ಧೂಳಿನಿಂದ ಮುಚ್ಚಿದ ಕನ್ನಡಿ : ಜೆನ್ ಕ್ಷಣ #21

ಜ್ಞಾನೋದಯ ಎಂದರೆ ಪರಿಪೂರ್ಣ ವ್ಯಕ್ತಿಯಾಗುವುದು ಅಲ್ಲ. ಅದು ನಮ್ಮೊಳಗೆ ಮೊದಲಿನಿಂದಲೇ ಇರುವ ನಿಜಸ್ವರೂಪವನ್ನು ಅನಾವರಣಗೊಳಿಸುವುದು । ಡಾ. ಸಹನಾ ಪ್ರಿಯದರ್ಶಿನಿ

ಒಂದು ದಿನ ಒಬ್ಬ ಯುವ ಶಿಷ್ಯನು ಚಿಂತೆಯಿಂದ ತುಂಬಿದ ಮುಖದೊಂದಿಗೆ ತನ್ನ ಝೆನ್ ಗುರುಗಳ ಬಳಿಗೆ ಬಂದನು. “ಗುರುಗಳೇ,” ಎಂದು ಅವನು ಕೇಳಿದನು, “ನಾನು ಹಲವು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಆದರೂ ನನಗೆ ಕೋಪ ಬರುತ್ತದೆ, ಅಸೂಯೆ ಕಾಡುತ್ತದೆ, ತಾಳ್ಮೆ ಕಳೆದುಕೊಳ್ಳುತ್ತೇನೆ. ನನ್ನ ಮನಸ್ಸು ಇನ್ನೂ ಏಕೆ ನಿರ್ಮಲವಾಗಿಲ್ಲ?”

ಗುರುಗಳು ಯಾವುದೇ ಉತ್ತರ ನೀಡಲಿಲ್ಲ. ಅವರು ಶಿಷ್ಯನನ್ನು ಹಳೆಯ ಧ್ಯಾನ ಮಂದಿರವೊಂದಕ್ಕೆ ಕರೆದುಕೊಂಡು ಹೋದರು. ಮಂದಿರದ ಒಂದು ಮೂಲೆಯಲ್ಲಿ, ಹಲವು ವರ್ಷಗಳಿಂದ ಧೂಳು ಆವರಿಸಿದ್ದ ಒಂದು ಪುರಾತನ ಕನ್ನಡಿ ಇತ್ತು. ಗುರುಗಳು ಕೇಳಿದರು, “ಈ ಕನ್ನಡಿಯಲ್ಲಿ ನಿನಗೆ ಏನು ಕಾಣುತ್ತಿದೆ?”

ಶಿಷ್ಯನು ಉತ್ತರಿಸಿದನು, “ಏನೂ ಕಾಣುತ್ತಿಲ್ಲ ಗುರುಗಳೇ. ಕನ್ನಡಿ ಸಂಪೂರ್ಣ ಧೂಳಿನಿಂದ ಮುಚ್ಚಿಹೋಗಿದೆ.”

ಗುರುಗಳು ಅವನಿಗೆ ಒಂದು ಮೃದುವಾದ ಬಟ್ಟೆಯನ್ನು ಕೊಟ್ಟರು. “ಇದನ್ನು ಸ್ವಚ್ಛಗೊಳಿಸು.”

ಶಿಷ್ಯನು ಒಮ್ಮೆ ಒರೆಸಿದನು. ಸ್ವಲ್ಪ ಧೂಳು ಹೋಯಿತು. ಮತ್ತೊಮ್ಮೆ ಒರೆಸಿದನು. ಇನ್ನೊಮ್ಮೆ…

ಮತ್ತೆ ಮತ್ತೆ… ನಿಧಾನವಾಗಿ ಕನ್ನಡಿ ಹೊಳೆಯತೊಡಗಿತು. ಸ್ವಲ್ಪ ಸಮಯದ ನಂತರ ಅವನಿಗೆ ತನ್ನದೇ ಮುಖ ಸ್ಪಷ್ಟವಾಗಿ ಕಾಣತೊಡಗಿತು.

