ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪುತ್ರಕನ ಜನನ

ಈವರೆಗೆ….
ಶಪಿತ ಪುಷ್ಪದಂತನು ಕೌಶಾಂಬಿಯಲ್ಲಿ ವರರುಚಿ ಎನ್ನುವ ಹೆಸರಿನಿಂದ ಜನಿಸಿದನು. ವಿಂಧ್ಯಾಟವಿಯಲ್ಲಿ ಕಾಣಭೂತಿ ಎಂಬ ಹೆಸರಿನ ಪಿಶಾಚವಾಗಿ ಜೀವಿಸುತ್ತಿದ್ದ ಶಪಿತ ಯಕ್ಷ ಸುಪ್ರತೀಕನನ್ನು ಭೇಟಿಯಾದನು. ಕಾಣಭೂತಿಯ ಕೋರಿಕೆಯಂತೆ ತನ್ನ ವರರುಚಿಯ ಜನ್ಮದ ವೃತ್ತಾಂತವನ್ನು ಹೇಳತೊಡಗಿದನು.
ವರರುಚಿಗೆ ವ್ಯಾಡಿ ಮತ್ತು ಇಂದ್ರದತ್ತರ ಸಂಪರ್ಕ ದೊರೆತು, ಮೂವರೂ ವರ್ಷೋಪಾಧ್ಯಾಯ ಪಂಡಿತನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಮತ್ತು ವರರುಚಿಯು ವರ್ಷೊಪಾಧ್ಯಾಯನಲ್ಲಿ ಅವರು ನೆಲೆಸಿದ್ದ ಪಾಟಲೀಪುತ್ರ ನಗರದ ಕಥೆಯನ್ನು ಕೇಳಲಾಗಿ, ಗುರುವು ಹೇಳಲು ಆರಂಭಿಸಿದನು.

katha

ಹಳ ಹಿಂದೆ ಕಾಂಚನಪಾತ ಎಂಬ ದೇವಲೋಕದ ಆನೆಯು ಉಶೀನರ ಗಿರಿ ಎಂಬ ಬೆಟ್ಟದ ತಪ್ಪಲನ್ನು ತನ್ನ ದಂತಗಳಿಂದ ಒಡೆದು ಹಾಕಿ, ಅಲ್ಲಿ ಗಂಗೆ ಹರಿಯುವಂತೆ ಮಾಡಿತು. ಆ ಕ್ಷೇತ್ರಕ್ಕೆ ಕನಖಲ ಕ್ಷೇತ್ರವೆಂದು ಹೆಸರಾಯಿತು.
ಆ ಕನಖಲ ಕ್ಷೇತ್ರದಲ್ಲಿ ದಕ್ಷಿಣ ದೇಶದ ಒಬ್ಬ ಬ್ರಾಹ್ಮಣನು ತನ್ನ ಹೆಂಡತಿಯೊಡನೆ ವಾಸಿಸುತ್ತಿದ್ದನು. ಅವನಿಗೆ ಮೂವರು ಗಂಡುಮಕ್ಕಳು. ಕಾಲಾಂತರದಲ್ಲಿ ತಂದೆ ತಾಯಿಯರಿಬ್ಬರೂ ತೀರಿಕೊಂಡ ನಂತರ ಆ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೊದಲು ರಾಜಗೃಹಕ್ಕೆ ಹೋದರು. ಅಲ್ಲಿಂದ, ಕುಮಾರಸ್ವಾಮಿಯ ದರ್ಶನಕ್ಕಾಗಿ ದಕ್ಷಿಣಾಪಥಕ್ಕೆ ಪ್ರಯಾಣ ಬೆಳೆಸಿದರು.

ಮಾರ್ಗಮಧ್ಯದಲ್ಲಿ ಕರಾವಳಿಯ ಚಿಂಚಿನೀ ಎಂಬ ನಗರದಲ್ಲಿ ಭೋಜಿಕನೆಂಬ ಬ್ರಾಹ್ಮಣನ ಮನೆಯಲ್ಲಿ ತಂಗಿದರು. ಭೋಜೀಕನು ಆ ಮೂವರಿಗೆ ತನ್ನ ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟು, ತಾನು ತಪಶ್ಚರಣೆಗಾಗಿ ಗಂಗಾತಟಕ್ಕೆ ಹೊರಟುಹೋದನು.
ಹೀಗಿರುತ್ತ, ಒಮ್ಮೆ ಚಿಂಚಿನಿಯಲ್ಲಿ ಭೀಕರ ಬರಗಾಲ ಉಂಟಾಯಿತು. ಆ ಮೂವರು ಸಹೋದರರು ತಮ್ಮ ಹೆಂಡತಿಯರನ್ನೂ ಊರನ್ನೂ ತೊರೆದು ದೇಶಾಂತರ ಹೊರಟುಹೋದರು. ಈ ಸಂದರ್ಭದಲ್ಲಿ ಮಧ್ಯಮ ಸಹೋದರಿ ಗರ್ಭಿಣಿಯಾಗಿದ್ದಳು. ಅವರು ಬೇರೆ ದಾರಿ ಕಾಣದೆ ತಮ್ಮ ತಂದೆಯ ಗೆಳೆಯನಾಗಿದ್ದ ಯಜ್ಞದತ್ತನೆಂಬುವನ ಮನೆಯಲ್ಲಿ ಆಶ್ರಯ ಪಡೆದರು. ತಿಂಗಳು ತುಂಬಿ ಮಧ್ಯಮಳು ಅಲ್ಲಿಯೇ ಗಂಡು ಮಗುವೊಂದನ್ನು ಹೆತ್ತಳು.

