ವರರುಚಿಗೆ ವೇತಸಪುರದ ದೇವಸ್ವಾಮಿ ಮತ್ತು ಕರಂಭಕ ಎಂಬ ಬ್ರಾಹ್ಮಣ ಸಹೋದರರ ಮಕ್ಕಳಾದ ವ್ಯಾಡಿ ಮತ್ತು ಇಂದ್ರದತ್ತರ ಪರಿಚಯವಾಯಿತು. ಅವರ ಪರಿಚಯವನ್ನು ಕೇಳಲು ಆ ದಾಯಾದಿ ಸಹೋದರರು ಹೇಳಲು ಆರಂಭಿಸಿದರು…
ಏಕಕಾಲಕ್ಕೆ ತಮ್ಮ ತಂದೆಯರನ್ನು ಕಳೆದುಕೊಂಡ ವೇತಸಪುರದ ವ್ಯಾಡಿ ಮತ್ತು ಇಂದ್ರದತ್ತರು ಉತ್ತಮ ವಿದ್ಯೆ ನೀಡಬಲ್ಲ ಗುರುವಿಗಾಗಿ ಅಲೆದಾಡಿ, ಕುಮಾರಸ್ವಾಮಿಯನ್ನು ಕುರಿತು ಪ್ರಾರ್ಥಿಸಿದರು. ಕುಮಾರಸ್ವಾಮಿಯು ಅವರಿಗೆ ನಂದ ಮಹಾರಾಜನ ಪಾಟಲಿಕ ಎಂಬ ನಗರದಲ್ಲಿ ವಾಸವಿರುವ ವರ್ಷೋಪಾಧ್ಯಾಯನನ್ನು ಆಶ್ರಯಿಸುವಂತೆ ಸೂಚಿಸಿದನು.
ಅದರಂತೆ ಪಾಟಲಿಕ ನಗರಕ್ಕೆ ಬಂದ ದಾಯಾದಿಗಳು ಅಲ್ಲಿಯ ಜನರನ್ನು ಪ್ರಶ್ನಿಸಲಾಗಿ, ಅವರು ‘ವರ್ಷೋಪಾಧ್ಯಾಯಾನೆಂಬ ಪಂಡಿತನ ಬಗ್ಗೆ ನಮಗೆ ತಿಳಿಯದು. ಆದರೆ ಆ ಹೆಸರಿನ ಮೂರ್ಖನೊಬ್ಬನು ನಮ್ಮ ನಗರದಲ್ಲಿದ್ದಾನೆ” ಎಂದು ನಗೆಯಾಡಿದರು. ಅಚ್ಚರಿಗೊಂಡರೂ ಆ ಸಹೋದರರು ವರ್ಷೋಪಾಧ್ಯಾಯನ ಮನೆಯ ವಿಳಾಸವನ್ನು ಪಡೆದು ಅವರ ಮನೆಗೆ ಹೋದರು. ಅಲ್ಲಿ ಧ್ಯಾನಮಗ್ನನನಾಗಿದ್ದ ವರ್ಷೋಪಾಧ್ಯಾಯನನ್ನು ಕಂಡು, ತೊಂದರೆ ನೀಡಲು ಇಚ್ಛಿಸದೆ, ಆತನ ಪತ್ನಿಯ ಬಳಿಗೆ ಹೋಗಿ ನಮಸ್ಕರಿಸಿದರು. ಅವರು ಬಂದ ವಿಷಯವನ್ನೆಲ್ಲ ಕೇಳಿ ತಿಳಿದ ಆತನ ಪತ್ನಿಯು, ಪತಿಯ ಧ್ಯಾನ ಮುಗಿಯುವವರೆಗೂ ಕಾಯುವಂತೆ ಹೇಳಿ ಉಪಚರಿಸಿದಳು.
ವ್ಯಾಡಿ ಮತ್ತು ಇಂದ್ರದತ್ತರು ಆಕೆಯನ್ನು ಕುರಿತು, “ಈ ನಗರದ ಜನರೇಕೆ ವರ್ಷೋಪಾಧ್ಯಾಯರನ್ನು ಮೂರ್ಖ ಪಂಡಿತನೆನ್ನುತ್ತಾರೆ?” ಎಂದು ಪ್ರಶ್ನಿಸಿದರು. ಆಗ ಆ ಪಂಡಿತ ಪತ್ನಿಯು ವರ್ಷೋಪಾಧ್ಯಾಯರ ಕಥೆಯನ್ನು ಹೇಳಿದಳು.
ಪಾಟಲಿಕ ನಗರದಲ್ಲಿ ಶಂಕರಸ್ವಾಮಿ ಎಂಬ ಬ್ರಾಹ್ಮಣನಿದ್ದನು. ಅವನಿಗೆ ವರ್ಷ, ಉಪವರ್ಷ ಎಂಬ ಇಬ್ಬರು ಮಕ್ಕಳು. ಉಪವರ್ಷ ದೊಡ್ಡ ಪಂಡಿತನಾಗಿ, ಬುದ್ಧಿವಂತನೆಂದು ಹೆಸರು ಪಡೆದಿದ್ದನು. ಆದರೆ ವರ್ಷನು ಮಹಾಮೂರ್ಖನೂ ಅಪ್ರಯೋಜಕನೂ ಆಗಿದ್ದು, ಜನರಿಂದ ಗೇಲಿಗೆ ಒಳಗಾಗಿದ್ದನು.
