ಹೀಗೊಮ್ಮೆ ತನ್ನ ಬದುಕು ಸಾಗಿ ಬಂದ ಹಾದಿಯನ್ನೆ ಚಿಂತಿಸುತ್ತ ಮಾಳಿಗೆಯಲ್ಲಿ ನಿಂತಿದ್ದ ಆಮ್ರಪಾಲಿಗೆ ಬುದ್ಧ ಗಣ ಕಾಣಿಸಿತು. ಕಾವಿ ಬಣ್ಣದ ಪ್ರಶಾಂತ ತೊರೆಯೊಂದು ಬೀದಿಯ ತುಂಬ ಹರಿದಾಡುತ್ತಿರುವಂತೆ ಆ ದೃಶ್ಯ ಕಂಡಿತು. ಬರೀ ನೋಟ ಮಾತ್ರದಿಂದಲೇ ಶಾಂತಿ ಕರುಣಿಸಿದ ಬುದ್ಧ ಗಣ ಸತ್ಕರಿಸಲು ಸಿಗುವಂತಾದರೆ ತಾನು ಶಾಶ್ವತ ಶಾಂತಿ ಹೊಂದಬಹುದು ಎನ್ನಿಸಿತು ಅವಳಿಗೆ. ~ ಚೇತನಾ ತೀರ್ಥಹಳ್ಳಿ
ವೈಶಾಲಿ ಗಣರಾಜ್ಯದ ನಗರವಧು, ರಾಜ – ರಾಜರ ನಡುವೆ ಕದನಕ್ಕೆ ಕಾರಣವಾದ ರೂಪವಂತೆ, ಶಾಸ್ತ್ರಾರ್ಥಗಳನ್ನು ಬಲ್ಲ ಬುದ್ಧಿವಂತೆ, ಸೇವಾಭಾವದ ಗುಣವಂತೆ, ಭೋಗ ವೈಭವದ ಉತ್ತುಂಗವನ್ನು ಅನುಭವಿಸಿ, ಬುದ್ಧ ಬೋಧನೆಗೆ ಶರಣಾಗಿ ಎಲ್ಲವನ್ನೂ ತ್ಯಜಿಸಿ, ಕೇಶವನ್ನೂ ಕಳಚಿ ಬಿಕ್ಖುಣಿಯಾಗಿ ನಡೆದ ವೈರಾಗ್ಯವಂತೆ ಕೂಡಾ. ಇಂಥಾ ಏಕಮೇವಾದ್ವಿತೀಯ ಪಾತ್ರ ನಮಗೆ ಇತಿಹಾಸದಲ್ಲಿ ಸಿಗುವುದು ಒಂದೇ ಕಡೆ, ಆಮ್ರಪಾಲಿಯ ಹೆಸರಲ್ಲಿ!
ಆಮ್ರಪಾಲಿ ಜೀವಿಸಿದ್ದು ಕ್ರಿಸ್ತ ಪೂರ್ವ ಐದನೇ ಶತಮಾನದಲ್ಲಿ. ಮಾವಿನ ಚಿಗುರೆಲೆಯಂತೆ ನಾಜೂಕಾಗಿಯೂ ಮನೋಹರವಾಗಿಯೂ ಇದ್ದ ಮಗುವಿಗೆ ಅನ್ವರ್ಥವಾಗಿ ಆಮ್ರಪಲ್ಲವದ ರೂಢಿ ನಾಮ ಆಮ್ರಪಾಲಿ ಎಂದು ಹೆಸರಿಡಲಾಯ್ತು. ಈಕೆ ಮಾವಿನ ಮರದ ಕೆಳಗೆ ಜನಿಸಿದ್ದರಿಂದ ಆ ಹೆಸರು ಎಂದೂ ಹೇಳುವವರು ಇದ್ದಾರೆ.
