ಯಂತ್ರಗಳು ವೇಗದ ಬೆಳವಣಿಗೆ ಕಾಣುತ್ತಿದ್ದ ಕಾಲದಲ್ಲಿ ಓಶೋ ನುಡಿದಿದ್ದ ಪ್ರವಾದ ಈಗ ನಿಜವಾಗುತ್ತಿದೆ. “ಒಂದು ದಿನ ಮನುಷ್ಯನು ಕಂಪ್ಯೂಟರ್ನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನ ಹೃದಯದ ಶಕ್ತಿಯನ್ನು ಪ್ರತಿಪಾದಿಸಬೇಕಾಗುತ್ತದೆ. ಇಲ್ಲದಿದ್ದರೆ ಕಂಪ್ಯೂಟರ್ ಮನುಷ್ಯನೊಂದಿಗೆ ಅತ್ಯಂತ ಅಪಾಯಕಾರಿಯಾಗಿ ಸ್ಪರ್ಧಿಸಲಿದೆ; ಅಂತಿಮವಾಗಿ ಮನುಷ್ಯನನ್ನು ಸೋಲಿಸಲಿದೆ.” ಅಂದಿದ್ದರು ಓಶೋ. ನಾವೀಗ ಈ ಹಂತವನ್ನೂ ದಾಟಿ ಎ.ಐ. ಜೊತೆ ಹೋರಾಡುವ ಹಂತಕ್ಕೆ ಬಂಇದ್ದೇವೆ, ಈ ಸಂದರ್ಭದಲ್ಲಿ ಓಶೋ ಮಾತು ಮತ್ತೊಮ್ಮೆ ಪ್ರಸ್ತುತ ಅನಿಸುತ್ತಿದೆ. ಈ ಕುರಿತು ಓಶೋ ಉಪನ್ಯಾಸದ ತುಣುಕು ಇಲ್ಲಿದೆ । ಕನ್ನಡಕ್ಕೆ : ಚಿದಂಬರ ನರೇಂದ್ರ
ಮಾನವನ ಮನಸ್ಸು ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡಬಲ್ಲ ಕಂಪ್ಯೂಟರ್ಗಳು ಈಗಾಗಲೇ ಲಭ್ಯವಿವೆ ಎನ್ನುವುದನ್ನು ನೆನಪಿಡಿ. ಭವಿಷ್ಯದಲ್ಲಿ ಮಾನವನ ಬುದ್ಧಿ ಮತ್ತು ಮನಸ್ಸಿಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್ಗಳು ಬರಲಿವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಹುಶಃ ಅದನ್ನು ಈಗಲೇ ಖಚಿತವಾಗಿ ಊಹಿಸಬಹುದು.
ಆದರೆ ಯಾವ ಕಂಪ್ಯೂಟರ್ಗೂ ಪ್ರೀತಿಸಲು ಸಾಧ್ಯವಿಲ್ಲ. ಶೇಕ್ಸ್ಪಿಯರ್ನಂತೆ ಕವಿತೆ ರಚಿಸಲು ಯಾವುದೇ ಕಂಪ್ಯೂಟರ್ಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಒಂದು ದಿನ ಗಣಿತದ ಲೆಕ್ಕಾಚಾರಗಳನ್ನು ಆಲ್ಬರ್ಟ್ ಐನ್ಸ್ಟೀನ್ನಷ್ಟೇ ಅಥವಾ ಅವರಿಗಿಂತಲೂ ಉತ್ತಮವಾಗಿ ಮಾಡುವ ಸಾಮರ್ಥ್ಯ ಕಂಪ್ಯೂಟರ್ಗಳಿಗೆ ಬರಬಹುದು. ಆದರೆ ವಿನ್ಸೆಂಟ್ ವ್ಯಾನ್ ಗೋ ನಂತೆ ಚಿತ್ರ ಬಿಡಿಸಲು ಅಥವಾ ಬೀಥೋವನ್ನಂತೆ ಸಂಗೀತ ಸಂಯೋಜಿಸಲು ಕಂಪ್ಯೂಟರ್ಗಳಿಗೆ ಎಂದಿಗೂ ಸಾಧ್ಯವಿಲ್ಲ. ಅದಕ್ಕೆ ಯಾವುದೇ ಅವಕಾಶವಿಲ್ಲ. ಏಕೆಂದರೆ ಕಂಪ್ಯೂಟರ್ಗೆ ಹೃದಯವಿಲ್ಲ.