ಗುರುಗಳು ಮುಗುಳ್ನಗುತ್ತಾ ಕೇಳಿದರು, “ನಿನ್ನ ಪ್ರತಿಬಿಂಬವನ್ನು ನೀನೇ ಸೃಷ್ಟಿಸಿದ್ದೀಯೇ?”

“ಇಲ್ಲ ಗುರುಗಳೇ.”

“ಹಾಗಾದರೆ ಅದು ಈಗ ಹೇಗೆ ಕಾಣಿಸಿತು?”

“ಧೂಳು ಹೋಗಿದ್ದರಿಂದ.”

ಗುರುಗಳು ತಲೆಯಾಡಿಸಿದರು “ನಿನ್ನ ಮನಸ್ಸು ಈ ಕನ್ನಡಿಯಂತೆಯೇ. ಶಾಂತಿ, ಜ್ಞಾನ ಮತ್ತು ಕರುಣೆ ಈಗಾಗಲೇ ನಿನ್ನೊಳಗಿವೆ. ಅವುಗಳನ್ನು ಹೊಸದಾಗಿ ಸೃಷ್ಟಿಸಬೇಕಾಗಿಲ್ಲ. ಅವುಗಳನ್ನು ಮರೆಮಾಡಿರುವ ಧೂಳನ್ನು ಮಾತ್ರ ತೆಗೆದುಹಾಕಬೇಕು.”

ಶಿಷ್ಯನು ಕುತೂಹಲದಿಂದ ಕೇಳಿದನು,”ಗುರುಗಳೇ, ಆ ಧೂಳು ಎಂದರೆ ಏನು?”

ಗುರುಗಳು ಶಾಂತವಾಗಿ ಉತ್ತರಿಸಿದರು. “ನೀನು ಬಿಡದೆ ಹಿಡಿದುಕೊಂಡಿರುವ ಪ್ರತಿಯೊಂದು ದ್ವೇಷ.

ನೀನೇ ಬೆಳೆಸಿಕೊಳ್ಳುತ್ತಿರುವ ಪ್ರತಿಯೊಂದು ಭಯ. ನಿನಗೆ ನೀನೇ ಹೇಳಿಕೊಳ್ಳುತ್ತಿರುವ ಪ್ರತಿಯೊಂದು ಸುಳ್ಳು. ಇತರರಿಗಿಂತ ಶ್ರೇಷ್ಠನಾಗಬೇಕು ಎಂಬ ಅಹಂಕಾರ. ಈ ಕ್ಷಣದಲ್ಲಿ ಬದುಕುವುದನ್ನು ಮರೆತು, ಭೂತಕಾಲ ಅಥವಾ ಭವಿಷ್ಯದಲ್ಲಿ ಅಲೆದಾಡುವ ಪ್ರತಿಯೊಂದು ಕ್ಷಣ.”

ಶಿಷ್ಯನು ಮತ್ತೆ ಕನ್ನಡಿಯತ್ತ ನೋಡಿದನು. ಈ ಬಾರಿ ಅವನಿಗೆ ಎಲ್ಲವೂ ಸ್ಪಷ್ಟವಾಯಿತು. ತಾನು ಹೊಸ ವ್ಯಕ್ತಿಯಾಗಬೇಕಾಗಿಲ್ಲ ಎಂಬುದು ಅವನಿಗೆ ಅರ್ಥವಾಯಿತು. ತನ್ನ ನಿಜಸ್ವರೂಪವನ್ನು ಮರೆಮಾಡಿರುವ ಧೂಳನ್ನು ಮಾತ್ರ ತೆಗೆದುಹಾಕಬೇಕು ಎಂಬುದು ಅವನಿಗೆ ತಿಳಿಯಿತು.

