ಅಧ್ಯಾತ್ಮ ಶಿಖರವೇರಿದ ಉಡುತಡಿಯ ಹುಡುಗಿ : ಅಕ್ಕ ಮಹಾದೇವಿ

ಮಹಾದೇವಿಗೆ ಗೊಂದಲ. ತನ್ನನ್ನು ಚೆನ್ನ ಮಲ್ಲಿಕಾರ್ಜುನನಿಗೆ ಮದುವೆ ಮಾಡಿಸುತ್ತೀನಿ ಅಂದಿದ್ದ ಅಪ್ಪ ಇದೇನು ಮಾಡುತ್ತಿದ್ದಾನೆ? ಅಮ್ಮನ ಸೆರಗು ತಿರುವುತ್ತಾ ಕೇಳುತ್ತಾಳೆ. ಅವಳು “ಅಯ್ಯೋ ಹುಚ್ಚಿ! ಕಲ್ಲು ದೇವರಿಗೆ ಕೊಟ್ಟು ಮದುವೆ ಮಾಡುವುದುಂಟೆ?” ಅಂದುಬಿಡುತ್ತಾಳೆ . ಹೌದೆ? ಚೆನ್ನಮಲ್ಲಿಕಾರ್ಜುನ ಕಲ್ಲೇ? ಇಷ್ಟು ಕಾಲ ತನ್ನ ಹೃದಯದೊಳಗೆ ಬಿಟ್ಟೂ ಬಿಡದಂತೆ ನೆಲೆಸಿ ನಲಿಯುತ್ತಿರುವ ಚೆನ್ನಯ್ಯ ಕಲ್ಲು ದೇವರೇ? ಮಹಾದೇವಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ ….    ~ ಚೇತನಾ ತೀರ್ಥಹಳ್ಳಿ

(ಇಂದು ಅಕ್ಕ ಮಹಾದೇವಿ ಹುಟ್ಟಿದ ದಿನ)

akka

ಧ್ಯಾತ್ಮ ಖನಿ, ಸೂಕ್ಷ್ಮ ಮನಸ್ಸಿನ ವಿಚಾರವಾದಿ, ಸ್ತ್ರೀಸಂವೇದನೆಯ ಪ್ರಬುದ್ಧೆ, ದಿವ್ಯವಿರಹದಲ್ಲಿ ಜ್ಞಾನೋದಯ ಹೊಂದಿದ ಬುದ್ಧೆ ನಮ್ಮ ಅಕ್ಕ ಮಹಾದೇವಿ. ಅನುಭಾವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವಳು ಅಕ್ಕ. ಇವಳ ಬದುಕೇ ಒಂದು ಸಂಕೇತ. ಸಾಗರ ಸೇರಲೆಂದೇ ಹುಟ್ಟಿಕೊಳ್ಳುವ ನದಿಯನ್ನು ಅಣೆಕಟ್ಟು ಕಟ್ಟಿ ತಡೆಯಲಾದೀತೆ? ಅಕ್ಕ ಮಹಾದೇವಿ, ಚೆನ್ನ ಮಲ್ಲಿಕಾರ್ಜುನನೆಂಬ ಮಹಾಸಾಗರವನ್ನು ಸೇರಲೆಂದೇ ಹುಟ್ಟಿಕೊಂಡ ನದಿ. ನಡುವೆ ಮದುವೆ ಎಂಬ ಅಡಚಣೆ. ತನ್ನ ಗುರಿ ತಲುಪುವ ತೀವ್ರ ಹಂಬಲದಲ್ಲಿ ಧುಮ್ಮಿಕ್ಕಿ ಹರಿಯುವ ಅಕ್ಕ, ಅಣೆಕಟ್ಟನ್ನೂ ಕೊಚ್ಚಿ ಹರಿದಳು. ಅವಳ ಹರಿವಿನುದ್ದಕ್ಕೂ ಅರಿವಿನ ಕಾವ್ಯ ಫಸಲು.

