ಶಿವೋsಹಮ್ ಸರಣಿ ~ 4 : ಸಾಕ್ಷೀಭಾವದಿಂದ ನೋಡುವುದು…

photoಒಂದೊಮ್ಮೆ ಹೀಗೆ ಮಾಡಲು ಸಾಧ್ಯವಾಗುವುದಾ ನೋಡಿ. ಸಿಟ್ಟು ಬಂದಾಗ ನೀವು ಸಿಟ್ಟು ಮಾಡಿಕೊಂಡೆ ಅನ್ನುವ ಬದಲು ಸಿಟ್ಟು ಉಂಟಾಯ್ತೆಂದು ಯೋಚಿಸಿ. ಇಷ್ಟಾದರೂ ಮಾಡಲು ಸಾಧ್ಯವಾದರೆ ನಿಮಗೆ ಸಾಕಷ್ಟು ದೊರೆತಂತಾಯ್ತು. ಇಷ್ಟು ಮಾತ್ರ ಮಾಡಲು ನಾನು ನಿಮಗೆ ಹೇಳ್ತಿದ್ದೀನಿ. – ಕೇವಲ ನೋಡಿ, ಸಾಕು             ~ Whosoever Ji

ದ್ಗುರುವಿನ ಸನ್ನಿಧಿಯಲ್ಲಿ ಸಮ್ಯಕ್ ಪ್ರಯಾಸದಿಂದ, ಸಮ್ಯಕ್ ಅಭ್ಯಾಸ ನಡೆಸುವುದರಿಂದ ಇಂತಹ ವಿವೇಕ ಬುದ್ಧಿಯು ದೊರೆಯುವುದು.

ಇಂತಹ ವಿವೇಕ ಬುದ್ಧಿಯನ್ನು ಹೊಂದಿದ ವ್ಯಕ್ತಿಯು ಬಹಿರಾಂತರ ಜಗತ್ತನ್ನು ಅದು ಇರುವ ಹಾಗೇ ನೋಡತೊಡಗುತ್ತಾನೆ. ಬಹಿರಂತರದಲ್ಲಿರುವ ವಸ್ತುಗಳನ್ನೂ ಅವು ಇರುವ ಹಾಗೆಯೇ ನೋಡತೊಡಗುತ್ತಾನೆ.

ನೀವೇನೋ ಅಂದುಕೊಳ್ಳಬಹುದು, ನೀವು ಬಹಿರಂತರದ ಜಗತ್ತನ್ನು, ವಸ್ತುಗಳನ್ನು ಅವು ಇರುವ ಹಾಗೇ ನೋಡುತ್ತಿದ್ದೀರಿ ಎಂದು. ಆದರೆ ವಾಸ್ತವದಲ್ಲಿ ಅದು ಒಬ್ಬ ಜ್ಞಾನಿಯಿಂದ, ಒಬ್ಬ ಜಾಗೃತ ಪುರುಷನಿಂದ ಮಾತ್ರ ಸಾಧ್ಯವಾಗುವಂಥದ್ದು.

ನಾನು ನೋಡಿದ ಹಾಗೆ, ಮನೋವೃತ್ತಿಯ ಹಿಡಿತಕ್ಕೆ ಸಿಕ್ಕ ವ್ಯಕ್ತಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆತ ಅವುಗಳೆದುರು ಬಲಹೀನನೂ ಅಸಹಾಯಕನೂ ಆಗಿಹೋಗುತ್ತಾನೆ. ಮನೋವೃತ್ತಿಗಳನ್ನು ನಿಯಂತ್ರಿಸಲು ಅವನಿಂದಾಗುವುದಿಲ್ಲ. ಬದಲಿಗೆ ತಾನೇ ಅವುಗಳ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಾನೆ.

ನಿಮಗೆ ಯಾರ ಮೇಲಾದರೂ ಕ್ರೋಧಾದಿ ಭಾವಗಳು ಉಂಟಾದಾಗ ಅವುಗಳ ಎದುರು ಅಸಹಾಯಕರಾಗಿಬಿಡುತ್ತೀರಿ ತಾನೆ? ಇವೆಲ್ಲವೂ ತನ್ನಿಂತಾನೆ ಆಗುತ್ತಿವೆಯೋ ಅಥವಾ ನೀವು ಮಾಡುತ್ತಿದ್ದೀರೋ? ಮಾಡುವುದು ಅಥವಾ ಬಿಡುವುದು ನಿಮ್ಮ ಕೈಲಿರುತ್ತದೆಯೇ? ಈ ಸಂದರ್ಭದಲ್ಲಿ ನಿಮ್ಮಿಂದ ಸಮ್ಯಕ್ ಮಾರ್ಗದಲ್ಲಿ ನಡೆಯುವುದು ಸಾಧ್ಯವಾಗುತ್ತದೆಯೇ ಅಥವಾ ಮನೋವೃತ್ತಿಗಳು ತಮಗೆ ಬೇಕಾದಂತೆ ನಿಮ್ಮನ್ನು ನಡೆಸುತ್ತವೆಯೇ?

