ಧ್ಯಾನ ಮಾಡಲು ಕಲಿಯಿರಿ #4 : ಶರೀರವನ್ನು ಸಡಿಲಗೊಳಿಸಿ

ಧ್ಯಾನದ ಮೂಲಭೂತ ಅಂಶಗಳನ್ನು ನಾಲ್ಕು ಹಂತಗಳಲ್ಲಿ ಸರಳವಾಗಿ ವಿವರಿಸುವ ಪ್ರಯತ್ನವಿದು. ಚಕ್ರಗಳನ್ನು ಸಡಿಲಗೊಳಿಸುವ ಮೂಲಕ ದೇಹವನ್ನು ನಿಶ್ಚೇಷ್ಟಗೊಳಿಸಿ ಉನ್ನತ ವಿಶ್ರಾಂತಿಯನ್ನು ಅನುಭವಿಸುವುದು ಈ ನಿಟ್ಟಿನಲ್ಲಿ ಕೊನೆಯ ಹಂತ. ಈ ಹಂತವನ್ನು ಸಾಧಿಸುವ ಬಗೆ ಹೇಗೆಂದು ನೋಡೋಣ. 

(ಹಿಂದಿನ ಲೇಖನದ ಕೊಂಡಿ ಇಲ್ಲಿದೆ)

chakraಗ ನೀವು ಉಸಿರಾಟವನ್ನು ಕ್ರಮಬದ್ಧಗೊಳಿಸಿಕೊಂಡಿದ್ದೀರಿ. ಮುಂದಿನ ಹಂತ ದೇಹವನ್ನು ಸಡಿಲಗೊಳಿಸಿಕೊಳ್ಳುವುದು. ಹಾಗೆಂದರೆ ನೀವು ಕುಳಿತಿರುವ ಭಂಗಿಯನ್ನು ಸಡಿಲ ಮಾಡಿಕೊಳ್ಳುವುದು ಎಂದಲ್ಲ. ನಿಮ್ಮ ದೇಹದ ಒಳಗೆ ನೀವಿನ್ನೂ ಕಾಯ್ದುಕೊಂಡಿರುವ ಬಿಗುವನ್ನು ಸಡಿಲ ಮಾಡಿಕೊಳ್ಳುವುದು ಎಂದು. ಅದಕ್ಕಾಗಿ ನೀವು ಚಕ್ರಗಳ ಜೊತೆ ಪ್ರಯೋಗ ನಡೆಸಬೇಕಾಗುತ್ತದೆ.

ನಮ್ಮ ಸೂಕ್ಷ್ಮ ಶರೀರದಲ್ಲಿ  ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ ಮತ್ತು ಸಹಸ್ರಾರಗಳೆಂಬ ಏಳು ಚಕ್ರಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಐದು ಚಕ್ರಗಳನ್ನು ಬಳಸಿಕೊಂಡು ಮುಂದುವರಿಯೋಣ. ಮೂಲಾಧಾರ ಚಕ್ರವು ಜನನೇಂದ್ರಿಯದ ಬಳಿ ಇರುತ್ತದೆ. ನಮ್ಮ ಸಾಧನೆ ಆರಂಭವಾಗಬೇಕಿರುವುದು ಇಲ್ಲಿಂದಲೇ. ಸ್ವಾದಿಷ್ಠಾನವು ಹೊಕ್ಕುಳ ಬಳಿಯೂ ಅನಾಹತವು ಹೃದಯದ ಬಳಿಯೂ ಹಣೆಯ ಮೇಲೆ – ಹುಬ್ಬುಗಳ ನಡುವೆ ಆಜ್ಞಾ ಚಕ್ರವೂ ನೆತ್ತಿಯ ಮೇಲೆ ಸಹಸ್ರಾರವೂ ಇರುತ್ತವೆ.