ಆಮ್ರಪಾಲಿ ಎಳವೆಯಲ್ಲೇ ತನ್ನ ಸೌಂದರ್ಯವನ್ನು ಸೂಸುತ್ತ ಬೆಳೆದಳು. ಆಕೆಯಿನ್ನೂ ಏಳೆಂಟು ವರ್ಷಗಳ ಬಾಲಕಿ ಇದ್ದಾಗಲೇ ಆಕೆಯನ್ನು ಮದುವೆಯಾಗಲು ಊರ ಶ್ರೀಮಂತರು ಸಾಲುಗಟ್ಟಿದ್ದರು. ಆಕೆ ಹನ್ನೊಂದನೆ ವಯಸ್ಸಿನವಳಾಗಿದ್ದಾಗ ವೈಶಾಲಿಯಲ್ಲಿಯೇ ಅತಿಶ್ರೇಷ್ಠ ಸುಂದರಿ ಎಂಬ ಬಿರುದನ್ನೂ ಪಡೆದಳು.
ವೈಶಾಲಿ ಅತ್ಯಂತ ಸರಳ ನಡೆ ನುಡಿಯ ಬಾಲಕಿ. ಹಾಡು, ನೃತ್ಯಗಳ ಹೊರತಾಗಿ ಆಕೆ ಪ್ರೀತಿಸುತ್ತಿದ್ದುದು ಪುಷ್ಪಕುಮಾರ ಎಂಬ ಬಾಲ್ಯ ಸ್ನೇಹಿತನನ್ನು. ಹದಿಹರೆಯಕ್ಕೆ ಕಾಲಿಟ್ಟ ಕೂಡಲೇ ಅವರಿಬ್ಬರು ಮದುವೆಯಾಗಲು ನಿರ್ಧರಿಸಿದರು. ತಾನು ಮೆಚ್ಚಿದ ಹುಡುಗನೊಡನೆ ನೆಮ್ಮದಿಯ ಸಂಸಾರದ ಕನಸು ಹೆಣೆಯುತ್ತ ಮದುವೆಗೆ ಸಿದ್ಧವಾದಳು ಆಮ್ರಪಾಲಿ.
ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ದೇಗುಲವೊಂದರಲ್ಲಿ ನರ್ತನ ಸೇವೆ ಸಲ್ಲಿಸುತ್ತಿದ್ದ ಆಮ್ರಪಾಲಿಯ ಚೆಲುವಿಗೆ ಮನಸೋತ ವೈಶಾಲಿಯ ಅರಸ, ಲಿಚ್ಛವಿ ಕುಲದ ರಾಜ ಮನುದೇವ ಅವಳನ್ನು ಪಡೆಯುವ ಹಠಕ್ಕೆ ಬಿದ್ದ. ಆಕೆಯ ಮದುವೆಯ ದಿನವೇ ಪುಷ್ಪಕುಮಾರನನ್ನು ಕೊಲ್ಲಿಸಿದ. ಅನಂತರ ಸಂತಾಪ ಸೂಚನೆಯ ನಾಟಕವಾಡಿ, ಆಮ್ರಪಾಲಿಯಂಥ ಸುಂದರಿ ಏಕಾಂಗಿಯಾಗಿದ್ದರೆ ಕೇಡಾಗುವುದೆಂದೂ ಪರಪುರುಷರು ಕೂಡ ಆಕೆಯನ್ನು ಪಡೆಯಲು ಪರಸ್ಪರ ಹೊಡೆದಾಡಿ ನಗರದ ನೆಮ್ಮದಿ ಕೆಡುವುದೆಂದೂ ಕಾರಣ ನೀಡಿ ಆಕೆಯನ್ನು ವೈಶಾಲಿಯ `ನಗರ ವಧು’ ಹಾಗೂ `ಜನಪದ ಕಲ್ಯಾಣಿ’ಯಾಗಿ ಘೋಷಿಸಿದ.
ನಗರ ವಧುವಾಗಿ ಆಮ್ರಪಾಲಿ ರಾಜನಿಗೆ ಸೇವೆ ಸಲ್ಲಿಸಬೇಕಿತ್ತು. ಆಸ್ಥಾನದಲ್ಲಿ ನರ್ತಿಸಬೇಕಿತ್ತು. ರಾಜನಿಗೂ ಶ್ರೀಮಂತರಿಗೂ ಒದಗಿಬರಬೇಕಿತ್ತು. ನಗರದ ಅತ್ಯಂತ ಕುಶಲವತೀ ಸುಂದರಿಗೆ `ಜನಪದ ಕಲ್ಯಾಣಿ’ ಪಟ್ಟ ನೀಡುತ್ತಿದ್ದರು. ಈ ಪಟ್ಟದ ಅವಧಿ ಏಳು ವರ್ಷಗಳು. ಈ ಅವಧಿಯಲ್ಲಿ ವಾಸಿಸಲು ಅರಮನೆಯನ್ನೂ ಕೊಡಲಾಗುತ್ತಿತ್ತು. ತನಗೆ ಬೇಕಾದ ಪ್ರಿಯತಮನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವೂ ಜನಪದ ಕಲ್ಯಾಣಿಗೆ ಇರುತ್ತಿತ್ತು.