                                ************************************************

ಜ್ಞಾನೋದಯ ಎಂದರೆ ಪರಿಪೂರ್ಣ ವ್ಯಕ್ತಿಯಾಗುವುದು ಅಲ್ಲ. ಅದು ನಮ್ಮೊಳಗೆ ಮೊದಲಿನಿಂದಲೇ ಇರುವ ನಿಜಸ್ವರೂಪವನ್ನು ಅನಾವರಣಗೊಳಿಸುವುದು. ಧೂಳು ಇಲ್ಲದ ಕನ್ನಡಿ ಸಹಜವಾಗಿ ಪ್ರತಿಬಿಂಬವನ್ನು ತೋರಿಸುವಂತೆ, ಕೋಪ, ಭಯ, ಅಹಂಕಾರದ ಧೂಳನ್ನು ತೆಗೆದುಹಾಕಿದಾಗ ನಮ್ಮ ಮನಸ್ಸೂ ಸಹಜವಾಗಿಯೇ ಶಾಂತಿ, ಕರುಣೆ ಮತ್ತು ಜ್ಞಾನವನ್ನು ಪ್ರತಿಬಿಂಬಿಸುತ್ತದೆ.

 ೧. ಹಳೆಯ ನೋವನ್ನು ಹಿಡಿದುಕೊಳ್ಳುವುದು

ಯಾರೋ ಹಲವು ವರ್ಷಗಳ ಹಿಂದೆ ಮಾಡಿದ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಬದುಕುತ್ತೇವೆ.

ಧೂಳು:ದ್ವೇಷ.

ಕನ್ನಡಿ: ಕ್ಷಮಿಸಿದಾಗ ಮನಸ್ಸಿನ ಶಾಂತಿ ಮತ್ತೆ ಕಾಣಿಸುತ್ತದೆ.

 ೨. ಆತ್ಮವಿಶ್ವಾಸದ ಕೊರತೆ

“ನಾನು ಸಾಕಷ್ಟು ಒಳ್ಳೆಯವನಲ್ಲ” ಎಂದು ಯಾವಾಗಲೂ ನಮ್ಮನ್ನೇ ನಾವು ನಂಬಿಸಿಕೊಳ್ಳುತ್ತೇವೆ.

ಧೂಳು: ನಕಾರಾತ್ಮಕ ಭಾವನೆ.

ಕನ್ನಡಿ: ಆ ತಪ್ಪು ನಂಬಿಕೆಯನ್ನು ಬಿಟ್ಟಾಗ ಆತ್ಮವಿಶ್ವಾಸ ಅರಳುತ್ತದೆ.

 ೩. ಸಾಮಾಜಿಕ ಜಾಲತಾಣಗಳಲ್ಲಿ ಹೋಲಿಕೆ

ಇತರರ ಜೀವನವನ್ನು ನೋಡಿ ನಮ್ಮ ಬದುಕನ್ನು ಹೋಲಿಸುತ್ತೇವೆ.

ಧೂಳು: ಹೋಲಿಕೆ.

ಕನ್ನಡಿ: ಕೃತಜ್ಞತೆ ನಮ್ಮ ಜೀವನದ ನಿಜವಾದ ಸೌಂದರ್ಯವನ್ನು ತೋರಿಸುತ್ತದೆ.

 ೪. ಭೂತಕಾಲದಲ್ಲೇ ಬದುಕುವುದು

ಹಳೆಯ ತಪ್ಪುಗಳನ್ನು ನೆನೆದು ಸದಾ ಪಶ್ಚಾತ್ತಾಪದಲ್ಲಿರುತ್ತೇವೆ.

ಧೂಳು: ಪಶ್ಚಾತ್ತಾಪ.

ಕನ್ನಡಿ: ನೆನ್ನೆಯನ್ನು  ಬಿಟ್ಟಾಗ ಇಂದಿನ ಕ್ಷಣ ಸ್ಪಷ್ಟವಾಗುತ್ತದೆ.

ಉತ್ತಮರಾಗಲು ಜೀವನವಿಡೀ ಪ್ರಯತ್ನಿಸಬೇಕಿಲ್ಲ. ಮನಸ್ಸಿನಲ್ಲಿರುವ  ಧೂಳನ್ನು ತೆಗೆದುಹಾಕಿದರೆ, ನಮ್ಮ ನಿಜಸ್ವರೂಪ ತಾನೇ ಹೊರಹೊಮ್ಮುತ್ತದೆ.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.