ಯಾವುದೇ ಮಾರ್ಗದ ಬಗ್ಗೆಯೂ ನನಗೆ ಮೋಹವಿಲ್ಲ; ಯಾವುದೇ ಮಾರ್ಗದ ಬಗ್ಗೆ ನನಗೆ ಒತ್ತಾಯವೂ ಇಲ್ಲ — ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಧ್ಯಾನದ ಮಾರ್ಗವನ್ನೇ ಅನುಸರಿಸಬೇಕು ಎನ್ನುವ ಹಠವನ್ನೂ ಹೊಂದಿಲ್ಲ; ಪ್ರೀತಿಯ ಮಾರ್ಗವನ್ನೇ ಅನುಸರಿಸಬೇಕು ಎನ್ನುವ ಹಠವೂ ನನಗಿಲ್ಲ. ನನಗೆ ಯಾವುದೇ ನಿಶ್ಚಿತ ಮಾರ್ಗವಿಲ್ಲ. ನೀವು ನನ್ನ ಬಳಿಗೆ ಬಂದಾಗ, ನಾನು ನಿಮ್ಮನ್ನು ಗಮನಿಸಿ, ನಿಮಗೆ ಯಾವುದು ಸೂಕ್ತವಾದ ಮಾರ್ಗವೆನ್ನುವುದನ್ನು ತಿಳಿಸುತ್ತೇನೆ. ನಿಮ್ಮನ್ನು ನನ್ನ ಮಾರ್ಗದಲ್ಲಿ ನಡೆಯುವಂತೆ ಮಾಡುವ ಯಾವ ಪ್ರಯತ್ನವನ್ನೂ ನಾನು ಮಾಡುವುದಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. ನಾನು ನಿಮ್ಮನ್ನು ನೋಡುತ್ತೇನೆ; ನಿಮ್ಮನ್ನು ಗಮನಿಸುವುದರ ಮೂಲಕವೇ ನಿಮಗೆ ಯಾವ ಮಾರ್ಗ ಸೂಕ್ತವೆನ್ನುವುದನ್ನು ನಿರ್ಧರಿಸುತ್ತೇನೆ. ಯಾವುದೇ ಮಾರ್ಗದ ಬಗ್ಗೆಯೂ ನನಗೆ ಮೋಹವಿಲ್ಲ; ಯಾವುದೇ ಮಾರ್ಗದ ಬಗ್ಗೆ ನನಗೆ ಒತ್ತಾಯವೂ ಇಲ್ಲ.
ಆದ್ದರಿಂದ, ಒಬ್ಬ ಮಹಿಳೆ ನನ್ನ ಬಳಿಗೆ ಬಂದರೆ, ಆಕೆಯನ್ನು ಪ್ರೀತಿ ಮತ್ತು ಪ್ರಾರ್ಥನೆಯ ಮಾರ್ಗದಲ್ಲಿ ಸಾಗುವಂತೆ ಸೂಚಿಸುತ್ತೇನೆ. ಕೆಲವೊಮ್ಮೆ ಹೃದಯದ ಭಾವನೆಗಳಿಂದ ತುಂಬಿರುವ ಪುರುಷನೊಬ್ಬ ಬಂದರೂ ಅವನನ್ನೂ ಪ್ರಾರ್ಥನೆಯ ಮಾರ್ಗದಲ್ಲಿಯೇ ಸಾಗುವಂತೆ ಹೇಳುತ್ತೇನೆ. ಅದೇ ರೀತಿ, ಪ್ರೀತಿ ಅರಳಲು ಸಾಧ್ಯವಾಗದಂತಹ ಮಹಿಳೆಯೊಬ್ಬಳು ಬಂದರೆ, ಆಕೆಯನ್ನು ಧ್ಯಾನದ ಮಾರ್ಗದಲ್ಲಿ ಸಾಗುವಂತೆ ನಿರ್ದೇಶಿಸುತ್ತೇನೆ.
