ನಮ್ಮಲ್ಲಿ ಕಂಪನವಿದ್ದರೆ ಸಂಬಂಧವೂ ಕದಲುವುದು!

ನಾವು ಎಲ್ಲಿಯವರೆಗೆ ನಮ್ಮ ಸುಖಕ್ಕೆ ಬೇರೆ ಯಾರನ್ನೂ ಅವಲಂಬಿಸುವುದಿಲ್ಲವೋ, ಎಲ್ಲಿಯವರೆಗೆ ದುಃಖಕ್ಕೆ ಮತ್ಯಾರನ್ನೋ ಹೊಣೆಗೇಡಿಯಾಗಿಸುತ್ತೇವೆಯೋ ಅಲ್ಲಿಯವರೆಗೆ ಸಂಬಂಧಗಳು ಅನಿಶ್ಚಿತತೆಯಲ್ಲಿ ಕಂಪಿಸುತ್ತಲೇ ಇರುತ್ತವೆ  ~ ಅಲಾವಿಕಾ

ಕದಡಿದ ಕೊಳದಲ್ಲಿ
ಬಿಂಬವೂ ಅಸ್ಥಿರ;
ದೂರಬೇಡ ಚಂದ್ರನ್ನ.
ಈ ಮಾತು ಅದೆಷ್ಟು ನಿಜ!!

ನಾವು ಕೊಳದಂತೆ. ಸಂಬಂಧವೇ ಪ್ರತಿಬಿಂಬ. ನಮ್ಮಲ್ಲಿ ಕಂಪನಗಳಿದ್ದಷ್ಟೂ ಹೊತ್ತು ಸಂಬಂಧವೂ ಅಲುಗಾಡುತ್ತಿರುತ್ತದೆ. ಆದರೆ ನಾವು ಅದನ್ನು ಸಂಬಂಧದ ಆ ತುದಿಯಲ್ಲಿ ಇರುವವರ ದೋಷ ಅಂದುಕೊಂಡು ನರಳುತ್ತೇವೆಯೇ ಹೊರತು, ನಮ್ಮನ್ನು ಹೊಣೆಯಾಗಿಸಿಕೊಳ್ಳುವುದಿಲ್ಲ. ಯಾವುದೇ ಸಂಬಂಧದಲ್ಲಿ ಅಪನಂಬಿಕೆ ಉಂಟಾಗುವುದು ನಮ್ಮ ಆತ್ಮವಿಶ್ವಾಸದ ಕೊರತೆಯಿಂದಲೇ ಹೊರತು ಮತ್ತೊಬ್ಬರ ದೋಷದಿಂದಲ್ಲ. ನಮ್ಮಲ್ಲಿ ನಮಗೆ ವಿಶ್ವಾಸವಿದ್ದರೆ, ನಮ್ಮೆದೆಯ ಕೊಳ ಶಾಂತವಾಗಿದ್ದರೆ, ಸಂಬಂಧವೂ ಸುಸ್ಥಿರವಾಗಿರುತ್ತದೆ.

ಇಷ್ಟಕ್ಕೂ ಕೊಳವೇಕೆ ಕದಡುತ್ತದೆ? ಹೊರಗಿನ ಯಾವುದಾದರೊಂದು ವಸ್ತು ಕೊಳದ ನೀರಿಗೆ ಬಂದು ಬೀಳುವ ತನಕ ಅದು ಪ್ರಶಾಂತವಾಗಿಯೇ ಇರುತ್ತದೆ. ನಾವೂ ಅಷ್ಟೇ. ಅನವಶ್ಯಕವಾಗಿ ಬಾಹ್ಯ ಸಂಗತಿಗಳಿಗೆ ಪ್ರಾಶಸ್ತ್ಯ ಕೊಟ್ಟು ಮನಸ್ಸನ್ನು ಹಾಳು ಮಾಡಿಕೊಳ್ಳುತ್ತೇವೆ. ಹೋಲಿಕೆ, ಹೊರಗಿನ ವ್ಯಕ್ತಿಗಳ ಹೇಳಿಕೆ, ಗಾಳಿಮಾತು ಅಥವಾ ಅಪಾರ್ಥಗಳಿಂದಾಗಿ ಸಂಬಂಧದ ಸ್ಥಿರತೆಗೆ ಸಂಚಕಾರ ತಂದುಕೊಳ್ಳುತ್ತೇವೆ.
ಕಸ ಕಡ್ಡಿಗಳು ಬಿದ್ದು ಕೊಳ ಕದಡುವುದು ನೈಸರ್ಗಿಕ ವಿದ್ಯಮಾನ. ಕೊಳ ಜಡವಸ್ತು. ಆದರೆ ನಾವು ಸಚೇತನರು. ಹೊರಗಿನ ಸಂಗತಿಗಳಿಂದ ನಾವು ವಿಚಲಿತರಾಗುತ್ತೇವೆ ಎಂದರೆ ಅದು ನಮ್ಮೊಳಗಿನ ದೃಢ ಮನಸ್ಕತೆಯ ಕೊರತೆಗೆ ಪುರಾವೆಯೇ ಹೊರತು ಬೇರೇನೂ ಅಲ್ಲ.

