ನಸ್ರುದ್ದೀನನ ಕಥೆ : ತಪ್ಪು ಬದಿಗೆ ಬೆಣ್ಣೆ!

Mullaಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ.

ಆ ದಿನ ನಸ್ರುದ್ದೀನ್ ಮಾತನಾಡುತ್ತಾ,ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ.

ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ ಹಚ್ಚಿದ ಬದಿಯೇ ಮೇಲೆ ಬಂದಂತೆಯೂ ಕಲ್ಪಿಸಿಕೊಂಡರು.

ಆ ಸಭಿಕರಲ್ಲಿ ಒಬ್ಬ ಹುಡುಗನಿಗೆ ಮಾತ್ರ ಅದನ್ನು ನಂಬಲಾಗಲಿಲ್ಲ. ಪರೀಕ್ಷೆ ಮಾಡಿಯೇಬಿಡೋಣ ಅಂದುಕೊಂಡು ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆದ. ಆ ರೊಟ್ಟಿ ಕೆಳಗೆ ಬಿತ್ತು. ಆದರೆ ನಸ್ರುದ್ದೀನ್ ಹೇಳಿದಂತೆ ಬೆಣ್ಣೆ ಹಚ್ಚಿದ ಬದಿ ಮೇಲಕ್ಕಿರದೆ, ಕೆಳಗೆ ಮುಖ ಮಾಡಿಕೊಂಡು ಮಣ್ಣಾಯಿತು. ಹುಡುಗ ಅದನ್ನು ತೆಗೆದುಕೊಂಡು ನಸ್ರುದ್ದೀನನ ಮುಂದೆ ಹಿಡಿಯುತ್ತಾ, “ಎಲ್ಲಿ? ನೀವು ಹೇಳಿದಂತೆ ಆಗಲಿಲ್ಲವಲ್ಲ! ಬೆಣ್ಣೆ ಹಚ್ಚಿದ ಬದಿ ಕೆಳಮುಖವಾಗಿದೆಯಲ್ಲ! ನೀವು ಹೇಳುವುದೆಲ್ಲಾ ಸುಳ್ಳು” ಎಂದ.

ನಸ್ರುದ್ದೀನ್ ಚೂರೂ ಕಂಗೆಡದೆ ಮುಗುಳ್ನಗುತ್ತಾ, “ನಾನು ಹೇಳಿದ್ದು ಸರಿಯಾಗೇ ಇದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ ಅಷ್ಟೇ’ ಅಂದ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a reply to divakar ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.