ಬಿಳಿ ಮೋಡದ ಹಾದಿ: ಸಪರಂಗ್ ಕೆಂಪು ದೇಗುಲದಲ್ಲಿ…

ಲಾಮಾ ಅನಾಗರಿಕ ಗೋವಿಂದ  ಅವರ The way of the white cloud ಕೃತಿಯ ಮೊದಲ ಪುಟಗಳು. ಕನ್ನಡಕ್ಕೆ: ಅಲಾವಿಕಾ

ಸಂಗತಿಗಳ ದಿರಿಸಿನಲಿ ಸತ್ಯದ ಉಸಿರುಗಟ್ಟುವುದು;
ಕಾವ್ಯದ ಆಭೂಷಣದಲಿ ಅದು ನಿರಾಳವಾಗಿ ನಲಿಯುವುದು.

~ ರಬೀಂದ್ರನಾಥ ಠಾಕೂರ್

ಗವ್ವನೆ ಕವುಚಿಕೊಂಡ ಇರುಳು, ಬಿರುಗಾಳಿ ಸಪರಂಗಿನ ಪಾಳುಬಿದ್ದ ಅವಶೇಷಗಳನ್ನು ಸವರಿ, ಬಂಡೆಗಳನ್ನು ಹಾದು, ಊರ ತುಂಬ ಸುಳಿಯುತ್ತಿತ್ತು.

ಸಪರಂಗ್… ಪಶ್ಚಿಮ ತಿಬೇಟದ ಒಂದು ಕಾಲದ ರಾಜಧಾನಿ.
ಬಾನಿನಲ್ಲಿ ಮೋಡಗಳು ತೇಲುತ್ತಾ ಹುಣ್ಣಿಮೆ ಚಂದಿರನನ್ನು ಮುಸುಕುತ್ತಾ, ಮತ್ತೆ ಮುಖ ತೋರುತ್ತಾ ಸಾಗುತ್ತಿದ್ದವು. ಎಂದೂ ಮುಗಿಯದ ನಾಟಕವೊಂದಕ್ಕೆ ವೇದಿಕೆಯಾದ ಈ ಬೃಹತ್ ರಂಗದ ಮೇಲೆ, ಚಂದಿರ ತನ್ನ ನಿಗೂಢ ಬೆಳಕು ಚೆಲ್ಲುತ್ತಿದ್ದ.

ಎಂದೂ ಮುಗಿಯದ ನಾಟಕವೇ?

ಹೌದು. ಅದರಲ್ಲಿರುವುದು ಯುಗಾಂತರಗಳಿಂದ ಸಾಗಿ ಬಂದ ಅದೇ ಹೂರಣ. ಸೃಷ್ಟಿಯ ನಶ್ವರತೆ ಸಾರುವ, ಶಕ್ತಿ ಮತ್ತು ಸೌಂದರ್ಯದ ಹಿರಿಮೆ ಎತ್ತಿ ಹಿಡಿಯುವ, ಆಧ್ಯಾತ್ಮಿಕ ಸಾಧನೆಯ ಮತ್ತು ಲೌಕಿಕ ವೈಭೋಗದ ಕತೆ ಹೇಳುವ ಅದ್ಭುತ ನಾಟಕವದು.

ಶಕ್ತಿ ಎಂದೋ ನಶಿಸಿತ್ತು, ಸೌಂದರ್ಯ ಮಾತ್ರ ಶಕ್ತಿಯ ನೆರಳಿನಡಿ ತಾಳ್ಮೆಯಿಂದ ಕಡೆಯಲಾದ ಕಲಾಕೃತಿಗಳ ಅವಶೇಷಗಳಲ್ಲಿ ಇನ್ನೂ ಬದುಕುಳಿದಿತ್ತು. ಸಂಸ್ಕೃತಿ, ಸಮರ್ಪಣೆಗಳ ಉತ್ಸಾಹ ದೂರದ ಏಕಾಂತವಾಸಕ್ಕೆ ತೆರಳಿ, ಸಂತರ, ಪಂಡಿತರ, ಕವಿಗಳ, ಕಲಾವಿದರ ಮಾತು – ಕೃತಿಗಳಲ್ಲಿ ನೆಲೆಸಿ ತನ್ನ ಜೀವ ಉಳಿಸಿಕೊಂಡಿತ್ತು. “ಯಾವುದು ಮೃದುವೋ, ಯಾವುದು ಮಣಿಯುವುದೋ ಅದು ಬದುಕುವುದು; ಯಾವುದು ಒರಟೋ, ಯಾವುದು ಗಡುಸೋ ಅದು ಸಾವಿನ ವಲಯಕ್ಕೆ ಸೇರುವುದು” ಅನ್ನುತ್ತಾನಲ್ಲ ಲಾವೋಜಿ? ಅವನ ಆ ಮಾತು ಸಾಬೀತುಪಡಿಸುವ ಹಾಗೆ.

