ಮೌನ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಅದು ಮಾರಾಟಕ್ಕಿರುವ ಒಂದು ಉತ್ಪನ್ನವಾಗಿ ಬದಲಾಗಿದೆ. ಅದನ್ನು ನೀವು ಹಣ ಕೊಟ್ಟು ಖರೀದಿಸಬಹುದು. ನೆಮ್ಮದಿಯನ್ನೂ ಹಣ ಕೊಟ್ಟು ಪಡೆದುಕೊಳ್ಳಬಹುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ಗಮನಿಸಿದ್ದೀರಾ? ಈಗ ನಾವು ಎಲ್ಲಿಗೆ ಹೋದರೂ ಸುತ್ತಮುತ್ತ ಶಬ್ದ, ಜಾಹೀರಾತುಗಳು ಮತ್ತು ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಸಂಗತಿಗಳೇ ತುಂಬಿಕೊಂಡಿವೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಗೇ ಹೋದರೂ, ಯಾರೋ ಒಬ್ಬರು ಏನನ್ನೋ ಹೇಳುತ್ತಾ ನಮ್ಮ ಗಮನವನ್ನು ಬಲವಂತವಾಗಿ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುತ್ತಾರೆ. ತತ್ವಜ್ಞಾನಿ ಮ್ಯಾಥ್ಯೂ ಕ್ರಾಫರ್ಡ್ ಅವರ ಪ್ರಕಾರ, ಜಗತ್ತು ನಮ್ಮ ನೆಮ್ಮದಿ ಮತ್ತು ಮೌನವನ್ನು ನಮ್ಮಿಂದ ಕಸಿದುಕೊಂಡಿದೆ; ಈಗ ಅದನ್ನೇ ಮತ್ತೆ ನಮಗೆ ಮಾರಲು ಪ್ರಯತ್ನಿಸುತ್ತಿದೆ.
ಕ್ರಾಫರ್ಡ್ ಇದನ್ನು Attentional Commons ಎಂದು ಕರೆಯುತ್ತಾರೆ. ಏಕೆಂದರೆ, ಬಹಳ ಹಿಂದೆ ಸಾಮಾನ್ಯ ಭೂಮಿ ಎಲ್ಲರಿಗೂ ಮುಕ್ತವಾಗಿತ್ತು. ಜನರು ಅಲ್ಲಿ ತಮ್ಮ ಪ್ರಾಣಿಗಳನ್ನು ಮೇಯಿಸುತ್ತಿದ್ದರು, ಬೆಳೆಗಳನ್ನು ಬೆಳೆಯುತ್ತಿದ್ದರು ಮತ್ತು ಆ ಭೂಮಿಯನ್ನು ಮುಕ್ತವಾಗಿ ಬಳಸಿಕೊಂಡು ಆನಂದಿಸುತ್ತಿದ್ದರು. ಆದರೆ ಶತಮಾನಗಳು ಕಳೆದಂತೆ, ವಿವಿಧ ವ್ಯಕ್ತಿಗಳು ಆ ಸಾಮೂಹಿಕ ಭೂಮಿಯನ್ನು ತಮ್ಮ ಖಾಸಗಿ ಸ್ವತ್ತನ್ನಾಗಿ ಮಾಡಿಕೊಂಡರು. ನಂತರ ಅದನ್ನೇ ಜನರಿಗೆ ಆಸ್ತಿಯ ರೂಪದಲ್ಲಿ ಹಣಕ್ಕೆ ಮಾರಲು ಪ್ರಯತ್ನಿಸಿದರು. ಕ್ರಾಫರ್ಡ್ ಅವರ ವಾದವೇನೆಂದರೆ, ನಮ್ಮ ನೆಮ್ಮದಿ ಮತ್ತು ನಿಶ್ಶಬ್ದತೆಯ ವಿಷಯದಲ್ಲಿಯೂ ಇದೇ ರೀತಿಯ ಸಂಗತಿ ನಡೆಯುತ್ತಿದೆ.
ಇದಕ್ಕೆ ಅವರು ನೀಡುವ ಉದಾಹರಣೆ ವಿಮಾನ ನಿಲ್ದಾಣ.
