ಗುರುವಿನ ಕರುಣೆ…

ಗುರುವಿನ ಕರುಣೆ ಜುದಾಸನನ್ನೂ ತನ್ನೊಂದಿಗಿರಲು ಬಿಡುತ್ತದೆ… ~ ಓಶೋ / The Secret / The Mirror Goes On Reflecting । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜ್ಞಾನೋದಯ ಹೊಂದಿದ ವ್ಯಕ್ತಿಯ ಸಾನ್ನಿಧ್ಯದಲ್ಲಿದ್ದಾಗ, ನೀವು ಹೇಗಿದ್ದೀರೋ ಹಾಗೆ ಮಾತ್ರವಲ್ಲ, ಹಿಂದೆ ಹೇಗಿದ್ದಿರಿ ಮತ್ತು ಭವಿಷ್ಯದಲ್ಲಿ ಹೇಗಿರಲಿದ್ದೀರಿ ಎನ್ನುವುದೂ ಪ್ರತಿಬಿಂಬಿತವಾಗುತ್ತದೆ. ನಿಮ್ಮ ವರ್ತಮಾನದ ಕ್ಷಣದೊಳಗೆ ನಿಮ್ಮ ಸಂಪೂರ್ಣ ಭೂತಕಾಲವೂ, ಭವಿಷ್ಯವೂ ಅಡಕವಾಗಿವೆ. ಜ್ಞಾನೋದಯ ಹೊಂದಿದ ವ್ಯಕ್ತಿಯ ಮುಂದೆ ನಿಂತಾಗ, ನಿಮ್ಮ ಆರಂಭದಿಂದ ಅಂತ್ಯದವರೆಗಿನ ಎಲ್ಲವೂ ಆತನಿಗೆ ತಿಳಿದಿರುತ್ತದೆ. ಯಾವುದೂ ಮರೆಯಾಗಿರುವುದಿಲ್ಲ.

ಜನರು ಅಂತಹ ವ್ಯಕ್ತಿಯ ಬಳಿಗೆ ಬರಲು ಭಯಪಡುವುದಕ್ಕೆ ಇದೇ ಕಾರಣ. ಅವರು ಬುದ್ಧರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುತ್ತಾರೆ. ಬುದ್ಧರನ್ನು ವಂಚಿಸಲು, ಮೋಸಗೊಳಿಸಲು ಅವರಿಗೆ ಸಾಧ್ಯವಿಲ್ಲ. ಆದರೆ ಇಡೀ ಜಗತ್ತನ್ನೇ ಅವರು ವಂಚಿಸಬಲ್ಲರು. ಜಗತ್ತಿನ ಬಗ್ಗೆ ಅವರಿಗೆ ಭಯವಿಲ್ಲ. ಏಕೆಂದರೆ ಅಲ್ಲಿ ಅವರು ಎದುರಿಸುವವರು ಕುರುಡರಂತೆ ಸತ್ಯವನ್ನು ಕಾಣದ ಜನರು. ಆದರೆ ಬುದ್ಧನ ಬಳಿಗೋ, ಕ್ರಿಸ್ತನ ಬಳಿಗೋ, ಕೃಷ್ಣನ ಬಳಿಗೋ ಬಂದಾಗ, ಅವರ ಹೃದಯವನ್ನು ತೀವ್ರವಾದ ಭಯ ಆವರಿಸಿಕೊಳ್ಳುತ್ತದೆ.

ಅಲ್ಲಿ ನಟನೆಗೆ ಅವಕಾಶವೇ ಇರುವುದಿಲ್ಲ. ಅವರ ಎಲ್ಲ ಕಪಟ ನಡವಳಿಕೆಗಳೂ, ಕಪಟ ಮುಖವಾಡಗಳೂ ಕಳಚಿಬೀಳುತ್ತವೆ. ಅವರು ಸಂಪೂರ್ಣವಾಗಿ ಬೆತ್ತಲಾಗುತ್ತಾರೆ—ಅಂದರೆ, ಅವರ ನಿಜಸ್ವರೂಪವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ.