ಈ ಮನೋವೃತ್ತಿಗಳನ್ನು ಕೊಟ್ಟವರಾರು? ಅವು ಬಂದುದೆಲ್ಲಿಂದ? ಇದರ ಕುರಿತು ವಿಚಾರ ಮಾಡಿ. ಸಮ್ಯಕ್ ರೂಪದಿಂದ ಚಿಂತನೆ ನಡೆಸಿ. ಪುಸ್ತಕಗಳನ್ನು ಓದುವುದರಿಂದಾಗಲೀ ಪ್ರವಚನಗಳನ್ನು ಕೇಳುವುದರಿಂದಾಗಲೀ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ.

ನನಗೆ ನನ್ನ ಸ್ವಂತ ಮನೋವೃತ್ತಿಗಳ ಮೇಲೆಯೇ ನಿಯಂತ್ರಣವಿಲ್ಲ, ಅಧಿಕಾರವಿಲ್ಲ. ನಾನು ಇವುಗಳ ಕರ್ತನಲ್ಲ, ಒಡೆಯನೂ ಅಲ್ಲ. ಬದಲಿಗೆ ನಾನು ಇವುಗಳಿಗೆ ದಾಸನಾಗಿದ್ದೇನೆ; ನಾನು ಮನೋವೃತ್ತಿಗಳನ್ನಲ್ಲ, ಬದಲಿಗೆ ಅವೇ ನನ್ನನ್ನು ಭೋಗಿಸುತ್ತಿವೆ. ನನ್ನನ್ನು ಬಳಸಿಕೊಳ್ತಿವೆ ಮತ್ತು ನನ್ನನ್ನು ಶೋಷಿಸುತ್ತಿವೆ… ಏನಿಲ್ಲವೆಂದರೂ ನೀವು ಇಷ್ಟನ್ನಾದರೂ ಗಮನಿಸಬಲ್ಲಿರಿ. ನಿಮಗೆ ಇಷ್ಟಾದರೂ ಅರ್ಥವಾಗುವುದು.

ನಿಮಗೆ ಸಿಟ್ಟು ಬಂದಾಗ ನಿಮ್ಮಲ್ಲಿ ಸಿಟ್ಟು ಘಟಿಸಿರುತ್ತದೆ. ನೀವು ಅದನ್ನು ಸೃಷ್ಟಿಸಿಕೊಳ್ಳುವುದಿಲ್ಲ. ಆದರೆ ನೀವು ಹೇಳುತ್ತೀರಿ, `ನಾನು ಸಿಟ್ಟು ಮಾಡಿಕೊಳ್ತೇನೆ’ ಎಂದು. ನೀವು ಸಿಟ್ಟು ಮಾಡಿಕೊಳ್ತೇನೆ ಎಂದು ಹೇಳುವುದರಿಂದ, ಹಾಗೆ ಭಾವಿಸುವುದರಿಂದ ಅದರ ಪರಿಣಾಮವನ್ನೂ ನೀವೇ ಅನುಭವಿಸುತ್ತೀರಿ.

ಒಂದೊಮ್ಮೆ ಹೀಗೆ ಮಾಡಲು ಸಾಧ್ಯವಾಗುವುದಾ ನೋಡಿ. ಸಿಟ್ಟು ಬಂದಾಗ ನೀವು ಸಿಟ್ಟು ಮಾಡಿಕೊಂಡೆ ಅನ್ನುವ ಬದಲು ಸಿಟ್ಟು ಉಂಟಾಯ್ತೆಂದು ಯೋಚಿಸಿ. ಇಷ್ಟಾದರೂ ಮಾಡಲು ಸಾಧ್ಯವಾದರೆ ನಿಮಗೆ ಸಾಕಷ್ಟು ದೊರೆತಂತಾಯ್ತು. ಇಷ್ಟು ಮಾತ್ರ ಮಾಡಲು ನಾನು ನಿಮಗೆ ಹೇಳ್ತಿದ್ದೀನಿ. – ಕೇವಲ ನೋಡಿ, ಸಾಕು. ನೀವು ಸಿಟ್ಟು ಮಾಡಿಕೊಂಡಿರೋ ಅಥವಾ ಅದು ಉಂಟಾಯಿತೋ? ನಿಮಗೆ ಸಿಡಿಮಿಡಿ ಉಂಟಾಯ್ತೋ ಅಥವಾ ನೀವು ಸಿಡಿಮಿಡಿ ಮಾಡ್ತಿದ್ದೀರೋ? ಎಲ್ಲ ಮನೋವೃತ್ತಿಗಳಿಗೂ ಇದು ಅನ್ವಯವಾಗುತ್ತದೆ.