ಒಂದು ದಿನ ಮನುಷ್ಯನು ಕಂಪ್ಯೂಟರ್ನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನ ಹೃದಯದ ಶಕ್ತಿಯನ್ನು ಪ್ರತಿಪಾದಿಸಬೇಕಾಗುತ್ತದೆ. ಇಲ್ಲದಿದ್ದರೆ ಕಂಪ್ಯೂಟರ್ ಮನುಷ್ಯನೊಂದಿಗೆ ಅತ್ಯಂತ ಅಪಾಯಕಾರಿಯಾಗಿ ಸ್ಪರ್ಧಿಸಲಿದೆ; ಅಂತಿಮವಾಗಿ ಮನುಷ್ಯನನ್ನು ಸೋಲಿಸಲಿದೆ.
ಭವಿಷ್ಯದ ಸಂಘರ್ಷ ಇನ್ನು ಮುಂದೆ ಮನುಷ್ಯ ಮತ್ತು ಯಂತ್ರದ ನಡುವೆಯೇ ನಡೆಯಲಿದೆ. ಇದು ಬಡವರು ಮತ್ತು ಶ್ರೀಮಂತರ ನಡುವಿನ ಸಂಘರ್ಷವಲ್ಲ; ಗುಲಾಮ ಮತ್ತು ಯಜಮಾನನ ನಡುವಿನ ಸಂಘರ್ಷವಲ್ಲ; ಜೀತದಾಳು ಮತ್ತು ಜಮೀನ್ದಾರನ ನಡುವಿನ ಸಂಘರ್ಷವೂ ಅಲ್ಲ. ಆ ಕಾಲ ಈಗಾಗಲೇ ಮುಗಿದುಹೋಗಿದೆ.
ಇದು ಇನ್ನು ಮುಂದೆ ಪುರುಷ ಮತ್ತು ಮಹಿಳೆಯ ನಡುವಿನ ಸಂಘರ್ಷವೂ ಆಗಿರುವುದಿಲ್ಲ. ಬದಲಾಗಿ, ಮನುಷ್ಯ ಮತ್ತು ಯಂತ್ರದ ನಡುವಿನ ಸಂಘರ್ಷವಾಗಿರಲಿದೆ. ವಿಪರ್ಯಾಸವೆಂದರೆ, ಆ ಯಂತ್ರವನ್ನು ಸೃಷ್ಟಿಸಿದವನು ಸ್ವತಃ ಮನುಷ್ಯನೇ!
ಮನುಷ್ಯನು ತನ್ನ ಹೃದಯದತ್ತ ಸಾಗಿದಾಗ ಮಾತ್ರ ಉಳಿದುಕೊಳ್ಳಲು ಸಾಧ್ಯ. ಆಗ ಮಾತ್ರ ಯಂತ್ರಕ್ಕೆ ಕೆಲವು ಸಂಗತಿಗಳನ್ನು ತಾನು ಮಾತ್ರ ಮಾಡಬಲ್ಲೆ, ಯಂತ್ರಕ್ಕೆ ಅವುಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನುಷ್ಯ ತೋರಿಸಿಕೊಡಬಲ್ಲ. ಅವುಗಳೆಂದರೆ ಕವಿತೆ, ಚಿತ್ರಕಲೆ, ಪ್ರೀತಿ ಮತ್ತು ಧ್ಯಾನ.
ಇದೇ ಮನುಷ್ಯನ ಶ್ರೇಷ್ಠತೆಯಾಗಲಿದೆ.
ತನ್ನ ಘನತೆ ಮತ್ತು ಗೌರವವನ್ನು ಉಳಿಸಿಕೊಳ್ಳಲು ಹೃದಯದ ಮಾರ್ಗವನ್ನು ಹಿಡಿಯುವುದನ್ನು ಬಿಟ್ಟು ಮನುಷ್ಯನಿಗೆ ಬೇರೆ ಯಾವುದೇ ದಾರಿಯಿಲ್ಲದ ದಿನವೊಂದು ಬರಲಿದೆ. ಆ ದಿನ ದೂರವಿಲ್ಲ; ಅದು ಬಹಳ ಹತ್ತಿರದಲ್ಲಿದೆ.
ಓಶೋ ರಜನೀಶ್ / The Open Secret