ಇದಲ್ಲದೆ, ಪ್ರಾರ್ಥನೆಗೂ ಅನೇಕ ರೂಪಗಳಿವೆ. ಇಸ್ಲಾಂ ಧರ್ಮಕ್ಕೆ ತನ್ನದೇ ಆದ ಪ್ರಾರ್ಥನಾ ವಿಧಾನವಿದೆ; ಹಿಂದೂಗಳಿಗೂ ಅವರದೇ ಆದ ವಿಧಾನವಿದೆ. ಅದೇ ರೀತಿ, ಧ್ಯಾನಕ್ಕೂ ಅಸಂಖ್ಯಾತ ರೂಪಗಳಿವೆ. ಜೈನರ ಧ್ಯಾನಮಾರ್ಗವೇ ಬೇರೆ, ಬೌದ್ಧರ ಮಾರ್ಗವೇ ಬೇರೆ, ಪತಂಜಲಿಯ ಮಾರ್ಗವೇ ಬೇರೆ, ಲಾವೊ ತ್ಸುವಿನ ಮಾರ್ಗವೇ ಬೇರೆ.
ನಾನು ನಿಮ್ಮನ್ನು ಗಮನಿಸುತ್ತೇನೆ.
ಈ ಸಂಗತಿಯನ್ನು ಬಹಳ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.
ಇಲ್ಲಿ ಎರಡು ರೀತಿಯ ಮಾರ್ಗಗಳಿವೆ. ಮೊದಲನೆಯದು, ನನ್ನದೇ ಆದ ಒಂದು ನಿರ್ದಿಷ್ಟ ಮಾರ್ಗವಿರುವುದು. ಆಗ ನೀವು ಯಾರೇ ಆಗಿರಲಿ, ಅದರಿಂದ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವು ನನ್ನ ಮಾರ್ಗದಲ್ಲಿ ನಡೆಯಲು ಬಯಸಿದರೆ, ನಾನು ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಮಾರ್ಗದಲ್ಲಿ ನಡೆಯಲು ಸಮರ್ಥರಾದವರನ್ನು ಮಾತ್ರ ನಾನು ಸ್ವೀಕರಿಸುತ್ತೇನೆ; ಆ ಮಾರ್ಗವನ್ನು ವಿರೂಪಗೊಳಿಸುವ ಸಾಧ್ಯತೆಯಿರುವವರನ್ನು ತಿರಸ್ಕರಿಸುತ್ತೇನೆ. ಅಂತಹವರಿಗೆ, “ಈ ಮಾರ್ಗ ನಿಮಗಾಗಿ ಅಲ್ಲ. ಬೇರೆ ಯಾವುದಾದರೂ ದೇವಾಲಯವನ್ನು ಹುಡುಕಿಕೊಳ್ಳಿ” ಎಂದು ಹೇಳುತ್ತೇನೆ.
ಬುದ್ಧರಿಗೆ ಅವರದೇ ಆದ ಒಂದು ನಿರ್ದಿಷ್ಟ ಮಾರ್ಗವಿದೆ — ಬುದ್ಧನ ಮಾರ್ಗ. ಮಹಾವೀರರಿಗೂ ಅವರದೇ ಆದ ಒಂದು ನಿರ್ದಿಷ್ಟ ಮಾರ್ಗವಿದೆ. ಆದರೆ ನನಗೆ ಯಾವುದೇ ನಿರ್ದಿಷ್ಟ ಮಾರ್ಗದ ಹಠವಿಲ್ಲ. ನಿಮ್ಮನ್ನು ನನ್ನ ಮಾರ್ಗದಲ್ಲಿ ನಡೆಸುವ ಉದ್ದೇಶ ನನಗಿಲ್ಲ. ನೀವು ಬಯಸಿದರೆ ಇದನ್ನೇ ನನ್ನ ಮಾರ್ಗವೆಂದು ಕರೆಯಬಹುದು: ಅಂದರೆ, ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಂತ ಮಾರ್ಗದಲ್ಲಿ ನಡೆಯಲು ನೆರವಾಗುವುದು ನನ್ನ ಉದ್ದೇಶ.