ಮೂವರೂ ಸಹೋದರಿಯರು ಆ ಮಗುವನ್ನು ತಮ್ಮದೆನ್ನುವಂತೇ ಅಕ್ಕರೆಯಿಂದ ಬೆಳೆಸುತ್ತಿದ್ದರು. ಅವರ ಅನ್ಯೋನ್ಯತೆಯನ್ನು ದಿವ್ಯದೃಷ್ಟಿಯಿಂದ ವೀಕ್ಷಿಸುತ್ತಿದ್ದ ಪಾರ್ವತೀದೇವಿಯು ಶಿವನೊಡನೆ ಹರ್ಷವ್ಯಕ್ತಪಡಿಸಿದಳು. ಆಗ ಶಿವನು, “ಈಗ ಪುತ್ರಕನೆಂಬ ಹೆಸರಿನಿಂದ ಜನಿಸಿರುವ ಈತನು ಕಳೆದ ಜನ್ಮದಲ್ಲಿ ತನ್ನ ಹೆಂಡತಿಯೊಡನೆ ನನ್ನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿದ್ದನು. ಈ ಜನ್ಮದಲ್ಲಿ ಈತನಿಗೆ ಒಳ್ಳೆಯದೇ ಆಗುವುದು. ಈತನ ಹೆಂಡತಿ ಈಗ ಮಹೇಂದ್ರವರ್ಮನ ಮಗಳಾಗಿ ಹುಟ್ಟಿ, ಪಾಟಲೀ ಎಂಬ ಹೆಸರಿನಿಂದ ಬೆಳೆಯುತ್ತಿದ್ದಾಳೆ” ಎಂದನು.
ಅದೇ ರಾತ್ರಿ ಆ ಮೂವರು ಸಹೋದರಿಯರ ಕನಸಿನಲ್ಲಿ ಬಂದು, “ಈ ಬಾಲಕನು ಪ್ರತಿ ದಿನ ಬೆಳಗ್ಗೆ ನಿದ್ರೆಯಿಂದ ಎದ್ದಾಗಲೂ ಈತನ ತಲೆಯ ಬಳಿ ಲಕ್ಷ ಹೊನ್ನಿನ ವರಹಗಳು ಕಂಡುಬರುವವು. ಈತನು ಮುಂದೆ ದೊರೆಯಾಗುವನು” ಎಂದನು. ಅದರಂತೆ ಮಾರನೇ ದಿನ ಪುತ್ರಕನು ನಿದ್ರೆಯಿಂದ ಎಚ್ಚೆತ್ತಾಗ ಆತನ ತಲೆಯ ಬಳಿ ಲಕ್ಷ ಹೊನ್ನಿನ ವರಹಗಳು ದೊರೆತವು.

ಹೀಗೆ ದಿನವೂ ದೊರೆತ ಹೊನ್ನಿನಿಂದ ಬಹಳ ಬೇಗ ಅವರು ಶ್ರೀಮಂತರಾದರು. ತಾರುಣ್ಯಕ್ಕೆ ಕಾಲಿಟ್ಟ ಮೇಲೆ ಪುತ್ರಕನು ತನ್ನದೇ ರಾಜ್ಯ – ಕೋಶ ಕಟ್ಟಿಕೊಂಡು ಆಳರಸನೂ ಆದನು.
ಹೀಗಿರುತ್ತ, ಒಮ್ಮೆ ಯಜ್ಞದತ್ತನು ಅವನ ಬಳಿ ಬಂದು, “ಮಗೂ, ದುರ್ಭಿಕ್ಷದ ಕಾರಣದಿಂದ ನಿನ್ನ ತಂದೆ ಮತ್ತು ಚಿಕ್ಕಪ್ಪ – ದೊಡ್ಡಪ್ಪಂದಿರು ದೇಶಾಂತರ ಹೋದರು. ಆದ್ದರಿಂದ ದಿನವೂ ದಾನಧರ್ಮಗಳನ್ನು ಮಾಡುತ್ತಿರು. ಎಂದಾದರೊಮ್ಮೆ ಅವರು ಇಲ್ಲಿಗೆ ಸಹಾಯ ಕೋರಿ ಬಂದರೂ ಬರಬಹುದು” ಎಂದನು.
ಮತ್ತು, “ಇದಕ್ಕೆ ಸಂಬಂಧಿಸಿದಂತೆ ಬ್ರಹ್ಮದತ್ತ ಎಂಬುವವನ ಕಥೆಯನ್ನು ಹೇಳುವೆ ಕೇಳು” ಎಂದು ಹೇಳಿ, ಬ್ರಹ್ಮದತ್ತನ ಕಥೆಯನ್ನು ಹೇಳಲಾರಂಭಿಸಿದನು.

(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ:

https://aralimara.com/category/ಕಥಾಲೋಕ/ಕಥಾ-ಸರಿತ್ಸಾಗರ/  )

Leave a Reply