ಹೀಗೆ ರಾಜನ ವ್ಯಾಮೋಹಕ್ಕೆ ವ್ಯವಸ್ಥಿತವಾಗಿ ಬಲಿಯಾದಳು ಆಮ್ರಪಾಲಿ. ಅಂದಿನ ದಿನಗಳ ರೀತಿನೀತಿಯಂತೆ ತನಗೆ ಒದಗಿಬಂದ ಪಟ್ಟಗಳನ್ನು ಮೌನವಾಗಿ ಸ್ವೀಕರಿಸಿದಳು. ತಾನು ಪ್ರೀತಿಸಿದ್ದವನನ್ನು ಕಳೆದುಕೊಂಡ ದುಃಖ, ಆಕೆಯ ಎದುರು ಬೇರೆ ಆಯ್ಕೆಗಳನ್ನೆ ಉಳಿಸಿರಲಿಲ್ಲ.
ಆಮ್ರಪಾಲಿ ಗಾನ ನರ್ತನದಲ್ಲಿ, ಭೋಗ ವಿಲಾಸದಲ್ಲಿ ಮೈಮರೆತು ಕುಳಿತಿದ್ದವಳಲ್ಲ. ಅವಳೊಳಗೆ ಒಗೊಬ್ಬಳು ಅಪ್ಪಟ ದೇಶಪ್ರೇಮಿ ಇದ್ದಳು. ತನ್ನನ್ನು ಸಲಹಿದ ವೈಶಾಲಿಯ ನೆಲದ ಬಗ್ಗೆ ಅವಳಿಗೆ ಇನ್ನಿಲ್ಲದ ಪ್ರೇಮ. ತನ್ನ ಬಳಿ ಕಷ್ಟವೆಂದು ಹೇಳಿಕೊಂಡು ಬಂದವರಿಗೆ ಧಾರಾಳವಾಗಿ ಸಹಾಯ ನೀಡುತ್ತಿದ್ದಳು ಆಕೆ. ಹಾಗೆಯೇ ಅವಳಿಗೆ ತನ್ನೂರಿನ ಮಾವು ತೋಪುಗಳ ಬಗ್ಗೆಯೂ ವಿಶೇಷ ಕಾಳಜಿ. ಹಾಗೆಂದೇ ದೊಟ್ಟ ದೊಡ್ಡ ಮಾವು ತೋಪುಗಳನ್ನು ನಿರ್ಮಿಸಿ ‘ಆಮ್ರಪಾಲಿಕಾ ವನ’ ಎಂದು ಹೆಸರಿಟ್ಟಿದ್ದಳು.
ಗಂಧ ಎಲ್ಲೇ ಇದ್ದರೂ ಅದರ ಘಮಲು ಸುತ್ತಲೆಲ್ಲ ಹರಡುವಂತೆ ಆಮ್ರಪಾಲಿಯ ಚೆಲುವಿನ ಬಣ್ಣನೆ ನೆರೆಯ ಮಗಧ ಸಾಮ್ರಾಜ್ಯದ ರಾಜ ಬಿಂದುಸಾರನ ಕಿವಿಗೆ ಬಿತ್ತು. ವೈಶಾಲಿ ಮತ್ತು ಮಗಧ ರಾಜ್ಯಗಳು ಪಾರಂಪರಿಕ ಶತ್ರು ರಾಷ್ಟ್ರಗಳು. ಆಮ್ರಪಾಲಿಯ ಬಳಿ ಪ್ರೇಮ ಯಾಚನೆ ಮಾಡಲು ಹೋಗುವುದಾದರೂ ಹೇಗೆ? ಯೋಚಿಸಿದ ಬಿಂದುಸಾರ ತನ್ನ ರೂಪವನ್ನೂ ಗುರುತನ್ನೂ ಮರೆಮಾಚಿಕೊಂಡ. ಅದ್ಭುತ ಗಾಯಕನೂ ವೀಣಾವಾದಕನೂ, ಸ್ಫುರದ್ರೂಪಿಯೂ ಆಗಿದ್ದ ಆತನಿಗೆ ಆಮ್ರಪಾಲಿಯ ಸ್ನೇಹ ಸಂಪಾದಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವರಿಬ್ಬರೂ ಪ್ರೇಮಿಗಳಂತೆ ಇರತೊಡಗಿದರು.