ಸಪರಂಗಿನ ವಿಧಿಗೆ ಬೀಗಮುದ್ರೆ ಹಾಕಲಾಗಿತ್ತು (ಇನ್ನೆಂದೂ ಬದಲಾಗದಂತೆ). ಮನುಷ್ಯರ ಪಾತ್ರವೆಷ್ಟೋ, ಪ್ರಕೃತಿಯ ಪಾತ್ರವೆಷ್ಟೋ… ಅಳಿದುಳಿದ ವೈಭವವೆಲ್ಲ ಬಂಡೆಗಲ್ಲಿನಂತೆ ಬಿದ್ದುಕೊಂಡಿದ್ದವು, ದೈತ್ಯ ಕಟ್ಟಡಗಳಂತೆ ತೋರುವ ಬೃಹದಾಕಾರದ ಬಂಡೆಗಲ್ಲುಗಳಾಗಿ. ಅದಕ್ಕೆ ನೆಲೆಯಾಗಿರುವ ಪರ್ವತವೊಂದು ಅಮೃತಶಿಲೆಯ ಶಿಲಾಖಂಡದಂತೆ; ಮುಗಿಲೆತ್ತರದ ಗೋಪುರಗಳು, ಮೋಡಗಳ ಮೈ ಸವರುವ ಬುರುಜುಗಳು, ಬಲಿಷ್ಠವಾದ ಗೋಡೆಗಳುಳ್ಳ ಕೋಟೆ, ನೂರು – ಸಾವಿರ ಗುಹೆ ಹೊತ್ತ ಜೇನುಗೂಡಿನಂಥ ಹೆಬ್ಬಂಡೆಗಳಿಂದ ಕೂಡಿದ ಕಿನ್ನರ ನಗರದಂತೆ ತೋರುತ್ತಿತ್ತು. ಹುಣ್ಣಿಮೆ ಚಂದಿರನ ಕಣ್ಣಾಮುಚ್ಚಾಲೆಗೆ ಅವೆಲ್ಲವೂ ಮತ್ತಷ್ಟು ಅಸಹಜವಾಗಿ ಕಂಡು, ಮಿನುಗಿ ಮಾಯವಾಗುವ ದಿವ್ಯದರ್ಶನದಂತೆ ಭಾಸವಾಗುತ್ತಿತ್ತು.

ಶಾಕ್ಯಮುನಿ ಬುದ್ಧನ ಕೆಂಪು ದೇಗುಲದಲ್ಲಿ ಕತ್ತಲು, ಕಡುಮೌನ. ಶಾಕ್ಯಮುನಿಯ ವಿಗ್ರಹದ ಚಿನ್ನದ ಮುಖದ ಹೊಳಪಿನಿಂದ ಮಂದ ಬೆಳಕು ಹೊಮ್ಮಿ, ಅವನ ಸಿಂಹಾಸನದ ಇಕ್ಕೆಲಗಳಲ್ಲಿ ಸಾಲಾಗಿರಿಸಿದ್ದ ಧ್ಯಾನಿ ಬುದ್ಧರ ವಿಗ್ರಹಗಳ ಮೇಲೆ ಬಿದ್ದು ಪ್ರತಿಫಲಿಸುತ್ತಿತ್ತು.

ಇದ್ದಕ್ಕಿದ್ದಂತೆ ಕಂಪನವೆದ್ದಿತು. ಉರುಳಿ ಬೀಳುವ ಇಟ್ಟಿಗೆ – ಕಲ್ಲುಗಳ ಸದ್ದು, ದೇವಾಲಯದ ಗೋಡೆಗಳನ್ನು ನಡುಗಿಸಿತು. ನೆಲ ಅದುರಿ, ಶಾಕ್ಯಮುನಿ ಬುದ್ಧನ ವಿಗ್ರಹದ ಮೇಲ್ಭಾಗದಲ್ಲಿದ್ದ ಹಲಗೆಯ ಮುಚ್ಚಲಗಳು ತೆರೆದುಕೊಂಡವು; ಹುಣ್ಣಿಮೆಯ ಕಿರಣಗಳು ಅವನ ಮುಖದ ಮೇಲೆ ಹಾಲ್ಬೆಳಕು ಚೆಲ್ಲಿ, ಇಡೀ ದೇವಾಲಯವನ್ನು ತುಂಬಿಕೊಂಡವು.