12ನೇ ಶತಮಾನದಲ್ಲಿ, ಉಡುತಡಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಚೆಂದದ ಹೆಣ್ಣು ಮಹಾದೇವಿ. ಚಿಕ್ಕವಳಿರುವಾಗಿಂದ ಈ ಉಡುಗಿಗೆ ಶಿವಪೂಜೆಯೇ ಆಟ, ಪ್ರಸಾದವೇ ಊಟ. ಶಿವಲಿಂಗ ಒಂದನ್ನು ಅಂಗಳದಲ್ಲಿಟ್ಟುಕೊಂಡು, ಅದರಲ್ಲೇ ಕಣ್ಮನಗಳನ್ನು ನೆಟ್ಟುಕೊಂಡು ಬೆಳೆಯುತ್ತಿದ್ದ ಮಗಳನ್ನು ಕಂಡು ಮುದ್ದುಕ್ಕಿದ ತಂದೆ ನಿರ್ಮಲ ಶೆಟ್ಟಿ “ಅವನನ್ನೇ ಮದುವೆಯಾಗುವಿಯಂತೆ” ಅನ್ನುತ್ತಾನೆ. ಅವನ ಮಾತಿಗೆ ತಾಯಿ ಸುಮತಿಯೂ ದನಿಗೂಡಿಸುತ್ತಾಳೆ. ಅಪ್ಪ ಅಮ್ಮನ ಮಮತೆಯ ಮಾತುಗಳು ಪುಟ್ಟ ಮಹಾದೇವಿಯ ಮನಸಿನಲ್ಲಿ ಬೇರೂರಿ ನಿಂತುಬಿಡುತ್ತವೆ.

ಮಹಾದೇವಿ ಬೆಳೆಯುತ್ತ, ಅವಳೊಳಗಿನ ಶಿವಪ್ರೇಮವೂ ಬಲವಾಗತೊಡಗುತ್ತದೆ. ಅವಳ ಹೃದಯ ಸಾಮ್ರಾಜ್ಯದಲ್ಲೀಗ ಚೆನ್ನಮಲ್ಲಿಕಾರ್ಜುನನೇ ಸಾರ್ವಭೌಮ. “ಯಾವಾಗ ನನ್ನನ್ನು ಚೆನ್ನಯ್ಯನೊಡನೆ ಮದುವೆ ಮಾಡಿಸುತ್ತೀ?” ಎಂದು ತಾಯ್ತಂದೆಯರನ್ನು ಕೇಳುವಳು. ಅವರು ಅದನ್ನೂ ಮಗಳ ಮುದ್ದು ಮಾತುಗಳೆಂದು ತಿಳಿದು ನಕ್ಕುಬಿಡುವರು.

ಹೀಗಿರುತ್ತ ಒಮ್ಮೆ ಈ ಅಂದಗಾತಿ, ಚುರುಕಿನ ಬಳ್ಳಿ ಮಹಾದೇವಿ ಬಳ್ಳಿಗಾವೆಯ ಸಾಮಂತ ದೊರೆ ಕಸಪಯ್ಯ ನಾಯಕನ (ಕೌಶಿಕ) ಕಣ್ಣಿಗೆ ಬೀಳುತ್ತಾಳೆ. ಮೊದಲ ನೋಟದಲ್ಲೇ ಮೋಹಕ್ಕೆ ಬಿದ್ದ ನಾಯಕ ನಿದ್ರೆ ಕಳೆದುಕೊಳ್ಳುತ್ತಾನೆ. ಪರಿವಾರವನ್ನು ನಿರ್ಮಲ ಶೆಟ್ಟಿಯ ಮನೆಗೆ ಕಳುಹಿಸಿ ಮದುವೆಯ ಪ್ರಸ್ತಾಪ ಮುಂದಿಡುತ್ತಾನೆ. ನಾಯಕರ ಮನೆಯಿಂದ ಪ್ರಸ್ತಾಪ ತನ್ನ ಚಿನ್ನದಂಥ ಮಗಳನ್ನು ಹುಡುಕಿಕೊಂಡು ಬಂದಿರುವಾಗ ಕಣ್ಮುಚ್ಚಿ ಕೂರುವುದೇ? ನಿರ್ಮಲ – ಸುಮತಿಯರ ಸಂಭ್ರಮ ಮುಗಿಲು ಮುಟ್ಟುತ್ತದೆ. ಮದುವೆಯ ತಯಾರಿ ಶುರುವಾಗುತ್ತದೆ.