ಬಿಂದುಸಾರನಿಂದ ಆಮ್ರಪಾಲಿಗೆ ಗಂಡು ಮಗು ಜನಿಸಿ, ಅದಕ್ಕೆ ವಿಮಲ ಕೊಂಡಣ್ಣನೆಂದು ಹೆಸರಿಟ್ಟರು. ಕಾರ್ಯನಿಮಿತ್ತ ಮಗಧಕ್ಕೆ ತೆರಳಿದ ಬಿಂದುಸಾರನಿಗೆ ಆಮ್ರಪಾಲಿಯನ್ನು ಬಿಟ್ಟು ಇರಲು ಸಾಧ್ಯವಾಗಲಿಲ್ಲ. ವೈಶಾಲಿಯನ್ನು ಗೆದ್ದುಕೊಂಡಾದರೂ ಆಕೆಯನ್ನು ಶಾಶ್ವತವಾಗಿ ಪಡೆಯಬೇಕೆಂದು ಅದರ ಮೇಲೆ ದಂಡೆತ್ತಿ ಬಂದ. ಹಾಗೆ ಬಂದವನು ಸೇನೆಯನ್ನು ಯುದ್ಧಕ್ಕೆ ನಿಲ್ಲಿಸಿ ಆಮ್ರಪಾಲಿಯ ಮನೆಯಲ್ಲೇ ವಾಸ್ತವ್ಯ ಹೂಡಿದ. ಆದರೆ ಆತನ ನಿಜ ಗುರುತು ತಿಳಿಯುತ್ತಲೇ ಆಮ್ರಪಾಲಿ ಆತನನ್ನು ನಿರಾಕರಿಸಿದಳು. ಅವಳಿಗೆ ಅರಸಿಯ ಪಟ್ಟ ಕೊಡುವೆನೆಂದರೂ ಅದನ್ನು ತಿರಸ್ಕರಿಸಿ, ತನಗೆ ವೈಶಾಲಿಯ ಹಿತಚಿಂತನೆಯೇ ಮುಖ್ಯವೆಂದಳು. ಆತನಿಗೆ ತನ್ನ ಮೇಲೆ ಪ್ರೇಮವಿರುವುದೇ ನಿಜವಾದರೆ, ಯುದ್ಧ ಹಿಂತೆಗೆದುಕೊಂಡು ಮಗಧಕ್ಕೆ ಮರಳುವಂತೆ ಕರಾರು ಹಾಕಿದಳು.
