ಹನುಮನ ‘ರಾಮಾಯಣ’

‘ಆನಂದ ರಾಮಾಯಣ’ದ ಪ್ರಕಾರ ವಾಲ್ಮೀಕಿಗಳಿಗೂ ಮೊದಲು ಹನುಮಂತ ರಾಮಕಥೆ ಬರೆದಿದ್ದನಂತೆ… । ಸಂಗ್ರಹ – ನಿರೂಪಣೆ : ಚೇತನಾ ತೀರ್ಥಹಳ್ಳಿ

ರಾವಣ ಸಂಹಾರದ ನಂತರ ಶ್ರೀರಾಮನು ಅಯೋಧ್ಯೆಯಲ್ಲಿ ಆಡಳಿತ ನಡೆಸುತ್ತಿದ್ದಾಗ, ಹನುಮಂತನು ಹಿಮಾಲಯಕ್ಕೆ ತೆರಳಿ ತಪಸ್ಸಿನಲ್ಲಿ ಮಗ್ನನಾದ. ಆ ಸಮಯದಲ್ಲಿ, ವಾಲ್ಮೀಕಿ ಮಹರ್ಷಿಗಳು ತಾವು ರಚಿಸಿದ ರಾಮಾಯಣ ಮಹಾಕಾವ್ಯವನ್ನು ಹನುಮಂತನಿಗೆ ತೋರಿಸಿ ಆತನ ಅಭಿಪ್ರಾಯ ಪಡೆಯಲು ಅವನ ಬಳಿ ಹೋದರು.

ಅಲ್ಲಿ ಅವರಿಗೊಂದು ಅಚ್ಚರಿ ಕಾದಿತ್ತು. ಹನುಮಂತನು ಹಿಮಾಲಯದ ಕಲ್ಲುಬಂಡೆಗಳ ಮೇಲೆ ತನ್ನ ಉಗುರುಗಳಿಂದಲೇ ಶ್ರೀರಾಮನ ಕಥೆಯನ್ನು ಕೆತ್ತಿದ್ದ. ಅವನ ಭಕ್ತಿಪೂರ್ಣ ರಚನೆಯು ಅತ್ಯಂತ ಸುಂದರ ಮತ್ತು ಭಾವಪೂರ್ಣವಾಗಿತ್ತು. ಅದನ್ನು ಓದಿದ ವಾಲ್ಮೀಕಿಗಳು ಸಂಕೋಚದಿಂದ ಹಿಂಜರಿಯುತ್ತ, ‘ಹನುಮಂತ, ವಜ್ರದಂತೆ ಹೊಳೆಯುತ್ತಿರುವ ನಿನ್ನ ಈ ಕಾವ್ಯದ ಮುಂದೆ ನಾನು ಬರೆದ ರಾಮಾಯಣ ಮಂಕಾಗಿಬಿಡುತ್ತದೆ. ಜಗತ್ತು ನಿನ್ನ ಕೃತಿಯನ್ನೇ ಶ್ರೇಷ್ಠವೆಂದು ಕೊಂಡಾಡುತ್ತದೆ’ ಅಂದರು.

ಅವರ ಮಾತು ಕೇಳಿದ ಹನುಮಂತನು ಸ್ವಲ್ಪವೂ ಯೋಚಿಸದೆ, ತನ್ನ ಬರಹವಿದ್ದ ಎಲ್ಲಾ ಬಂಡೆಗಳನ್ನು ತನ್ನ ಭುಜದ ಮೇಲೆ ಹೊತ್ತು ಸಮುದ್ರಕ್ಕೆ ಎಸೆದುಬಿಟ್ಟ! ‘ಮಹರ್ಷಿಗಳೇ, ನಾನು ಕೇವಲ ಶ್ರೀರಾಮನ ಮೇಲಿನ ಪ್ರೀತಿ ಮತ್ತು ಭಕ್ತಿಗಾಗಿ ರಾಮಕಥೆಯನ್ನು ಬರೆದೆನೇ ಹೊರತು, ಪ್ರದರ್ಶನಕ್ಕಾಗಿ ಅಲ್ಲ. ಆದರೆ ನೀವು ಜಗತ್ತಿಗೆ ಶ್ರೀರಾಮನ ಪರಿಚಯ ಮಾಡಿಸುವ ಸಲುವಾಗಿ ಇದನ್ನು ಬರೆದಿರುವಿರಿ. ಜನರಿಗಾಗಿ ಬರೆದ ನಿಮ್ಮ ಕಾವ್ಯ ಜನರನ್ನು ತಲುಪಲೇಬೇಕು. ನನ್ನ ರಾಮನ ಕಥೆ ನನ್ನ ಹೃದಯದಲ್ಲಿದ್ದರೆ ಸಾಕು’  ಎಂದು ಅವರನ್ನು ಸಂತೈಸಿದ.

ಭಕ್ತಿಯ ಹಿರಿಮೆ ಇದು. ಸದಾ ರಾಮಭಕ್ತಿಯಲ್ಲಿ ಮುಳುಗಿರುತ್ತಿದ್ದ ಹನುಮಂತ ಏನು ಹೇಳಿದರೂ ಅದು ಶ್ರೀರಾಮನ ಸ್ಮರಣೆಯಾಗಿ ಹೊಮ್ಮುತ್ತಿತ್ತು. ಏನು ಬರೆದರೂ ಅದು ರಾಮಕಥೆಯಾಗುತ್ತಿತ್ತು. ಅದರ ಕೀರ್ತಿಯನ್ನು ಅವನು ತನ್ನದಾಗಿಸಿಕೊಳ್ಳಲು ಬಯಸಲಿಲ್ಲ.

ಜನಪದರಲ್ಲಿ ಹೆಚ್ಚು ಪ್ರಚಲಿತವಿರುವ ಈ ಕಥೆಯು ‘ಆನಂದ ರಾಮಾಯಣ’ದಲ್ಲಿ ಬರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.