ಅದರ ಬೆನ್ನಲ್ಲೇ ಅಸಂಖ್ಯ ವಿಲಾಪ ಪ್ರಲಾಪಗಳ ಸದ್ದು ಗಾಳಿಯಲ್ಲಿ ತೂರಿಬಂತು. ಅದು, ಶತಶತಮಾನದ ತನ್ನ ಇರುವಿಕೆಯ ಭಾರ ಹೊತ್ತು ಸೋತಿದ್ದ ಕಟ್ಟಡದ ನರಳಿಕೆ. ಶ್ವೇತ ತಾರೆಯ ಬದಿಯಲ್ಲಿ ದೊಡ್ಡದೊಂದು ಬಿರುಕು ಕಾಣಿಸಿಕೊಂಡು, ಅವಳ ಸುಂದರವಾದ ಪೀಠವನ್ನು ಸುತ್ತುವರಿದಿದ್ದ ಹೂಗಳನ್ನು ತಾಕುವಷ್ಟುದ್ದ ಹರಿದುಬಂತು. ಅದರ ಸನಿಹದ ಹೂವೊಳಗಿದ್ದ ದೇವತೆ ಹೆದರಿ ಹೊರಬಂದು ಕೈಮುಗಿದು ಬೇಡಿದ, “ತಾಯಿ ತಾರೆ, ಕಾಪಾಡು ನಮ್ಮನ್ನು. ಈ ದಿವ್ಯ ದೇಗುಲ ನಾಶವಾಗದಂತೆ ರಕ್ಷಿಸು”

ತಾರೆಯ ಕರುಣೆಯ ಕಣ್ಣು ಹೊರಳಿತು, ದನಿ ಬಂದ ದಿಕ್ಕಿನತ್ತ.
“ಯಾರು ನೀನು, ಪುಟ್ಟ ದೇವತೆ?”
“ನಾನು ಸೌಂದರ್ಯದ ದೇವತೆ, ನಿನಗರ್ಪಿತವಾದ ಹೂವಿನೊಳಗೆ ನನ್ನ ವಾಸ”
ತಾಯಿ ತಾರೆ, ಮಮತೆಯ ಮಂದಹಾಸ ಬೀರಿದಳು. ದೇಗುಲದ ಮತ್ತೊಂದು ಬದಿಯತ್ತ ಬೆಟ್ಟು ಮಾಡುತ್ತಾ ನುಡಿದಳು:
“ಆ ಮೂಲೆಯಲ್ಲಿ ರಾಶಿ ಬಿದಿರುವ ಅರಿವಿನ ಅಮೂಲ್ಯ ನಿಧಿಗಳಲ್ಲೊಂದು ಹಸ್ತಪ್ರತಿ ಇದೆ. ಹೆಸರು, ಪ್ರಜ್ಞಾಪರಿಮಿತ. ಅದರಲ್ಲಿದೆ ತಥಾಗತನ ಈ ಮಾತು:
“ಮುಂಜಾವದ ಚಿಕ್ಕೆಯಂತೆ, ತೊರೆಯ ನೀರ್ ಗುಳ್ಳೆಯಂತೆ
ಬೇಸಗೆಯ ಮೋಡದಂಚಿನ ಮಿಂಚಿನಂತೆ
ತೊಯ್ಯುವ ದೀಪದ ಕುಡಿಯಂತೆ, ಮರೀಚಿಕೆಯಂತೆ, ಒಂದು ಕನಸಿನಂತೆ
ಬಗೆಯಬೇಕು ನೀನು, ಈ ಕ್ಷಣಿಕ ಲೋಕವನ್ನು”

ಈ ಮಾತು ಕೇಳುತ್ತಲೇ ಸೌಂದರ್ಯ ದೇವತೆಯ ಕಣ್ಣು ತುಂಬಿಬಂತು. “ಎಷ್ಟು ನಿಜ ಈ ಮಾತು, ಅದೆಷ್ಟು ನಿಜ!
ಚಣ ಕಾಲವಾದರೂ ಸರಿ, ಸೌಂದರ್ಯ ಇರುವಲ್ಲಿ ಶಾಶ್ವತದ ಬಯಕೆಯ ತಂತು ಮಿಡಿಯುವುದು. ಎಂಥ ಕನಸಿದು…ಇದರಿಂದ ಹೊರಬರಲಾಗದೆ ಪರದಾಡುವೆವು. ಕರುಣಾಳು ತಥಾಗತ ಕನಸಾಗಿಯೇ ಬಂದು ನಮ್ಮೆದುರು ನಿಲ್ಲುವನು, ನಮ್ಮನ್ನು ಬೋಧಿಯ ದಾರಿಯಲ್ಲಿ ನಡೆಸುವನು” ಕೃತಜ್ಞತೆಗೆ ಕೊರಳುಬ್ಬಿ ಶಾಕ್ಯಮುನಿಯ ಬೃಹದಾಕಾರದ ವಿಗ್ರಹದ ಮುಂದೆ ತಲೆಬಾಗಿನಿಂತ. ಆ ಮಾಯಕದ ಘಳಿಗೆಯಲ್ಲಿ ಬುದ್ಧ ವಿಗ್ರಹ ಜೀವ ಕಳೆಯಿಂದ ಹೊಳೆಯುತ್ತಿತ್ತು.

(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.