ಆಮ್ರಪಾಲಿಯ ಪ್ರೇಮಕ್ಕೆ ಸಂಪೂರ್ಣ ಸೋತುಹೋಗಿದ್ದ ಬಿಂದುಸಾರ ಅವಳ ಮಾತನ್ನು ತೆಗೆದು ಹಾಕುವ ಸ್ಥಿತಿಯಲ್ಲೇ ಇರಲಿಲ್ಲ. ಅವಳ ಮಾತಿನಂತೆ ಸೇನೆಯನ್ನು ಹಿಂತೆಗೆದುಕೊಂಡು ಮಗಧಕ್ಕೆ ಮರಳಿದ. ಅತ್ತ ಮಗಧದಲ್ಲೂ ಇತ್ತ ವೈಶಾಲಿಯಲ್ಲೂ ಬಿಂದುಸಾರನೊಬ್ಬ ಹೇಡಿ ಎಂದು ಜನ ಆಡಿಕೊಂಡರು. ಇದರ ಹಿಂದೆ ಆಮ್ರಪಾಲಿಯ ಕೈ ಇರುವುದು ಯಾರಿಗೂ ತಿಳಿಯಲೇ ಇಲ್ಲ. ಮುಂದೆ ಬಿಂದುಸಾರನ ಪಟ್ಟದರಸಿಯ ಮಗ ಅಜಾತಶತ್ರುವು ತಂದೆಗಾದ ಅವಮಾನ ತೀರಿಸಿಕೊಳ್ಳಲು ವೈಶಾಲಿಗೆ ಮುತ್ತಿಗೆ ಹಾಕಿದ. ಅವನೂ ಆಮ್ರಪಾಲಿಯ ಸೌಂದರ್ಯಕ್ಕೆ ಸೋತಿದ್ದವನೇ. ಆಕೆಯನ್ನು ಸೆರೆ ಹಿಡಿದು, ಇಡಿಯ ನಗರವನ್ನು ಸುಟ್ಟು ಹಾಕಿಸಿದ. ಅನಂತರ ಆಕೆಯ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ತನ್ನ ನೆಲಕ್ಕೆ, ತನ್ನ ಜನರಿಗೆ ಅಜಾತಶತ್ರು ತಂದಿತ್ತ ಗತಿಯಿಂದ ನೊಂದಿದ್ದ ಆಕೆ ಅದನ್ನು ತಿರಸ್ಕರಿಸಿದಳು. ಅವಳ ತಿರಸ್ಕಾರಕ್ಕೆ ಮಣಿಯದ ಅಜಾತಶತ್ರು ಆಮ್ರಪಾಲಿಗೆ ಕಾಲಾವಕಾಶ ನೀಡಿ ಹೊರಟುಹೋದ.
ಆದರೆ ವೈಶಾಲಿಯನ್ನು ವಶಪಡಿಸಿಕೊಂಡಿದ್ದ ಅಜಾತಶತ್ರುವೀಗ ಆಕೆಯ ಒಡೆಯನಾಗಿದ್ದ. ಕುಲವಧುವಾಗಿ ಆಕೆ ತನ್ನ ಕರ್ತವ್ಯ ಮಾಡಲೇಬೇಕಿತ್ತು.
ಅದಾಗಲೇ ಗೊಂದಲದಲ್ಲಿದ್ದ ಆಮ್ರಪಾಲಿಗೆ ಅಜಾತಶತ್ರುವು ಬಿಂದುಸಾರನ ಮಗನೆಂದು ತಿಳಿದು ಮತ್ತಷ್ಟು ಖೇದವಾಯಿತು. ಆತ ಸಂಬಂಧದಲ್ಲಿ ತನಗೆ ಮಗನಾಗಬೇಕಾದವನು! ತನ್ನ ಬದುಕು ತಲುಪಿಕೊಂಡಿರುವ ಗತಿಯನ್ನು ನೆನೆದು ದುಃಖಿತಳಾಗುತ್ತ ನೆಮ್ಮದಿಯನ್ನೆ ಕಳೆದುಕೊಂಡಳು. ಇಷ್ಟೆಲ್ಲ ಕಷ್ಟ ನಷ್ಟದ ನಡುವೆಯೂ ಅವಳ ಚೆಲುವು ಮಾತ್ರ ಚುಕ್ಕಿಯಷ್ಟೂ ಕುಂದಿರಲಿಲ್ಲವೆಂಬುದೇ ಅಚ್ಚರಿ!
ಹೀಗೊಮ್ಮೆ ತನ್ನ ಬದುಕು ಸಾಗಿ ಬಂದ ಹಾದಿಯನ್ನೆ ಚಿಂತಿಸುತ್ತ ಮಾಳಿಗೆಯಲ್ಲಿ ನಿಂತಿದ್ದ ಆಮ್ರಪಾಲಿಗೆ ಬುದ್ಧ ಗಣ ಕಾಣಿಸಿತು. ಕಾವಿ ಬಣ್ಣದ ಪ್ರಶಾಂತ ತೊರೆಯೊಂದು ಬೀದಿಯ ತುಂಬ ಹರಿದಾಡುತ್ತಿರುವಂತೆ ಆ ದೃಶ್ಯ ಕಂಡಿತು. ಬರೀ ನೋಟ ಮಾತ್ರದಿಂದಲೇ ಶಾಂತಿ ಕರುಣಿಸಿದ ಬುದ್ಧ ಗಣ ಸತ್ಕರಿಸಲು ಸಿಗುವಂತಾದರೆ ತಾನು ಶಾಶ್ವತ ಶಾಂತಿ ಹೊಂದಬಹುದು ಎನ್ನಿಸಿತು ಅವಳಿಗೆ. ತಡಮಾಡದೆ, ಸ್ವತಃ ತಾನೇ ಕೆಳಗೆ ಓಡಿ ಬುದ್ಧನ ಕಾಲಿಗೆ ಬಿದ್ದಳು. ತನ್ನ ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಂಡಳು.