ನಾನು ನಿಮ್ಮನ್ನು ಆಳವಾಗಿ ಗಮನಿಸುತ್ತೇನೆ. ನನಗೆ ಯಾವುದೇ ಮಾರ್ಗಕ್ಕಿಂತಲೂ ನೀವೇ ಹೆಚ್ಚು ಅಮೂಲ್ಯರು. ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಅಮೂಲ್ಯ.
ತಾಲ್ಮೂದ್ ಎಂಬ ಯಹೂದಿ ಧಾರ್ಮಿಕ ಗ್ರಂಥದಲ್ಲಿ ಒಂದು ಮಾತಿದೆ:
ಇಡೀ ಸೃಷ್ಟಿಗಿಂತಲೂ ಒಬ್ಬ ವ್ಯಕ್ತಿ ಹೆಚ್ಚು ಅಮೂಲ್ಯ.
ನಾನು ಆ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ.
ಪ್ರತಿಯೊಬ್ಬ ವ್ಯಕ್ತಿಯೂ ಎಷ್ಟು ಅಮೂಲ್ಯನೆಂದರೆ, ಒಂದು ತಕ್ಕಡಿಯ ಒಂದು ತಟ್ಟೆಯಲ್ಲಿ ಇಡೀ ಸೃಷ್ಟಿಯನ್ನೇ ಇಟ್ಟರೂ, ಇನ್ನೊಂದು ತಟ್ಟೆಯಲ್ಲಿ ಒಬ್ಬ ವ್ಯಕ್ತಿಯನ್ನು ಇರಿಸಿದರೆ, ಆ ಒಬ್ಬ ವ್ಯಕ್ತಿಯ ತಟ್ಟೆಯೇ ಭಾರವಾಗುತ್ತದೆ. ಅಷ್ಟೊಂದು ಮಹತ್ವ ಮತ್ತು ಘನತೆ ಪ್ರತಿಯೊಬ್ಬ ವ್ಯಕ್ತಿಗೂ ಇದೆ.
ನಾನು ನಿಮ್ಮನ್ನು ಗಮನಿಸಿ, ನಿಮಗೆ ಯಾವುದು ಅತ್ಯಂತ ಸೂಕ್ತವೋ ಅದನ್ನೇ ತಿಳಿಸುತ್ತೇನೆ. ಆದ್ದರಿಂದ ನನಗೆ ಎಲ್ಲ ಮಾರ್ಗಗಳೂ ಸ್ವೀಕಾರಾರ್ಹ. ನೀವು ನೃತ್ಯ ಮಾಡುತ್ತಾ ದೈವದ ಕಡೆಗೆ ಸಾಗುವುದಾದರೆ, ನನ್ನ ಆಶೀರ್ವಾದಗಳು ನಿಮ್ಮೊಂದಿಗಿವೆ. ಕಣ್ಣುಗಳನ್ನು ಮುಚ್ಚಿಕೊಂಡು, ಆಳವಾದ ಧ್ಯಾನದಲ್ಲಿ ಮುಳುಗಿ ಸಾಗುವುದಾದರೆ, ಆಗಲೂ ನನ್ನ ಆಶೀರ್ವಾದಗಳು ನಿಮ್ಮೊಂದಿಗಿವೆ.
ನೀವು ಮಹಿಳೆಯಾಗಿ ಸಾಗುತ್ತೀರೋ ಅಥವಾ ಪುರುಷನಾಗಿ ಸಾಗುತ್ತೀರೋ , ಇವೆಲ್ಲವೂ ಸಾಗುವ ವಿಭಿನ್ನ ವಿಧಾನಗಳಷ್ಟೇ. ಅಂತಿಮವಾಗಿ ನೀವು ತಲುಪಬೇಕಾದದ್ದು ಒಂದೇ ಗಮ್ಯಸ್ಥಾನವನ್ನು.