ಧ್ಯಾನಕ್ಕೆ ಅಣಿಯಾದ ನಂತರ ಮೊದಲು ನಿಮ್ಮ ಗಮನವನ್ನು ಮೂಲಾಧಾರದತ್ತ ಹರಿಸಿ. ನೀವು ಎಷ್ಟೇ ಆರಾಮವಾಗಿ ಕುಳಿತುಕೊಂಡಿದ್ದರೂ ನಿಮ್ಮ ತೊಡೆಗಳು ಬಿಗಿದುಕೊಂಡಿರುತ್ತವೆ. ತೊಡೆಗಳ ನಡುವಿನ ಬಿಗುವನ್ನು ಸಡಿಲಗೊಳಿಸಿಕೊಳ್ಳಿ. ಇದರೊಂದಿಗೇ ನಿಮ್ಮ ಮೂಲಾಧಾರ ಚಕ್ರವೂ ಸಡಿಲಗೊಳ್ಳುತ್ತಿದೆ ಎಂದು ಭಾವಿಸಿ. ಈ ಭಾವನೆ ನಿಮ್ಮ ನಂಬಿಕೆಯೂ ಆಗಿರಬೇಕು. ಒಂದು ಮಾತು ನೆನಪಿನಲ್ಲಿಡಿ. ಯಾವುದೇ ಸಂಗತಿಯೂ ನೀವು ಭಾವಿಸಿದೆ, ನೀವು ನಂಬದೆ ನಿಮ್ಮೊಳಗೆ ಘಟಿಸಲಾರದು. ಆದ್ದರಿಂದ ನಿಮ್ಮ ನಿಮ್ಮ ತೊಡೆಗಳ ಬಿಗುವನ್ನು ಸಡಿಲ ಮಾಡಿಕೊಳ್ಳುತ್ತ ಮೂಲಾಧಾರವೂ ಸಡಿಲಗೊಳಿಸಿಕೊಳ್ಳುತ್ತಿರುವಂತೆ ಭಾವಿಸಿ. ಅದು ಸಡಿಲಗೊಳ್ಳುತ್ತಲೇ ನಿಮ್ಮ ಕಾಲುಗಳು ನಿಶ್ಚೇಷ್ಟಗೊಂಡಂತೆ ಆಗುವವು.

ಈಗ ನಿಮ್ಮ ಗಮನವನ್ನು ಸ್ವಾಧಿಷ್ಠಾನದತ್ತ ಹರಿಸಿ. ನಿಮ್ಮ ಸಂಪೂರ್ಣ ಧ್ಯಾನ ಅದರ ಮೇಲಿರಲಿ. ಹೊಕ್ಕುಳಲ್ಲಿರುವ ಸ್ವಾಧಿಷ್ಟಾನ ಚಕ್ರವನ್ನು ಭಾವಿಸುತ್ತಾ ಸಡಿಲ ಮಾಡಿಕೊಳ್ಳಿ. ಇದರೊಂದಿಗೆ ನಿಮ್ಮ ಹೊಟ್ಟೆಯ ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ.

ಮುಂದಿನ ಸರದಿ ಹೃದಯದ ಬಳಿಯ ಅನಾಹತದ್ದು. ಅನಾಹತದ ಬಳಿ ನಿಮ್ಮ ಧ್ಯಾನವನ್ನು ನಿಲ್ಲಿಸಿ, ಗಮನ ಹರಿಸಿ. ಅನಾಹತದಲ್ಲಿ ನಿಮ್ಮ ಗಮನವು ನೆಲೆ ನಿಂತಾಗ ಕ್ಷಣ ಕಾಲ ನೀವು ವಿಚಲಿತರಾಗುತ್ತೀರಿ. ನಿಮ್ಮ ಎಲ್ಲ ಭಾವನೆಗಳು, ಅನುಭವಗಳು ಅಲ್ಲಿ ಹೆಪ್ಪುಗಟ್ಟಿರುತ್ತವೆ. ಅದನ್ನು ಹಾಗೆಯೇ ಉಪೇಕ್ಷಿಸಿ, ಅನಾಹತವನ್ನು ಸಡಿಲಗೊಳಿಸಿಕೊಳ್ಳಿ. ಹಾಗೆಂದ ಮಾತ್ರಕ್ಕೆ ಹೃದಯವು ನಿಶ್ಚೇಷ್ಟಗೊಳ್ಳುವುದು ಎಂದು ತಿಳಿಯಬೇಡಿ. ಅನಾಹತ ಸಡಿಲಗೊಂಡರೆ ಉಳಿದ ರುಂಡದ ಕೆಳಗಿನ ಸಂಪೂರ್ಣ ಶರೀರ ಸಡಿಲಗೊಳ್ಳುವುದು.