ಅಲ್ಲಿ ವಿಮಾನಗಳ ನಿರ್ಗಮನ ದ್ವಾರಗಳ ಬಳಿ ಪರದೆಗಳಿರುತ್ತವೆ. ಭದ್ರತಾ ತಪಾಸಣೆಯ ಟ್ರೇಗಳ ಕೆಳಭಾಗದಲ್ಲೂ ಜಾಹೀರಾತುಗಳಿರುತ್ತವೆ. ಮೂತ್ರಾಲಯಗಳ ಮೇಲೂ ಜಾಹೀರಾತುಗಳಿರುತ್ತವೆ. ಬಾರ್ನ ಮೇಲ್ಭಾಗದಲ್ಲಿ ಒಂದು ಟೆಲಿವಿಷನ್ ಇರುತ್ತದೆ; ಅದನ್ನು ನೀವು ಆಫ್ ಮಾಡಲೂ ಸಾಧ್ಯವಿಲ್ಲ. ಆದರೆ ಅದೇ ವಿಮಾನ ನಿಲ್ದಾಣದ ಮೇಲಿನ ಮಹಡಿಯಲ್ಲಿ, ಇನ್ನೂ ಮೌನವನ್ನು ಅನುಭವಿಸಬಹುದಾದ ಒಂದು ಸ್ಥಳವಿದೆ. ಅದೇ Business Lounge.
ಮೌನ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಅದು ಮಾರಾಟಕ್ಕಿರುವ ಒಂದು ಉತ್ಪನ್ನವಾಗಿ ಬದಲಾಗಿದೆ. ಅದನ್ನು ನೀವು ಹಣ ಕೊಟ್ಟು ಖರೀದಿಸಬಹುದು. ನೆಮ್ಮದಿಯನ್ನೂ ಹಣ ಕೊಟ್ಟು ಪಡೆದುಕೊಳ್ಳಬಹುದು.
ಇಲ್ಲಿರುವ ಸಮಸ್ಯೆಯೆಂದರೆ, ಇದನ್ನು ವಿರೋಧಿಸುವುದು ಸುಲಭವಲ್ಲ. ಏಕೆಂದರೆ, ನಮ್ಮ ಮೇಲೆ ನಡೆಯುವ ಪ್ರತಿಯೊಂದು ಸಣ್ಣ ಹಸ್ತಕ್ಷೇಪವೂ ಪ್ರತ್ಯೇಕವಾಗಿ ನೋಡಿದಾಗ ಅಷ್ಟೇನೂ ಗಂಭೀರವಾಗಿ ಕಾಣಿಸುವುದಿಲ್ಲ. ರಸೀದಿಯ ಹಿಂಭಾಗದಲ್ಲಿರುವ ಜಾಹೀರಾತಿನಿಂದ ಯಾರಿಗಾದರೂ ಗಂಭೀರ ಹಾನಿಯಾಗಿರುವ ಉದಾಹರಣೆಯೇನೂ ಇಲ್ಲ. ಆದರೂ, ಇವೆಲ್ಲವೂ ಒಟ್ಟುಗೂಡಿದಾಗ, ನಾವು ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.
ಹಾಗಾಗಿ, ಸಾರ್ವಜನಿಕ ಸ್ಥಳದಲ್ಲಿರುವಾಗ ನಿಮಗೆ ಯೋಚಿಸಲು ಸಾಧ್ಯವಾಗುತ್ತಿಲ್ಲವೆಂದರೆ, ಅದಕ್ಕೆ ನೀವೇ ಕಾರಣರಲ್ಲ. ಇಂತಹ ಅನುಭವ ನಿಮಗೊಬ್ಬರಿಗೇ ಆಗುವುದೂ ಇಲ್ಲ. ಈ ಜಗತ್ತು ನಿಮ್ಮಿಂದ ಯಾವುದೋ ಅಮೂಲ್ಯವಾದದ್ದನ್ನು ಕಸಿದುಕೊಂಡಿದೆ; ಅದನ್ನೇ ಈಗ ಒಂದು ಸಂಪನ್ಮೂಲವನ್ನಾಗಿ ಪರಿವರ್ತಿಸಿದೆ.
ನಿಮ್ಮ ಅನುಮತಿಯನ್ನು ಯಾರೂ ಕೇಳಲಿಲ್ಲ. ಅಷ್ಟೇ ಏಕೆ, ಈ ಸಂಗತಿ ನಡೆಯುತ್ತಿದೆ ಎನ್ನುವುದನ್ನೂ ಯಾರೂ ನಿಮಗೆ ತಿಳಿಸಲಿಲ್ಲ. ಅವರು ಸುಮ್ಮನೆ ನಿಮ್ಮ ಮನಃಶಾಂತಿಯನ್ನು ಕಸಿದುಕೊಂಡರು. ಈಗ ಅದೇ ಮನಃಶಾಂತಿಯನ್ನು ನಿಮಗೆ ಮತ್ತೆ ಮಾರಲು ಪ್ರಯತ್ನಿಸುತ್ತಿದ್ದಾರೆ.