ಯೇಸು, ಜುದಾಸನು ತನಗೆ ದ್ರೋಹ ಬಗೆಯುವ ಮೊದಲೇ ಅವನನ್ನು ಅರಿತಿದ್ದನು. ಜುದಾಸ ಮೊದಲ ದಿನವೇ ತನ್ನ ಬಳಿಗೆ ಬಂದಾಗಿನಿಂದ ಯೇಸುವಿಗೆ ಅವನ ಬಗ್ಗೆ ಎಲ್ಲವೂ ತಿಳಿದಿರಲೇಬೇಕು. ಇದನ್ನು ಬಿಟ್ಟು ಬೇರೆ ಸಾಧ್ಯತೆಯೇ ಇಲ್ಲ.
ಬುದ್ಧನಿಗೂ ದೇವದತ್ತನು ತನಗೆ ದ್ರೋಹ ಬಗೆಯುವ ಮೊದಲೇ ಅವನ ಸ್ವಭಾವ ತಿಳಿದಿತ್ತು. ದೇವದತ್ತನು ಮೊದಲಿನಿಂದಲೇ ಹೇಗಿದ್ದಾನೆ ಎನ್ನುವುದು ಬುದ್ಧನಿಗೆ ಗೊತ್ತಿರಲೇಬೇಕು. ಆದರೂ, ಒಬ್ಬ ಜುದಾಸನನ್ನಾಗಲಿ, ಒಬ್ಬ ದೇವದತ್ತನನ್ನಾಗಲಿ ತನ್ನೊಂದಿಗೇ ಇರಲು ಒಬ್ಬ ಗುರುವಿನ ಕರುಣೆ ಮಾತ್ರ ಅವಕಾಶ ಮಾಡಿಕೊಡುತ್ತದೆ.

ಕನ್ನಡಿ ತನ್ನ ಪ್ರತಿಬಿಂಬಿಸುವ ಕೆಲಸವನ್ನು ಮುಂದುವರಿಸುತ್ತಲೇ ಇರುತ್ತದೆ. ಆದರೆ ಗುರುವಿನ ಕರುಣೆಯು ಕನ್ನಡಿಯ ಪ್ರತಿಬಿಂಬಕ್ಕಿಂತಲೂ ಅಪಾರವಾದುದು.

ಜುದಾಸನು ಯೇಸುವಿಗೆ ದ್ರೋಹ ಬಗೆಯಲಿದ್ದರೂ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಯೇಸು ಸಂಪೂರ್ಣವಾಗಿ ದೈವಕ್ಕೆ ಶರಣಾಗಿದ್ದಾನೆ. ‘ದೇವರು ಹೀಗೆಯೇ ಆಗಬೇಕೆಂದು ಬಯಸಿದ್ದರೆ, ಅದು ಒಳ್ಳೆಯದೇ ಆಗಿರಬೇಕು’ ಎನ್ನುವುದೇ ಯೇಸುವಿನ ಅಚಲವಾದ ನಂಬಿಕೆ.

ಜುದಾಸನೂ ದೈವಿಕ ಅಸ್ತಿತ್ವದ ಒಂದು ಭಾಗವೇ ಆಗಿದ್ದಾನೆ. ಆದ್ದರಿಂದ ಈ ನಾಟಕವು ಅಭಿನಯಿಸಲ್ಪಡಲೇಬೇಕು. ಯೇಸು ಅದಕ್ಕೆ ಸಂಪೂರ್ಣವಾಗಿ ಸಹಕರಿಸುತ್ತಾನೆ. ಪ್ರತಿಯೊಂದು ರೀತಿಯಲ್ಲಿಯೂ ಸಹಕರಿಸುತ್ತಾನೆ—ಜುದಾಸನೊಂದಿಗೂ ಸಹ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.