ಹೀಗಿರುತ್ತ, ಒಂದು ಮಳೆಗಾಲ ಬಂದಿತು. ಮಳೆ ಬೀಳುವಾಗ ಹಿಟ್ಟನ್ನು ಬೆಲ್ಲದಲ್ಲಿ ಕಲೆಸಿ ಜನನಾಂಗದ ಪ್ರತಿರೂಪವನ್ನು ರಚಿಸಿ ಮೂರ್ಖ ಬ್ರಾಹ್ಮಣನಿಗೆ ದಾನ ಮಾಡುವ ಪದ್ಧತಿ ಆ ನಗರದಲ್ಲಿ ಚಾಲ್ತಿಯಲ್ಲಿತ್ತು. ಇದರಿಂದ ಋತುಮಾನದ ಬದಲಾವಣೆಗಳಿಂದ ಕ್ಲೇಶಗಳು ಉಂಟಾಗುವುದಿಲ್ಲವೆಂದು ಅವರ ನಂಬಿಕೆ. ಅದರಂತೆ ಉಪವರ್ಷನ ಹೆಂಡತಿಯು ಗುಹ್ಯಾಕಾರದ ಪ್ರತಿಮೆಯನ್ನು ರಚಿಸಿ, ವರ್ಷನಿಗೆ ದಕ್ಷಿಣೆ ಸಹಿತ ದಾನ ಕೊಟ್ಟಳು. ಅದನ್ನು ಮನೆಗೆ ತೆಗೆದುಕೊಂಡು ಹೋದ ವರ್ಷನನ್ನು ಅವನ ಹೆಂಡತಿಯು ಮೂದಲಿಸಿ, ದುಃಖಿಸಿದಳು. ಇದರಿಂದ ನೊಂದ ವರ್ಷನು ಕಾಡಿಗೆ ತೆರಳಿ ಕುಮಾರಸ್ವಾಮಿಯ ಪಾದಗಳನ್ನು ಆಶ್ರಯಿಸಿ ತಪಸ್ಸನ್ನು ನಡೆಸಿದನು. ಅದಕ್ಕೆ ಒಲಿದ ಕುಮಾರ ಸ್ವಾಮಿಯು ವರ್ಷನಿಗೆ ಸಮಸ್ತ ವಿದ್ಯೆಗಳನ್ನೂ ಧಾರೆ ಎರೆದು, “ಏಕಶ್ರುತಧರನಾದ ವಿದ್ಯಾರ್ಥಿಯು ನಿನಗೆ ದೊರೆತಾಗ ಈ ಎಲ್ಲ ವಿದ್ಯೆಗಳೂ ನಿನ್ನಲ್ಲಿ ಪ್ರಕಟಗೊಳ್ಳುವುದು” ಎಂದು ನುಡಿದನು.
ಅದರಂತೆ ವರ್ಷೋಪಾಧ್ಯಾಯನು ಮನೆಗೆ ಮರಳಿ, ಪತ್ನಿಗೆ ಕುಮಾರಸ್ವಾಮಿಯ ಅನುಗ್ರಹವನ್ನು ತಿಳಿಸಿದನು. ಮತ್ತು ಅಂದಿನಿಂದ ಅವರು ಏಕಶ್ರುತಧರನಾದ ವಿದ್ಯಾರ್ಥಿಗೆ ಕಾಯುತ್ತಿದ್ದರು. ವ್ಯಾಡಿ ಮತ್ತು ಇಂದ್ರದತ್ತರು ಅವರ ಮನೆಗೆ ಹೋದಾಗ ವರ್ಷೋಪಾಧ್ಯಾಯನ ಪತ್ನಿಯು ಈ ಎಲ್ಲ ವಿಷಯವನ್ನು ಅವರಿಗೆ ತಿಳಿಸಿ, ಅಂತಹ ತರುಣನನ್ನು ಹುಡುಕಿ ತಂದರೆ, ನಿಮಗೂ ಆತನೊಡನೆ ವಿದ್ಯೆ ದೊರೆಯುವುದು ಎಂದು ಸೂಚಿಸಿದಳು.
ಈ ಕಥೆಯನ್ನು ವಸುದತ್ತೆಗೆ ಹೇಳಲಾಗಿ, ಅವಳು ಸಂತೋಷದಿಂದ ತನ್ನ ಏಕಶ್ರುತಧರನಾದ ಮಗ ವರರುಚಿಯನ್ನು ಅವರೊಡನೆ ಕಳುಹಿಸಿಕೊಟ್ಟಳು.
(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ: