ಎರವಲು ಪಡೆದ ತಿಳಿವು ಮಣ್ಣಿನ ಹೆಂಟೆಯಷ್ಟೇ….

oshoಎರವಲು ಪಡೆದ ಮಣ್ಣು ಹೆಂಟೆಯನ್ನು ಬಿಸಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ನಮಗೆ ಅದು ಮಣ್ಣು ಎಂದು ಮೊದಲು ಅರಿವಾಗಬೇಕು. ಈ ಅರಿವಿನ ಕೊರತೆಯಿಂದ ನಾವು ಸುಮ್ಮನೆ ಭಾರ ಹೊತ್ತು ತಿರುಗುತ್ತೇವೆ. ಬೆಲೆಯೇ ಇಲ್ಲದ ನಿಷ್ಪ್ರಯೋಜಕವಾದ ಭಾರವನ್ನು ಹೊತ್ತು ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತದೆ  ~ ಓಶೋ ರಜನೀಶ್

ನಿಜವಾದ ಜ್ಞಾನ ಯಾವುದು? ಮಾಹಿತಿ ಸಂಗ್ರಹವಾಗಲೀ ಮತ್ತೊಬ್ಬರಿಂದ ಕೇಳಿ ತಿಳಿದ ಯಾವುದೇ ಸಂಗತಿಯಾಗಲೀ ಜ್ಞಾನವಲ್ಲ. ಬಹಳಷ್ಟು ಜನ ಅವನ್ನೇ ಜ್ಞಾನವೆಂದು ತಪ್ಪಾಗಿ ತಿಳಿದು ಜೋಪಾನ ಮಾಡಲು ಹೆಣಗುತ್ತಾರೆ. ಅವರು ಅದನ್ನು ಚಿನ್ನದ ಗಟ್ಟಿಯೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಅವು ಮಣ್ಣಿನ ಹೆಂಟೆಗಳು. ಮತ್ತೊಬ್ಬರಿಂದ ಎರವಲು ಪಡೆದ ಯಾವುದೂ ಜ್ಞಾನವಾಗಲು ಸಾಧ್ಯವಿಲ್ಲ. ಏಕೆಂದರೆ ಜ್ಞಾನವು ನಿಮ್ಮೊಳಗೆ ಉಂಟಾಗುವಂಥದ್ದು. ಅದನ್ನು ಪಡೆಯಲಾಗುವುದಿಲ್ಲ. ಅದು ಉಂಟಾಗಬೇಕು.

ನಮ್ಮೊಳಗೆ ಉಂಟಾಗುವ ಜ್ಞಾನವನ್ನು ‘ಸಹಜ ಜ್ಞಾನ’ ಎಂದು ಕರೆಯಲಾಗುತ್ತದೆ. ಯಾವಾಗ ನಮಗೆ, ನಾವು ಜ್ಞಾನ ಅಂದುಕೊಂಡು ಬರೀ ಕಲ್ಲು ಮಣ್ಣುಗಳನ್ನು ಹೊತ್ತು ತಿರುಗುತ್ತಿದ್ದೇವೆ ಎಂಬುದು ಅರಿವಾಗುತ್ತದೆಯೋ ಆಗ ನಾವು ಜ್ಞಾನದ ಉಂಟಾಗುವಿಕೆಗೆ ಪಕ್ವವಾಗಿದ್ದೇವೆ ಎಂದರ್ಥ. ಒಮ್ಮೆ ನಮಗೆ ನಾವು ಹೊತ್ತಿರುವುದು ಕಲ್ಲು ಮಣ್ಣುಗಳನ್ನು ಎಂದು ಅರಿವಾದರೆ ಸಾಕು, ನಾವು ಆ ಹೊರೆಯನ್ನು ಇಳಿಸಿ, ನಿಜವಾದ, ಸಹಜವಾದ ಜ್ಞಾನಕ್ಕೆ ಹಂಬಲಿಸತೊಡಗುತ್ತೇವೆ. ಈ ಹಂಬಲವೇ ಜ್ಞಾನವನ್ನು ಹೊಂದುವ ದಾರಿಯಾಗುತ್ತದೆ.

ಎರವಲು ಪಡೆದ ಮಣ್ಣು ಹೆಂಟೆಯನ್ನು ಬಿಸಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ನಮಗೆ ಅದು ಮಣ್ಣು ಎಂದು ಮೊದಲು ಅರಿವಾಗಬೇಕು. ಈ ಅರಿವಿನ ಕೊರತೆಯಿಂದ ನಾವು ಸುಮ್ಮನೆ ಭಾರ ಹೊತ್ತು ತಿರುಗುತ್ತೇವೆ. ಬೆಲೆಯೇ ಇಲ್ಲದ ನಿಷ್ಪ್ರಯೋಜಕವಾದ ಭಾರವನ್ನು ಹೊತ್ತು ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತದೆ. ನೀವು ಯಾವುದನ್ನು ಜ್ಞಾನ ಎಂದುಕೊಂಡಿದ್ದೀರೋ ಅದು ಇದ್ದರೂ ನೀವೇಕೆ ವಿಚಲಿತಗೊಳ್ಳಬೇಕು? ಜ್ಞಾನಿಗಳು ವಿಚಲಿತಗೊಳ್ಳುವುದಿಲ್ಲ. ಏಕೆಂದರೆ ಜ್ಞಾನವನ್ನು ಹೊಂದಿರುವ ಯಾರೇ ಆದರೂ ಸಮಚಿತ್ತ ಸಮಭಾವವನ್ನು ಹೊಂದಿರುತ್ತಾರೆ. ಶಾಂತರಾಗಿರುತ್ತಾರೆ. ಆದ್ದರಿಂದ ಯೋಚಿಸಿ… ನಾನೇಕೆ ವಿಚಲಿತಗೊಳ್ಳುತ್ತಿದ್ದೇನೆ ಎಂದು ಅರಿಯಲು ಯತ್ನಿಸಿ.

ನಾನು ಹೇಳುವುದರಿಂದ ನಿಮಗೆ ನೀವು ಹೊತ್ತಿರುವುದು ಮಣ್ಣಿನ ಹೊರೆ ಎಂದು ಗೊತ್ತಾಗಬಾರದು. ಏಕೆಂದರೆ ನಾನು ಹೇಳುವುದನ್ನು ನೀವು ಕೇಳಿಸಿಕೊಳ್ಳುವುದು ಮತ್ತು ಆ ಮೂಲಕ ಅದು ಮಣ್ಣೆಂದು ಭಾವಿಸುವುದು ಕೂಡಾ ಎರವಲು ತಿಳಿವಳಿಕೆಯೇ. ಆದ್ದರಿಂದ, ನಿಮ್ಮ ಹೊರೆಯ ಕುರಿತು ನಿಮಗೇ ತಿಳಿವು ಉಂಟಾಗಬೇಕು. ಯಾಕೆ ನನ್ನ ಹೊರೆ ನಿಷ್ಪ್ರಯೋಜಕ, ಯಾಕೆ ಅದು ನನ್ನನ್ನು ಶಾಂತವಾಗಿರಿಸುತ್ತಿಲ್ಲ ಎಂದು ನೀವು ಆಲೋಚಿಸಿದಾಗ ಮಾತ್ರ ನಿಮ್ಮಲ್ಲಿರುವ ಸಂಗ್ರಹ ಜ್ಞಾನವೋ ಎರವಲು ಮಾಹಿತಿಯೋ ಎಂದು ಅರಿಯಲು ಸಾಧ್ಯ.

ಚೀನಾ ದೇಶದಲ್ಲಿ ಒಬ್ಬ ಝೆನ್ ಗುರುವಿದ್ದ. ಅವನು ಮಿತಭಾಷಿ, ಮಹಾಮೌನಿ. ಮಾತೇ ಆಡದೇ ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ. ಎಷ್ಟೋ ಸಲ ಆತುರಗಾರ ಶಿಷ್ಯರು ಮಾತೇ ಆಡದ ಗುರುವಿನ ವರಸೆಗೆ ಬೇಸತ್ತು ಆಶ್ರಮ ತೊರೆಯುತ್ತಿದ್ದರು. ಇಂಥಲ್ಲಿಗೆ ಒಬ್ಬ ಪರಿವ್ರಾಜಕ ಬಂದ. ಬಂದು ಕೆಲವೇ ಗಂಟೆಗಳಲ್ಲಿ ಆಶ್ರಮದ ಶಿಷ್ಯರನ್ನೆಲ್ಲ ಗುಡ್ಡೆ ಹಾಕಿಕೊಂಡ. ಅವನ ಮಾತಿನ ಮೋಡಿಗೆ ಅವರೆಲ್ಲ ಬೆರಗಾದರು. ತಮ್ಮ ಗುರುವಿನ ಜೊತೆ ಹೋಲಿಕೆ ಮಾಡಿ ಇವನನ್ನು ಹೊಗಳಿದರು.

ಆ ಪರಿವ್ರಾಜಕ ಗುರುವಿನ ಬಳಿ ಬಂದು “ನನ್ನ ಉಪನ್ಯಾಸ ನಿಮಗೆ ಹೇಗನ್ನಿಸಿತು?” ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಗುರು, “ವಾಂತಿಯನ್ನು ಯಾರಾದರೂ ಉಣ್ಣುವರೇ?” ಎಂದು ಕೇಳಿ ಸುಮ್ಮನಾದ.

ಇದರರ್ಥ ಇಷ್ಟೇ.. ಆ ಪರಿವ್ರಾಜಕ ಆಡಿದ ಮಾತುಗಳಲ್ಲಿ ಒಂದೂ ಸ್ವತಃ ಅವನ ತಿಳಿವಳಿಕೆಯಿಂದ ಮೂಡಿದ್ದಾಗಿರಲಿಲ್ಲ. ಅವನು ಅವರಿವರು ಹೇಳಿದ್ದನ್ನು, ತಾನು ಓದಿದ್ದನ್ನು ಓರಣವಾಗಿ ಹೆಣೆದು ಉಪನ್ಯಾಸ ನೀಡಿದ್ದ.

ಹಾಗೆಯೇ ನಮ್ಮ ತಿಳಿವಳಿಕೆಯೂ. ನಾನು ಈವರೆಗೆ ಹೇಳಿದುದೇನು ಎಂದು ಕೊನೆಯ ದೃಷ್ಟಾಂತದಿಂದ ನಮಗೆ ಮನದಟ್ಟಾಗಿದೆ ಅಂದುಕೊಳ್ಳಲೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.