ಮಹಾದೇವಿಗೆ ಗೊಂದಲ. ತನ್ನನ್ನು ಚೆನ್ನ ಮಲ್ಲಿಕಾರ್ಜುನನಿಗೆ ಮದುವೆ ಮಾಡಿಸುತ್ತೀನಿ ಅಂದಿದ್ದ ಅಪ್ಪ ಇದೇನು ಮಾಡುತ್ತಿದ್ದಾನೆ? ಅಮ್ಮನ ಸೆರಗು ತಿರುವುತ್ತಾ ಕೇಳುತ್ತಾಳೆ. ಅವಳು “ಅಯ್ಯೋ ಹುಚ್ಚಿ! ಕಲ್ಲು ದೇವರಿಗೆ ಕೊಟ್ಟು ಮದುವೆ ಮಾಡುವುದುಂಟೆ?” ಅಂದುಬಿಡುತ್ತಾಳೆ.

ಹೌದೆ? ಚೆನ್ನಮಲ್ಲಿಕಾರ್ಜುನ ಕಲ್ಲೇ? ಇಷ್ಟು ಕಾಲ ತನ್ನ ಹೃದಯದೊಳಗೆ ಬಿಟ್ಟೂ ಬಿಡದಂತೆ ನೆಲೆಸಿ ನಲಿಯುತ್ತಿರುವ ಚೆನ್ನಯ್ಯ ಕಲ್ಲು ದೇವರೇ? ಮಹಾದೇವಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಆದರೆ ವಿಧಿಯಿಲ್ಲ. ಮದುವೆಗೆ ಕೊರಳೊಡ್ಡಲೇಬೇಕಾಗಿದೆ.

ಹೀಗೆ ಕಸಪಯ್ಯ ನಾಯಕನನ್ನು ಮದುವೆಯಾದ ಮಹಾದೇವಿ ಕೆಲ ಕಾಲ ಅವನೊಂದಿಗೆ ಬಾಳುತ್ತಾಳೆ. ನಾಯಕ ದುಷ್ಟನಲ್ಲದಿದ್ದರೂ ಹೆಂಡತಿಯ ಶಿವಪ್ರೇಮದಿಂದ ಕಂಗೆಡುತ್ತಾನೆ. ದಿನದ ಎಲ್ಲ ಹೊತ್ತೂ ಶಿವ ಪೂಜೆ, ಶಿವ ಧ್ಯಾನ, ಶಿವನ ಹಾಡು… ಮಹಾದೇವಿಯ ಸಾನ್ನಿಧ್ಯವೆಲ್ಲ ಶಿವಮಯವೇ! ಇಂಥವಳ ಜೊತೆ ಸಂಸಾರ ನಡೆಸೋದು ಹೇಗೆ? ನಾಯಕ ಅವಳಲ್ಲಿ ತಕರಾರು ತೆಗೆಯುತ್ತಾನೆ. ಮಹಾದೇವಿ ನನ್ನ ಬಗೆಯಲ್ಲಿ ಬದಲಿಲ್ಲವೆಂದು ಖಡಾಖಂಡಿತ ಹೇಳಿಬಿಡುತ್ತಾಳೆ. “ನೀನು ಉಟ್ಟಿರುವ ಬಟ್ಟೆ, ತೊಟ್ಟಿರುವ ಆಭೂಷಣ, ಆರೋಗಣೆಯ ಅನ್ನ ಎಲ್ಲವೂ ನನ್ನದು, ಮರೆಯಬೇಡ!” ಎಂದು ಅಬ್ಬರಿಸುತ್ತಾನೆ ನಾಯಕ.

“ಅಷ್ಟೇ ತಾನೆ!?” ನಗುತ್ತಾಳೆ ಮಹಾದೇವಿ. ಮಲ್ಲಿಕಾರ್ಜುನನ್ನೆ ಧರಿಸಿ, ಜೀವಿಸುತ್ತಿರುವ ಈ ದೇಹಕ್ಕೆ ಬಟ್ಟೆ ಬರೆಯ ಹೊರೆಯೇಕೆ? ಎಂದು ಎಲ್ಲವನ್ನೂ ಕಳಚಿ ಬೆತ್ತಲಾಗಿ ನಿಲ್ಲುತ್ತಾಳೆ ಅವನೆದುರು. ಈ ಕ್ಷಣದಿಂದ ನನಗೆ ನಿನ್ನ ಬಂಧದ ಹಂಗಿಲ್ಲವೆಂದು ಮನೆ ತೊರೆದು ಹೊರಟುಬಿಡುತ್ತಾಳೆ, ತನ್ನ ಚೆನ್ನಯ್ಯನನ್ನು ಅರಸಿ.

