉತ್ತರಿಸಲು, ಯಾರನ್ನಾದರೂ ಮೆಚ್ಚಿಸಲು, ಅಥವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಮಗೆ ಬೇಕಾಗುವ ಮಾಹಿತಿಯೂ ಇದೇ ರೀತಿಯದ್ದಾಗಿರಬಹುದು. ಅಂದರೆ, ಒಂದು ಸತ್ಯಾಂಶವನ್ನು ನಿಮಗೆ ನೀಡಲಾಗುತ್ತದೆ; ಆದರೆ ಆ ಸತ್ಯಾಂಶವನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಹಿನ್ನೆಲೆ, ಸಂದರ್ಭ ಮತ್ತು ಅದರ ನಡುವಿನ ಸಂಬಂಧಗಳ ಅರಿವು ನಿಮಗೆ ನೀಡಲಾಗುವುದಿಲ್ಲ. ಹೀಗಾಗಿ, ನಿಮ್ಮ ಬಳಿ ಜ್ಞಾನವಿದೆ, ಆದರೆ ಆ ಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅರಿವು ಇರುವುದಿಲ್ಲ. ಸಮಸ್ಯೆಯೇನೆಂದರೆ, ಇದು ಕೇವಲ ಮೇಲ್ಮಟ್ಟದ ಅಥವಾ ಅರೆಬರೆ ತಿಳುವಳಿಕೆ ಎನ್ನುವುದಷ್ಟೇ ಅಲ್ಲ. ನಿಜವಾಗಿ ಹೇಳುವುದಾದರೆ, ಇದು ನಾವು ಒಬ್ಬರಿಗೊಬ್ಬರು ಸರಿಯಾಗಿ ಮಾತನಾಡಿಕೊಳ್ಳುವ ಸಾಮರ್ಥ್ಯವನ್ನೇ ಕುಗ್ಗಿಸುತ್ತಿದೆ.
ಡ್ಯಾನ್ ಮತ್ತು ಹ್ಯಾನಾ ಎಂಬ ಇಬ್ಬರು ವ್ಯಕ್ತಿಗಳಿದ್ದಾರೆ ಎಂದು ಊಹಿಸಿಕೊಳ್ಳಿ. ಒಂದು ನಿರ್ದಿಷ್ಟ ಆಹಾರದ supplement ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎನ್ನುವುದರ ಬಗ್ಗೆ ಅವರಿಬ್ಬರ ನಡುವೆ ವಾದ ನಡೆಯುತ್ತಿದೆ. ಡ್ಯಾನ್ ಅದು ಪರಿಣಾಮಕಾರಿಯಾಗಿದೆ ಎನ್ನುತ್ತಾನೆ; ಹ್ಯಾನಾ ಪರಿಣಾಮಕಾರಿಯಲ್ಲ ಎನ್ನುತ್ತಾಳೆ. ತಮ್ಮ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಇಬ್ಬರ ಬಳಿಯೂ ಸಂಶೋಧನಾ ಪ್ರಬಂಧಗಳಿವೆ. ಆದರೆ, ತಮ್ಮ ಕೈಯಲ್ಲಿರುವ ಆ ಅಧ್ಯಯನಗಳ ಮೌಲ್ಯ ಮತ್ತು ಮಿತಿಗಳನ್ನು ಅಳೆಯುವಷ್ಟು ಅಗತ್ಯವಾದ ತಿಳುವಳಿಕೆ ಅಥವಾ ಸಂಪನ್ಮೂಲಗಳು ಡ್ಯಾನ್ ಮತ್ತು ಹ್ಯಾನಾ ಇಬ್ಬರ ಬಳಿಯೂ ಇಲ್ಲ. ಆ ಅಧ್ಯಯನದಲ್ಲಿ ಎಷ್ಟು ಜನರನ್ನು ಪರೀಕ್ಷಿಸಲಾಗಿತ್ತು? ಯಾವುದರೊಂದಿಗೆ ಹೋಲಿಕೆ ಮಾಡಿ ಪರೀಕ್ಷಿಸಲಾಗಿತ್ತು? ಅದೇ ಪರೀಕ್ಷೆಯನ್ನು ಮತ್ತೆ ಪುನರಾವರ್ತಿಸಲಾಗಿತ್ತೇ? ಇಂತಹ ಇನ್ನಿತರ ಪ್ರಶ್ನೆಗಳೇನು?
ನೀವು ಯಾವುದೋ ವಿಷಯದ ಮುಖ್ಯಾಂಶವನ್ನು ಮಾತ್ರ ಕಲಿತಿದ್ದರೆ, ಅಥವಾ ಯಾವುದನ್ನಾದರೂ ಗೂಗಲ್ ಮೂಲಕ ತಿಳಿದುಕೊಂಡಿದ್ದರೆ, ಆ ವಿಷಯವನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಅದರ ಹಿಂದಿನ ಮೂಲಭೂತ ರಚನೆಗಳು ಮತ್ತು ಸಂಬಂಧಗಳು ನಿಮಗೆ ತಿಳಿದಿರುವುದಿಲ್ಲ.
ಪರಿಹಾರ?
ಇದಕ್ಕೆ ಪರಿಹಾರವೆಂದರೆ, ಹೆಚ್ಚಿನ ಜನರು ಬಯಸುವುದಕ್ಕಿಂತ ಹೆಚ್ಚು ಕಷ್ಟಕರವೂ ನಿಧಾನವಾದದ್ದೂ ಆಗಿದೆ. ನಾವು ಯಾವುದೋ ಒಂದು ಸತ್ಯಾಂಶವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಲ್ಲ; ಒಂದು ಸಂಪೂರ್ಣ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ವಿಷಯದ ‘ಏನು?’ ಎನ್ನುವುದನ್ನು ತಿಳಿದುಕೊಳ್ಳುವುದಷ್ಟೇ ಅಲ್ಲದೆ, ‘ಏಕೆ?’ ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಕಾಲ ನಾವು ಆ ವಿಷಯದಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕು.
ಅಂದರೆ, ಯಾವುದೋ ವಿಷಯದ ಬಗ್ಗೆ ಏನು ಎನ್ನುವುದನ್ನು ಮಾತ್ರ ತಿಳಿಯುವುದಲ್ಲ, ಅದು ಏಕೆ ಹಾಗೆ ಇದೆ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕು.