ಈ ವಿಷಯ ತಿಳಿಯುತ್ತಲೇ ಊರ ತುಂಬ ಗುಸುಗುಸು ಹಬ್ಬಿ, ನಗರವಧುವಿನ ಮನೆಯಲ್ಲಿ ಸನ್ಯಾಸಿಗಳು ಊಟ ಮಾಡುವುದು ಅಪಚಾರ ಎಂದು ಮಾತಾಡಿಕೊಂಡರು. ಬುದ್ಧನ ಬಳಿ ಸಾರಿ, ಅಲ್ಲಿಗೆ ಹೋಗಬೇಡಿರೆಂದರು. ಆದರೆ ಬುದ್ಧ ಅವರೆಲ್ಲರಿಗೂ ಮುಗುಳ್ನಗುವಿನ ಉತ್ತರ ನೀಡಿದ. ಆಮ್ರಪಾಲಿಯ ಆತಿಥ್ಯ ಸ್ವೀಕರಿಸಿದ್ದಲ್ಲದೆ, ಆಕೆಯ ಆಮ್ರಪಾಲಿಕಾ ವನದಲ್ಲಿ ಚಾತುರ್ಮಾಸದ ನಾಲ್ಕು ತಿಂಗಳು ತನ್ನ ಗಣದೊಂದಿಗೆ ತಂಗಿದ.
ನಿರಂತರ ಬುದ್ಧ ಸಾಂಗತ್ಯದಿಂದ ಆಮ್ರಪಾಲಿ ನೆಮ್ಮದಿ ಪಡೆಯತೊಡಗಿದಳು. ತಾನು ಅನುಭವಿಸಿದ ಯಾವ ಭೋಗಭಾಗ್ಯಗಳೂ ನೀಡದಿದ್ದ ಆನಂದ ಬುದ್ಧನ ಚರಣಗಳು ನೀಡುತ್ತವೆ ಎಂಬ ಅರಿವಾದೊಡನೆ, ತಾನೂ ಬಿಕ್ಖುಣಿ ಸಂಘ ಸೇರಲು ನಿರ್ಧರಿಸಿ ಬುದ್ಧನ ಅನುಮತಿ ಕೋರಿದಳು. ಎಂದಿನಂತೆ ವಿರೋಧವೆದ್ದರೂ ಬುದ್ಧ ಎಲ್ಲರಿಗೂ ಸಮಾಧಾನ ಹೇಳಿ, ಬಿಕ್ಖುಣೀ ಸಂಘದ ನಿಯಮಗಳನ್ನು ಬಿಗಿಗೊಳಿಸಿ, ಆಮ್ರಪಾಲಿಯನ್ನೆ ಅದರ ಉಸ್ತುವಾರಿ ನೋಡಿಕೊಳ್ಳಲು ಬಿಟ್ಟ. ಅವಳಿಗೆ ಸನ್ಯಾಸ ದೀಕ್ಷೆ ಕೊಟ್ಟ.
ಆಮ್ರಪಾಲಿ ತನ್ನ ರೇಷಿಮೆಗೂದಲನ್ನು ಕತ್ತರಿಸಿಕೊಂಡು ಬಿಕ್ಖುಣಿಯಾದಳು. ಆಭರಣ ಕಳಚಿ, ಕಾವಿಯುಟ್ಟಳು. ಧ್ಯಾನ ಸಾಧನೆಗಳಿಂದ ಮುಕ್ತಿಯನ್ನೂ ಪಡೆದು `ಥೇರಿ’ಯರಲ್ಲೊಬ್ಬಳಾಗಿ ಶಾಶ್ವತ ಸ್ಮರಣೆಯಲ್ಲಿ ಉಳಿದುಹೋದಳು.
Amrapali…….. Eternal bliss ❤