ಹುಬ್ಬುಗಳ ನಡುವೆ, ಆಜ್ಞಾ ಚಕ್ರದಲ್ಲಿ ನಿಮ್ಮ ಗಮನವನ್ನು ನೆಲೆ ನಿಲ್ಲಿಸಿ ಧ್ಯಾನಿಸಿ. ಆಜ್ಞಾ ಚಕ್ರವನ್ನು ಸಡಿಲಗೊಳಿಸುವುದು ಎಂದರೆ ಕುತ್ತಿಗೆಯ ನರಗಳು ಸಡಿಲಗೊಂಡು ಕುತ್ತಿಗೆ ಬಿಗು ಕಳೆದುಕೊಳ್ಳುವುದು.

ಇಷ್ಟಾಗುವಾಗ ನೆತ್ತಿಯ ಕಂಪನವನ್ನುಳಿದು ಇಡಿಯ ಶರೀರ ಪ್ರಶಾಂತ ಸ್ಥಿತಿಗೆ ಬಂದಿರುತ್ತದೆ. ಈಗ ಸಹಸ್ರಾರದತ್ತ ನಿಮ್ಮ ಗಮನವನ್ನು ಕೆಂದ್ರೀಕರಿಸಿ ಅದನ್ನೇ ಧ್ಯಾನಿಸಿ. ಇಲ್ಲಿ ಧ್ಯಾನಿಸುವುದು ಅಂದರೆ ಗಮನವನ್ನು ನೆಲೆ ನಿಲ್ಲಿಸುವುದಷ್ಟೆ. ಹೀಗೆ ಮಾಡುವಾಗ ನಿಮ್ಮ ಮೆದುಳು ಸಂಪೂರ್ಣ ವಿಶ್ರಾಂತ ಸ್ಥಿತಿಯಲ್ಲಿರುವ ಅನುಭವ ಆಗುತ್ತದೆ. ಒಂದು ದಿವ್ಯ ಸ್ಥಿತಿಯಲ್ಲಿ ನೀವಿರುತ್ತೀರಿ. ನೀವು ರಿಲ್ಯಾಕ್ಸ್ ಆಗಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈ ಸ್ಥಿತಿಯಲ್ಲಿ ಕನಿಷ್ಠ ಹತ್ತು ನಿಮಿಷಗಳ ಕಾಲ ಮನಸ್ಸನ್ನು ನೆಲೆ ನಿಲ್ಲಿಸುವುದು ನಿಮಗೆ ಸಾಧ್ಯವಾಗಬೇಕು.

ಹೀಗೆ ಸಂಪೂರ್ಣ ವಿಶ್ರಾಮ ಸ್ಥಿತಿಯಲ್ಲಿ ನೆಲೆಸುವುದೇ ‘ಧ್ಯಾನ’. ನೀವು ಮಾಡಲು ಬಯಸಿದ್ದು ಇದನ್ನೇ. ಧ್ಯಾನ ಯಾವುದೋ ಕೈಗೆಟುಕದ ಕಠಿಣ ಸಂಗತಿಯಲ್ಲ. ಈ ನಾಲ್ಕು ಹಂತಗಳಲ್ಲಿ ನೀವು ಅದರ ಪ್ರಕ್ರಿಯೆ ಎಷ್ಟು ಸುಲಭ ಎಂದು ನೋಡಿದ್ದೀರಿ. ಮತ್ತು ಈ ಹಂತಗಳನ್ನು ಸಮರ್ಪಕವಾಗಿ ಅನುಸರಿಸಿದರೆ, ಅದು ನೀಡುವ ದಿವ್ಯಾನುಭೂತಿಯನ್ನು ಕಂಡುಕೊಳ್ಳುತ್ತೀರಿ.

ಪ್ರಯತ್ನಿಸಿ, ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಈ ನಾಲ್ಕು ಸರಣಿ ಲೇಖನಗಳಲ್ಲಿ ‘ಧ್ಯಾನ’ದ ಮೂಲಪಾಠವನ್ನಷ್ಟೆ ಹೇಳಲಾಗಿದೆ. ಮುಂದಿನ ಲೇಖನಗಳಲ್ಲಿ ಧ್ಯಾನದ ಹಲವು ಬಗೆಗಳನ್ನೂ ಅವುಗಳ ಪ್ರಯೋಜನವನ್ನೂ ನೋಡೋಣ.  

Leave a Reply