ತಿಳಿವಳಿಕೆಯಿಲ್ಲದೆ ಮಾಡಿದ ಒಂದು ತಪ್ಪು, ಅನೇಕ ಬಾರಿ ಪುನರಾವರ್ತನೆಯಾದಾಗ, ಅದು ನಿಮ್ಮ ಎರಡನೆಯ ಸ್ವಭಾವವಾಗಿಬಿಡುತ್ತದೆ; ಆಗ ಅದು sin ~ ಓಶೋ / Don’t Let Yourself Be Upset by the Sutra, Rather Upset the Sutra Yourself । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ತಪ್ಪುಗಳನ್ನು ಮಾಡುವುದಕ್ಕೆ ಹೆದರಬೇಕಾದ ಅಗತ್ಯವಿಲ್ಲ. ಏಕೆಂದರೆ ದೇವರು ಪ್ರೀತಿಯ ದೇವರು; ಆತನ ಕರುಣೆಯ ಮೇಲೆ ನೀವು ಅವಲಂಬಿತರಾಗಬಹುದು. ನೀವು ಎಷ್ಟು ತಪ್ಪುಗಳನ್ನು ಬೇಕಾದರೂ ಮಾಡಬಹುದು; ಆದರೂ ನೀವು ಕ್ಷಮಿಸಲ್ಪಡುತ್ತೀರಿ. ವಾಸ್ತವವಾಗಿ, ನೀವು ಈಗಾಗಲೇ ಕ್ಷಮಿಸಲ್ಪಟ್ಟಿದ್ದೀರಿ.
ತಪ್ಪುಗಳನ್ನು ಮಾಡುವುದು ಕಲಿಯುವ ಒಂದು ಮಾರ್ಗ. ತಪ್ಪುಗಳಿಲ್ಲದೆ ಯಾರೂ ಕಲಿಯಲು ಸಾಧ್ಯವಿಲ್ಲ. ತಪ್ಪುಗಳನ್ನು ಮಾಡುವುದು ಬೆಳೆಯುವ ಒಂದು ಮಾರ್ಗ. ತಪ್ಪುಗಳಿಲ್ಲದೆ ಯಾರೂ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ತಪ್ಪುಗಳನ್ನು ಮಾಡಿ. ಆದರೆ ಒಂದೇ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ: ಅದೇ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ. ಏಕೆಂದರೆ ಆಗ ನೀವು ಅದರಿಂದ ಏನನ್ನೂ ಕಲಿಯುವುದಿಲ್ಲ. ಆಗ ಆ ತಪ್ಪು ಯಾಂತ್ರಿಕವಾಗಿಬಿಡುತ್ತದೆ; ಅದು ತನ್ನಷ್ಟಕ್ಕೆ ತಾನೇ ಪುನರಾವರ್ತಿಸಿಕೊಳ್ಳಲು ಆರಂಭಿಸುತ್ತದೆ. ಅದು ಪಾಪ (sin).
ನನ್ನ ದೃಷ್ಟಿಯಲ್ಲಿ, sin ಎನ್ನುವುದಕ್ಕೆ ಇದೇ ವ್ಯಾಖ್ಯಾನ ಏನೆಂದರೆ : ಒಂದು ತಪ್ಪನ್ನು ನೀವು ಎಷ್ಟೋ ಬಾರಿ ಪುನರಾವರ್ತಿಸುತ್ತಾ ಹೋದಾಗ, ಅದು ನಿಮ್ಮೊಳಗೆ ಎಷ್ಟು ಆಳವಾಗಿ ಬೇರೂರಿಬಿಡುತ್ತದೆ ಎಂದರೆ, ಮುಂದೆ ಅದನ್ನು ಮಾಡಲು ನೀವು ಯಾವುದೇ ಪ್ರಯತ್ನವನ್ನೂ ಮಾಡಬೇಕಾಗುವುದಿಲ್ಲ; ಅದು ತನ್ನಷ್ಟಕ್ಕೆ ತಾನೇ ಪುನರಾವರ್ತಿಸಿಕೊಳ್ಳುತ್ತದೆ. ಅದು ಸ್ವಾಯತ್ತವಾಗಿಬಿಡುತ್ತದೆ. ಆಗ ಅದೇ sin.
ತಿಳಿವಳಿಕೆಯಿಲ್ಲದೆ ಮಾಡಿದ ಒಂದು ತಪ್ಪು, ಅನೇಕ ಬಾರಿ ಪುನರಾವರ್ತನೆಯಾದಾಗ, ಅದು ನಿಮ್ಮ ಎರಡನೆಯ ಸ್ವಭಾವವಾಗಿಬಿಡುತ್ತದೆ; ಆಗ ಅದು sin.
ಇಲ್ಲದಿದ್ದರೆ, ಪ್ರತಿಯೊಂದು ತಪ್ಪೂ ಸುಂದರವೇ. ಒಂದು ತಪ್ಪನ್ನು ಒಮ್ಮೆ ಮಾಡಿ, ಅದನ್ನು ಜಾಗೃತಿಯಿಂದ ಮಾಡಿದರೆ, ಆ ತಪ್ಪನ್ನು ಮಾಡುವುದಕ್ಕಿಂತ ಮೊದಲು ನೀವು ಹೇಗಿದ್ದಿರೋ ನಂತರ ಮುಂಚೆಗಿಂತ ಹೆಚ್ಚು ಸಮೃದ್ಧರಾಗುತ್ತೀರಿ. ಆ ಅನುಭವ ನಿಮ್ಮನ್ನು ಇನ್ನಷ್ಟು ಸಮೃದ್ಧರನ್ನಾಗಿ ಮಾಡುತ್ತದೆ. ನೀವು ಹೆಚ್ಚು ಎಚ್ಚರಿಕೆಯಿಂದಿರುತ್ತೀರಿ, ಹೆಚ್ಚು ಜಾಗೃತರಾಗುತ್ತೀರಿ. ನೀವು ಜೀವನದ ಇನ್ನಷ್ಟು ಮುಖಗಳನ್ನು ಕಂಡಿರುತ್ತೀರಿ.
ಹೀಗೆ ನೀವು ನಿಧಾನವಾಗಿ, ನಿಧಾನವಾಗಿ ಬೆಳೆಯುತ್ತಾ ಹೋದಂತೆ, ನಿಮ್ಮ ತಪ್ಪುಗಳು ಕಡಿಮೆಯಾಗುತ್ತಾ ಹೋಗುತ್ತವೆ…
ನಿಮ್ಮ ಬೆಳವಣಿಗೆ ‘ಜ್ಞಾನೋದಯ’ ಎನ್ನುವ ಸ್ಫೋಟದ ಹಂತವನ್ನು ತಲುಪಿದ ಕ್ಷಣದಲ್ಲಿ, ಯಾವುದೇ ತಪ್ಪುಗಳು ನಡೆಯುವುದಿಲ್ಲ. ಆಗ ಜೀವನವು ಸ್ವಯಂಸ್ಫೂರ್ತಿಯುತವಾಗಿರುತ್ತದೆ, ಸರಳವಾದ ಒಂದು ಹರಿವು… ತುಂಬಾ ಸಾಮಾನ್ಯವಾದದ್ದು, ಆದರೂ ಅದೇ ಸಮಯದಲ್ಲಿ ಅತ್ಯಂತ ಅಸಾಮಾನ್ಯವಾದದ್ದೂ ಆಗಿರುತ್ತದೆ.