ಹೀಗೆ ಚೆನ್ನ ಮಲ್ಲಿಕಾರ್ಜುನನ್ನು ಕೂಡಿಕೊಳ್ಳಲು ಬಳ್ಳಿಗಾವೆಯಿಂದ ಕಲ್ಯಾಣ ಮಾರ್ಗವಾಗಿ ಶ್ರೀಶೈಲದ ಕದಳಿಯನ್ನು ತಲುಪುವ ಮಹಾದೇವಿಯ ಪ್ರಯಾಣ ಒಂದು ಅತ್ಯದ್ಭುತ ಆಧ್ಯಾತ್ಮಿಕ ಯಾನ. ಕಲ್ಯಾಣದ ಅನುಭವ ಮಂಟಪದ ಸಂಪರ್ಕ, ಅಲ್ಲಮ ಪ್ರಭು – ಬಸವಾದಿ ಶರಣರ ಒಡನಾಟ ಈ ಎಲ್ಲವೂ ಮಹಾದೇವಿಯ ಅಂತಃಸತ್ವಕ್ಕೆ ಕನ್ನಡಿಯಾದವು. ಮಹಾದೇವಿಯ ತಿಳಿವು, ತೀವ್ರತೆಗಳು ಅವಳಿಗೆ ‘ಅಕ್ಕ’ನ ಸ್ಥಾನಗೌರವ ದೊರಕಿಸಿಕೊಟ್ಟವು. ಚೆನ್ನ ಮಲ್ಲಿಕಾರ್ಜುನನೆಡೆಗಿನ ಅದಮ್ಯ ಪ್ರೇಮವನ್ನೇ ಆಧ್ಯಾತ್ಮಿಕ ಶಿಖರವನ್ನೇರುವ ಮೆಟ್ಟಿಲಾಗಿಸಿಕೊಂಡು ಆರೋಹಣ ನಡೆಸಿದ ಅಕ್ಕ, ಕದಳಿಯನ್ನು ತಲುಪಿ ತನ್ನ ಪರಮ ಪ್ರಿಯತಮನಲ್ಲಿ ಶಾಶ್ವತವಾಗಿ ನೆಲೆಸಿದಳು.

ಅಕ್ಕ ಮಹಾದೇವಿಯ ಬದುಕು ಹೀಗಿರುವಾಗ, ಇದರ ಮೂಸೆಯಿಂದ ಹೊಮ್ಮಿದ ವಚನಗಳ ಸತ್ವ ಹೇಗಿದ್ದಿರಬೇಕು ಊಹಿಸಿ! ಎಂಟೊಂಭತ್ತು ಶತಮಾನಗಳ ಹಿಂದೆಯೇ ಇಷ್ಟು ಸ್ಪಷ್ಟತೆಯುಳ್ಳ ವಿಚಾರವಾದಿ, ಸ್ತ್ರೀವಾದಿ, ಬಂಡಾಯ, ಸಂವೇದನಾಶೀಲ ಹೆಣ್ಣುಮಗಳೊಬ್ಬಳು ಜೀವಿಸಿದ್ದಳು ಎಂಬುದನ್ನು ಈ ವಚನಗಳು ಸಾರಿ ಸಾರಿ ಹೇಳುತ್ತವೆ. ಕಾವ್ಯ ದೃಷ್ಟಿಯಿಂದಲೂ ಅಕ್ಕನ ವಚನಗಳು ದಿವ್ಯರಸ ಧಾರೆಯೇ ಆಗಿವೆ. ಈಕೆಯನ್ನು ಕನ್ನಡದ ಮೊದಲ ಮಹಿಳಾ ಕವಿ ಎಂದೂ ಹೇಳಲಾಗುತ್ತದೆ.

Leave a Reply