‘ನಾವು ಬಿಟ್ಟುಕೊಳ್ಳದ ಹೊರತು ಯಾವ ಸಂಗತಿಯೂ ನಮ್ಮನ್ನು ಬಾಧಿಸದು’ ಎನ್ನುತ್ತಾರೆ ಓಶೋ ರಜನೀಶ್. ನಾವು ದುಃಖಕ್ಕೆ ಅವಕಾಶ ಮಾಡಿಕೊಟ್ಟರಷ್ಟೆ ದುಃಖ ನಮ್ಮನ್ನು ಬಾಧಿಸಲು ಸಾಧ್ಯವಾಗುವುದು.
ನಂಬಿಕೆಯ ವಿಷಯದಲ್ಲಿಯೂ ಹಾಗೆಯೇ. ನಾವು ಅಪನಂಬಿಕೆಯ ಬೀಜ ಬಿತ್ತಿ ನಂಬಿಕೆಯ ಫಸಲನ್ನು ಕಟಾವು ಮಾಡಬೇಕೆಂದು ಬಯಸುವುದು ಮೂರ್ಖತನವಾದೀತು. ನಾವು ಯಾವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆಯೋ ಅದಲ್ಲದೆ ಮತ್ತೇನು ತಾನೇ ದೊರಕಲು ಸಾಧ್ಯ? ನಾವು ಇದನ್ನು ಆಲೋಚಿಸುವುದೇ ಇಲ್ಲ.

ಇದೆಲ್ಲಕ್ಕೆ ಕಾರಣ ನಮ್ಮ ಪಲಾಯನವಾದ. ನಮ್ಮ ದೋಷಕ್ಕೆ ಮತ್ತೊಬ್ಬರನ್ನು ಹೊಣೆಗಾರರನ್ನಾಗಿ ನುಣುಚಿಕೊಳ್ಳುವ ನಮ್ಮ ದೌರ್ಬಲ್ಯವೇ ಇದಕ್ಕೆ ಕಾರಣ. ನಾವು ಎಲ್ಲಿಯವರೆಗೆ ನಮ್ಮ ಸುಖಕ್ಕೆ ಬೇರೆ ಯಾರನ್ನೂ ಅವಲಂಬಿಸುವುದಿಲ್ಲವೋ, ಎಲ್ಲಿಯವರೆಗೆ ದುಃಖಕ್ಕೆ ಮತ್ಯಾರನ್ನೋ ಹೊಣೆಗೇಡಿಯಾಗಿಸುತ್ತೇವೆಯೋ ಅಲ್ಲಿಯವರೆಗೆ ಸಂಬಂಧಗಳು ಅನಿಶ್ಚಿತತೆಯಲ್ಲಿ ಕಂಪಿಸುತ್ತಲೇ ಇರುತ್ತವೆ. ಸುಖ ಸಂತಸಗಳೆಲ್ಲವೂ ನನ್ನೊಳಗೇ ಇದೆ, ಅವೆಲ್ಲವನ್ನೂ ನನಗೆ ನಾನು ಉಂಟು ಮಾಡಿಕೊಳ್ಳಬಲ್ಲೆ ಹೊರತು ಇನ್ಯಾರೂ ಅವನ್ನು ಉಂಟುಮಾಡಲು ಸಾಧ್ಯವಿಲ್ಲ ಎಂಬ ಅರಿವಿನೊಡನೆ ಕಂಪನವೂ ಶಾಂತವಾಗುತ್ತದೆ.
ಈ ತಿಳಿವೊಂದೇ ನಮ್ಮನ್ನು ತಿಳಿಯಾಗಿಸುವ ಸಾಧನ. ಇಷ್ಟನ್ನು ಅರ್ಥ ಮಾಡಿಕೊಂಡರೆ ಎಲ್ಲ ಬಗೆಯ ತಾಕಲಾಟಗಳು, ಅಪನಂಬಿಕೆಗಳು ಕಳೆಯುತ್ತವೆ. ಇಲ್ಲವಾದರೆ ನಾವು ನಮ್ಮ ಜೀವಿತದ ಅಮೂಲ್ಯ ಕ್ಷಣಗಳನ್ನು ಸಂಬಂಧಿಯ/ಸಂಗಾತಿಯ ಜೊತೆಗಿನ ನಮ್ಮ ಬಾಂಧವ್ಯದ ಟೊಳ್ಳುಗಟ್ಟಿಯನ್ನು ನಿರ್ಧರಿಸುವ ಆತಂಕದಲ್ಲೇ ಕಳೆದುಬಿಡುವ ಅಪಾಯವಿರುತ್ತದೆ.

ಆದ್ದರಿಂದ, ನಂಬಿಕೆಯಿರಲಿ:
ಕೊಳ ತಿಳಿಯಾಗಿರುವಷ್ಟೂ ಹೊತ್ತು
ಚಂದ್ರಬಿಂಬವೂ ಶಾಂತವಾಗಿಯೇ ಇರುವುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.