ಒಮ್ಮೆ ನೀವು ನೋಡುವುದಕ್ಕೆ ಶುರುವಿಟ್ಟರೆ ಸಾಕು, ನೋಡುವ ಕಲೆ ನಿಮಗೆ ಸಿದ್ಧಿಸಿದರೆ ಸಾಕು, ಎಲ್ಲವೂ ತನ್ನಿಂತಾನೆ ನಡೆಯುತ್ತಿದೆ ಎನ್ನುವುದು ನಿಮಗೆ ತಿಳಿದುಹೋಗುತ್ತದೆ. ನೀವೇನೂ ಮಾಡುತ್ತಿರುವುದಿಲ್ಲ, ನೀವು ಕೇವಲ ನೋಡುತ್ತ ಇರುತ್ತೀರಷ್ಟೆ. ನೀವು ಸಾಕ್ಷಿ ಮಾತ್ರವಾಗಿ ಇರುತ್ತೀರಷ್ಟೆ.

ವಾಸ್ತವದಲ್ಲಿ ನೀವು ಕರ್ತರೂ ಅಲ್ಲ, ಭೋಕ್ತರೂ ಅಲ್ಲ. ಅಂದರೆ, ಮಾಡುವವರೂ ನೀವಲ್ಲ, ಅನುಭವಿಸುವವರು ಕೂಡಾ. ನೋಡುವುದು, ಸಾಕ್ಷೀಭಾವದಿಂದ ನೋಡುವುದು ನಿಮ್ಮ ಮೂಲ ಸ್ವಭಾವವಾಗಿದೆ. ವಾಸ್ತವದಲ್ಲಿ ನಡೆಯುತ್ತಿರೋದೇ ಅದು. ಸಾಕ್ಷೀಭಾವದಲ್ಲಿರುವುದು. ವಿಟ್ನೆಸಿಂಗ್…. ಅಷ್ಟೆ. ಅಲ್ಲಿ ಯಾವ ಕರ್ತಾ ಗಿರ್ತಾ ಇರೋದಿಲ್ಲ.

ಮತ್ತಿಲ್ಲಿ ವಿಟ್ನೆಸಿಂಗ್ ಕೂಡಾ, ಸಾಕ್ಷೀಭಾವ ಕೂಡ ನಡೆಯುವ ಪ್ರಕ್ರಿಯೆ. ಅದನ್ಯಾರೂ ಮಾಡುವುದಿಲ್ಲ. ಸಾಕ್ಷಿಯಾಗಿ ಇರುವುದ. ಆಗಷ್ಟೇ ಇಂತಿಂಥದ್ದು ನಡೆಯುತ್ತಿದೆ ಎಂದು ಅರಿತುಕೊಳ್ಳಲು ಸಾಧ್ಯ. ಇಂಥವೆಲ್ಲ ನಡೆಯುತ್ತಿವೆ ಎಂದಾದಮೇಲೆ, ಅಲ್ಲಿ ನಾನು ಕರ್ತನಾಗಲೀ ಭೋಕ್ತನಾಗಲೀ ಆಗಿರುವುದಿಲ್ಲ. ನಾನು ಸಾಕ್ಷಿ ಮಾತ್ರವಾಗಿ ಉಳಿದಿರುತ್ತೇನೆ. ಸಾಕ್ಷಿಯಾಗಿರುವುದು ನನ್ನ ಸ್ವಭಾವ. ಅದು ನಾನು ನಡೆಸುವ ಕ್ರಿಯೆಯಲ್ಲ. ಅದು ನನ್ನ ಕರ್ಮವಲ್ಲ- ಈ ಚಿಂತನೆಯನ್ನು ಬೆಳೆಸಿಕೊಳ್ಳಿ. ಇದು ಧ್ಯಾನದ ಸೂಕ್ಷ್ಮ ವಿಧಿಯಾಗಿದೆ.

ಇದರ ಅಭ್ಯಾಸವನ್ನು ಕೂಡ ಮಾಡಬೇಕಾಗುತ್ತದೆ. ಬರಿದೇ ಕೇಳುವುದರಿಂದಾಗಲೀ, ಮಾತುಕತೆಯಿಂದಾಗಲೀ ಅದು ಸಾಧ್ಯವಾಗುವುದಿಲ್ಲ. ಸತತ ಅಭ್ಯಾಸದಿಂದಲಷ್ಟೆ ಅದು ಸಾಧ್ಯವಾಗುತ್ತದೆ.

1 Comment

Leave a Reply