ದೈವ ಒಂದೇ, ಆದರೆ ಅದರ ಹೆಸರುಗಳು ಹಲವು. ಸತ್ಯ ಒಂದೇ, ಆದರೆ ಅದನ್ನು ತಲುಪುವ ಮಾರ್ಗಗಳು ಅನೇಕ. ನಾನು ಎಲ್ಲ ಮಾರ್ಗಗಳನ್ನೂ ಸ್ವೀಕರಿಸುತ್ತೇನೆ. ಪ್ರತಿಯೊಂದು ಮಾರ್ಗವೂ ಫಲಪ್ರದವಾಗಬಲ್ಲದು. ಆದರೆ ಆ ಮಾರ್ಗವು ನಿಮಗೆ ಹೊಂದಿಕೆಯಾಗುತ್ತದೆಯೇ ಇಲ್ಲವೇ ಎನ್ನುವುದರ ಮೇಲೆ ಅದರ ಪರಿಣಾಮಕಾರಿತ್ವ ನಿರ್ಧಾರವಾಗುತ್ತದೆ.
ಆದ್ದರಿಂದ ನನ್ನ ದೃಷ್ಟಿ ಇರುವುದು ನಿಮ್ಮ ಮೇಲೆ. ನನಗೆ ಔಷಧಿಯ ಬಗ್ಗೆ ಚಿಂತೆಯಿಲ್ಲ; ರೋಗಿಯ ಬಗ್ಗೆ ಚಿಂತೆಯಿದೆ. ರೋಗಿಗೆ ಅನುಗುಣವಾಗಿ ಔಷಧಿಯನ್ನು ಆಯ್ಕೆ ಮಾಡುತ್ತೇನೆ. ಕೆಲವು ವೈದ್ಯರು ತಾವು ನೀಡುವ ಔಷಧಿಯನ್ನೇ ಮೊದಲೇ ನಿರ್ಧರಿಸಿಕೊಂಡಿರುತ್ತಾರೆ. ಅವರು ಹೇಳುತ್ತಾರೆ:
“ಈ ಔಷಧಿ ಯಾರಿಗೆ ಹೊಂದಿಕೆಯಾಗುತ್ತದೆಯೋ ಅಂತಹ ರೋಗಿಗಳು ಮಾತ್ರ ನನ್ನ ಬಳಿಗೆ ಬರಬೇಕು. ಉಳಿದ ರೋಗಿಗಳಿಗೆ ಇಲ್ಲಿಂದ ಯಾವುದೇ ಪ್ರಯೋಜನವಿಲ್ಲ.”
ಮಹಾವೀರರಿಗೆ ಒಂದು ಪಂಥವಿದೆ; ಬುದ್ಧರಿಗೆ ಒಂದು ಪಂಥವಿದೆ; ಆದರೆ ನನಗೆ ಯಾವುದೇ ಪಂಥವಿಲ್ಲ. ನಾನು ಯಾವುದೇ ಪಂಥದ ಪರಿಧಿಗೆ ಒಳಪಟ್ಟವನಲ್ಲ.
ಮಹಾವೀರರಿಗೆ ಒಂದು ನಿರ್ದಿಷ್ಟ ನದೀತೀರವಿದೆ. ಅವರು ತೀರ್ಥಂಕರರು, ಅಂದರೆ, ಅವರು ಸಂಸಾರವೆಂಬ ನದಿಯನ್ನು ದಾಟಿಸುವವರು. ಅವರು ತಮ್ಮ ದೋಣಿಯನ್ನು ಆ ನಿರ್ದಿಷ್ಟ ನದೀತೀರದಿಂದಲೇ ಹೊರಡಿಸುತ್ತಾರೆ.
ಆದರೆ ನನಗೆಂದು ಯಾವುದೇ ನಿರ್ದಿಷ್ಟ ನದೀತೀರವಿಲ್ಲ. ನನ್ನ ಬಳಿ ದೋಣಿಯಿದೆ. ನೀವು ಯಾವ ದಡದಿಂದ ಬೇಕಾದರೂ ಅದನ್ನು ಹತ್ತಬಹುದು; ಯಾವ ದಡದಲ್ಲಿ ಬೇಕಾದರೂ ಇಳಿಯಬಹುದು. ಆ ದೋಣಿ ನಿಮಗೆ ಅಲ್ಲಿಯೇ ಸೇವೆ ಸಲ್ಲಿಸುತ್ತದೆ.
ಇಡೀ ಗಂಗಾನದಿಯೇ ನನ್ನದು!

